ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತೂಗು ಕಣಿವೆ
ತೂಗು ಕಣಿವೆ - ಹಿಮ ಸರಿತದಿಂದಾಗಿ ನೀರ್ಗಲ್ಲು ನದಿ ಕಣಿವೆಗೆ ಚಾಚಿದಂತೆ ಉನ್ನತ ಮಟ್ಟದಲ್ಲಿ ಕಂಡುಬರುವ ಉಪನೀರ್ಗಲ್ಲು ಕಣಿವೆ. ನೀರ್ಗಲ್ಲು ಹಲವು ರೀತಿಯಲ್ಲ್ಲಿ ಭೂ ಮೇಲ್ಮೈಯನ್ನು ಆಕ್ರಮಿಸಿರುತ್ತದೆ. ಇವುಗಳ ಪೈಕಿ ಪರ್ವತ ಪ್ರದೇಶಗಳ ಕಣಿವೆಯನ್ನು ಆಕ್ರಮಿಸುವ ಕಣಿವೆ ನೀರ್ಗಲ್ಲೂ ಒಂದು. ಕಣಿವೆ ನೀರ್ಗಲ್ಲು ನದಿಗಳು ಪ್ರಥಮವಾಗಿ ಆಲ್ಪ್ಸ್ ಪರ್ವತ ಶ್ರೇಣಿಗಳಿಂದ ವಿವರಿಸಲ್ಪಟ್ಟವು. ಅನೇಕ ವೇಳೆ ಇವನ್ನು ಆಲ್ಪೈನ್ ನೀರ್ಗಲ್ಲು ನದಿಗಳು ಎಂದೇ ಕರೆಯುವುದುಂಟು. ಆಲ್ಪ್ಸ್ ಪರ್ವತಗಳಲ್ಲಿ ಸುಮಾರು ಎರಡು ಸಾವಿರ ನೀರ್ಗಲ್ಲು ನದಿಗಳಿವೆಯೆಂದು ಅಂದಾಜು ಮಾಡಲಾಗಿದೆ. 16ಕಿ.ಮೀ ಉದ್ದವಿರುವ ದಿ ಗ್ರೇಟ್ ಅಲೆಕ್ ಎಂಬುದು ಪ್ರಮುಖವಾದದ್ದು. ಆಲಾಸ್ಕದಲ್ಲಿರುವ ಹಬ್ಬರ್ಡ್ ನೀರ್ಗಲ್ಲು ನದಿ ಪ್ರಪಂಚದಲ್ಲಿ ಅತ್ಯಂತ ಉದ್ದವಾದ್ದು. ಆಲ್ಪ್ಸ್ ಪರ್ವತ ಶ್ರೇಣಿಗಳಲ್ಲಿ ಇರುವಂತೆ ಹಿಮಾಲಯದಲ್ಲಿಯೂ ಅನೇಕ ನೀರ್ಗಲ್ಲು ನದಿಗಳಿವೆ. ಇವುಗಳಲ್ಲಿ 77 ಕಿ.ಮೀ ಉದ್ದ, 546ಮೀ ದಪ್ಪವಿರುವ ಪಾಮಿರ್ ಪ್ರದೇಶದ ಪೆಡ್ಜೆಂಕೊ ಅತ್ಯಂತ ಉದ್ದವಾದ ನೀರ್ಗಲ್ಲು ನದಿ. ರಿಮೊ (40.25ಕಿ.ಮೀ), ಗಂಗೋತ್ರಿ (24.15ಕಿ.ಮೀ), ಕೇದಾರನಾಥ (14.49ಕಿ.ಮೀ) ಹಾಗೂ ಝೆಮ (26ಕಿ.ಮೀ) ಇತರ ಮುಖ್ಯ ಕಣಿವೆ ನೀರ್ಗಲ್ಲು ನದಿಗಳು. (ಬಿ.ವಿ.ಜೆ.)
ನದಿಗಳಂತೆ ನೀರ್ಗಲ್ಲು ನದಿಗಳು ಪರಿಣಾಮಕಾರಿಯಾಗಿ ಭೂ ವ್ಯಾಪಾರದಲ್ಲಿ ನಿರತವಾಗುತ್ತವೆ. ಈ ಕ್ರಿಯೆಯಲ್ಲಿ ಭೂಸವೆತ ಅತಿಮುಖ್ಯವಾದದ್ದು. ಭೂ ಸವೆತ ಕಣಿವೆ ಪ್ರದೇಶದಲ್ಲಿ ಅನೇಕ ರೀತಿಯಿಂದ ನಡೆಯುತ್ತದೆ. ಸಾವಧಾನವಾಗಿ ಚಲಿಸುವ ನೀರ್ಗಲ್ಲು ಶಿಲಾಬಂಡೆಗಳನ್ನೂ ಚೂರುಗಳನ್ನೂ ಒಯ್ಯುತ್ತದೆ. ಸಾಗಣೆಗೊಳ್ಳುವಾಗ ಶಿಲೆಗಳು ಕಣಿವೆಯ ತಳಗಲ್ಲನ್ನು ಉಜ್ಜುವುದರ ಜೊತೆಗೆ ಕಣಿವೆಯ ಪಕ್ಕಗಳನ್ನು ಅಷ್ಟೇ ತೀವ್ರತೆಯಲ್ಲಿ ಸಡಿಲಗೊಳಿಸುತ್ತವೆ. ನೀರ್ಗಲ್ಲು ನದಿಯ ಈ ಕ್ರಿಯೆಯಿಂದಾಗಿ ಕಣಿವೆ ತಳ ಅಗಲವಾಗುತ್ತದೆ, ಪಕ್ಕಗಳು ವಿಶಾಲಗೊಂಡು ಕಡಿದಾಗುತ್ತವೆ. ಇಂಥ ಕಣಿವೆಗಳ ಅಡ್ಡಕೊಯ್ತ U - ಆಕಾರದಲ್ಲಿ ಇರುತ್ತದೆ. (ನದಿಗಳು ಕೊರೆದು ಮಾಡಿದ ಕಣಿವೆಗಳಿಗೆ ಗಿ- ಆಕಾರ ಇರುವುದು). ಇದಕ್ಕೆ ಕಾರಣ ಸುಸ್ಪಷ್ಟ. ನೀರ್ಗಲ್ಲು ನದಿಗಳಲ್ಲಿ ಸಾಗಣೆಗೊಳ್ಳುವ ಶಿಲೆ, ಶಿಲಾಚೂರುಗಳು ನೀರ್ಗಲ್ಲಿನಲ್ಲಿ ದೃಢವಾಗಿ ಬಂಧಿಸಲ್ಪಟ್ಟಿರುತ್ತವೆ. ಇದರಿಂದಾಗಿ ಶಿಲಾ ತಿಕ್ಕಾಟವೂ ಪರಿಣಾಮಕಾರಿ ಆಗಿರುತ್ತದೆ. ಅಲ್ಲದೇ ನೀರ್ಗಲ್ಲು ನದಿಗಳ ಚಲನೆ ನದಿನೀರಿಗಿಂತ ಬಲು ನಿಧಾನ. ಕಣಿವೆ ಮಾರ್ಗದಲ್ಲಿ ಎದುರಾಗುವ ತೀವ್ರ ಡೊಂಕು, ಇಳಿತಗಳನ್ನು ನೀರ್ಗಲ್ಲು ನದಿಗಳು ಶೀಘ್ರವಾಗಿ ಅನುಸರಿಸುವುದಿಲ್ಲ. ನೀರ್ಗಲ್ಲು ನದಿಗಳ ಈ ಗುಣ ಕಣಿವೆಗಳನ್ನು ನೇರವಾಗಿ ಕೊರೆಯಲು ಸಹಾಯಕಾರಿ.
ನೀರ್ಗಲ್ಲು ನದಿ ಕಣಿವೆಯ ಸವೆತದ ಪ್ರಮಾಣ ನೀರ್ಗಲ್ಲಿನ ಗಾತ್ರ, ಹರಿಯುವ ವೇಗ, ಆಕಾರ, ಒಯ್ಯುವ ಶಿಲಾಪ್ರಮಾಣ ಹಾಗೂ ಕಣಿವೆಯ ತಳಗಲ್ಲನ್ನು ಅವಲಂಬಿಸಿರುತ್ತದೆ. ಈ ಅಂಶಗಳನ್ನು ಆಧರಿಸಿ ಕಣಿವೆಯ ಕೊರೆತದ ಪ್ರಮಾಣದಲ್ಲಿ ಭೇದ ಉಂಟು. ಒಂದೇ ಮಟ್ಟದ ಕೊರೆತ ನೀರ್ಗಲ್ಲು ನದಿಗಳಲ್ಲಿ ಕಂಡು ಬರುವುದು ಬಲು ವಿರಳ. ನದಿಗಳಿಗೆ ಉಪನದಿಗಳಿರುವಂತೆ ನೀರ್ಗಲ್ಲು ನದಿಗಳಿಗೆ ಉಪನೀರ್ಗಲ್ಲು ನದಿಗಳಿರುತ್ತವೆ. ಸಾಮಾನ್ಯವಾಗಿ ಉಪನದಿಗಳು ಪ್ರಮುಖ ನದಿಗಳನ್ನು ಸೇರುವುದು ಸಮಾನ ಮಟ್ಟದಲ್ಲಿಯೇ. ಆದರೆ ಮುಖ್ಯ ನೀರ್ಗಲ್ಲು ನದಿಯನ್ನು ಸೇರುವ ಉಪನೀರ್ಗಲ್ಲು ನದಿ ಸಾಕಷ್ಟು ಎತ್ತರ ಮಟ್ಟದಲ್ಲಿದ್ದು ಇದರಿಂದ ಉಂಟಾದ ಕಣಿವೆಗಳು ನೀರ್ಗಲ್ಲು ನದಿಯ ಮೇಲೆ ತೂಗಾಡುತ್ತಿರುವಂತೆ ಕಂಡುಬರುತ್ತದೆ. ಇಂಥ ಕಣಿವೆಗಳಿಗೆ ತೂಗುಕಣಿವೆಗಳೆಂದು ಹೆಸರು.
ಎತ್ತರ ಹಾಗೂ ಉಷ್ಣತೆಯನ್ನು ಅನುಸರಿಸಿ ನೀರ್ಗಲ್ಲು, ಕಣಿವೆ ತಳ ಪ್ರದೇಶದತ್ತ ಪ್ರವಹಿಸುತ್ತದೆ. ಕಣಿವೆಯಿಂದ ನೀರ್ಗಲ್ಲು ಹೀಗೆ ತೆರವಾದಾಗ ತೂಗು ಕಣಿವೆ ಸ್ಪಷ್ಟವಾಗಿ ಗೋಚರಿಸುತ್ತದೆ. ವ್ಯಾಪ್ತಿಯಲ್ಲಿ ಉಪನೀರ್ಗಲ್ಲು ನದಿಗಳು ಬಲು ಕಿರಿದಾಗಿರುತ್ತವೆ. ಇದರಿಂದಾಗಿ ಅವುಗಳ ಕಣಿವೆಕೊರೆತವೂ ಸೀಮಿತವಾಗಿರುತ್ತದೆ. ಮುಖ್ಯ ನೀರ್ಗಲ್ಲು ನದಿಕಣಿವೆ ಸವೆತಗೊಂಡಷ್ಟೂ ತೂಗುಕಣಿವೆ ಹಿಂಜರಿದಂತೆ ಗೋಚರವಾಗುತ್ತದೆ. ತೂಗುಕಣಿವೆಗಳು ಅನೇಕ ವೇಳೆ ಜಲಪಾತಗಳ ಉಗಮ ಸ್ಥಾನವಾಗಿ ಮಾರ್ಪಡುತ್ತವೆ. ಸ್ವಿಟ್ಸರ್ಲೆಂಡಿನಲ್ಲಿ 910ಮೀ ಎತ್ತರದ ತೂಗುಕಣಿವೆಗಳಿವೆ, ಕಾಲಿಪೋರ್ನಿಯಾದ ಯೋಸೆಮೈಟ್ ರಾಷ್ಟ್ರೀಯ ಉದ್ಯಾನದಲ್ಲಿರುವ ಯೋಸೆಮೈಟ್ ಜಲಪಾತ 758.33ಮೀ ಎತ್ತರದಿಂದ ಮೂರು ಹಂತಗಳಲ್ಲಿ ಧುಮುಕುತ್ತದೆ. ಇದು ತೂಗು ಕಣಿವೆಯಿಂದ ಉಂಟಾದ ಜಲಪಾತ. ಸಿಯೆರ್ರಾ ನಿವೇದ, ಕ್ಯಾಸ್ ಕೇಡ್ ಮತ್ತು ರಾಕಿ ಪರ್ವತಶ್ರೇಣಿಗಳಲ್ಲಿ ತೂಗುಕಣಿವೆಗಳಿಂದ ಉಂಟಾದ ಅನೇಕ ಜಲಪಾತಗಳನ್ನು ಕಾಣಬಹುದು. (ಟಿ.ಆರ್.ಎ.)