ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತುಂಗಾ
ತುಂಗಾ - ಕರ್ನಾಟಕದ ಒಂದು ಮುಖ್ಯ ನದಿ. ಚಿಕ್ಕಮಂಗಳೂರು ಜಿಲ್ಲೆಯ ಪಶ್ಚಿಮ ಘಟ್ಟ ಶ್ರೇಣಿಯ ವರಾಹ ಪರ್ವತದಲ್ಲಿನ ಗಂಗಾಮೂಲ ಎಂಬಲ್ಲಿ ಹುಟ್ಟುತ್ತದೆ. ಇದರ ಉಗಮಸ್ಥಾನ ಶೃಂಗೇರಿಯ ನೈಋತ್ಯಕ್ಕೆ ಸು. 25 ಕಿಮೀ. ದೂರದಲ್ಲಿದೆ. ನದಿಯ ಒಟ್ಟು ಉದ್ದ ಸು. 130 ಕಿಮೀ. ಉಗಮಸ್ಥಾನದಿಂದ ಈಶಾನ್ಯಾಭಿಮುಖವಾಗಿ ಪ್ರವಹಿಸಿ ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ ತಾಲ್ಲೂಕುಗಳ ಮುಖಾಂತರ ಹರಿದು ಶಿವಮೊಗ್ಗ ತಾಲ್ಲೂಕಿನ ಕೂಡಲಿಯ ಬಳಿ ಭದ್ರಾ ನದಿಯನ್ನು ಕೂಡಿ ಅನಚಿತರ ತುಂಗಭದ್ರಾ ನದಿ ಆಗಿ ಮುಂದುವರಿಯುತ್ತದೆ. ಈ ನದಿಗೆ 95ಕ್ಕೂ ಹೆಚ್ಚು ಹಳ್ಳಗಳು, ಉಪನದಿಗಳು ಸೇರುತ್ತವೆ. ಅವುಗಳಲ್ಲಿ ನಂದಿನಿ, ನಳಿನಿ, ಬೇಗಾರ್ ಹಳ್ಳ, ಮಾಲತಿ ಹಳ್ಳ, ಕುಶಾವತಿ ಮುಖ್ಯವಾದವು. ಮಂಡಗದ್ದೆಯ ಬಳಿ ಸ್ವಲ್ಪ ದೂರ ಈ ನದಿ ಏಳು ಕವಲುಗಳಾಗಿ ಹರಿಯುವುದರಿಂದ ಇದನ್ನು ಏಳೂಕಾಲುಸೀಳು ಎಂದು ಕರೆಯುತ್ತಾರೆ. ಭದ್ರಾ ನದಿಯಷ್ಟು ಇದು ತೀಕ್ಷ್ಣವಲ್ಲ. ಇದರ ದಡಗಳು ಕಡಿದಾಗಿಲ್ಲ. ನದಿ ರಭಸವಾಗಿ ಹರಿಯುವುದರಿಂದ ಪ್ರವಾಹದ ಭೀತಿ ಕಡಿಮೆ. ಶೃಂಗೇರಿ, ತೀರ್ಥಹಳ್ಳಿ, ಹರಿಹರಪುರ ಮುಂತಾದ ಪುಣ್ಯಕ್ಷೇತ್ರಗಳೂ ಶಿವಮೊಗ್ಗದಂಥ ದೊಡ್ಡ ನಗರಗಳೂ ಈ ನದಿಯಾ ದಡದ ಮೇಲಿವೆ. ಮಂಡಗದ್ಧೆಯ ಬಳಿ ಒಂದು ಪಕ್ಷಿಧಾಮವಿದೆ. ಶಿವಮೊಗ್ಗದ ನೈಋತ್ಯಕ್ಕೆ ಸು. 11 ಕಿಮೀ. ದೂರದಲ್ಲಿರುವ ಗಾಜನೂರಿನ (ಸಕ್ರೆಬೈಲು) ಬಳಿ ಈ ನದಿಗೆ ಅಣೆಕಟ್ಟೆಯನ್ನು ಕಟ್ಟಿದ್ದಾರೆ. ಇದರಿಂದ ಶಿವಮೊಗ್ಗ ಜಿಲ್ಲೆಯ 8.70 ಸಾವಿರ ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಒದಗಿದೆ. ತುಂಗಾ ನೀರನ್ನು ಬಳಸಿಕೊಂಡು ಬತ್ತ, ಕಬ್ಬು ಮತ್ತು ಅಡಕೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ನದಿಯ ನೀರು ಕುಡಿಯಲು ತುಂಬ ರುಚಿಯೆಂದು ಪ್ರತೀತಿ. ಎಂದೇ ಗಂಗಾಸ್ನಾನ ಮತ್ತು ತುಂಗಾಪಾನ ಎಂಬ ನಾಣ್ಣುಡಿ ಬೆಳಕಿಗೆ ಬಂದಿದೆ.
ವಿಷ್ಣು ವರಾಹಾವತಾರ ತಾಳಿ ಸಾಗರದಿಂದ ಭೂಮಿಯನ್ನು ಮೇಲೆತ್ತಿ ತಂದಾಗ ಆತನ ಎಡಕೋರೆಯಿಂದ ತೊಟ್ಟಿಕ್ಕಿದ್ದ ನೀರೇ ತುಂಗಾ ನದಿಯಾಗಿ ಹರಿಯಿತೆಂದು ಐತಿಹ್ಯವಿದೆ. (ಕೆ.ಆರ್.ಆರ್.)