ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತಿಮ್ಮಪ್ಪನಾಯಕ

ವಿಕಿಸೋರ್ಸ್ದಿಂದ

ತಿಮ್ಮಪ್ಪನಾಯಕ 1897-1974. ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ ಸುಧಾರಕ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಬಡ ಗೌಡಸಾರಸ್ವತ ಕುಟುಂಬವೊಂದರಲ್ಲಿ ಹುಟ್ಟಿದರು. ತಮ್ಮ ಪ್ರಾಥಮಿಕ ಶಿಕ್ಷಣಾನಂತರ ಗಿಬ್ ಶಾಲೆಯಲ್ಲಿ ಶಿಕ್ಷಣ ಮುಗಿಸಿ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಪುಣೆಗೆ ತೆರಳಿದರು. ಅಲ್ಲಿ ರ್ಯಾಂಗ್ಲರ್ ಪರಾಂಜಪೆಯವರ ತ್ಯಾಗಮಯ ಜೀವನದಿಂದ ಪ್ರಭಾವಿತರಾದರು. ಬಿ.ಎ. ಪದವೀಧರರಾಗಿ (1918) ಮುಂಬಯಿಯಲ್ಲಿ ನೌಕರಿಮಾಡಿ ಕಾನೂನು ಮತ್ತು ಎಂ. ಎ, ಅಭ್ಯಾಸ ಮಾಡುತ್ತಿರುವಾಗ ಬೇನೆಯಿಂದ ನರಳಿದರು. ಗುಣಮುಖರಾದ ಅನಂತರ ಶಿರಸಿಯ ಶ್ರೀ ಮಾರಿಕಾಂಬಾ ಮಾಧ್ಯಮಿಕ ಶಾಲೆಯಲ್ಲಿ ಮುಖ್ಯಾಧ್ಯಾಪಕರಾಗಿ (1920), ಕೆಲವು ವರ್ಷ ಶಿಕ್ಷಣ ರಂಗದಲ್ಲಿ ಸೇವೆ ಸಲ್ಲಿಸಿದರು. ಗಾಂಧೀಜಿಯವರ ಯಂಗ್ ಇಂಡಿಯ ಪತ್ರಿಕೆಯ ಬರೆಹಗಳಿಂದ ಪ್ರಭಾವಿತರಾಗಿ ನೌಕರಿಯನ್ನು ತ್ಯಜಿಸಿದರು (1921). ಆಗ ಶಿರಸಿಯಲ್ಲಿ ವಾಮನ ಹೊದಿಕೆಯವರು ನಡೆಸುತ್ತಿದ್ದ ರಾಷ್ಟ್ರೀಯ ಶಾಲೆಯ ಅಧ್ಯಾಪಕರಾಗಿ ಸೇರಿದರು. 1922ರಲ್ಲಿ ಶಿರಸಿಯಲ್ಲಿ ಸ್ವಾಮಿ ಧರ್ಮಾನಂದರು ರಾಜಕೀಯ ಭಾಷಣ ಮಾಡಿದಾಗ ಅದೇ ವೇದಿಕೆಯ ಮೇಲೆ ನಾಯಕರೂ ಸ್ವಾತಂತ್ರ್ಯಕ್ಕಾಗಿ ಎಂಥ ತ್ಯಾಗಕ್ಕಾದರೂ ಸಿದ್ಧರಾಗಿ, ಬ್ರಿಟಿಷರ ವಿರುದ್ಧ ನಿಂತು ಹೋರಾಡುವುದು ಪ್ರತಿಯೊಬ್ಬನ ಕರ್ತವ್ಯ ಎಂದು ನುಡಿದರು. ಇದರಿಂದ ಅವರಿಗೆ ಒಂದು ವರ್ಷ ಕಠಿಣ ಶಿಕ್ಷೆಯಾಯಿತು. ಅವರು ಉತ್ತರ ಕನ್ನಡ ಜಿಲ್ಲೆಯ ಪ್ರಥಮ ರಾಜಕೀಯ ಕೈದಿ.

ನಾಯಕರು ಅಂಕೋಲೆಯಲ್ಲಿ ಉಪ್ಪಿನ ಸತ್ಯಾಗ್ರಹವನ್ನು ಅತಿ ದೊಡ್ಡ ಪ್ರಮಾಣದಲ್ಲಿ ಸಂಘಟಿಸಿದರು (1930). ಆಗ ಇವರಿಗೆ ಮೂರು ತಿಂಗಳು ಶಿಕ್ಷೆ ಆಯಿತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ಬಾರಿ ಅರಣ್ಯ ಸತ್ಯಾಗ್ರಹ, ಹುಲ್ಲುಬನ್ನಿ ಸತ್ಯಾಗ್ರಹ, ಕರನಿರಾಕರಣ ಚಳವಳಿ ಮೊದಲಾದವನ್ನು ಸಂಘಟಿಸಿ ಅನೇಕ ಬಾರಿ ಸೆರೆಮನೆ ಕಂಡರು. ಶಿರಸಿ ಹಾಗೂ ಸಿದ್ದಾಪುರಗಳಲ್ಲಿ ನಡೆದ ಕರನಿರಾಕರಣ ಚಳವಳಿ ಅಖಿಲ ಭಾರತ ಮಟ್ಟದಲ್ಲಿ ಪ್ರಸಿದ್ಧಿ ಪಡೆಯಲು ಇವರು ವಹಿಸಿದ ಪಾತ್ರವೂ ಮುಖ್ಯವಾದದ್ದು. ರಾಜೇಂದ್ರ ಪ್ರಸಾದ್, ರಂಗನಾಥ ದಿವಾಕರ, ಹನುಮಂತರಾವ್ ಕೌಜಲಗಿ, ಕಾಕಾ ಕಾರಖಾನೀಸ ಮೊದಲಾದವರು ತಿಮ್ಮಪ್ಪ ನಾಯಕರನ್ನು ತಮ್ಮ ಸಮಾನ ಅಂತಸ್ತಿನ ಆತ್ಮೀಯ ಗೆಳೆಯರಾಗಿ ಪರಿಗಣಿಸುತ್ತಿದ್ದರು.

ತಮ್ಮ ತ್ಯಾಗ, ಸೇವೆಗಳಿಂದಾಗಿ ಇವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕದ ಗಾಂಧಿ ಎಂದು ಪ್ರಸಿದ್ಧರಾಗಿದ್ದರು. ಸ್ವಾತಂತ್ರ್ಯಾನಂತರವೂ ಗಾಂಧೀಜಿ ಹೇಳಿದ ಮಾರ್ಗದಲ್ಲಿಯೇ ನಡೆದು ನೂರಾರು ಜನರಿಗೆ ಉದ್ಯೋಗ ನೀಡುವ ಅಂಕೋಲ ಗ್ರಾಮಸೇವಾ ಸಮಿತಿಯ ಮಾರ್ಗದರ್ಶಕರಾಗಿ ಕೆಲಸ ಮಾಡಿದರು. ಅಹೋರಾತ್ರಿ ಬಡ ಹಳ್ಳಿಗರ ಮತ್ತು ಹರಿಜನರ ಸೇವೆ ಕೈಗೊಂಡರು.

ರಾಷ್ಟ್ರಸೇವೆ, ಕ್ರಾಂತಿಕಾರಿ ಹೋರಾಟ, ಸ್ವಾತಂತ್ರ್ಯ ವ್ಯಾಪ್ತಿ, ಸಮಾಜ ಸೇವೆ, ಹರಿಜನ ಸೇವೆ ಮುಂತಾದ ವಿಷಯಗಳ ಮೇಲೆ ವಿವಿಧ ಪತ್ರಿಕೆಗಳಲ್ಲಿ ಅನೇಕ ಪ್ರಬುದ್ಧ ಲೇಖಗಳನ್ನು ಇವರು ಪ್ರಕಟಿಸಿದರು. ಧರ್ಮ-ಸಮನ್ವಯ ದರ್ಶನ, ಗಾಂಧೀಜಿಯವರ ಆಧ್ಯಾತ್ಮಿಕ ಜೀವನ, ತಿವಶರಣರ ಸಾಧನ ಪಥ- ಇವು ನಾಯಕರು ರಚಿಸಿರುವ ಕೆಲವು ಗ್ರಂಥಗಳು. ಗಾಂಧೀಜಿಯವರ ಕನಸಿನ ಆದರ್ಶವನ್ನು ನನಸಾಗಿಸಲು ಯತ್ನಿಸಿದವರಲ್ಲಿ ಇವರು ಅಗ್ರಗಣ್ಯರು. ತಮ್ಮ ಧ್ಯೇಯ ಮತ್ತು ಆದರ್ಶಗಳನ್ನು ಕೊನೆಯವರೆಗೂ ನಡೆಸಿಕೊಂಡು ಬಂದರು. ರಚನಾತ್ಮಕ ಕಾರ್ಯಕರ್ತರಾಗಿ, ಸ್ವಾರ್ಥತ್ಯಾಗಿಗಳಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ನಿಶ್ಚಲ ನಿರ್ಮಲ ದೇಶಪ್ರೇಮಿಯಾಗಿ, ಆಧ್ಯಾತ್ಮಿಕ ಬಾಳನ್ನು ಬಾಳಿ ಬದುಕಿದ ಈ ಕರ್ಮಯೋಗಿ ದಿನಾಂಕ 1974ರ ನವೆಂಬರ್ 26ರಂದು ನಿಧನರಾದರು.

											 (ಆರ್.ಜಿ.ಆರ್‍ಎ.)