ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತಾಳಗುಪ್ಪ
ತಾಳಗುಪ್ಪ - ಕರ್ನಾಟಕ ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಯ ವಾಯವ್ಯದಲ್ಲಿರುವ ಸಾಗರ ತಾಲ್ಲೂಕಿನ ಒಂದು ಊರು. ಜನಸಂಖ್ಯೆ 3,086 (1971). ಬೆಂಗಳೂರು- ಮಿರಜ್ ರೈಲು ಮಾರ್ಗದಲ್ಲಿರುವ ಬೀರೂರು ಜಂಕ್ಷನ್‍ನಿಂದ ಕವಲೊಡೆದು ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಭದ್ರಾವತಿ ಶಿವಮೊಗ್ಗಗಳ ಮೂಲಕ ಸಾಗರವನ್ನು ತಲಪಿ ಮುಂದುವರಿಯುವ ರೈಲುಮಾರ್ಗದ ಕೊನೆಯ ನಿಲ್ದಾಣ. ಬೀರೂರಿನಿಂದ 161ಕಿಮೀ. ಶಿವಮೊಗ್ಗದಿಂದ 100ಕಿಮೀ. ಮತ್ತು ಸಾಗರದಿಂದ 16 ಕಿಮೀ., ದೂರದಲ್ಲಿದೆ. ಶರಾವತಿ ಕಣಿವೆಯೂ ಜೋಗ್ ಜಲಪಾತವೂ ತಾಳಗುಪ್ಪದಿಂದ 20 ಕಿಮೀ. ದೂರದಲ್ಲಿವೆ. ರೈಲುಮಾರ್ಗವನ್ನು ಇಲ್ಲಿಂದ ಮುಂದುವರಿಸಿ ಪಶ್ಚಿಮ ತೀರದಲ್ಲಿರುವ ಭಟ್ಕಳ ರೇವಿಗೆ ರೈಲ್ವೆ ಸಂಪರ್ಕ ಏರ್ಪಡಿಸಬೇಕೆಂದು ಮಾಜಿ ಮೈಸೂರು ಸಂಸ್ಥಾನ ಸರ್ಕಾರದ ಉದ್ದೇಶವಾಗಿತ್ತು. ಇದರಿಂದ ಮಲೆನಾಡಿನ ಉತ್ಪನ್ನಗಳನ್ನೂ ಸಿದ್ಧವಸ್ತುಗಳನ್ನೂ ಸುಲಭವೆಚ್ಚದಲ್ಲಿ ರಫ್ತು ಮಾಡುವುದು ಸಾಧ್ಯವಾಗುವುದೆಂದು ಭಾವಿಸಲಾಗಿತ್ತು. ಆದರೆ ಸಂಸ್ಥಾನ ಸರ್ಕಾರದ ಈ ಉದ್ಧೇಶ ಪೂರೈಸಲಿಲ್ಲ, ಈಗ ಕರ್ನಾಟಕ ರಾಜ್ಯದಲ್ಲಿ ಹಳೆಯ ಮೈಸೂರು ಸಂಸ್ಥಾನ ಅಂತರ್ಗತವಾಗಿದೆ. ಕರ್ನಾಟಕಕ್ಕೆ ಉದ್ದವಾದ ಕರಾವಳಿ ಲಭ್ಯವಾಗಿದೆ. (ಆರ್.ಎಂ.ಆರ್.)