ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತಾತಾರರು
ತಾತಾರರು - ತುರ್ಕಿ ಭಾಷಾಗುಂಪಿಗೆ ಸೇರಿಕ ಕಿಪ್‍ಚಾಕ್ ಭಾಷೆಯಾಡುವ, ಮುಖ್ಯವಾಗಿ ಸೋವಿಯೆತ್ ದೇಶದಲ್ಲಿ-ವೋಲ್ಗ ನದಿಯ ಮಧಭಾಗದ ಹಾಗೂ ಅದರ ಉಪನದಿಯಾದ ಕಾಮದ ಮತ್ತು ಅಲ್ಲಿಂದ ಪೂರ್ವಕ್ಕೆ ಯೂರಲ್ ಪರ್ವತದ ವರೆಗಿನ ಪ್ರದೇಶದಲ್ಲಿ -- ವಾಸಿಸುವ ಜನ. ಇವರು ಸೋವಿಯೆತ್ ದೇಶದ ಯೂರೋಪಿಯನ್ ಭಾಗದ ಪೂರ್ವ ಹಾಗೂ ಆಗ್ನೇಯ ಪ್ರದೇಶಗಳಲ್ಲೂ ವಾಸಿಸುತ್ತಾರೆ. ಮಧ್ಯಕಾಲೀನ ಯೂರೋಪಿನಲ್ಲಿ ನೆಲಸಿದ ಅಲೆಮಾರಿ ಜನಕ್ಕೆಲ್ಲ ಈ ಹೆಸರು ಬಳಕೆಯಾದಂತೆ ತೋರುತ್ತದೆ. ಮುಂದಿನ ಹಂತದಲ್ಲಿ ಮಂಗೋಲರನ್ನೂ ತುರ್ಕರನ್ನೂ ಈ ಹೆಸರಿನಿಂದ ಕರೆಯಲಾಗುತ್ತಿತ್ತು. ಇವರಿಗೆ ತಾರ್ತಾರರೆಂದೂ ಹೆಸರಿದೆ. 1970 ರ ದಶಕದ ಆದಿಭಾಗದಲ್ಲಿ ಇವರ ಜನಸಂಖ್ಯೆ ಸು. 50,00,000.
ತಾತಾರರು ಮಿಶ್ರ ಬುಡಕಟ್ಟಿನವರು. ಮಂಗೋಲಿಯನ್ ಮತ್ತು ತುರ್ಕಿ ಬುಡಕಟ್ಟುಗಳಿಗೆ ಸೇರಿದ ಇವರು ಅನೇಕ ಒಳಪಂಗಡಗಳಾಗಿ ಹಂಚಿಹೋಗಿದ್ದಾರೆ. ಕ್ರಿಮಿಯನ್, ಸೈಬೀರಿಯನ್ ಕeóÁನ್ ಮತ್ತು ಕಸಿಪೊವ್-ಇವು ತಾತಾರರ ಮುಖ್ಯ ಪಂಗಡಗಳು.
ತಾತಾರರ ಮುಖ್ಯ ಕಸುಬು ಕೃಷಿ ಮತ್ತು ಪಶುಪಾಲನೆ. ಅಲೆಮಾರಿಗಳಾಗಿದ್ದ ಕಾಲದಿಂದಲೂ ಇದೇ ಇವರ ಜೀವನಮಾರ್ಗವಾಗಿತ್ತು. ಹದಿನಾಲ್ಕನೆಯ ಶತಮಾನದಿಂದೀಚೆಗೆ ಇವರು ಇತರ ಕಸುಬುಗಳಲ್ಲಿ ಪರಿಣತರಾದರು. ಕುಂಭಕಲೆ, ಮರಗೆಲಸ, ಲೋಹವಿದ್ಯೆ, ನೇಯ್ಗೆ ಮತ್ತು ಚರ್ಮಗಾರಿಕೆಗಳಲ್ಲಿ ಇವರು ನಿಪುಣರಾದರು. ಕೆಲವರು ನುರಿತ ವ್ಯಾಪಾರಿಗಳೂ ಆದರು. ರಷ್ಯ ಚಕ್ರಾಧಿಪತ್ಯದಲ್ಲಿ ಸೇರಿದ ಮೇಲೆ ಇವರ ಕಾರ್ಯಕ್ಷೇತ್ರ ವಿಸ್ತಾರಗೊಂಡಿತು. ರಷ್ಯದ ರಾಜಕಾರಣ, ಶಿಕ್ಷಣ ಮತ್ತು ಆಡಳಿತಗಳಲ್ಲಿ ಮುಖ್ಯ ಪಾತ್ರ ವಹಿಸತೊಡಗಿದರು.
ಇವರು ಸಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ತುಂಬ ಸಂಕೀರ್ಣವಾದ್ದು. ಇವರು ಪ್ರಾಚೀನ ಸಮಾಜ ಸರದಾರ ವರ್ಗ, ಜನಸಾಮಾನ್ಯ ವರ್ಗ ಎಂದು ವಿಂಗಡಣೆಗೊಂಡಿತ್ತು. ಆಡಳಿಗ ಇದ್ದದ್ದು ಖಾನ್ ಎಂಬ ಮುಖ್ಯಸ್ಥನ ಅಧೀನದಲ್ಲಿ. ಈತ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಮುಖ್ಯ ಪಾತ್ರ ವಹಿಸಿದ್ದ. ಖಾನನ ಆಡಳಿತಕ್ಕೂ ಮಾಸ್ಕೋದ eóÁರನ ಆಡಳಿತಕ್ಕೂ ನಿಕಟ ಸಂಪರ್ಕವಿತ್ತು. ಈ ವ್ಯವಸ್ಥೆ ರಷ್ಯದ ಕ್ರಾಂತಿಯೊಂದಿಗೆ ಕೊನೆಗೊಂಡಿತು. ಬೆಲ್ಷೆವಿಕ್ ಕ್ರಾಂತಿಯ ಅನಂತರ ತಾತಾರರು ಸ್ವಯಮಾಡಳಿತ ಗಣರಾಜ್ಯವನ್ನು ಸ್ಥಾಪಿಸಿಕೊಂಡು ಸೋವಿಯೆತ್ ಒಕ್ಕೂಟವನ್ನು ಸೇರಿದರು. (1920).
ತಾತಾರರಲ್ಲಿ ಬಹುಪಾಲು ಜನ ಇಸ್ಲಾಂ ಧರ್ಮೀಯರು, ಸುನ್ನಿ ಪಂಥದ ಅನುಯಾಯಿಗಳು. ಅವರು ಬಹಳ ಕಾಲದಿಂದ ತಮ್ಮ ಧಾರ್ಮಿಕ ನಂಬಿಕೆ - ಪದ್ಧತಿಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಭೂತ-ಪ್ರೇತಗಳಲ್ಲಿ ನಂಬಿಕೆಯೂ ಪ್ರಕೃತಿಪೂಜೆಯೂ ಅವರಲ್ಲಿ ಈಗಲೂ ಉಳಿದುಕೊಂಡು ಬಂದಿವೆ. ಇತ್ತೀಚೆಗೆ ಅವರಲ್ಲಿ ಕೆಲವರು ಕ್ರೈಸ್ತಧರ್ಮಕ್ಕೆ ಸೇರಿ ಪಾಶ್ವಾತ್ಯ ಜೀವನ ವಿಧಾನವನ್ನು ಅನುಸರಿಸುತ್ತಿದ್ದಾರೆ. (ಕೆ,ವಿ.ಐ)