ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತೆಮಿಸ್ಟೊಕ್ಲೀಸ್
ತೆಮಿಸ್ಟೊಕ್ಲೀಸ್ ಕ್ರಿ.ಪೂ. 514-440 ಆತೆನ್ಸಿನ ವೀರಯೋಧ ಮತ್ತು ರಾಜಕಾರಣಿ, ಕ್ರಿಪೂ.493ರಲ್ಲಿ ಮುಖ್ಯದಂಡನಾಯಕವಾಗಿದ್ದ ಕಾಲದಲ್ಲಿ ಇಂಜಿಯನ್ ಹಾಗೂ ಪರ್ಷಿಯನ್ ದಾಳಿಗಳ ವಿರುದ್ಧ ಈತ ಆತೆನ್ಸಿನ ಬಂದರಾದ ಪೈರೀಸನ್ನು ಬಲಪಡಿಸಿದ. ಅಲ್ಲದೆ ಕ್ರಿ.ಪೂ ಸು. 490ರಲ್ಲಿ ಆತೆನ್ಸಿನಲ್ಲಿ ನೌಕಾಪಡೆಯೊಂದನ್ನು ನಿರ್ಮಿಸಲು ಶ್ರಮಿಸಿ ಯಶಸ್ವಿಯಾದುದಲ್ಲದೆ ಆತೆನ್ಸರಾಜ್ಯದೊಳಗಡೆ ಅನೇಕ ಸುಧಾರಣೆಗಳನ್ನು ತಂದ, ಸ್ಯಾಲ ಮಸ್ ಕದನದಲ್ಲಿ (ಕ್ರಿ.ಪೂ.480) ಗ್ರೀಕ್ ವಿಜಯದ ಮುಖ್ಯ ಶಿಲ್ಪ ಈತನೇ. ಆದರೆ ಈತ ಬಹಳವಾಗಿ ಆತ್ಮಸ್ತುತಿ ಮಾಡಿಕೊಳ್ಳುತ್ತಿದ್ದುದರಿಂದಲೂ ಜನರಿಂದ ಲಂಚವನ್ನು ಅಪೇಕ್ಷಿಸಿದ್ದರಿಂದಲೂ ಬಹುಬೇಗ ಜನಾನುರಾಗವನ್ನು ಕಳೆದುಕೊಂಡ. ಕ್ರಿ.ಪೂ 471ರಲ್ಲಿ ಈತನನ್ನು ರಾಜ ದ್ರೋಹಿಯೆಂದು ಪರಿಗಣಿಸಿ ದೇಶದಿಂದ ಹೊರದೂಡಲಾಯಿತು. ಆದರೆ ಈತನಿಗೆ ಪರ್ಷಿಯದಲ್ಲಿ ಅಭೂತಪೂರ್ವ ಸ್ವಾಗತ ಸಿಕ್ಕಿದ್ದರಿಂದ ಮಿಯಾಂಡರ್ ನದಿಯ ದಂಡೆಯಲ್ಲಿದ್ದ ಮ್ಯಾಗ್ನಿಷದಲ್ಲಿ ನೆಲೆಸಿದ. ಅಲ್ಲಿ ಈತ ತನ್ನ 65ನೆಯ ವಯಸ್ಸಿನವರೆಗೂ ಬದುಕಿದ್ದ. ಈತನ ಕಾಲಾನಂತರ ಅಲ್ಲಿ ಈತನ ಸ್ಮಾರಕ ಮೂರ್ತಿಯನ್ನು ನಿಲ್ಲಿಸಲಾಯಿತು. ಈತನ ಅಸ್ಥಿಯನ್ನು ಅಟಿಕಕ್ಕೆ ಗುಪ್ತವಾಗಿ ಸಾಗಿಸಲಾಯಿತೆಂದು ಹೇಳಲಾಗಿದೆ. ಮ್ಯಾಗ್ನೀಷ ಜನರಿಗಂತೂ ಈತ ಪೂಜ್ಯ ವ್ಯಕ್ತಿಯಾಗಿದ್ದ.
ತನ್ನ ಜೀವಿತದ ಕೊನೆಯ ದಿನಗಳಲ್ಲಿ ನಿಂದೆ ಅಪಮಾನಗಳಿಗೆ ಗುರಿಯಾದನಾದರೂ ನಿಜವಾಗಿ ಈತ ಆತೆನ್ಸಿನ ಮತ್ತು ಗ್ರೀಸ್ ದೇಶದ ಏಳಿಗೆಗೆ ಬಹು ಮಟ್ಟಿಗೆ ಕಾರಣವಾಗಿದ್ದ ಈತನಿಂದ ಅಥೆನ್ಸಿನಲ್ಲಿ ಭದ್ರವಾದ ಹಡಗುಪಡೆ ಆಸ್ತಿತ್ವಕ್ಕೆ ಬಂತು. ಅದರ ಬಲದಿಂದ ಮುಂದೆ ಆತೆನ್ಸ ಸಾಮ್ರಾಜ್ಯವನ್ನು ಕಟ್ಟಲು ಸಮರ್ಥವಾಯಿತು. (ಆರ್.ಎಸ್.ವಿ.)