ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತುರ್ಕರು ಅಥವಾ ತುರ್ಕಿಕ್ ಜನರು

ವಿಕಿಸೋರ್ಸ್ದಿಂದ

ತುರ್ಕರು ಅಥವಾ ತುರ್ಕಿಕ್ ಜನರು-

 	ತುರ್ಕಿಕ್ ಭಾಷೆಯನ್ನಾಡುವ ಜನರನ್ನೆಲ್ಲ ಈ ಹೆಸರಿನಿಂದ ಕರೆಯುತ್ತಾರೆ.  ಅರಬ್ಬರ ಅನಂತರ ಇವರು ಪ್ರಸಿದ್ಧಿಗೆ ಬಂದರು.  ಇವರಲ್ಲಿ ಪೌರಸ್ತ್ಯರು ಮತ್ತು ಪಾಶ್ಚಾತ್ಯ ಎಂಬ ಎರಡು ಗುಂಪುಗಳಿವೆ.  ತುರ್ಕಿಸ್ತಾನ್ ಮತ್ತು ಕ್ಯಾಸ್ಟಿಯನ್ ಸೆಟಪಿ ಪ್ರದೇಶದಲ್ಲಿನ ಜನ ಪೌರಾಸ್ತ್ಯರು.  ಇವರು ಇರಾನಿ ಸಂಸ್ಕøತಿಯ ಪ್ರಭಾವಕ್ಕೊಳಗಾಗಿರುವುದರಿಂದ ಇರಾನಿ ತುರ್ಕರು ಅಥವಾ ತುರಾನಿಗಳೆಮದೂ ಹೆಸರಾಗಿದ್ದಾರೆ.  ಯೂರೋಪ್, ಏಷ್ಯ ಮತ್ತು ಓಸ್ಮಾನ್ಲೀ ಗುಂಪಿನವರು ಪಾಶ್ಚಾತ್ಯ ತುರ್ಕರು.  ಈ ಎರಡು ಗುಂಪುಗಳ ನಡುವೆ ಏಕರೂಪದ ಸಂಸ್ಕøತಿಯಾಗಲಿ ಪರಸ್ಪರ ರಕ್ತ ಸಂಬಂಧವಾಗಲಿ ಇಲ್ಲ.  ಇವರಲ್ಲಿ ಸಂಪರ್ಕ ಏರ್ಪಡಿಸಿರುವುದು ಕೇವಲ ಭಾಷೆ.
   ತುರ್ಕರ ಮೂಲವನ್ನು ಕುರಿತಂತೆ ಬಹಳ ಕಾಲದಿಂದಲೂ ಇತಿಹಾಸಕಾರರಲ್ಲಿ ಜಿಜ್ಞಾಸೆಯಿದೆ.  ಆದರೆ ಬೈಕಲ್ ಸರೋವರದ ದಕ್ಷಿಣಕ್ಕೆ ಓರ್ಖಾನ್ ನದೀತೀರದಲ್ಲಿ ದೊರೆತ ಕ್ರಿ.ಶ 8 ನೆಯ ಶತಮಾನಕ್ಕೆ ಸೇರಿದ ಕೆಲವು ಶಾಸನಗಳಲ್ಲಿ ಏಷ್ಯದಲ್ಲಿನ ತುರ್ಕರ ಚಟುವಟಿಕೆ ಬಗ್ಗೆ ಕುತೂಹಲವನ್ನು ಕೆರಳಿಸುವಂಥ ವಿವರಗಳಿವೆ.  ಇವರು ಮೂಲತಃ ಮಧ್ಯ ಏಷ್ಯಾದ ಒಂದು ಮಿಶ್ರ ಜನಾಂಗ.  ಬಣ್ಣ ಹಾಗೂ ಆಕಾರದಲ್ಲಿ ಕೆಲವರು ಚೀನಿಯರನ್ನೂ ಇನ್ನು ಕೆಲವರು ದಕ್ಷಿಣ ರಷ್ಯದ ಕಾಕೇಶಿಯನ್ನರನ್ನು ಹೋಲುತ್ತಾರೆ.  ಯೂರಲ್ ಮತ್ತು ಅ್ಯಲ್ಟೇಯಿಕ್ ಭಾಷೆಗಳ ಗುಂಪಿಗೆ ಸೇರಿದ ಭಾಷೆಯನ್ನು ಇವರು ಆಡುತ್ತಾರೆ.
   ಪ್ರಾಚೀನ ಚೀನದಲ್ಲಿ ತುರ್ಕರೆಂಬ ಗುಂಪೊಂದಿದ್ದು ಅವರು ಷಾನ್-ತಾನ್ ನಗರದೊಂದಿಗೆ ಸಂಪರ್ಕ ಹೊಂದಿದ್ದಂತೆ ತಿಳಿದು ಬರುತ್ತದೆ.  ಅನಂತರದ ಕ್ರಿ.ಶ. 545ರ ಸುಮಾರಿಗೆ ಅಲ್ಲಿ ದಂಗೆಯೆದ್ದರೆಂಬ ಕಾರಣದಿಂದ ಇವರನ್ನು ಹತ್ತಿಕ್ಕಲಾಯಿತು.  ಆದರೂ ಕೆಲವೇ ವರ್ಷಗಳಲ್ಲಿ ಚೇತರಿಸಿಕೊಂಡ ಇವರು ಪುನಃ ಅಕ್ಸಸ್ ಪ್ರದೇಶಗಳಲ್ಲಿ ಪ್ರಾಬಲ್ಯಕ್ಕೆ ಬಂದರು.  ಇವರು ಕ್ರಿ.ಶ. ಆರನೆಯ ಶತಮಾನದ ಮಧ್ಯಭಾಗದಿಂದ ಅಂತ್ಯದವರೆಗೂ ತೂಮೆನ್ ಎಂಬುವನ ನಾಯಕತ್ವದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದರು.  ಈ ಗುಂಪಿನ ಪ್ರಗತಿಗೆ ಶ್ರಮಿಸಿದವರಲ್ಲಿ ತೂಮೆನ್ನನ ತಮ್ಮ ಇಟ್ಸಿಮಿ, ಮಗ ಮೊಕಾನ್-ತಾರ್ದು ಮೊದಲಾದವರು ಪ್ರಸಿದ್ಧರು.  ಚೀನದ ಪರಮಾಧಿಕಾರಕ್ಕೊಳಪಟ್ಟಿದ್ದ ಒಂದು ಸಣ್ಣ ಬುಡಕಟ್ಟಿನ ತುರ್ಕರು ಮುಂದೆ ಪ್ರಬಲಗೊಂಡು ಪೂರ್ವ ರೋಮನ್ ಚಕ್ರವರ್ತಿಯಾದ ಎರಡನೆಯ ಜಸ್ಟಿನ್ನನೊಂದಿಗೆ ರಾಜತಾಂತ್ರಿಕ ಸಂಪರ್ಕ ಬೆಳೆಸಿಕೊಂಡರು.  ಕ್ರಿ.ಶ. 598ರ ಸುಮಾರಿಗೆ ತಾರ್ದು ಖಾನನ ಕಾಲದಲ್ಲಿ ರೋಮನ್ ಚಕ್ರವರ್ತಿ ಮಾರಿಸ್‍ನೊಂದಿಗೂ ಸ್ನೇಹವನ್ನು ಬೆಳೆಸಿಕೊಂಡಿದ್ದರು.  ಕ್ರಿ.ಶ. 620-628ರ ನಡುವೆ ಹಿರಾಕ್ಲಿಯಸ್ ಪರ್ಷಿಯದವರೊಂದಿಗೆ ಹೂಡಿದ್ದ ಯುದ್ಧಗಳಲ್ಲಿ ಅವನಿಗೆ ಸಹಾಯಮಾಡಿ ಹೆಸರು ಗಳಿಸಿದರು.
   ತುರ್ಕರಲ್ಲಿ ಅನಾದಿಕಾಲದಿಂದಲೂ ಇದ್ದ ಗುಂಪುಗಾರಿಕೆ ಮತ್ತೆ ಹೆಚ್ಚಿಕೊಂಡು ಅಂತರಿಕ ಕಲಹಗಳು ಆರಂಭವಾದವು.  ಡ್ಯಾಲೋಬಿ ಎಂಬಾತ ತನ್ನನ್ನು ನಾಯಕನನ್ನಾಗಿ ಅರಿಸಲಿಲ್ಲವೆಂಬ ಕಾರಣದಿಂದ ಅನುಯಾಯಿಗಳೊಂದಿಗೆ ಹೊರಬಿದ್ದ.  ಹೀಗೆ ತುರ್ಕರಲ್ಲಿ ಎರಡು ಪಂಗಡಗಳಾದವು.  ಇವುಗಳಲ್ಲಿ ಒಂದು ಬೈಕಲ್ ಸರೋವರ ಹಾಗೂ ಎನಿಸೀ ನದಿಯ ಉತ್ತರದ ಉಪನದಿಗಳ ಪ್ರದೇಶಗಳಲ್ಲಿ ಹರಡಿಕೊಂಡಿತ್ತು.  ಇವರು ಉತ್ತರದ ತುರ್ಕರೆಂದು, ತಾಷ್ಕೆಂಟಿನ ಉತ್ತರಕ್ಕೆ ಅರುಂಚಿ ಹಾಗೂ ಅಲಿಯಂಟಗಳೆಂಬ ಎರಡು ಮುಖ್ಯ ಕೇಂದ್ರಗಳಲ್ಲಿ ನೆಲೆಗೊಂಡ ಮತ್ತೊಂದು ಗುಂಪು ಪಾಶ್ಚಾತ್ಯ ತುರ್ಕರೆಂದು ಹೆಸರಾಯಿತು.  ಈ ಗುಂಪುಗಳ ನಡುವೆ ಆಂತರಿಕ ಕಲಹಗಳು ಮುಂದುವರಿಯುವಂತೆ ಚೀನೀಯರು ಭೇದನೀತಿ ಅನುಸರಿಸುತ್ತಿದ್ದರು.  ಇದರಿಂದ ತುರ್ಕರಲ್ಲಿ ಪರಸ್ಪರ ಹೊಂದಾಣಿಕೆಯುಂಟಾಗಲಿಲ್ಲ.  ಅರನೆಯ ಶತಮಾನದ ಮಧ್ಯಭಾಗದಿಂದ ಏಳನೆಯ ಶತಮಾನದ ಮಧ್ಯಭಾಗದವರೆಗೂ ಇವರು ತಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಬಂದಿದ್ದರು.  ಆದರೆ ಇಸ್ಲಾಂ ಧರ್ಮದ ಹರಡುವಿಕೆಯಿಂದಾಗಿ ಸಂಘಟಿತರಾದ ಅರಬ್ಬರು ಪರ್ಷಿಯವನ್ನು ಆಕ್ರಮಿಸಿ, ಟ್ರಾನ್ಸ್ ಆಕ್ಸಿಯಾನಕ್ಕೂ ಹರಡಿಕೊಂಡು ಎಂಟನೆಯ ಶತಮನದ ಆದಿಭಾಗದಲ್ಲಿ  ತುರ್ಕರು ಅನೇಕ ಗುಂಪುಗಳಾಗಿ ಒಡೆದು ಹೋಗಿ ಜುಂಗಾರಿಯ, ತಾಷ್ಕೆಂಟ್, ಘರಘಾನ, ಬೊಖಾರಾ ಬದಷೌನ್, ಘಜ್ನಿ ಮೊದಲಾದ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದರು.  ಅವರಲ್ಲಿ ಏಕತೆಯುಂಟಾಗುವ ಸಂಭವಿರಲಿಲ್ಲ.  ಜೊತೆಗೆ ಭೇದ ನೀತಿಯನ್ನನುಸರಿಸುತ್ತಿದ್ದ ಚೀನಿಯರೂ ಇವರಲ್ಲಿ ಅನೇಕ ಗುಂಪುಗಳನ್ನು ತಮ್ಮ ಪರಮಾಧಿಕಾರಕ್ಕೊಳಪಡಿಸಿಕೊಂಡಿದ್ದರು.
   ಪದೇ ಪದೇ ಉಪದ್ರವಗಳನ್ನೆದುರಿಸುತ್ತಿದ್ದ ತುರ್ಕರು ಕ್ರಿ.ಶ. ಹತ್ತನೆಯ ಶತಮಾನದಲ್ಲಿ ಮಧ್ಯಪ್ರಾಚ್ಯದ ಕಡೆ ಹೊಸ ನೆಲೆಯೊಂದನ್ನು ಅರಸುತ್ತ ಹೋದರು.  ಯುದ್ಧಕೌಶಲದಲ್ಲಿ ಸಾಕಷ್ಟು ಪಳಗಿದ್ದ ತುರ್ಕರು ಪರ್ಷಿಯ ಹಾಗೂ ಅರೇಬಿಯಗಳಲ್ಲಿನ ಸಿಂಹಾಸನಾಧಿಪತಿಗಳಿಗೆ ತಮ್ಮ ಸೇವೆಯನ್ನು ಎರವಲಾಗಿ ಕೊಡಲು ಸಿದ್ಧರಾದರು.  ಅವರ ಸೇವೆಯನ್ನು ಉಪಯೋಗಿಸಿಕೊಳ್ಳಲು ಅಬ್ಬಾಸಿದ್ ವಂಶದ ಖಲೀಫರು ಮುಂದೆ ಬಂದರು.  ಅಲ್ಲಿಂದ ಮುಂದೆ ತುರ್ಕರು ಅರೇಬಿಯಾದಲ್ಲಿಯೂ ಹರಡಿಕೊಂಡರು.  ಇವರ ಒಂದು ಗುಂಪು ಈಜಿಷ್ಟಿಗೂ ಹೋಯಿತು.  ಇವರು ಮುಂದೆ ಮ್ಯಾಮಲೂಕ್ ತುರ್ಕರೆಂದು ಹೆಸರಾದರು.  ಯುದ್ದಕ್ಕಾಗಿ ಅನೇಕ ತುರ್ಕಿಕ್ ಗುಲಾಮರನ್ನು ಸಮರ್‍ಖಮಡ್ ಬೊಖಾರ್ ಮತ್ತು ಖಿವಗಳಿಂದ್ ಅನೇಕ ರಾಜರು ಕೊಂಡು ತಂದರು.  ತುರ್ಕಿಕ್ ಗುಲಾಮರ ಶಕ್ತಿ ಸಾಮಥ್ರ್ಯಗಳಿಗೆ ಅವರು ಮಾರು ಹೋಗಿದ್ದರು.  ಅವರಲ್ಲಿ ಕೆಲವರಂತೂ ಪ್ರಬಲರಾದ ನಾಯಕರಾದರು.  ರೋಮ್ ಮತ್ತು ಗ್ರೀಸ್‍ಗಳು ಹಾಗೂ ಯುರೋಪಿಯನ್ನರಲ್ಲಿದ್ದಂತೆ ತುರ್ಕಿ ಗುಲಾಮರನ್ನು ಹಿಂಸಿಸದೆ ಅವರನ್ನು ತಮ್ಮ ಒಡಹುಟ್ಟಿದವರಂತೆಯೇ ಇಸ್ಲಾಂ ಪ್ರಂಪಚದಲ್ಲಿನ ರಾಜರು ನೋಡಿಕೊಂಡಿದ್ದರಿಂದ ರಾಜ್ಯಾಡಳಿತದಲ್ಲಿಯೂ ಈ ಗುಲಾಮರನ್ನು ತೊಡಗಿಸಿ ಅವರಿಂದ ಉತ್ತಮ ಅಡಳಿತವನ್ನು ನಡೆಸಿಕೊಳ್ಳು ಸಾಧ್ಯವಾಯಿತು.  ಘಜ್ನಿ ವಂಶವನ್ನು ಸ್ಥಾಪಿಸಿದ ಮಹಮದ್ ಘಜ್ನಿಯೂ ಒಬ್ಬ ತುರ್ಕಿ ಗುಲಾಮನೇ.
   ಗಜ್ ತುರ್ಕರೆಂಬ ಒಂದು ಗುಂಪು ಸೆಲ್ಜುಕ್‍ನ ನಯಕತ್ವದಲ್ಲಿ ಆಕ್ಸಸ್ ಪರ್ವತಗಳ ಇಳಿಜಾರಿನಲ್ಲಿ ನೆಲೆಸಿತ್ತು.  ಈ ಗುಂಪಿನವರೆಲ್ಲ ಇಸ್ಲಾಂ ಧರ್ಮವನ್ನು ಅವಲಂಬಿಸಿದ್ದರು.  ಸೆಲ್ಜುಕ್ಕನ ಮೊಮ್ಮಗ ತುಗ್ರಿಲ್ ಘಜ್ನಿಯವರನ್ನು ಸೋಲಿಸಿ ಖೊರಾಸಾನ್, ಅರ್ಮೇನಿಯ, ಅಜರ್‍ಬೈಜಾನ್ ಮತ್ತು ಅನಟೊಲಿಯಗಳನ್ನು ಆಕ್ರಮಿಸಿಕೊಂಡ.  ಕ್ರಿ.ಶ. 1055 ರಲ್ಲಿ ತುಗ್ರಿಲ್ ಅಬ್ಬಾಸಿದ್ ಖಲೀಫನ ರಾಜಧನಿ ಬಾಗ್ದಾದನ್ನು ವಶಪಡಿಸಿಕೊಂಡ.   ಆ ಸಂದರ್ಭದಲ್ಲಿ ಬಾಗ್ದಾದಿನ ಖಲೀಫ ತನ್ನನ್ನು ಗೌರವದಿಂದ ನಡೆಸಿಕೊಂಡನೆಂದು ತುಗ್ರಿಲ್‍ನಿಗೆ ಸುಲ್ತಾನ್ ಎಂಬ ಬಿರುದು ಕೊಟ್ಟ.  ಸಮರದಲ್ಲಿ ಸೋತಿದ್ದರು ಖಲೀಫನೆಂಬ ಬಿರುದನ್ನು ಹೊಂದಿರಬಹುದೆಂದು ಅಬ್ಬಾಸಿದ್ ಖಲೀಫರಿಗೆ ತುಗ್ರಿಲ್ ಅನುಮತಿಯಿತ್ತನಾದರೂ ಖಲೀಫನ ರಾಜಕೀಯ ಪರಮಾಧಿಕಾರ ಅಂತ್ಯಗೊಂಡಿತು.
    ಸೆಲ್ಜುಕ್ ಸುಲ್ತಾನರೆ ನಿಜವಾದ ಅಧಿಕಾರವನ್ನು ಚಲಾಯಿಸತೊಡಗಿದರು.  ತುಗ್ರಿಲ್ ಕ್ರಿ.ಶ. 1063 ರಲ್ಲಿ ಅಸು ನೀಗಿದ.  ಅವನ ಅನಂತರ ಅಲ್ಛ ಅರಸ್ಲನ್ ಎಂಬಾತ ಅಳಿದ (1063-1072).  ಈತ ಅನಟೋಲಿಯ ಮತ್ತು ಸಿರಿಯಗಳನ್ನು ಸಂಪೂರ್ಣವಾಗಿ ಗೆದ್ದ.  ಸಾಯುವುದಕ್ಕೆ ಒಂದು ವರ್ಷ ಮೊದಲು ಬೈಜಾಂಟಿನ್ ಚಕ್ರವರ್ತಿ ರೋಮನಸ್‍ನನ್ನು ಸೋಲಿಸಿದ.  ಅಂದಿನಿಂದ ಆನಟೋಲಿಯ ತುರ್ಕರ ಒಂದು ವಸಹತಾಯಿತು.

  ಹನ್ನೆರಡನೆಯ ಶತಮಾನದಲ್ಲಿ ಶಕ್ತಿಗುಂದಿದ ತುರ್ಕರು ಹದಿಮೂರನೆಯ ಶತಮಾನದಲ್ಲಿ ಮಂಗೋಲರ ನಾಯಕ ಜೆಂಗಿಸ್‍ಖಾನ್‍ನಿಂದ ದಮನ ಮಾಡಲ್ಪಟ್ಟರು.  ಜೆಂಗಿಸ್‍ನ ಮಗ ಹರಗು ಸೆಲ್ಜುಕ್ ಚಕ್ರಾಧಿಪತ್ಯವನ್ನು ಛಿದ್ರಗೊಳಿಸಿದ.  ಇಂಥ ಸಂಧಿಕಾಲದಲ್ಲಿ ಓಸ್ಮಾನ್ಲೀ ತುರ್ಕರು ಚೇತರಿಸಿಕೊಂಡು ತುರ್ಕರನ್ನು ರಕ್ಷಿಸಿದರು.
    ಮಂಗೋಲರ ದಾಳಿ ಕಾಲದಲ್ಲಿ ಎರ್ ತುಗ್ರಿಲ್ ಎಂಬಾತ ಕೊನೆಯ ಸೆಲ್ಜುಕಿ ಸುಲ್ತಾನನಿಂದ ಅನಟೋಲಿಯದಲ್ಲಿ ಸ್ವಲ್ಪ  ರಾಜ್ಯವನ್ನು ಪಡೆದುಕೊಂಡು ಅದನ್ನು ಒಂದು ಸುವ್ಯವಸ್ಥಿತ ಸಣ್ಣ ರಾಜ್ಯವನ್ನಾಗಿ ನಿರ್ಮಿಸಿದ.  ಇವನ ಮಗ ಓಸ್ಮಾನ್ ಸು. 1288 ರಲ್ಲಿ ರಾಜ್ಯವಿಸ್ತರಣೆ ಕಾರ್ಯದಲ್ಲಿ ತೊಡಗಿ ಬೈಜûÁಂಟಿಯನ್ನಿ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡ.  1326 ರಲ್ಲಿ ಬುರ್ಸಾವನ್ನು ಸ್ವಾಧೀನ ಪಡಿಸಿಕೊಂಡು ಅದನ್ನು ಆಟೋಮಾನ್ ತುರ್ಕಿಯ ಪ್ರಥಮ ರಾಜಧಾನಿಯನ್ನಾಗಿ ಮಾಡಿಕೊಂಡ.  ಬುರ್ಸಾವನ್ನು ಆಕ್ರಮಿಸಿಕೊಂಡ ಅನಂತರ ಸ್ವಲ್ಪ  ಕಾಲದಲ್ಲಿಯೇ ಓಸ್ಮಾನ್ ತೀರಿಕೊಂಡನಾದರೂ ಇವನ ಅನಂತರ ಅಳಿದವರು ಇವನು ಹಾಕಿಕೊಟ್ಟ ದಾರಿಯಲ್ಲಿಯೇ  ಮುಂದುವರಿದು ದೊಡ್ಡ ತುರ್ಕಿ ಚಕ್ರಧಿಪತ್ಯವನ್ನೇ ಸ್ಥಾಪಿಸಿದರು.  ಈ ವಂಶ ಆಟೋಮಾನ್ ತುರ್ಕರೆಂದು ಪ್ರಸಿದ್ಧಿ ಪಡೆದು ಸುಮಾರು 600 ವರ್ಷಗಳ ಕಾಲ ವೈಭವದಿಂದ ಆಳ್ವಿಕೆ ನಡೆಸಿದ್ದಲ್ಲದೆ ಯೂರೋಪ್ ಖಂಡದಲ್ಲಿಯೂ ವಿಶಾಲವಾದ ಚಕ್ರಾಧಿಪತ್ಯವನ್ನು ಹೊಂದಿದ್ದಿತು.  ಕ್ರೈಸ್ತ ಪ್ರಂಪಚಕ್ಕೂ ಇಸ್ಲಾಂ ಧರ್ಮಾವಲಂಬಿಗಳಿಗೂ ನಡೆದ ಧರ್ಮಯುದ್ಧಗಳಲ್ಲಿ (ಕ್ರೂಸೇಡ್ಸ್) ಈ ಸಂತತಿ  ಕ್ರೈಸ್ತ ಪ್ರಂಪಚವನ್ನೇ ಬುಡಮೇಲು ಮಾಡುವ ಸಾಹಸದಲ್ಲಿ ತೊಡಗಿತು.  ಈ ಸಂತತಿ ಅಂತ್ಯಗೊಂಡಿದ್ದು  1922 ರಲ್ಲಿ.  ಆರಂಭದಲ್ಲಿ ಅಲೆಮಾರಿಗಳಾಗಿಯೂ ಪರಾಧೀನರಾಗಿಯೂ ಜೀವಿಸುತ್ತಿದ್ದ  ಏಷ್ಯದ ತುರ್ಕಿಕ್ ಜನ ಯೂರೋಪಿನ ರಾಜ್ಯಗಳೊಂದಿಗೆ ಹೋರಾಡಿ ಪ್ರಂಪಚದ ತುರ್ಕಿಕ್ ಜನ ಯೂರೋಪಿನ ರಾಜ್ಯಗಳೊಂದಿಗೆ ಹೋರಾಡಿ ಪ್ರಂಪಚದ ಇತಿಹಾಸದ ಪುಟಗಳಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು  ಪಡೆದುಕೊಂಡರು.	                        (ಎಂ.ಎನ್.ವಿ.ಆರ್.)