ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತೀರ್ಥಹಳ್ಳಿ

ವಿಕಿಸೋರ್ಸ್ದಿಂದ

ತೀರ್ಥಹಳ್ಳಿ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ನೈಋತ್ಯ ತುದಿಯ ತಾಲ್ಲೂಕು ಮತ್ತು ಅದರ ಆಡಳಿತ ಕೇಂದ್ರ. ತೀರ್ಥಹಳ್ಳಿ, ಅಗ್ರಹಾರ, ಆಗುಂಬೆ, ಮುತ್ತೂರು, ಮಂಡಗದ್ದೆ ಇವು ತಾಲ್ಲೂಕಿನ ಹೋಬಳಿಗಳು. ತಾಲ್ಲೂಕಿನಲ್ಲಿ ಒಟ್ಟು 247 ಗ್ರಾಮಗಳಿವೆ. 1,247 ಚ.ಕಿಮೀ. ಜನಸಂಖ್ಯೆ 1,43,209 (2001).

ತಾಲ್ಲೂಕಿನ ಪಶ್ಚಿಮ ಭಾಗ ಪಶ್ಚಿಮ ಘಟ್ಟದ ಪ್ರದೇಶ. ಕವಲೇದುರ್ಗ (969 ಮೀ.), ಕಬ್ಬಿಣದ ಗುಡ್ಡ ಮತ್ತು ಕುಂದರಗುಡ್ಡ ಇಲ್ಲಿಯ ಬೆಟ್ಟಗಳು. ಪ್ರಕೃತಿ ಸೌಂದರ್ಯಕ್ಕೆ ಪ್ರಸಿದ್ಧವಾಗಿರುವ ಆಗುಂಬೆ ಘಾಟು ಇರುವುದು ತಾಲ್ಲೂಕಿನ ನೈಋತ್ಯ ಭಾಗದಲ್ಲಿ. ಕಬ್ಬಿಣದ ಗುಡ್ಡದ ಕಬ್ಬಿಣ ಅದಿರು ಉತ್ತಮ ದರ್ಜೆಯದು. ತಾಲ್ಲೂಕು ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿದೆ. ತುಂಗಾ ಈ ತಾಲ್ಲೂಕಿನ ಪ್ರಧಾನ ನದಿ. ಮಾಲತಿ ಮುಂತಾದ ಹಳ್ಳಗಳು ಇದನ್ನು ಸೇರುತ್ತವೆ. ಪಶ್ಚಿಮ ಭಾಗದ ದಟ್ಟ ಕಾಡು ಇತ್ತೀಚೆಗೆ ಕಡಮೆಯಾಗುತ್ತಿದೆ. ಅಡಕೆ ತೋಟ ಮತ್ತು ಎಲೆಗೊಬ್ಬರಕ್ಕಾಗಿ ಕಾಡನ್ನು ಸವರುವುದು ಹೆಚ್ಚಾಗಿದೆ. ಇಲ್ಲಿಯ ಕಾಡಿನಲ್ಲಿ ಕರಿಮರ, ಹೊನ್ನೆ, ತೇಗ, ಗಂಧ, ನಂದಿ ಮುಂತಾದ ಬೆಲೆಬಾಳುವ ಮರಗಳು ಬೆಳೆಯುತ್ತವೆ. ಕಾಡುಕೋಣ, ಹಂದಿ, ಹುಲಿ, ಚಿರತೆ, ಕರಡಿ ಇತ್ಯಾದಿ ಪ್ರಾಣಿಗಳಿವೆ. ಬೆಟ್ಟ ಪ್ರದೇಶದಲ್ಲಿ ಜೇಡಿಮಣ್ಣು ಇದ್ದರೆ, ಉತ್ತರ ಭಾಗದ ಬಯಲಿನಲ್ಲಿ ಕರಿಮಣ್ಣು ಹೆಚ್ಚು. ಪ್ರದೇಶಕ್ಕನುಗುಣವಾಗಿ ಮಳೆ ವ್ಯತ್ಯಾಸವಾಗುತ್ತದೆ. ಆಗುಂಬೆಯಲ್ಲಿ ವಾರ್ಷಿಕ ಮಳೆ ಸು. 8,051 ಮಿಮೀ. ತೀರ್ಥಹಳ್ಳಿಯಲ್ಲಿ ಸು. 2,979 ಮಿಮೀ. ಪೂರ್ವಕ್ಕೆ ಹೋದಂತೆ ಮಳೆ ಇನ್ನೂ ಕಡಿಮೆ.

ಬತ್ತ, ಅಡಕೆ, ಏಲಕ್ಕಿ, ಮೆಣಸು ಇಲ್ಲಿಯ ಮುಖ್ಯ ಬೆಳೆಗಳು. ತಾಲ್ಲೂಕಿನ ಬೇರೆ ಬೇರೆ ಭಾಗಗಳಲ್ಲಿ ಭೂಮಿ ಮತ್ತು ನೀರಾವರಿ ಸೌಲಭ್ಯವನ್ನನುಸರಿಸಿ ರಾಗಿ, ಜೋಳ, ತೊಗರಿ, ಕಬ್ಬು, ಮೆಣಸಿನ ಕಾಯಿಗಳನ್ನು ಬೆಳೆಯುತ್ತಾರೆ. ತಾಲ್ಲೂಕಿನಲ್ಲಿ ಜೇನುಸಾಕಣೆ ತುಂಬ ಜನಪ್ರಿಯವಾಗಿದೆ. ತೀರ್ಥಹಳ್ಳಿಯಲ್ಲಿರುವ ಜೇನು ಸಾಕಣೆದಾರರ ಸಹಕಾರ ಸಂಘ ಇಡೀ ಜಿಲ್ಲೆಯಲ್ಲಿ ಮಾತ್ರವಲ್ಲದೆ ಪಕ್ಕದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ನರಸಿಂಹರಾಜಪುರ ಹಾಗೂ ಶೃಂಗೇರಿ ತಾಲ್ಲೂಕುಗಳಲ್ಲೂ ತನ್ನ ಕ್ಷೇತ್ರವನ್ನು ವಿಸ್ತರಿಸಿದೆ. ಈ ಸಂಘ 1971-72 ಮತ್ತು 1973-74ರ ಅವಧಿಯಲ್ಲಿ 13,215 ಕೆಜಿ. ಜೇನನ್ನು ಉತ್ಪಾದಿಸಿತ್ತು.

ತಾಲ್ಲೂಕಿನಲ್ಲಿ ರೈಲು ಮಾರ್ಗ ಇಲ್ಲ. ಆದರೆ ಮುಖ್ಯ ಊರುಗಳಿಗ ಒಳ್ಳೆಯ ರಸ್ತೆ ಸಂಪರ್ಕ ಇದೆ. ತೀರ್ಥಹಳ್ಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗುವ ಆಗುಂಬೆ ಘಾಟಿನ ರಸ್ತೆ ಒಂದು ಮುಖ್ಯ ಮಾರ್ಗ. ತೀರ್ಥಹಳ್ಳಿಯಿಂದ ಬೇರೆ ಕಡೆ ಹೋಗುವ ಇತರ ರಸ್ತೆಗಳೂ ಇವೆ.

ಅರಗ (ಜ.ಸಂ. 709), ಅಗ್ರಹಾರ, ಕವಲೇದುರ್ಗ, ಮಂಡಗದ್ದೆ, ಮುತ್ತೂರು, ಮೇಗರವಳ್ಳಿ (2,417) ಮುಂತಾದುವು ತಾಲ್ಲೂಕು ಮುಖ್ಯ ಸ್ಥಳಗಳು. ಆಗುಂಬೆ ಘಾಟು ಪ್ರಕೃತಿ ಸೌಂದರ್ಯದ ಬೀಡು. ಇಲ್ಲಿಯ ಸೂರ್ಯಾಸ್ತದ ಸೊಬಗನ್ನು ಸವಿಯಲು ಬರುವ ಪ್ರವಾಸಿಗರು ಅನೇಕ. ಅರಗ ಅಲ್ಲಿರುವ ದೇವಾಲಯಗಳಿಗಾಗಿ ಪ್ರಸಿದ್ಧ. ಅದು ಐತಿಹಾಸಿಕ ಸ್ಥಳವೂ ಹೌದು. ಕವಲೇದುರ್ಗ ಪಾಂಡವರಿದ್ದ ಕಾಮ್ಯಕವನವೆಂದು ಪ್ರತೀತಿ. ಇದನ್ನು ಭುವನಗಿರಿದುರ್ಗವೆಂದೂ ಕರೆಯುತ್ತಾರೆ. 1882ರವರೆಗೆ ಇದು ತಾಲ್ಲೂಕಿನ ಕೇಂದ್ರವಾಗಿತ್ತು. ಇಲ್ಲಿ ವಿರೂಪಾಕ್ಷ, ವಿಜಯವಿಠಲ, ವೀರಭದ್ರ ಮತ್ತು ಭುವನೇಶ್ವರಿ ದೇವಾಲಯಗಳಿವೆ. ಇದು ಕೆಳದಿ ನಾಯಕರ ಬೇಡಾಗಿತ್ತು. ಇದು ಬಳಪದ ಕಲ್ಲಿನ ವಸ್ತುಗಳ ತಯಾರಿಕೆಗೆ ಪ್ರಸಿದ್ಧವಾಗಿದೆ. ಮಂಡಗದ್ದೆ ಇನ್ನೊಂದು ಮುಖ್ಯ ಸ್ಥಳ. ಊರಿನ ಸಮೀಪದಲ್ಲಿ ತುಂಗಾನದಿಯ ದಡದಲ್ಲಿ ಒಂದು ಪಕ್ಷಿಧಾಮವಿದೆ. ಕೋಣಂದೂರು (2,690) ಈ ತಾಲ್ಲೂಕಿನ ಇನ್ನೊಂದು ದೊಡ್ಡ ಸ್ಥಳ.

ತಾಲ್ಲೂಕಿನ ಆಡಳಿತ ಕೇಂದ್ರ ತೀರ್ಥಹಳ್ಳಿ. ಜನಸಂಖ್ಯೆ 14,809 (2001). ಮಲೆನಾಡಿನ ಪ್ರಸಿದ್ಧ ಊರಾದ ಇದು 610 ಮೀ. ಎತ್ತರದಲ್ಲಿದೆ. ತುಂಗಾನದಿಯ ಎಡದಂಡೆಯ ಮೇಲಿರುವ ಈ ಪಟ್ಟಣ ಶಿವಮೊಗ್ಗದ ನೈಋತ್ಯಕ್ಕೆ ಸು. 65 ಕಿಮೀ. ದೂರದಲ್ಲಿದೆ. ಇಲ್ಲಿರುವ ಅನೇಕ ತೀರ್ಥಗಳಿಂದ ಇದಕ್ಕೆ ತೀರ್ಥಹಳ್ಳಿ ಎಂಬ ಹೆಸರು ಬಂದಿದೆ. ಪರಶುರಾಮ ತನ್ನ ರಕ್ತಕೊಡಲಿಯನ್ನು ಇಲ್ಲಿಯೇ ತೊಳೆದನೆಂದು ಪ್ರತೀತಿ. ಇಲ್ಲೊಂದು ರಾಮೇಶ್ವರ ದೇವಾಲಯವಿದೆ. ಇಲ್ಲಿರುವ ರಾಮಚಂದ್ರಪುರ ಮಠ ಮತ್ತು ಪುತ್ತಿಗೆ ಮಠಗಳು ಸಾಕಷ್ಟು ಪ್ರಸಿದ್ಧವಾದವು. ಊರಿನ ಸುತ್ತ ಅನೇಕ ಅಡಕೆ ತೋಟಗಳಿವೆ. ಇದು ತಾಲ್ಲೂಕಿನ ವ್ಯಾಪಾರ ಕೇಂದ್ರ. ಅಡಕೆ, ಏಲಕ್ಕಿ, ಬತ್ತ ಇವು ಹೆಚ್ಚಾಗಿ ವ್ಯಾಪಾರವಾಗುತ್ತದೆ. ಪಟ್ಟಣದಲ್ಲಿ ಅನೇಕ ಗಿರಣಿಗಳೂ ಮರ ಕೊಯ್ಯುವ ಕಾರ್ಖಾನೆಗಳೂ ಇವೆ. ರಾಮೇಶ್ವರ ಜಾತ್ರೆಯಲ್ಲಿ ದನಗಳ ವ್ಯಾಪಾರ ಹೆಚ್ಚು. ಬೆಳ್ಳಿ ವಸ್ತುಗಳ ತಯಾರಿಕೆಗೆ ಇದು ಮೊದಲಿನಿಂದಲೂ ಪ್ರಸಿದ್ಧ ಸ್ಥಳ. ಇಲ್ಲಿ ಚರ್ಮ, ರಬ್ಬರ್ ವಸ್ತುಗಳೂ ತಯಾರಾಗುತ್ತವೆ. ಈ ಪಟ್ಟಣದಲ್ಲಿ ಒಂದು ಅಡಕೆ ಸಂಶೋಧನ ಸಂಸ್ಥೆ ಇದೆ. ತೀರ್ಥಹಳ್ಳಿಯಲ್ಲಿ ಸರ್ಕಾರಿ ಕಚೇರಿಗಳೂ ಶಾಲಾ ಕಾಲೇಜುಗಳೂ ಅಂಚೆ, ವಿದ್ಯುತ್ತು ಮುಂತಾದ ಸೌಲಭ್ಯಗಳೂ ಇವೆ. ಬಹು ವೇಗವಾಗಿ ಬೆಳೆಯುತ್ತಿರುವ ಈ ಪಟ್ಟಣ ಈಗ ತುಂಗಾ ನದಿಯ ಎರಡು ದಂಡೆಗಳಲ್ಲೂ ಹರಡಿಕೊಂಡಿದೆ.