ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತೆರಿಗೆ ಕಾನೂನು
ತೆರಿಗೆ ಕಾನೂನು- ತೆರಿಗೆದಾರರು ತಮ್ಮ ವರಮಾನದ ಅಥವಾ ತಮ್ಮ ಸ್ವತ್ತಿನ ಒಂದು ಭಾಗವನ್ನು ಸಾರ್ವಜನಿಕ ಪ್ರಾಧಿಕರಣಕ್ಕೆ (ಅಥಾರಿಟಿ) ವರ್ಗಾಯಿಸಬೇಕೆಂದು ವಿಧಾಯಕ ಮಾಡುವ ನಿಂಬಂಧನೆಗಳ ಮೊತ್ತ (ಟ್ಯಾಕ್ಸ ಲಾ). ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದ ಕಾನೂನಿನ ವಿಚಾರಗಳನ್ನು ಕುರಿತದ್ದು ಇದು. ತೆರಿಗೆಯನ್ನು ಕುರಿತ ಹಣಕಾಸಿನ ಅಥವಾ ಆರ್ಥಿಕ ವಿಚಾರಗಳನ್ನಾಗಲಿ ಇಂಥ ಇತರ ವಿಚಾರಗಳನ್ನಾಗಲಿ ವಿವೇಚಿಸುವುದು ಇದರ ಉದ್ದೇಶವಿಲ್ಲ. ವಿವಿಧ ತೆರಿಗೆಗಳ ಅನುಕೂಲ ಪ್ರತಿಕೂಲಗಳು, ಒಂದು ದೇಶದಲ್ಲಿ ಇರಬೇಕಾದ ತೆರಿಗೆಯ ಮಟ್ಟ. ತೆರಿಗೆಯ ದರಗಳ ಮುಂತಾದ ವಿಚಾರಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದು ಒಂದು ರಾಜಕೀಯ ಪ್ರಕ್ರಿಯೆಯೇ ಹೊರತು ಅದು ಕಾನೂನಿನ ವ್ಯಾಪ್ತಿಯೊಳಗೆ ಬರುವುದಿಲ್ಲ. ಯವ ವರ್ಗಕ್ಕೆ ಯಾವ ಬಗೆಯ ರಿಯಾಯಿತಿಗಳನ್ನು ನೀಡಬೇಕು. ಯಾವ ವರ್ಗದ ಅಥವಾ ವರಮಾನದ ಮೇಲೆ ಎಷ್ಟರಮಟ್ಟಿನ ಭಾರ ಬೀಳಬೇಕು-ಎಂಬುವೆಲ್ಲ ಆರ್ಥಿಕ ವಿಚಾರಗಳು. ತೆರಿಗೆ ಕಾನೂನು ಇಂಥ ವಿಚಾರಗಳಲ್ಲೂ ಪ್ರವೇಶಿಸುವುದಿಲ್ಲ. (ಆರ್.ಕೆ.)
ಎಲ್ಲ ರಾಷ್ಟ್ರೀಯ ಸರ್ಕಾರಗಳಿಗೂ ತೆರಿಗೆ ವಿಧಿಸುವ ಹಕ್ಕು ಉಂಟು. ಎಂಬುದು ಸರ್ವತ್ರ ಮಾನ್ಯವಾಗಿದೆ. ಅನೇಕ ದೇಶಗಳಲ್ಲಿ ಸ್ಥಳಿಯ ಸಮುದಾಯಗಳೂ ಈ ಹಕ್ಕಿನಿಂದ ಸಮಾನಿಷ್ಟವಾಗಿದೆ. ಈಚೆಗೆ ದತ್ತವಾಗಿದೆ. ಐರೋಪ್ಯ ಕಲ್ಲಿದ್ದಲು ಮತ್ತು ಉಕ್ಕು ಸಮುದಾಯ ತನ್ನ ಸದಸ್ಯ ರಾಷ್ಟ್ರಗಳಲ್ಲಿಯ ಉಕ್ಕು ಉತ್ಪಾದಕ ಉದ್ಯಮಗಳ ಮೇಲೆ 1953ರಲ್ಲಿ ತೆರಿಗೆ ವಿಧಿಸಿದ್ದು ಒಂದು ನಿದರ್ಶನ.
ತೆರಿಗೆ ಕಾನೂನು ಸಾರ್ವಜನಿಕ ನ್ಯಾಯದ ವ್ಯಾಪ್ತಿಯೊಳಗೆ ಬರುವಂಥದು. ರಾಜಕೀಯ ಸಮುದಾಯದ ಹಾಗೂ ಅದರ ಸದಸ್ಯರ ಚಟುವಟಿಕೆಗಳನ್ನು ಪರಸ್ಪರ ಹಿತಗಳನ್ನು ನಿಯಂತ್ರಿಸುವ ನ್ಯಾಯವಿದು. ವ್ಯಕ್ತಿ ವ್ಯಕ್ತಿಗಳ ನಡುವಣ ಸಂಬಂಧವನ್ನು ನಿರ್ಣಯಿಸುವ ಖಾಸಗಿ ನ್ಯಾಯಕ್ಕಿಂತ ಇದು ಭಿನ್ನವಾದ್ದು. ಸಮುದಾಯಕ್ಕೂ ವ್ಯಕ್ತಿಗಳಿಗೂ ನಡುವಣ ಸಂಬಂಧವನ್ನು ತೆರಿಗೆ ನ್ಯಾಯದ ಮೂಲಕ ನಿಯಂತ್ರಿಸುವುದರಿಂದ ನಿರ್ದಿಷ್ಟ ಉದ್ದೇಶವೆಂದರೆ ಸಾರ್ವಜನಿಕ ವೆಚ್ಚವೊಂದನ್ನು ಭರಿಸುವುದಕ್ಕಾಗಿ ಅದರ ಅಂಶವೊಂದನ್ನು ಪಾವತಿ ಮಾಡಬೇಕೆಂದು ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ವಿಧಿಸುವುದೇ ಆಗಿರುತ್ತದೆ. ಒಂದು ಸಂಸ್ಥೆ ಅಥವಾ ಒಂದು ವ್ಯಕ್ತಿ ಹಲವು ದೇಶಗಳ ತೆರಿಗೆಗಳಿಗೆ ಒಳಗಾಗಬಹುದು. ಅಂಥ ಸಂದರ್ಭದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಕುರಿತದ್ದು ಅಂತರರಾಷ್ಟ್ರೀಯ ತೆರಿಗೆ ಕಾನೂನು.
ತೆರಿಗೆ ಕಾನೂನನ್ನು ರಾಷ್ಟ್ರೀಯ. ಅಂತರರಾಷ್ಟ್ರೀಯ ಎಂದಲ್ಲದೆ ಸಾರಭೂತ (ಮೆಟೀರಿಯಲ್) ತೆರಿಗೆ ಕಾನೂನು. ಅಮಲುಜಾರಿ (ಫಾರ್ಮಲ್) ತೆರಿಗೆ ಕಾನೂನು ಎಂದೂ ವಿಂಗಡಿಸಬಹುದು. ಒಂದು ತೆರಿಗೆ ವಿಧಿಸಲು ಅವಕಾಶ ಮಾಡಿಕೊಡುವ ವೈಧಿಕ ಉಪಬಂಧಗಳ ವಿಶ್ಲೇಷಣೆಯನ್ನು ಕುರಿತದ್ದು ಸಾರಭೂತ ತೆರಿಗೆ ಕಾನೂನು, ತೆರಿಗೆ ವಿಧಿಸುವ ಮತ್ತು ಜಾರಿಯ ವಿಧಾನ. ಬಲಾತ್ಕಾರ ಕ್ರಮಗಳು, ಕಾರ್ಯಾಂಗಕ್ಕೆ ಹಾಗೂ ನ್ಯಾಯಾಂಗಕ್ಕೆ ಮೇಲರ್ಜಿ ಹಾಕಿಕೊಳ್ಳುವ ವಿಧಾನ ಮುಂತಾದ ವಿಚಾರಗಳನ್ನು ಕುರಿತದ್ದು ಅಮಲುಜಾರಿ ಕಾನೂನು.
ತೆರಿಗೆ ವಿಧಿಸುವ ಆಧಿಕಾರ : ಪ್ರಜಾಪ್ರಭುತ್ವ ಪದ್ಧತಿಯ ಅಡಿಯಲ್ಲಿ ಸರ್ಕಾರ ಅಥವಾ ಇನ್ನಾವುದೇ ಸಾರ್ವಜನಿಕ ಪ್ರಾಧಿಕರಣಕ್ಕೆ ತೆರಿಗೆ ವಿಧಿಸುವ ಹಕ್ಕನ್ನು ನೀಡಿ ನಿಯಂತ್ರಿಸುವ ಅಧಿಕಾರ ಇರತಕ್ಕದ್ದು ವಿಧಾನಾಂಗಕ್ಕೆ ಹೊರತು ಕಾರ್ಯಾಂಗಕ್ಕಾಗಲಿ ನ್ಯಾಯಾಂಗಕ್ಕಾಗಲಿ ಅಲ್ಲ. ಇದನ್ನು ಆ ದೇಶದ ಸಂವಿಧಾನದಲ್ಲಿ ನಮೂದಿಸಲಾಗಿರುತ್ತದೆ. ಸಮ್ಮತಿಯಿಲ್ಲದೆ ತೆರಿಗೆ ವಿಧಿಸುವುವಂತಿಲ್ಲ ಎಂಬ ಪ್ರಸಿದ್ಧ ಸೂತ್ರಕ್ಕೆ ಅನುಗುಣವಾಗಿ ವಿಧಾನಾಂಗದಲ್ಲಿ ಈ ಅಧಿಕಾರವನ್ನು ನಿಹಿತ ಗೊಳಿಸಲಾಗಿದೆ. ಪ್ರಜೆಗಳ ಪ್ರತಿನಿಧಿಗಳಾದ ವಿಧಾನಮಂಡಲ ಸದಸ್ಯರು ಸ್ವೀಕರಿಸುವ ಗೊತ್ತುವಳಿಯಲ್ಲಿ ತೆರಿಗೆ ಆಡಳಿತವ್ಯವಸ್ಥೆಯ ಹಕ್ಕುಗಳನ್ನೂ ಸಂವಾದಿಯಾಗಿ ತೆರಿಗೆದಾರನ ಬಾಧ್ಯತೆಗಳನ್ನೂ ಕಾನೂನಿನಲ್ಲಿ ನಿರ್ದಿಷ್ಟಗೊಳಿಸಬೇಕು. ತೆರಿಗೆ ಕಾನೂನುಗಳನ್ನು ಜಾರಿಗೆ ತಂದು ಅದನ್ನು ನಿರ್ವಹಿಸುವ ಹೊಣೆ ಕಾರ್ಯಾಂಗದ್ದಾಗಿರುತ್ತದೆ.
ತೆರಿಗೆಯ ವಿಧಿಮಾನ್ಯತೆಯ ತತ್ತ್ವವನ್ನು ಸರ್ಕಾರ ಉಲ್ಲಂಘಿಸಿದ ಪ್ರಸಂಗಗಳು ಎಷ್ಟೋ ಉಂಟು. ಅನೇಕ ವೇಳೆ ಸರ್ಕಾರವೇ ಆಜ್ಞೆಯನ್ನು ಹೊರಡಿಸಿ ತೆರಿಗೆಯ ಆಧಾರವನ್ನೂ ದರವನ್ನೂ ನಿರ್ಧರಿಸುವುದುಂಟು. ವಿಧಾನಾಂಗಕ್ಕೆ ಮೀಸಲಾದ ಅಧಿಕಾರ ಕ್ಷೇತ್ರವನ್ನೂ ಕಾರ್ಯಾಂಗ ಈ ರೀತಿ ಅತಿಕ್ರಮಿಸುವುದಕ್ಕೆ ಕಾರಣಗಳಿಲ್ಲದೆ ಇರುವುದಿಲ್ಲ. ಆರ್ಥಿಕ ಪರಿಸ್ಥಿತಿಯಲ್ಲಿ ಹಠಾತ್ತನೆ ವ್ಯತ್ಯಾಸವಾದ್ದರಿಂದಲೂ ತೆರಿಗೆ ನೀತಿಯನ್ನು ಹೆಚ್ಚು ನಮ್ಯವಾಗಿ ಮಾಡಬೇಕಾದ್ದರಿಂದಲೂ ಈ ಮಾರ್ಗ ಅನುಸರಿಸಬೇಕಾಯಿತೆಂದು ಕಾಯಾಂಗ ತನ್ನ ಕ್ರಮವನ್ನು ಸಮರ್ಥಿಸಿ ಕೊಳ್ಳಬಹುದು. ಸಂಸದೀಯ ಕ್ರಮ ಯಾವಾಗಲೂ ನಿಧಾನವಾಗುವುದು ಸಹಜ. ತೆರಿಗೆಯ ಅವಶ್ಯಕತೆ ಹಾಗೂ ವಿಧಿಬದ್ಧತೆಯ ಹಳೆಯ ಸಿದ್ಧಾಂತಕ್ಕೆ ತೀರ ಧಕ್ಕೆ ಒದಗಿದಂತೆ ಇನ್ನೊಂದು ಉಪಾಯವನ್ನು ಸಾಮಾನ್ಯವಾಗಿ ಅನಸುರಿಸಲಾಗುತ್ತದೆ. ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಒಂದು ತೆರಿಗೆ ಕ್ರಮವನ್ನು ಜಾರಿಗೆ ತಂದು ಅನಂತರ ಆದಷ್ಟು ಜಾಗ್ರತೆಯಾಗಿ ಅದಕ್ಕೆ ವಿಧಾನಾಂಗದ ಒಪ್ಪಿಗೆ ಪಡೆದುಕೊಳ್ಳಬಹುದು.
ವಿಧಾನಾಂಗಕ್ಕೆ ಇರುವ ತೆರಿಗೆ ವಿಧಿಸುವ ಆಧಿಕಾರಕ್ಕೆ ಅನೇಕ ಇತಿಮಿತಿಗಳುಂಟು. 1 ಮೊದಲನೆಯದಾಗಿ ತೆರಿಗೆ ಪಾವತಿ ಮಾಡಬೇಕಾದ ಪ್ರಜೆ ಮತ್ತು ಅವನ ವ್ಯವಹಾರ ಸರ್ಕಾರದ ಆಧಿಕಾರ ವ್ಯಾಪ್ತಿಗೆ ಒಳಪಡುವಂತಿರಬೇಕು. ಉದಾಹರಣೆಗೆ. ವರಮಾನ ತೆರಿಗೆ ಕುರಿತ ಅಧಿಕಾರ ವ್ಯಾಪ್ತಿ ಎರಡು ಅಂಶಗಳನ್ನು ಅವಲಂಬಿಸುತ್ತದೆ; ಮೊದಲನೆಯದು ತೆರಿಗೆದಾರನ ವಾಸಸ್ಥಾನ ಹಾಗೂ ಅವನ ರಾಷ್ಟ್ರೀಯತ್ವ. ಎರಡನೆಯದು ವರಮಾನದ ಮೂಲ. ತೆರಿಗೆ ವಿಧಿಸುವ ದೇಶದಲ್ಲಿ ತೆರಿಗೆದಾರ ವ್ಯಕ್ತಿಯ ಖಾಯಂ ವಾಸಸ್ಥಾನವಿರಬೇಕು. ಅಥವಾ ಉದ್ಯಮ ಸಂಸ್ಥೆ ಇರಬೇಕು. ಒಂದು ದೇಶದ ರಾಷ್ಟ್ರೀಯನೊಬ್ಬ ಆ ದೇಶದಲ್ಲಿ ವಾಸಿಸದಿದ್ದರೂ ಅವನ ವರ ಮಾನದ ಮೇಲೆ ತೆರಿಗೆ ವಿಧಿಸುವ ಅಧಿಕಾರ ಆ ದೇಶಕ್ಕೆ ಇರುವುದುಂಟು. ತೆರಿಗೆ ಪಾವತಿ ಮಾಡಬೇಕಾದ ವ್ಯಕ್ತಿ ಅಥವಾ ಸಂಸ್ಥೆ ಒಂದು ದೇಶದಲ್ಲಿರದಿದ್ದರೂ ಆ ದೇಶದ ಎಲ್ಲೆಯೊಳಗೆ ಉದ್ಭವವಾಗುವ ವರಮಾನದ ಮೇಲೆ ತೆರಿಗೆ ವಿಧಿಸಲು ಆ ದೇಶಕ್ಕೆ ಅಧಿಕಾರ ಇರುತ್ತದೆ. 2 ಒಂದೇ ತೆರಿಗೆಯನ್ನು ಒಬ್ಬನೆ ವ್ಯಕ್ತಿಯ ಮೇಲೆ ಮೇಲೆ ಒಂದೇ ಪ್ರಾಧಿಕರಣ ಎರಡು ಬಾರಿ ವಿಧಿಸಲಾಗದೆಂಬುದು ಎರಡನೆಯ ಇತಿಮಿತಿ. 3 ತೆರಿಗೆಗಳನ್ನು ಸಾಮಾನ್ಯವಾಗಿ ಪೂರ್ವಾನ್ವಯಿಸುವಂತೆ ವಿಧಿಸುವುದಿಲ್ಲ. ಆದರೆ ವಿಶೇಷ ಸಂದರ್ಭಗಳಲ್ಲಿ ಹೀಗೆ ಮಾಡುವುದುಂಟು. 4 ಎಲ್ಲ ಪ್ರಜೆಗಳನ್ನೂ ಸಮನಾಗಿ ಪರಿಗಣಿಸಬೇಕೆಂಬುದು ಇನ್ನೊಂದು ಇತಿಮಿತಿ. ತೆರಿಗೆಯ ವಿಚಾರದಲ್ಲಿ ಯಾರಿಗೂ ವಿಶೇಷ ರಿಯಾಯತಿ ನೀಡಬಾರದೆಂದು ಸಂವಿಧಾನಗಳಲ್ಲಿ ಸಾಮಾನ್ಯವಾಗಿ ವಿಧಾಯಕ ಮಾಡಿರುತ್ತದೆ. ಆದರೆ ಹಲವು ಒತ್ತಡಗಳ ಫಲವಾಗಿ ಈ ನಿಯಮವನ್ನು ಜಾರಿಗೆ ತರುವುದು ಕಷ್ಟವಾಗುವುದುಂಟು. ಒಂದು ಸ್ಥಳೀಯ ಸರ್ಕಾರ ತನ್ನ ಅಧಿಕಾರವ್ಯಾಪ್ತಿಯೊಳಗೆ ವಿಧಿಸಿದ ತೆರಿಗೆಯನ್ನು ದೇಶದ ಎಲ್ಲ ತೆರಿಗೆದಾರರೂ ಸಮವೆಂಬ ತತ್ತ್ವಕ್ಕೆ ಈ ತೆರಿಗೆ ವಿರೋಧವಾಗಿದೆಯೆಂಬ ಕಾರಣದಿಂದ ಕೇಂದ್ರ ಸರ್ಕಾರ ರದ್ದು ಮಾಡಬಹುದು.
ಮೇಲೆ ಹೇಳಿದ ಇತಿಮಿತಿಗಳಿಗೆ ಒಳಪಟ್ಟು ಒಂದು ದೇಶದ ವಿಧಾನಾಂಗ ತೆರಿಗೆ ವಿಧಿಸಬಹುದು. ತೆರಿಗೆಯ ಉದ್ದೇಶ ಮುಂತಾದವನ್ನೆಲ್ಲ ನಿರ್ಧರಿಸಲು ಅದಕ್ಕೆ ಸಂಪೂರ್ಣ ಅಧಿಕಾರವುಂಟು. ತೆರಿಗೆ ವಿಧಾಯಕ ಯಾದೃಚ್ಛಿಕವಾದ್ದು. ಅನ್ಯಾಯವಾದ್ದು-ಎಂಬ ಕಾರಣದಿಂದ ಯಾವ ನ್ಯಾಯಾಂಗವೂ ಅದನ್ನು ಪ್ರಶ್ನಿಸುವಂತಿಲ್ಲ. ಆದರೆ ಕಾನೂನಿನ ಅನ್ವಯ ಮಾತ್ರ ಸರಿಯಾಗಿರಬೇಕು. ಈ ನಿಟ್ಟಿನಲ್ಲಿ ಪ್ರಜೆಗೆ ಸೂಕ್ತ ರಕ್ಷಣೆ ನೀಡಲು ಅನೇಕ ಸಂವೈಧಾನಿಕ ಹಾಗೂ ವೈಧಿಕ ಉಪಬಂಧಗಳನ್ನು ರಚಿಸಿರುವುದುಂಟು.
ಒಂದು ವರಮಾನದ ಅಥವಾ ಒಂದೇ ಆಧಾರದ ಮೇಲೆ ಎರಡು ಅಥವಾ ಹೆಚ್ಚು ದೇಶಗಳ ಸರ್ಕಾರಗಳ ತೆರಿಗೆ ಬೀಳದಂತೆ ಹಲವು ಸರ್ಕಾರಗಳು ಒಡಂಬಡಿಕೆ ಮಾಡಿಕೊಳ್ಳುವುದುಂಟು. ಇಂಥ ಒಡಂಬಡಿಕೆಗಳನ್ನು ಸಾಮಾನ್ಯವಾಗಿ ಎರಡು ದೇಶಗಳು ಪರಸ್ಪರವಾಗಿ ಮಾಡಿಕೊಳ್ಳುತ್ತವೆ. ಆದರೆ ಹಲವು ದೇಶಗಳು ಒಂದಾಗಿ ತಮ್ಮ ನಡುವಣ ತೆರಿಗೆ ಗೊಡೆಗಳನ್ನು ಕೆಡವಲು ಅಥವಾ ಸಮನ್ವಯಗೊಳಿಸಲು ಕ್ರಮ ಕೈಗೊಳ್ಳಬಹುದು. 1957ರ ರೋಮ್ ಕೌಲಿನ ಪ್ರಕಾರ ಐರೋಪ್ಯ ಆರ್ಥಿಕ ಸಮುದಾಯದ ದೇಶಗಳು ತಂತಮ್ಮ ಮಾರಾಟ ತೆರಿಗೆಗಳನ್ನು ಸಮನ್ವಯಗೊಳಿಸಿಕೊಂಡಿದ್ದು ಒಂದು ಉದಾಹರಣೆ.
ತೆರಿಗೆ ಕಾನೂನುಗಳ ಆಡಳಿತ : ತೆರಿಗೆ ವಿಧಿಸುವುದು ವಿಧಾನಾಂಗದ ಹಕ್ಕಾದರೆ ತೆರಿಗೆ ಕಾನೂನಿನ ಆಡಳಿತ ಕಾರ್ಯಾಂಗದ ಹೊಣೆಯಾಗಿರುತ್ತದೆ. ಕೇಂದ್ರ ಸರ್ಕಾರದ ವಿತ್ತ ಮಂತ್ರಿಯೋ, ಖಜಾನೆ ಸಚಿವನೋ, ಕೋಶಾಧ್ಯಕ್ಷನೋ ತೆರಿಗೆ ಆಡಳಿತದ ಮುಖ್ಯನಾಗಿರುತ್ತಾನೆ. ತೆರಿಗೆಗಳು ವಿವಿಧ ಬಗೆಯಾದ್ದರಿಂದ ಅವುಗಳ ಆಡಳಿತವನ್ನು ವಿವಿಧ ಇಲಾಖೆಗಳಲ್ಲಿ ಹಂಚಲಾಗಿರುತ್ತದೆ.
ತೆರಿಗೆ ವಿಧಿಸುವ ಪ್ರಕ್ರಿಯೆಯಲ್ಲಿ ಮೂರು ಹಂತಗಳಂಟು : 1 ಅಧಿನಿಯಮದ ಪ್ರಕಾರ ತೆರಿಗೆಗೆ ಒಳಗಾಗುವ ಹಣವೆಷ್ಟೆಂಬುದರ ಖಚಿತ ವಿರ್ಧಾರಣ (ಅಸೆಸ್‍ಮೆಂಟ್). 2 ತೆರಿಗೆಯ ಮೊಬಲಗಿನ ಗಣನೆ (ಕಾಂಪ್ಯುಟೇಷನ್) ಮತ್ತು 3 ತೆರಿಗೆಯ ಅಮಲುಜಾರಿ (ಎನ್‍ಫೋರ್ಸ್‍ಮೆಂಟ್). ಒಂದು ಅಧಿನಿಯಮದ ಅಡಿಯಲ್ಲಿ ತೆರಿಗೆಯ ಒಳಗಾಗುವ ಮೊಬಲಗಿನ ಖಚಿತ ನಿರ್ಧಾರಣ ಮಾಡಲು ಅನೇಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ವರಮಾನ ತೆರಿಗೆ ಪಾವತಿ ಮಾಡಬೇಕಾದವನು ತನ್ನ ಕಸಬು, ಸ್ವತ್ತು ವೃತ್ತಿ ಸಂಬಂಧವಾದ ಖರ್ಚುಗಳು ಮುಂತಾದವುಗಳ ವಿವರಣೆ ನೀಡುತ್ತಾರೆ. ತೆರಿಗೆ ಪ್ರಾಧಿಕರಣವೂ ಅನ್ವಮೂಲಗಳಿಂದ ವಿವರ ಸಂಗ್ರಹಿಸುತ್ತದೆ. ಪ್ರತಿ ವರ್ಷವೂ ತೆರಿಗೆದಾರ ಸಲ್ಲಿಸುವ ವಿವರಣೆ ಪಟ್ಟಿಕೆಯಲ್ಲಿ ಅವನು ತೆರಿಗೆಗೆ ಒಳಗಾಗುವ ಮೊಬಲಗಳನ್ನು ನಮೂದಿಸುತ್ತಾರೆ. ತೆರಿಗೆ ಪ್ರಾಧಿಕರಣ ಅದಕ್ಕೆ ಸಂಬಂಧಪಟ್ಟ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ತೆರಿಗೆ ಅನ್ವಯವಾಗುವ ಮೊಬಲಗಿನ ನಿರ್ಧಾರಣ ಮಾಡುತ್ತದೆ. ತೆರಿಗೆಯ ಮೊಬಲಗಿನ ಲೆಕ್ಕಾಚಾರ ಎರಡನೆಯ ಹಂತ. ಇದನ್ನೂ ತೆರಿಗೆದಾರನೇ ಮಾಡಬಹುದು. ಇದನ್ನು ತೆರಿಗೆ ಪ್ರಾಧಿಕರನ ಪರಿಶೀಲಿಸಿ ಒಪ್ಪಬಹುದು. ಮಾರಾಟ ತೆರಿಗೆಯೇ ಮುಂತಾದವುಗಳ ಮೊಬಲಗಿನ ಲೆಕ್ಕಚಾರವನ್ನು ಸಾಮಾನ್ಯವಾಗಿ ತೆರಿಗೆ ಪ್ರಾಧಿಕರಣವೇ ಮಾಡುತ್ತದೆ. ತೆರಿಗೆಯ ಮೊಬಲಗಳನ್ನು ಕಾನೂನಿನಲ್ಲಿ ನಿಗದಿಯಾದ ಅವಧಿಯಲ್ಲಿ ಕೊಡದಿದ್ದರೆ ಅದರ ವಸೂಲಿಗೆ ತೆರಿಗೆ ಪ್ರಾಧಿಕರಣಕ್ಕೆ ವ್ಯಾಪಕವಾದ ಅಧಿಕಾರವಿರುತ್ತದೆ. ತೆರಿಗೆಯನ್ನು ಸರಿಯಾಗಿ ಸಲ್ಲಿಸುವಂತೆ ಮಾಡಲು ನಾನಾ ಬಗೆಯ ದಂಡಗಳನ್ನು ವಿಧಿಸುವುದುಂಟು. ಕಡಿಮೆ ಪಾವತಿ, ತೆರಿಗೆಗಳ್ಳತನ ಮುಂತಾದವಕ್ಕೆ ಉಗ್ರ ದಂಡನೆಗಳಿರುತ್ತದೆ. ತೆರಿಗೆ ವಂಚನೆ ಅಪರಾಧವಾಗುತ್ತದೆ. ಕ್ರಿಮಿನಲ್ ತಕ್ಸೀರುಗಳನ್ನು ನ್ಯಾಯಾಲಯದ ಮುಂದೆ ತರಬೇಕು.
ತೆರಿಗೆ ಮತ್ತು ನ್ಯಾಯಾಂಗ : ತೆರಿಗೆಗಳ ಅನ್ವಯದಲ್ಲಿಯ ತಪ್ಪು ಅಥವಾ ಅನ್ಯಾಯದ ವಿರುದ್ಧ ತೆರಿಗೆದಾರನಿಗೆ ರಕ್ಷಣೆ ಇರುತ್ತದೆ. ತೆರಿಗೆ ನಿರ್ಧಾರಣ ಅಧಿಕಾರಿಯ ತೀರ್ಮಾನವನ್ನು ಅವನು ಒಪ್ಪದಿದ್ದರೆ ನಿಷ್ಪಕ್ಷಪಾತ ಪ್ರಾಧಿಕರಣದ ಮುಂದೆ ಮೇಲರ್ಜಿ ಸಲ್ಲಿಸಲು ಅವನಿಗೆ ಹಕ್ಕು ಇರುತ್ತದೆ. ಕೆಲವು ಮೇಲರ್ಜಿಗಳ ವಿಚಾರಣೆಗಾಗಿ ವಿಶೇಷ ಆಯೋಗಗಳು ಇರುವುದುಂಟು. ತೆರಿಗೆಯ ಕಾನೂನಿನ ಅಥವಾ ಇತರ ಕಾನೂನುಗಳ ಸರಿಯಾದ ವ್ಯಾಖ್ಯಾನವನ್ನು ಮಾಡಲು ನ್ಯಾಯಾಲಯಗಳಿಗೆ ಅಧಿಕಾರ ಇರುತ್ತದೆ. ಅದರಲ್ಲಿ ಮಾಡಲಾಗಿರುವ ಪದ ಪ್ರಯೋಗವನ್ನು ವ್ಯಾಕರಣದ ನಿಯಮಗಳನ್ನು ಅನುಸರಿಸಿ ವ್ಯಾಖಾನ್ಯ ಮಾಡುವುದು ಮೊಲನೆಯ ಮಾರ್ಗ. ಆದರೆ ಕೆಲವು ವೇಳೆ ಅದರ ಅಕ್ಷರಶಃ ಅರ್ಥಕ್ಕಿಂತ ವ್ಯಾಪಕವಾದ ಅರ್ಥದಲ್ಲಿ ಅದನ್ನು ವ್ಯಾಖ್ಯಾನಿಸಬೇಕಾಗಿ ಬರಬಹುದು. ತೆರಿಗೆ ವಿಧಿಸಿದ ವಿಧಾನಾಂಗದ ಉದ್ದೇಶ. ಐತಿಹಾಸಿಕ ಸಂದರ್ಭ ಮುಂತಾದವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ತೆರಿಗೆ ಅಧಿನಿಯಮಗಳ ವ್ಯಾಖ್ಯಾನಕ್ಕೆ ಸಂಬಂಧಿಸಿದ ಈ ಸಾಮಾನ್ಯ ಸೂತ್ರಗಳಲ್ಲದೆ ಕೆಲವು ವಿಶಿಷ್ಟ ನಿಯಮಗಳೂ ಉಂಟು. ತೆರಿಗೆ ಕಾನೂನುಗಗಳೂ ಇತರ ಕಾನೂನುಗಳಿಗಿಂತ ಭಿನ್ನವಾದ ಉದ್ದೇಶಗಳಿಂದ ಕೂಡಿರುತ್ತದೆ. ಇದನ್ನು ತೆರಿಗೆ ಕಾನೂನಿನ ಸ್ವಯಮಧಿಕಾರ ನಿಯಮ ಎನ್ನುವುದುಂಟು. ತೆರಿಗೆ ಕೇಳುವ ಹಕ್ಕು ಕರಾರಿನ ನಿಯಮಗಳಿಗೆ ಒಳಪಟ್ಟಿದ್ದಲ್ಲ. ಖಾಸಗಿ ಕಾನೂನಿನ ಅಡಿಯಲ್ಲಿಯ ಸಂಬಂಧಗಳಿಗೆ ಅನ್ವಯಿಸುವ ನಿಯಮಗಳು ಅವು. ತೆರಿಗೆ ಕೇಳುವ ಹಕ್ಕು ಸಾರ್ವಜನಿಕ ಪ್ರಾಧಿಕರಣದ ಅಂಗವಾಗಿ ಆ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ತೆರಿಗೆ ಬಾಧ್ಯತೆಯ ನ್ಯಾಯಾನ್ಯಾಯ ನಿರ್ಣಯ ಮಾಡುವ ವಿಚಾರವು ಸಾಮಾನ್ಯವಾಗಿ ನ್ಯಾಯಾಲಯಗಳ ವ್ಯಾಪ್ತಿಗೆ ಒಳಲಪಟ್ಟಿರುವುದಿಲ್ಲ. ತೆರಿಗೆ ಕಾನೂನನ್ನು ಅನ್ವಯಿಸುವ ಅಥವಾ ವ್ಯಾಖ್ಯಾನಿಸುವ ಅಧಿಕಾರ ಪಡೆದ ವ್ಯಕ್ತಿ ಅಥವಾ ಪ್ರಾಧಿಕರಣ ಅದರ ತೀವ್ರತೆಯನ್ನು ಕಡಿಮೆಗೊಳಿಸುವ ಅಥವಾ ಅದನ್ನು ಸಡಿಲಗೊಳಿಸುವ ಅಧಿಕಾರವನ್ನು ಸಾಮಾನ್ಯವಾಗಿ ಹೊಂದಿರುವುದಿಲ್ಲ.
ಭಾರತದಲ್ಲಿ : ತಮ್ಮ ತಮ್ಮ ಆಡಳಿತಗಳ ಖರ್ಚುಗಳನ್ನು ಭರಿಸಲು ಅವಶ್ಯಕವಾಗುವ ಸಂಪನ್ಮೂಲಗಳನ್ನು ಶೇಖರಿಸಲು ಅಗತ್ಯವಾದ ಕಾನೂನುಗಳನ್ನು ರಚಿಸಿಕೊಳ್ಳುವ ಅಧಿಕಾರವನ್ನು ಭಾರತ ಸಂವಿಧಾನ ರಾಜ್ಯಗಳಿಗೂ ಭಾರತದ ಒಕ್ಕೂಟಕ್ಕು ಪ್ರತ್ಯೇಕವಾಗಿ ಕೊಟ್ಟಿದೆ. ಭಾರತದ ಒಕ್ಕೂಟಕ್ಕೆ ಸೇರಿದ ರಾಜ್ಯಗಳಲ್ಲಿ ಮತ್ತು ಒಕ್ಕೂಟ ಕ್ಷೇತ್ರಗಳಲ್ಲಿ ವಸೂಲುಮಾಡಲಾಗುವ ವರಮಾನದ ಮೂಲವಾಗಿದೆ. ಭಾರತ ಒಕ್ಕೂಟ ವಿಧಿಸುವ ಇನ್ನೂ ಕೆಲವು ವಿಧವಾದ ತೆರಿಗೆಗಳಿವೆ. ಸಂಪತ್ತಿನ ಮೇಲಿನ ತೆರಿಗೆ. ದಾನಗಳ ಮೇಲಿನ ತೆರಿಗೆ, ಮೃತನ ಸಂಪದದ ಮೇಲಿನ ತೆರಿಗೆ, ಉತ್ಪಾದನೆಯಾಗುವ ಸರಕುಗಳ ಹಾಗೂ ಆಯಾತ ನಿರ್ಯಾತಗಳ ಕರಗಳು-ಇವು ಭಾರತ ಒಕ್ಕೂಟ ವಿಧಿಸುತ್ತಿರುವ ತೆರಿಗೆಗಳಲ್ಲಿ ಕೆಲವು.
ರಾಜ್ಯಗಳು ತಮ್ಮ ವರಮಾನಗಳನ್ನು ರೂಢಿಸಿಕೊಳ್ಳಲು ಅವಕಾಶ ಕಲ್ಪಿಸುವ ಕಾನೂನುಗಳನ್ನು ರಚನೆ ಮಾಡುವ ಅಧಿಕಾರಗಳನ್ನು ಭಾರತ ಸಂವಿಧಾನ ಪ್ರತ್ಯೇಕವಾದ ಒಂದು ಪಟ್ಟಿಯಲ್ಲಿ ನಮೂದು ಮಾಡಿದೆ. ರಾಜ್ಯಗಳು ವಿಧಿಸಬಹುದಾದ ಮುಖ್ಯವಾದ ಕೆಲವು ಬಾಬುಗಳು ಇವು : 1 ಮಾರಾಟ ತೆರಿಗೆ-ಸಂಬಂಧ ಪಟ್ಟ ಕಾನೂನಿನ ವ್ಯಾಪ್ತಿಯಿಂದ ಹೊರತುಮಾಡಲ್ಪಟ್ಟಿರುವ ಪದಾರ್ಥಗಳನ್ನುಳಿದು ಇತರ ಪದಾರ್ಥಗಳನ್ನು ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಮಾರುವಾಗ ವಸೂಲು ಮಾಡಬೇಕಾದ ತೆರಿಗೆ ; 2 ಈ ಬಗ್ಗೆ ಸಂಬಂಧಪಟ್ಟ ಕಾನೂನಿನಲ್ಲಿ ನಿಗದಿ ಮಾಡಿರುವ ಮಿತಿಯನ್ನು ಮೀರಿದಂತೆ, ವ್ಯವಸಾಯದಿಂದ ಸಂಪಾದಿಸಲ್ಪಡುವ ವರಮಾನ ಮೇಲಿನ ತೆರಿಗೆ; 3 ಒಂದು ನಿಗದಿಯಾದ ಮೊತ್ತಕ್ಕೆ ಮೀರಿದ, ವೃತ್ತಿಗಳಿಂದ ಸಂಪಾದಿಸಲ್ಪಡುವ ವರಮಾನಗಳ ಮೇಲಿನ ತೆರಿಗೆ.
ಯಾವುದೇ ವಿಧವಾದ ತೆರಿಗೆಯನ್ನು ವಿಧಾಯಕ ಮಾಡಬೇಕಾಗಲಿ, ಅದನ್ನು ವಸೂಲು ಮಾಡಬೇಕಾಗಲಿ, ಅದಕ್ಕೆ ಕಾನೂನಿನ ತಳಹದಿ ಇರಲೇಬೇಕು. ಏಕೆಂದರೆ ಸದರಿ ಕಾನೂನಿನಲ್ಲಿ ಅವನ್ನು ವಸೂಲು ಮಾಡುವ ವಿಧಾನಗಳನ್ನು ಅದನ್ನು ಕೊಡದಿದ್ದರೆ ಒತ್ತಾಯಪೂರ್ವಕವಾಗಿ ವಸೂಲ್ಮಾಡುವ ಕ್ರಮಗಳನ್ನೂ ನಮೂದಿಸಲಾಗಿರುತ್ತದೆ.
ಕೆಲವು ತೆರಿಗೆಗಳನ್ನು ವಸೂಲುಮಾಡಿ ಒಕ್ಕೂಟ ಅದರಲ್ಲಿ ರಾಜ್ಯಗಳಿಗೆ ಹಿಂಸೆಕೊಡುತ್ತದೆ. ಕೆಲವು ತೆರಿಗೆಗಳನ್ನು ವಸೂಲ್ಮಾಡಿ ಅವುಗಳನ್ನು ಸಂಪೂರ್ಣವಾಗಿ ರಾಜ್ಯಗಳಿಗೆ ಹಂಚುತ್ತದೆ. ಭಾರತದ ಒಕ್ಕೂಟ ವಿಧಿಸಿ ವಸೂಲ್ಮಾಡಿ, ರಾಜ್ಯಗಳಿಗೂ ಒಕ್ಕೂಟಕ್ಕೂ ಹಂಚತಕ್ಕ ಬಾಬ್ತುಗಳ ಉದಾರಹರಣೆಗಳು ವರಮಾನ ತೆರಿಗೆ, ಸಂಪತ್ತು ತೆರಿಗೆ, ದಾನಗಳ ತೆರಿಗೆ ಯಾವ ತತ್ತ್ವದ ಮೇಲೆ ಈ ಹಂಚಿಕೆಯಾಗಬೇಕೆಂದು ಐದು ವರ್ಷಕ್ಕೂಮ್ಮೆ ರಚಿತವಾಗುವ ತಜ್ಞರ ಒಂದು ಆಯೋಗ-ಹಣಕಾಸು ಆಯೋಗ-ತೀರ್ಮಾನಿಸುತ್ತದೆ. ವರಮಾನ ತೆರಿಗೆ: ವರಮಾನ ತೆರಿಗೆಯ ಅಧಿನಿಯಮದ ನಾಲ್ಕನೆಯ ಪ್ರಕರಣದ ಪ್ರಕಾರ, ತೆರಿಗೆ ವಿಧಿಸುವ ವರ್ಷದಲ್ಲಿ ಯಾವನೊಬ್ಬ ವ್ಯಕ್ತಿಯ ವರಮಾನ ಈ ಸಂಬಂಧದಲ್ಲಿ ಕಾನೂನಿನಲ್ಲಿ ವಿಧಾಯಕವಾಗಿರುವ ಮೊಬಲಗಿಗಿಂತ ಹೆಚ್ಚಾಗಿದ್ದಲ್ಲಿ ಕಾನೂನಿನ ಮೂಲಕ ಆಗಿಂದಾಗ್ಗೆ ವಿಧಾಯಕವಾಗುವ ದರದಲ್ಲಿ ತೆರಿಗೆಯನ್ನು ವಿಧಿಸಬಹುದಾಗಿದೆ. ಇಲ್ಲಿ ಹಿಂದಿನ ವರ್ಷ ಎಂದರೆ, ತೆರಿಗೆ ವಿಧಿಸುವ ವರ್ಷದ ನಿಕಟ ಪೂರ್ವದ ವರ್ಷ.
ತೆರಿಗೆಯ ಕಾನೂನು ಪ್ರಕಾರ ಮೊಖರೂರು ಆಗುವ ಅಧಿಕಾರಿಗಳ ಪೈಕಿ ಯಾವ ಯಾವ ಅಧಿಕಾರಿಗೆ ಎಷ್ಟರ ಮಟ್ಟಿನ ಆಧಿಕಾರವಿರುತ್ತದೆಂಬ ವಿವರಗಳು ಸದರಿ ಅಧಿನಿಯಮದಲ್ಲಿ ವಿವರವಾಗಿ ನಮೂದಾಗಿದೆ.
ಎರಡು ಸಾರಿ ತೆರಿಗೆ ವಿಧಾಯಕದಿಂದ ಪರಿಹಾರ 1972 ರ ವಿತ್ತೀಯ ಅಧಿನಿಯಮದಲ್ಲಿ 90ನೆಯ ಪ್ರಕರಣದ ಮೇರೆಗೆ ಭಾರತ ಸರ್ಕಾರ ಹೊರದೇಶದ ಸರ್ಕಾರದ ಸಂಗಡ ಈ ಕೆಳಗೆ ನಮೂದಿಸಿರುವ ಉದ್ದಿಶ್ಯಗಳಿಗಾಗಿ ಒಪ್ಪಂದವನ್ನು ಮಾಡಿಕೊಳ್ಳಬಹುದು. 1 ಭಾರತದ ವರಮಾನ ತೆರಿಗೆ, ಮತ್ತು ಅದೇ ಉದ್ದಶ್ಯಕ್ಕಾಗಿರುವ ಹೊರದೇಶದ ಕಾನೂನು ಈ ಎರಡರ ಪ್ರಕಾರವೂ ಏಕಕಾಲದಲ್ಲಿ ತೆರಿಗೆಯನ್ನು ವಿಧಿಸದಿರುವುದು; 2 ತೆರಿಗೆ ಕೊಡುವುದನ್ನು ತಪ್ಪಿಸಿ ಕೊಳ್ಳಲು ಯಾವುದೇ ವ್ಯಕತಿ ಪ್ರಯತ್ನ ಮಾಡಿದರೆ ಅಂಥ ಪ್ರಯತ್ನವನ್ನು ವಿಫಲ ಮಾಡಲು ಸಹಾಯಕವಾಗುವಂತೆ ಪರಸ್ಪರ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವುದು; 3 ಭಾರತ ಸರ್ಕಾರಕ್ಕೂ ಇನ್ನೊಂದು ಹೊರದೇಶದ ಸರ್ಕಾರಕ್ಕೂ ಪರಸ್ಪರ ಕೌಲು ಮೂಲಕ ಒಪ್ಪಂದವೇರ್ಷಟ್ಟಿದ್ದಲ್ಲಿ ಒಂದು ದೇಶಕ್ಕೆ ತೆರಿಗೆ ಕೊಡಬೇಕಾಗಿದ್ದು ಇನ್ನೊಂದು ದೇಶಕ್ಕೆ ಹೊರಟುಹೋದರೆ ಆ ದೇಶದ ಸರ್ಕಾರ ತೆರಿಗೆಯನ್ನು ವಸೂಲುಮಾಡಿ ಇನ್ನೊಂದು ದೇಶಕ್ಕೆ ಕೊಡುವುದು.
ಒಬ್ಬ ವ್ಯಕ್ತಿ ತನ್ನ ವರಮಾನಕ್ಕೆ ಸಂಬಂಧಿಸಿದ ವಿವರಣ ಪಟ್ಟಿಕೆಯನ್ನು ಸಲ್ಲಿಸಿರುವಲ್ಲಿ, ಅದಕ್ಕೆ ಸಂಬಂಧಿಪಟ್ಟ ಲೆಕ್ಕಪತ್ರಗಳನ್ನು ಇನ್ನಾವುದೇ ಇತರ ದಾಖಲೆಗಳನ್ನೂ ಹಾಜರ್ಪಡಿಸಬೇಕೆಂದು ಅವನಿಗೆ ನೋಟಿಸು ಕೊಡಬಹುದು. ಮತ್ತು ಹಾಗೆ ನೋಟೀಸು ಕೊಟ್ಟ ಮೇಲೆ ಅವನು ಹಜರ್ಪಡಿಸಿದ ಲೆಕ್ಕಪತ್ರ ದಾಖಲೆಗಳನ್ನು ವಿಮರ್ಶಿಸಿ ತೆರಿಗೆಯನ್ನು ವಿಧಾಯಕ ಮಾಡಬಹುದು. ಅಥವಾ ಯಾವ ಲೆಕ್ಕಪತ್ರಗಳನ್ನಾಗಲಿ ದಾಖಲೆಗಳನ್ನಾಗಲಿ ಕೇಳದೆ ತೆರಿಗೆಯನ್ನು ವಿಧಿಸಬಹುದು.
ಅತ್ಯುತ್ತಮ ವಿವೇಚನಾಯುಕ್ತ ತೆರಿಗೆ ನಿರ್ಧಾರ : ಯಾವನಾದರೂ ಒಬ್ಬ ವ್ಯಕ್ತಿ ತನ್ನ ವರಮಾನದ ವಿವರಣ ಪಟ್ಟಿಕೆಯನ್ನು ಸಲ್ಲಿಸಲಿ, ತಪ್ಪಿದಾಗ ಅಥವಾ ಸಲ್ಲಿಸಿದ್ದೂ ವರಮಾನ ತೆರಿಗೆ ಅಧಿಕಾರಿ ಅನಂತರ ಅವನಿಗೆ ಕೊಟ್ಟ ಆ ದೇಶಗಳ ಪ್ರಕಾರ ಕೊಡಬೇಕಾಗಿ ಬರುವ ವಿವರಗಳನ್ನು ಒದಗಿಸಲು ತಪ್ಪಿದಾಗ, ತನ್ನ ಸ್ವಂತ ವಿವೇಚನೆಯನ್ನು ಉಪಯೋಗಿಸಿ ಅವನ ವರಮಾನ ಇಷ್ಟೇ ಎಂದು ಅಥವಾ ಅವನ ನಷ್ಟ ಇಷ್ಟೇ ಎಂದು ನಿರ್ಧರಿಸಬಹುದು. ಆದರೆ ಅಂಥ ವಿವೇಚನಾಯುಕ್ತ ತೆರಿಗೆ ಅಧಿಕಾರಿ ಅನಂತರ ಅವನಿಗೆ ಕೊಟ್ಟ ಆದೇಶಗಳ ಪ್ರಕಾರ ಕೊಡಬೇಕಾಗಿ ಬರುವ ವಿವರಗಳನ್ನು ಒದಗಿಸಲು ತಪ್ಪಿದಾಗ ತನ್ನ ಸ್ವಂತ ವಿವೇಚನೆಯನ್ನು ಉಪಯೋಗಿಸಿ ಅವನ ವರಮಾನ ಇಷ್ಟೇ ಎಂದು ಅಥವಾ ಅವನ ನಷ್ಟ ಇಷ್ಟೇ ಎಂದು ನಿರ್ಧರಿಸಬಹುದು. ಆದರೆ ಅಂಥ ವಿವೇಚನಾಯುಕ್ತ ತೆರಿಗೆ ನಿರ್ಧಾರ ನ್ಯಾಯಸಮ್ಮತವಾಗಿರಕ್ಕದ್ದು ನಿರಂಕುಶವಾಗಿ ಮಾಡಿದ್ದಾಗಿರ ಕೂಡದು ಈ ರೀತಿ ತೆರಿಗೆ ವಿಧಾಯಕ ಮಾಡುವ ಸನ್ನಿವೇಶಗಳು ವರಮಾನ ತೆರಿಗೆ ಆಧಿನಿಯಮ ದಾನಗಳ ಮೇಲಿನ ತೆರಿಗೆ ಅಧಿನಿಯಮಗಳಲ್ಲಿ ಒಂದಕ್ಕೂ ಮತ್ತೊಂದಕ್ಕೂ ವ್ಯತ್ಯಾಸವಾಗುತ್ತವೆ. ಈ ರೀತಿ ತೆರಿಗೆ ವಿಧಾಯಕ ಮಾಡುವಾಗ ತೆರಿಗೆ ಅಧಿಕಾರಿಗಳು ಗಮನದಲ್ಲಿಡಬೇಕಾದ ಮುಖ್ಯಾಂಶಗಳನ್ನು ಬಹಳ ಹಿಂದೆಯೇ ಪ್ರಿವಿ ಕೌನ್ಸಿಲ್ ನ್ಯಾಯಾಧೀಶರು ಈ ಪ್ರಕಾರ ಹೇಳಿದ್ದಾರೆ; ಅಧಿಕಾರಿ ಅಪ್ರಮಾಣಿಕತೆಯಿಂದಾಗಲಿ ದ್ವೇಷ ಮನೋಭಾವದಿಂದಾಗಲಿ ಅಸ್ಥಿರ ಮನಸ್ಸಿನಿಂದಾಗಲಿ ವರ್ತಿಸಕೊಡದು. ಈ ಬಗ್ಗೆ ಆತನಿಗೆ ತಿಳಿದು ಬಂದಿರುವ ಸ್ಥಳದ ಮಾಹಿತಿ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ, ಅವನು ಹಿಂದಿನ ವರ್ಷಗಳಲ್ಲಿ ಸಲ್ಲಿಸಿರುವ ವಿವರ ಪಟ್ಟಿಕೆಗಳ ಅಂಶಗಳು ಹಾಗೂ ನ್ಯಾಯವಾದ ನಿರ್ಧಾರಕ್ಕೆ ಬರಲು ಅವನಿಗೆ ಸಹಾಯಕವಾಗಬಹುದಾದ ಇತರ ವಿಷಯಗಳನ್ನು ಪರ್ಯಾಲೋಚನೆಗೆ ತೆಗೆದುಕೊಳ್ಳತಕ್ಕದ್ದು.
ಇವುಗಳಲ್ಲದೆ ಅವನು ನ್ಯಾಯದೃಷ್ಟಿಯನ್ನೂ ಧರ್ಮದೃಷ್ಟಿಯನ್ನೂ ಹೊಂದಿದ್ದು ತನ್ನ ಅಂತರಾತ್ಮದ ಪ್ರೇರಣೆಗೂ ಬೆಲೆ ಕೂಡಬೇಕೆಂದೂ ಹಲವು ನ್ಯಾಯಾಧೀಶರು ಹೇಳಿದ್ದಾರೆ.
ಅಧಿನಿಯಮದಲ್ಲಿ ನಮೂದಿಸಿರುವ ಖರ್ಚು ಬಾಬುಗಳನ್ನು ಒಬ್ಬ ವ್ಯಕ್ತಿಯ ಒಟ್ಟು ವರಮಾನದಿಂದ ಕಳೆದು ಉಳಿದ ಮೊಬಲಗಿನ ಮೇಲೆ ತೆರಿಗೆಯ ಲೆಕ್ಕೆ ಮಾಡಬೇಕೆಂದು ವರಮಾನ ತೆರಿಗೆಯ ಕಾನೂನು ವಿಧಾಯಕ ಮಾಡಿದೆ.
ತೆರಿಗೆಯ ಮುಂಗಡ ಪಾವತಿ; ಸ್ವತ್ತಿನ ಮರಾಟದಿಂದ ಬಂದ ಲಾಭ ಲಾಟರಿ, ಕುದುರೆ ಜೂಜು ಮುಂತಾದವುಗಳಿಂದ ಬಂದ ಅನಿರೀಕ್ಷಿತ ಲಾಭಗಳು-ಇವನ್ನುಳಿದು, ಇತರ ಯಾವುದೇ ರೀತಿಯಲ್ಲಿ ಬಂದ ಅನಿರೀಕ್ಷಿತ ಲಾಭಗಳು-ಇವನ್ನುಳಿದು, ಇತರ ಯವುದೇ ರೀತಿಯಲ್ಲಿ ಬಂದ ವರಮಾನಗಳ ಮೇಲೆ, ತೆರಿಗೆದಾರನೇ ತೆರಿಗೆಯನ್ನು ಅಂದಾಜು ಮಾಡಿ, ಮುಂಗಡವಾಗಿ ಕೊಡಬೇಕು. ಈ ವಿವರಗಳು ಕಾನೂನಿನಲ್ಲಿ ನಮೂದಾಗಿರುತ್ತವೆ.
ತೆರಿಗೆ ವಸೂಲಿ ಮತ್ತು ವಸೂಲಿ ಕ್ರಮ : ತೆರಿಗೆ ನಿರ್ಧಾರವಾದ ಮೇಲೆ ಕೊಡಬೇಕಾದ ತೆರಿಗೆಯನ್ನು ಸಕಾಲದಲ್ಲಿ ಕೊಡಲು ತಪ್ಪಿದರೆ, ಅದರ ವಸೂಲಿಗಾಗಿ ತೆರಿಗೆ ವಸೂಲಿ ಅಧಿಕಾರಿ ಎಂಬೊಬ್ಬ ಅಧಿಕಾರಿ ಕಾನೂನು ಪ್ರಕಾರ ನೇಮಕವಾಗಿರುತ್ತಾನೆ. ಬರಬೇಕಾದ ತೆರಿಗೆಯ ಮೊತ್ತವನ್ನು ನಮೂದಿಸಿ ಒಂದು ಪ್ರಮಾಣ ಪತ್ರವನ್ನು ಈ ಅಧಿಕಾರಿಗೆ ಸಂಬಂಧಪಟ್ಟ ಅಧಿಕಾರಿ ಕೊಡುತ್ತಾನೆ. ಅದರಲ್ಲಿ ನಮೂದಿಸಿರುವ ಹಣದ ವಸೂಲಿಗಾಗಿ ಆ ಅಧಿಕಾರಿ ಕಾನೂನಿನಲ್ಲಿ ನಮೂದಿಸಿರುವ ರೀತ್ಯ ಕ್ರಮ ಜರುಗಿಸುತ್ತಾನೆ.
ನ್ಯಾಯಾಂಗ ಮತ್ತು ತೆರಿಗೆ ಕಾನೂನು : ಮರಮಾನ ತೆರಿಗೆ ಅಧಿನಿಯಮದ 293 ನೆಯ ಪ್ರಕರಣಗಳಲ್ಲಿ ಉಕ್ತವಾಗಿರುವ ರೀತಿ. ಈ ಅಧಿನಿಯಮದ ಪ್ರಕಾರ ವಿಧಿಸಿದ ತೆರಿಗೆಯನು ವಜಾ ಮಾಡಲು ಅಥವಾ ಮಾರ್ಪಡಿಸಲು ನ್ಯಾಯಾಲಯದಲ್ಲಿ ದಾವೆ ಹೂಡಲು ಅವಕಾಶವಿರುವುದಿಲ್ಲ. ಹಾಗೂ, ಸದ್ಭಾವನೆಯಿಂದ ನಡೆಸಿದ ಯಾವುದೇ ನಡವಳಿಕೆಯ ಬಗ್ಗೆ, ಸರ್ಕಾರದ ಮೇಲಾಗಲಿ ಸರ್ಕಾರದ ಯಾವುದೇ ಅಧಿಕಾರಿಯ ಮೇಲಾಗಲಿ ಯಾವುದೇ ಕ್ರಿಮಿನಲ್ ನಡವಳಿಕೆಯನ್ನಾಗಲಿ ದಾವೆಯನ್ನಾಗಲಿ ಇನ್ನಾವುದೇ ಬಗೆಯ ನಡವಳಿಕೆಯನ್ನಾಗಲಿ ತೆಗೆದುಕೊಳ್ಳತಕ್ಕದ್ದಲ್ಲ. ಇವು ಸಿವಿಲ್ ಮತ್ತು ಕ್ರಿಮಿನಲ್ ವ್ಯವಹರಣೆಗಳಿಂದ ವರಮಾನ ತೆರಿಗೆ ಅಧಿಕಾರಿಗಳಿಗೆ ಕೊಟ್ಟಿರುವ ರಕ್ಷಣೆ. ಆದರೆ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯಿಂದ ತೆರಿಗೆ ವ್ಯವಹಾರಗಳಿಗೆ ಸಂಪೂರ್ಣ ವಿನಾಯ್ತಿ ಕೊಟ್ಟಿಲ್ಲ. ತೆರಿಗೆ ಅಧಿನಿಯಮದ 256ನೆಯ ಪ್ರಕರಣದ ಪ್ರಕಾರ, ತೆರಿಗೆ ನಿರ್ಧಾರಣದಿಂದ ಬಾಧಿತನಾಗಿ ವ್ಯಕ್ತಿ ಅಪೀಲು ಸಹಾಯಕ ಕಮಿಷನ್ನರು, ತನಿಖೆ ಸಹಾಯಕ ಕಮಿಷನ್ನರು ಅಥವಾ ವರಮಾನ ತೆರಿಗೆ ಕಮೀಷನ್ನರು ಮಾಡಿದ ಆದೇಶದ ಮೇಲೆ ವರಮಾನ ತೆರಿಗೆ ಅಪೀಲು ಅಧಿಕರಣಕ್ಕೆ ಅಪೀಲು ಮಾಡಿಕೊಳ್ಳಬಹುದು. ಆದರೆ ಹಾಗೆ ಮಾಡುವ ಅಪೀಲನ್ನು ಕಾನೂನಿನಲ್ಲಿ ವಿಧಿಸಿರುವ ಕಾಲಾವಧಿಯಲ್ಲಿ ಮಾಡಬೇಕು. ಮತ್ತು ಅದಕ್ಕಾಗಿ ವಿಧಿಸಿರುವ ಶುಲ್ಕವನ್ನು ಕೊಡಬೇಕು. ಅಪೀಲು ಅಧಿಕರಣ ಮಾಡಿದ ತೀರ್ಮಾನದಿಂದ ಬಾಧಿತನಾದ ಯಾವುದೇ ವ್ಯಕ್ತಿ, ಆ ತೀರ್ಮಾನದಲ್ಲಿ ಅಡಗಿರುವ ಕಾನೂನಿನ ಅಂಶದ ಬಗ್ಗೆ ಸಂದೇಹವುಂಟಾಗಿದೆಯೆಂದೂ ಆ ಬಗ್ಗೆ ಉದ್ಭವಿಸಿರುವ ಸಂಶಯವನ್ನು ಸಂಬಂಧಪಟ್ಟ ಉಚ್ಚನ್ಯಾಯಾಲಯ ಪರಿಹರಿಸಿ ಆದೇಶ ಕೊಡಬೇಕೆಂದೂ ಮನವಿ ಮಾಡಿಕೊಳ್ಳಬಹುದು. ಹಾಗೆ ಮಾಡಿದ ಮನವಿಯನ್ನು ಉಚ್ಚ ನ್ಯಾಯಾಲಯ ಮನ್ನಿಸಿ, ಉದ್ಭವಿಸಿರುವ ಅಂಶಗಳ ಬಗ್ಗೆ ವಾದವಿವಾದಗಳು ಕೇಳಿ ತನ್ನ ತೀರ್ಪನ್ನು ಕೊಟ್ಟು, ನ್ಯಾಯಾಲಯದ ಮೊಹರು ಮಾಡಿ, ತೀರ್ಪಿನ ಪ್ರತಿಯೊಂದನ್ನು ತೆರಿಗೆ ಅಧಿಕರಣಕ್ಕೆ ಕಳುಹಿಸಿಕೊಡುತ್ತದೆ. ಯಾವುದೇ ಕಾನೂನಿನ ಅಂಶಗಳ ಬಗ್ಗೆ ಭಾರತದ ಉಚ್ಚ ನ್ಯಾಯಾಲಯಗಳಲ್ಲಿಯೇ ಭಿನ್ನಾಭಿಪ್ರಾಯಗಳಿದ್ದರೆ, ಅಂಥ ಅಂಶಗಳನ್ನು ಅಪೀಲು ಅಧಿಕರಣ ಅಂತಿಮ ತೀರ್ಪಿಗಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಕಳುಹಿಸಬಹುದು.
ಕಾನೂನಿನ ಅಂಶದ ಬಗ್ಗೆ ಅಪೀಲು ಅಧಿಕರಣ ಕೇಳಿದ್ದ ನಿರ್ದೇಶನವನನು ಉಚ್ಚ ನ್ಯಾಯಾಲಯ ಕೊಟ್ಟ ಮೇಲೆ ಅಗತ್ಯವೆನಿಸಿದರೆ ಅದರ ಮೇಲೆ ಸರ್ವೋಚ್ಛ ನ್ಯಾಯಾಲಯಕ್ಕೆ ಅಪೀಲು ಮಾಡಬಹುದು. ಹಾಗೆ ಮಾಡಿದ ಅಪೀಲಿನಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆಯಲ್ಲಿ ವಿಧಿಸಿರುವ ಕ್ರಮಗಳನ್ನು ಅನುಸರಿಸಬೇಕು.
ಸಂಪತ್ತು ತೆರಿಗೆ : ಒಬ್ಬ ವ್ಯಕ್ತಿಯ ವರಮಾನದ ಮೇಲೆ ತೆರಿಗೆ ವಿಧಿಸುವುದಲ್ಲದೇ, ಒಬ್ಬ ವ್ಯಕ್ತಿ, ಒಂದು ಹಿಂದೂ ಅವಿಭಕ್ತ ಕುಟುಂಬ, ಒಂದು ಕಂಪನಿ, ಇವರು ಕಾನೂನಿನಲ್ಲಿ ವಿಧಾಯಕವಾಗಿರುವುದಕ್ಕಿಂತ ಹೆಚ್ಚಾಗಿ ಸಂಪತ್ತನ್ನು ಹೊಂದಿದ್ದಲ್ಲಿ, ಅದರ ಮೇಲೆ ಕಾನೂನಿನಲ್ಲಿ ವಿಧಾಯಕವಾದ ದರದಲ್ಲಿ ತೆರಿಗೆಯನ್ನು ವಿಧಿಸಲಾಗುವುದು. ಈ ದರಗಳನ್ನು ಆಗಿಂದಾಗ್ಗೆ ಸಂಸತ್ತು ಅಧಿನಿಯಮಿಸುವ ವಿತ್ತೀಯ ಅಧಿನಿಯಮದಲ್ಲಿ ನಮೂದಿಸಲಾಗುವುದು. ಈ ತೆರಿಗೆಯನ್ನು ವರಮಾನ ತೆರಿಗೆ ಅಧಿಕಾರಿಗಳೇ ವಸೂಲು ಮಾಡುತ್ತಾರೆ.
ದಾನ ತೆರಿಗೆ : ಒಬ್ಬ ವ್ಯಕ್ತಿ ಮತ್ತೊಬ್ಬನಿಗೆ ಕೊಡುವ ದಾನಗಳ ಮೇಲೆ ಆಯಾ ತೆರಿಗೆಯನ್ನು ವಿಧಿಸುವ ಬಗ್ಗೆ, ದಾನಕೊಟ್ಟ ಆಸ್ತಿಯ ಮೊತ್ತ, ತೆರಿಗೆಯ ದರ ಮುಂತಾದ ತಪ್ಸೀಲುಗಳನ್ನು ಸಂಬಂಧಪಟ್ಟ ಅಧಿನಿಯಮದಲ್ಲಿ ನಮೂದಿಸಲಾಗಿದೆ. ಸಂಪತ್ತು ವಾರಸು ತೆರಿಗೆ : ಆಸ್ತಿಯನ್ನು ಹೊಂದಿದ್ದು ಅದನ್ನು ತನ್ನ ಇಷ್ಟ ಬಂದ ರೀತಿ ವಿಲೇ ಮಾಡುವ ಹಕ್ಕಿದ್ದ ಯಾವನೇ ವ್ಯಕ್ತಿ ಸ್ವತ್ತನ್ನು ಬಿಟ್ಟು ಮೃತನಾದರೆ, ಅದು ಆತನ ವಾರಸುದಾರರಿಗೆ ಸೇರುತ್ತದೆ. ಆದರೆ ಅಂಥ ಸ್ವತ್ತಿನ ಬೆಲೆ ಕಾನೂನಿನಲ್ಲಿ ವಿಧಾಯಕ ಮಾಡಿರುವ ದರದಲ್ಲಿ ತೆರಿಗೆಯನ್ನು ಕೊಡಬೇಕು; ಹಾಗೆ ಮೃತನ ವಾರಸುದಾರ ಪಡೆಯುವ ಆಸ್ತಿಯ ಬೆಲೆಯಲ್ಲಿ ಮೃತನ ಉತ್ತರ ಕ್ರಿಯಾದಿಗಳಿಗೆ ಮಾಡಿದ ಖರ್ಚು, ಕಾನೂನಿನಲ್ಲಿ ನಮೂದಿಸಿರುವ ಬಗೆಯ ಮೃತನ ಸಾಲಗಳು ಮುಂತಾದ ಬಾಬುಗಳನ್ನು ವಜಾ ಮಾಡಿ, ಉಳಿದದ್ದರ ಮೇಲೆ ತೆರಿಗೆ ವಸೂಲು ಮಾಡಲಾಗುವುದು.
ಮೇಲೆ ಹೇಳಿದವಲ್ಲದೇ ಇನ್ನೂ ಹಲವು ತೆರಿಗೆಗಳನ್ನು ಕುರಿತ ಅಧಿನಿಯಮಗಳಿವೆ. ಅವುಗಳಲ್ಲಿ ಮುಖ್ಯವಾದುವನ್ನು ಆಯಾ ತೆರಿಗೆಗಳನ್ನು ಕುರಿತ ಲೇಖನಗಳಲ್ಲಿ ವಿವೇಚಿಸಲಾಗಿದೆ. (ಆರ್.ಆರ್.ಎ.)