ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತೀಯ್ಲರ್ ಮ್ಯಾಕ್ಸ್
ತೀಯ್ಲರ್ ಮ್ಯಾಕ್ಸ್ 1899-1972. ದಕ್ಷಿಣ ಆಫ್ರಿಕದ ಪ್ರಿಟೋರಿಯದಲ್ಲಿ ಜನಸಿ (30-1-1899) ಅಮೆರಿಕದಲ್ಲಿ ನೆಲೆಸಿದ ಸೂಕ್ಷ್ಮಜೀವಿವಿಜ್ಞಾನಿ. ಕೇಪ್ ಟೌನಿನಲ್ಲಿ ಬಾಲ್ಯದ ವಿದ್ಯಾಭ್ಯಾಸ ನಡೆದರೂ ಮಧ್ಯದಲ್ಲೇ ಈತ ಲಂಡನ್ನಿಗೆ ತೆರಳಿದ. ಅಲ್ಲಿ ತನ್ನ ಓದನ್ನು ಪ್ರಾರಂಭದಿಂದ ಪುನರಾವರ್ತಿಸಬೇಕೆಂದು ಗೊತ್ತಾದಾಗ ಸಾಂಪ್ರದಾಯಿಕ ವಿದ್ಯಾಭ್ಯಾಸವನ್ನು ಅಲ್ಲಿಗೇ ಮೊಟಕು ಮಾಡಿ ಆಸ್ಪತ್ರೆಯೊಂದರಲ್ಲಿ ಕಾರ್ಯಶಿಕ್ಷಣ ಪಡೆದ. 1922ರಲ್ಲಿ ಈತ ನ್ಯೂಯಾರ್ಕಿಗೆ ವಲಸೆ ಹೋಗಿ ಬಳಿಕ ಅದೇ ದೇಶದಲ್ಲಿ ನೆಲೆಸಿದ. 1920ರಲ್ಲಿ ತೀಯ್ಲರ್ ಹಳದಿ ಜ್ವರದ ಮೇಲಿನ ಸಂಶೋಧನೆಯಲ್ಲಿ ತೊಡಗಿದ. ಈ ವ್ಯಾದಿ ತಾಗುವುದು, ಹರಡುವುದು- ಇವೇ ಮುಂತಾದವನ್ನು ಕುರಿತು ನಡೆಸಿದ ಅನ್ವೇಷಣೆಗಳಿಂದ ಈತನಿಗೆ ಈ ರೋಗದ ಬಲಗುಂದಿದ ಲಸಿಕೆಯನ್ನು ತಯಾರಿಸುವುದು ಸಾಧ್ಯವಾಯಿತು. ಮುಂದಕ್ಕೆ ಇವನು ನ್ಯೂಯಾರ್ಕಿನ ರಾಕ್‍ಫೆಲ್ಲರ್ ಫೌಂಡೇಷನ್ ಸೇರಿ (1930) ವ್ಯಾಸಂಗವನ್ನು ಮುಂದುವರಿಸಿದ. ಸಹೋದ್ಯೋಗಿಗಳೊಂದಿಗೆ ಮಾನವನ ಹಳದಿ ರೋಗ ನಿರೋಧಕ ಲಸಿಕೆಯನ್ನು ತಯಾರಿಸಲು ಅನುವಾಗುವಂಥ ಸುಧಾರಿತ ಜೀವಾಣು ತಳಿಯನ್ನು ಬೆಳೆಸಿದ. ಅಲ್ಲದೆ ಮಾನವನ ಪೋಲಿಯೋ ಹೋಲುವ ಚಿಟ್ಟಿಲಿಗಳ ವಿಷಕಣ ರೋಗವನ್ನೂ ಕಂಡುಹಿಡಿದ. ವೈದ್ಯ ಹಾಗೂ ಶರೀರವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಿಕ 1951ರಲ್ಲಿ ತೀಯ್ಲರನಿಗೆ ಲಭಿಸಿತು. (ಡಿ.ಎಸ್.ಎಸ್.)