ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತಿಂಗಳಮಾವನ ಪುಜೆ
ತಿಂಗಳಮಾವನ ಪೂಜೆ - ಅನಾವೃಷ್ಟಿ ಉಂಟಾದಾಗ ಮಳೆ ದೇವತೆಯನ್ನು ಒಲಿಸಿಕೊಂಡು ಬರುವಂತೆ ಮಾಡಲು ನಡೆಸುವ ಜನಪದ ಆಚರಣೆಗಳಲ್ಲಿ ಒಂದು. ನಾಗರಿಕ ಪದ್ಧತಿಯಲ್ಲಿ ಮಳೆ ತರಿಸಲು ಯಾಗ ಯಜ್ಞ ಹೋಮ ಇತ್ಯಾದಿಗಳಿರುವಂತೆ ಜನಪದ ಪದ್ಧತಿಗಳಲ್ಲಿರುವ ಹಲವು ಬಗೆಯ ಆಚರಣೆಗಳಲ್ಲಿ ಇದೂ ಒಂದು ಇದನ್ನು ಬೆಳದಿಂಗ್ಳಪ್ಪನ ಪೂಜೆ ಎಂತಲೂ ಕರೆಯುತ್ತಾರೆ. ಇಂಥ ಪೂಜೆ ಎಲ್ಲ ಕಡೆಯೂ ಕಂಡುಬರುವುದಿಲ್ಲ. ಮಂಡ್ಯ , ಹಾಸನ, ಅರಸೀಕೆರೆ, ಚಿಕ್ಕಮಗಳೂರು ಈ ಪ್ರದೇಶಗಳಲ್ಲಿ ಇದನ್ನು ಕಾಣಬಹುದು. ಬೆಳ್ದಿಂಗಳಿನಲ್ಲಿ ನಡೆಯುವ ಪೂಜೆ ಗೌರಿಗೆ ಮುಂಚೆ ಅಥವಾ ಅನಂತರ ಬರುತ್ತದೆ.
ಊರಿನ ನಡುವೆ ಬಯಲು ಪ್ರದೇಶದಲ್ಲಿ ಒಂದು ಕಡೆ ಶುದ್ಧಗೊಳಿಸಿ ಪೂಜೆಗೆ ಸ್ಥಳವನ್ನು ಗೊತ್ತುಮಾಡುತ್ತಾರೆ. ಪೂಜೆ ಇನ್ನೂ ಒಂದು ತಿಂಗಳಿದೆ ಎನ್ನುವಾಗಲೇ ಪ್ರತಿದಿನ ಸಂಜೆ ಹುಡುಗ ಹುಡುಗಿಯರು ಗುಂಪು ಕೂಡಿ ಮನೆಮನೆಗೂ ಹೋಗಿ
ಉಳ್ಳೀಯ ಹೊಲ್ದಲ್ಲಿ ಹೊಳ್ಳಾಡ್ಕಂಡ್ ಬಂದೀವಿ ಇಕ್ಕಮ್ಮ ಚಿಕ್ಕಿ ಭಿಕ್ಷಾವ
ಮುಂತಾಗಿ ಹಾಡಿಕೊಂಡು ಮನೆಯವರು ಕೊಟ್ಟ ಅಕ್ಕಿ, ಹಣ ಮುಂತಾದವನ್ನು ಒಂದು ಕಡೆ ಸಂಗ್ರಹಿಸುತ್ತಾರೆ.
ಪೂಜೆಯಾಗಬೇಕಾದ ಹುಣ್ಣಿಮೆಯ ದಿನ ಬಣ್ಣ ಬಣ್ಣದ ರಂಗವಲ್ಲಿಯಿಂದ ತೇರನ್ನು ರಚಿಸುತ್ತಾರೆ. ರಥದ ಕಳಶದ ಹತ್ತಿರ ಚಂದ್ರನನ್ನು ಬಿಡಿಸುತ್ತಾರೆ. ಎಲ್ಲ ಸಿದ್ಧತೆಗಳೂ ಆದ ಅನಂತರ ಅಕ್ಕಿ ಅಥವಾ ರಾಗಿಯ ಹಿಟ್ಟಿನಿಂದ ರೊಟ್ಟಿ ಮಾಡಿ ತಂದು ರಥದ ಮುಂದೆ ಇಟ್ಟು ಪೂಜಿಸುತ್ತಾರೆ. ಅನಂತರ ಪೂಜೆಯ ಮುಖ್ಯ ಅಂಗವಾದ ಒಂದು ಆಟ ಪ್ರಾರಂಭವಾಗುತ್ತದೆ. ಅವುಗಳಲ್ಲಿ ಒಂದೆರಡು ರೊಟ್ಟಿಗಳನ್ನು ಹುಡುಗಿಯರು ಬೆರಣಿಗಳ ಜೊತೆ ಸೇರಿಸಿ ಮುಚ್ಚಿಟ್ಟಿರುತ್ತಾರೆ. ಹುಡುಗರಲ್ಲಿ ಒಬ್ಬ ಓಡಿಬಂದು ರೊಟ್ಟಿಯನ್ನು ಎತ್ತಿಕೊಂಡು ಹೋಗಬೇಕು. ಹಾಗೆ ಎತ್ತಿಕೊಂಡು ಹೋಗುವಾಗ ಆತನನ್ನು ಹುಡುಗಿಯರು ಬೆರಣಿಯಿಂದ ಹೊಡೆಯುತ್ತಾರೆ. ಅದಕ್ಕೆ ಹೆದರದೆ ಬೆರಣಿಯ ಪೆಟ್ಟುಗಳನ್ನು ಸಹಿಸಿಕೊಂಡು ಮುಂದೆ ಹೋದಾಗ ಹುಡುಗರು ಹಿಂಬಾಲಿಸಿ ಆತನನ್ನು ಹಿಡಿಯಲು ಹೋಗುತ್ತಾರೆ. ಅವರು ಯಾರ ಕೈಗೂ ಸಿಕ್ಕದೆ ಓಡಿಹೋಗಿ ಒಂದು ಮರದ ಮೇಲೆ ಕೂತು ರೊಟ್ಟಿ ತಿಂದ ಗುರುತಿಗೆ ಆ ಮರದ ರೆಂಬೆಯೊಂದನ್ನು ಮುರಿದು ತರಬೇಕು. ಬೆಳ್ದಿಂಗಳಿನಲ್ಲಿ ಈ ಆಟ ಆಡಲು ಮತ್ತು ನೋಡಲು ತುಂಬ ಮೋಜಿನದಾಗಿರುತ್ತದೆ.
ಅನಂತರ ರಂಗವಲ್ಲಿಯ ಸುತ್ತ ಸೇರಿ ಹಾಡುತ್ತಾರೆ. ಕೋಲು ಹುಯ್ಯುತ್ತಾರೆ.
ತಿಂಗ್ಳು ತಿಂಗ್ಳಿಗೆ ತಿಂಗಳುಮಾವನ ಪೂಜೆ ಗರುಡನ ಪೂಜೆ ಗನಪೂಜೆ- ಕೋಲುಮಲ್ಲಿಗೆ ಕೋಲೆ ಗರುಡನ ಪೂಜೆ ಗನಪೂಜೆ ತಿಂಗಳುಮಾವ ನಿಜಪೂಜೆ ಗಂಗೆ ದಡದಾಗೆ- ಕೋಲು
ಅನಂತರ ತಿಂಗಳುಮಾವನಿಗೆ ಮದುವೆ. ಚಿಕ್ಕಮಕ್ಕಳಲ್ಲಿ ಇಬ್ಬರಿಗೆ ಗಂಡು ಹೆಣ್ಣಿನಂತೆ ಅಲಂಕಾರ ಮಾಡುತ್ತಾರೆ. ಗಂಡಿನ ಕಡೆಯವರು ಹೆಣ್ಣಿನ ಕಡೆಯವರನ್ನು ಕುರಿತು ಹೇಳುತ್ತಾರೆ:
ಒಂದ್ವರ ಕೊಡುತೀವಿ ಒಂದೆಣ್ಣು ಕೊಡಿರಮ್ಮ ಕಾಮೇಟಿ ರಂಗಗೆ ಕಸ್ತೂರಿ ರಂಗಗೆ ಸಣ್ಣ ಸರಪದ ಮೇಲೆ ಶಯನ ಮಾಡಿಸಿಕೊಂಡ ಅಪ್ಪರಂಗಪ್ಪಗೊಂದೆಣ್ಣು ಕೊಡಿರಮ್ಮ ಹೆಣ್ಣು ಕೊಡಿರಮ್ಮ
ಹೆಣ್ಣಿನ ಕಡೆಯವರು ಈ ಮಾತಿಗೆ ಒಪ್ಪುವುದಿಲ್ಲ. ಒಂದು ವರ ಯಾವ ಮೂಲೆಗೆ ಅನ್ನುವುದು ಅವರ ವಾದ, ಹೆಣ್ಣಿನವರು ಹೇಳುತ್ತಾರೆ:
ಒಂದ್ವರವನ್ನೋದು ಏನೆಂಬ ಮಗಳೀಗೆ ಎಂತೆಂಬ ಮಗಳೀಗೆ ಹಾಸೋದು ಹಾಸಣಿಗೆ ಬೀಸೋದು ಬೀಸಣಿಗೆ ನೀರು ತರುವೋದು ಗಿಂಡಿ ನಿದ್ರೆ ಮಾಡೋದು ಮಂಚ ಬಿಟ್ಟುಂಡೆ ಕಾಯಂಥ ಚಿಲಕಟ್ಟು ಮಲಕಟ್ಟು ಚಿಕ್ಕರಸಿ ಮನೆಯಾಗೊಂದೆಣ್ಣಿಲ್ಲಮ್ಮ
ಗಂಡಿನ ಕಡೆಯವರು ಇಷ್ಟಕ್ಕೆ ಸುಮ್ಮನಾಗುವುದಿಲ್ಲ. ಹೆಣ್ಣನ್ನು ಕುರಿತು ಹೇಳುತ್ತಾರೆ :
ಒಂದು ಮೂಲೆಗೊಂದೆ ಪಾತ್ರೆ ಸಾಲುಮೂಲಿಗೆ ಬಿಲ್ವಪತ್ರೆ ಆ ಪಾತ್ರೆ ತಕ್ಕಂಡು ಎಣ್ಣೆ ಮಜ್ಜನಕೆ ಹಾಕಿ ನಂದಿನೀರು ಹುಯ್ಕೋಡು ಗಂಧ ಧರಿಸಿಕೊಂಡು ಏಳೇಳೆ ಗೌರಿ
ಎನ್ನುತ್ತಾರೆ. ಇದಕೇಳಿ ಹೆಣ್ಣು ಏಳೇಳಿ ಅಂದರೆ ನಾನ್ಯಾಕೆ ಎದ್ದೇನು ಉಡುವೋಕೆ ಸೀರಿಲ್ಲ. ಮ್ಯಾಲೆ ಚತ್ರಿಗೆ ಇಲ್ಲ ಎನ್ನುತ್ತಾಳೆ. ಗಂಡಿನ ಕಡೆಯವರು ಅವನ್ನೆಲ್ಲ ತರುತ್ತೇವೆ ಎನ್ನುತ್ತಾರೆ. ಹೀಗೆ ಜುಮ್ಕಿ, ಅಡ್ಡಿಕೆ, ಡಾಬು, ಕಾಲಂದಿಗೆ, ಚೈನು, ಸೀರೆ, ಕುಬುಸ ಎಲ್ಲವನ್ನೂ ಹೆಣ್ಣು ಕೇಳುತ್ತಾಳೆ. ಕೊನೆಗೆ ಗಂಡಿನ ಕಡೆಯವರು ಎಲ್ಲವನ್ನೂ ತರುತ್ತೇವೆಂದು ಹೇಳಿದಮೇಲೆ ಹೆಣ್ಣು ಹಸೆಗೆ ಸಿದ್ಧವಾಗುತ್ತಾಳೆ. ಆಗ ಹೆಣ್ಣು ಗಂಡನ್ನು ಕೂರಿಸಿ ಸೋಬಾನೆ ಹಾಡುತ್ತಾರೆ. ಆರತಿ ಎತ್ತುತ್ತಾರೆ.
ಗುಡೀಗುಡಾರವೆ ಮಾಡಿ ಮೈಲಾರವೆ ಮಂಡಿಗೊಂದರಿಶಿಣವೆ ಪಚ್ಚಕ್ಕಿ ಪನಿವಾರವೆ ನಮ್ಮ ಚಂದ್ರಮಗೆ ನಿತ್ಯ ಸೋಬಾನವೆ
ಹೀಗೆ ಪದಗಳ ಸುಗ್ಗಿ, ಕೋಲಾಟ ನಡೆಯುತ್ತದೆ. ಹೆಣ್ಣು ಮಕ್ಕಳು ಕೈ ಕೈ ಹಿಡಿದುಕೊಂಡು ಗರಗರನೆ ಸುತ್ತುತ್ತ
ಹೋದೇರ್ ಹಕ್ಕಿ ಬಂದವಕ್ಕ ಗರಗರನಾಡಿ ನಿಂದಾವಕ್ಕ ಕಾಮನೂರಾ ಹೊಳೆಯಿಂದ ಕುಂತುನಿಂತು ಬರುತ್ತಿದ್ದ ಕಾಮನ್ಯಾರೆ ತಡದೋರು ಭೀಮನ್ಯಾರೆ ತಡದೋರು
ಬಾರಯ್ಯ ಬೆಳದಿಂಗಳೇ ಮುಂತಾಗಿ ಹಾಡಿಕೊಂಡು ನಲಿಯುತ್ತಾರೆ.
ಆಟ ಓಡಾಟ ಪೂಜೆ ಎಲ್ಲ ಮುಗಿದಮೇಲೆ ಎಲ್ಲರೂ ಉಳಿದ ರೊಟ್ಟಿಗಳನ್ನು ಮತ್ತು ಇತರ ತಿಂಡಿಗಳನ್ನು ತಿಂದು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುತ್ತಾರೆ. ಇತ್ತೀಚೆಗೆ ತಿಂಗಳಮಾವನ ಪೂಜೆ ಅಪರೂಪವಾಗುತ್ತಿದೆ. (ಎಸ್.ಇ.)