ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತೆರೀಸಾ, ಸೇಂಟ್

ವಿಕಿಸೋರ್ಸ್ದಿಂದ

ತೆರೀಸಾ, ಸೇಂಟ್

	1515-1582. ಸ್ಪೇರಿನ ಕಾರ್ಮೆಲೈಟ್ ಸಂನ್ಯಾಸಿನಿ. ಅನುಭಾವಿ. ಕ್ರೈಸ್ತ ಸಂತರ ಪೈಕಿ ಅಗ್ರಮಾನ್ಯಳು. ಈಕೆಯ ನಿಜನಾಮ ತೆರೀಸಾ ಸಿಪೆಡ. ಈಕೆಯ ಅಧ್ಯಾತ್ಮಿಕ ಕೃತಿಗಳು ಇಂದಿಗೂ ಪಠನೀಯವಾಗಿವೆ.

ಈಕೆ ಹುಟ್ಟಿದ್ದು ಆವಿಲದಲ್ಲಿ. ತಂದೆ ಮತ್ತು ತಾಯಿಗಳು ನಿಷ್ಠಾವಂತರು. ಈಕೆಯ ಏಳು ಜನ ಸೋದರರು ದಕ್ಷಿಣ ಅಮೆರಿಕದಲ್ಲಿ ಉನ್ನತ ಕೆಲಸದಲ್ಲಿದ್ದರು. ಇಬ್ಬರು ಸೋದರಿಯರು ಸ್ಪೇನಿನಲ್ಲೇ ಮದುವೆಯಾಗಿದ್ದರು. ಈಕೆ ತನ್ನ 21 ನೆಯ ವಯಸ್ಸಿನಲ್ಲಿ ಸಂನ್ಯಾಸಿನಿಯಾಗಿ ದೀಕ್ಷೆ ಕೈಗೊಂಡಳು. ಒಮ್ಮೆ ಈಕೆ ರೋಗಗ್ರಸ್ತಳಾಗಿ ಹಾಸಿಗೆ ಹಿಡಿದಾಗ ಆಧ್ಯಾತ್ಮಿಕದತ್ತ ತನ್ನ ಒಲವನ್ನು ಬೆಳೆಸಿಕೊಂಡಳು. ಅನೇಕ ವರ್ಷಗಳ ಕಾಲ ಅಂತಧ್ರ್ಯಾನ ಹಾಗೂ ಬಾಹ್ಯ ಧಾರ್ಮಿಕ ಕಲಾಪಗಳ ನಡುವೆ ಸಂಘರ್ಷಣೆಯನ್ನು ತೀವ್ರವಾಗಿ ಈಕೆ ಅನುಭವಿಸಿದ್ದನ್ನು ತನ್ನ ಜೀವನಚರಿತ್ರೆಯಲ್ಲಿ ಹೇಳಿದ್ದಾಳೆ. 1555 ರಲ್ಲಿ ಈಕೆಗೆ ಕ್ರಿಸ್ತನ ಸಾಕ್ಷಾತ್ಕಾರವಾಯಿತು. ಅಂದಿನಿಂದಲೇ ಈಕೆ ಹೊಸ ಜೀವನ ಆರಂಭಿಸಿದಳು. ಹೊರಗಿನವರ ಯಾವ ಟೀಕೆಗೂ ಸಗ್ಗಲಿಲ್ಲ. ಕ್ರಿಸ್ತನೇ ತನ್ನೊಳಗೆ ನಿಂತು ತನ್ನ ಕಾರ್ಯಗಳನ್ನೆಲ್ಲ ನಿರ್ದೇಶಿಸುತ್ತಿದ್ದಂತೆ ಈಕೆಗೆ ಅನುಭವವಾಗುತ್ತಿದ್ದಿತು. ಈಕೆ ಅಧ್ಯಾತ್ಮಿಕ ಸಲಹೆಗಳನ್ನಿತ್ತವರಲ್ಲಿ ಧರ್ಮಗುರುಗಳಾದ ಡೋಮಿಂಗೋ ಬನೆಟ್ ಮತ್ತು ಜೆಸೂಯಿಟ್ ಫ್ರಾನ್ಸಿಸ್ ಬೋರ್ನಿಯ ಮುಖ್ಯರು.

ಸಂನ್ಯಾಸಿನಿಯರ ಆಶ್ರಮದಲ್ಲಿ 22 ವರ್ಷಗಳನ್ನು ಕಳೆದ ಈಕೆ ಕಾರ್ಮಲೈಟ್ ಜೀವದಲ್ಲಿ ಹೊಸ ಚೇತನ ಹಾಗೂ ಪಾವಿತ್ರ್ಯವನ್ನು ತುಂಬಲು ಯತ್ನಿಸಿದಳು. ತೆರೀಸಾಳ ಕಾಲದಲ್ಲಂತೂ ಆಶ್ರಮಜೀವನದಲ್ಲಿ ಧಾರ್ಮಿಕ ಆಚಾರ ಮತ್ತು ಪ್ರಾಪಂಚಿಕ ವಿರಕ್ತಿಗಳು ತುಂಬ ಕಡಿಮೆಯಾಗಿದ್ದವು.

1562 ರಲ್ಲಿ ಪೋಪ್ ನಾಲ್ಕನೆಯ ಪಯಸನ ನೆರವಿನಿಂದ ತೆರೀಸಾ ಸುಧಾರಣೆಗೊಂಡ ಕಾರ್ಮೆಲೈಟ್ ಸಂನ್ಯಾಸಿನಿಯರ ನೂತನಾಶ್ರಮವನ್ನು ನಾಲ್ಕು ಜನರ ವಾಸ್ತವ್ಯದಿಂದ ಆರಂಭಿಸಿದಳು. ಇದಕ್ಕೆ ರಾಜಕೀಯ ಸಾಮಾಜಿಕ ಹಾಗೂ ವ್ಯಾವಹಾರಿಕ ವಿರೋಧಗಳು ಬೇಕಾದಷ್ಟು ಬಂದರೂ ಜನ ನೀಡಿದ ಭಿಕ್ಷೆಯಿಂದಲೇ ಆಶ್ರಮವನ್ನು ಸಾಗಿಸಿದಳು. ಬಹಳ ಬೇಗ ಅದು ಪ್ರಖ್ಯಾತಿಗೆ ಬಂತು. 1567 ರಲ್ಲಿ ಎರಡನೆಯ ಆಶ್ರಮವನ್ನು ಸ್ಥಾಪಿಸುವಾಗ ಜುವಾನ್ ಡಿ ಯೆಪೆಸ್ (ಅಥವಾ ಸಂತ ಜಾನ್ ಆಫ್ ದಿ ಕ್ರಾಸ್) ಎಂಬಾತನ ಸಂಪರ್ಕವೊದಗಿ ಸಂನ್ಯಾಸಿಗಳಿಗೂ ಇಂಥವೇ ಆಶ್ರಮಗಳ ಸ್ಥಾಪನೆಯ ವಿಚಾರ ಮೂಡಿತು. ಸಾಯುವ ಮುನ್ನ ತೆರೀಸಾ ಸಂನ್ಯಾಸಿನಿಯರ 12 ಆಶ್ರಮಗಳನ್ನು ಸ್ಥಾಪಿಸಿದಳು. 

1575ರಲ್ಲಿ ಈಕೆ ಸೆವಿಲ್ ನಗರದ ಆಶ್ರಮದಲ್ಲಿರುವಾಗ ಕಾರ್ಮೆಲೈಟ್ ಪಂಗಡದವರಲ್ಲೇ ಒಳಜಗಳವುಂಟಾಗಿ ಸುಧಾರಣೆಯೆಲ್ಲ ಧೂಳೀಪಟವಾಗುವ ದುಃಸ್ಥಿತಿಯೊದಗಿತು. ಪಾದರಕ್ಷೆ ಯಾವ ರೀತಿಯಿರಬೇಕೆನ್ನುವ ನೆವ ಈ ಜಗಳದ ಮೂಲವಾಗಿತ್ತು. ಆದರೆ ಕಡೆಗೆ ಫಿಲಿಪ್ ದೊರೆ ಮತ್ತು ಪೋಪರ ಪ್ರವೇಶದಿಂದಾಗಿ ಜಗಳ ಕೊನೆಗೊಂಡು ತೆರೀಸಳ ಪ್ರಯತ್ನ ನಿರಾತಂಕವಾಗಿ ಸಾಗುವಂತಾಯಿತು.

ಈಕೆ ತನ್ನ 64 ನೆಯ ವಯಸಿನಲ್ಲೂ ಹೊಸ ಆಶ್ರಮಗಳ ಸ್ಥಾಪನೆಗಾಗಿ ದೇಶವನ್ನೆಲ್ಲ ಸಂಚರಿಸುತ್ತಿದ್ದು ಆಧ್ಯಾತ್ಮಿಕ ಕಾರ್ಯದಲ್ಲಿ ಮಗ್ನಳಾಗಿದ್ದಾಗಲೇ ಮೃತಳಾದಳು. ಈಕೆ ಸತ್ತ 40 ವರ್ಷಗಳಲ್ಲಿ ಈಕೆಯನ್ನು 15ನೆಯ ಪೋಪ್‍ಗ್ರೆಗರಿ ಸಂತಳ ಪದವಿಗೆ ಏರಿಸಿದ. ಇದು ಕೆತೊಲಿಕ್ ಪಂಗಡಕ್ಕೆ ದೊರೆತ ಅತಿ ಹೆಚ್ಚಿನ ಸನ್ಮಾನ.

ಈಕೆ ರಚಿಸಿದ ಕೃತಿಗಳು ಈವರೆಗೂ ಆಧ್ಯಾತ್ಮಿಕ ಪ್ರಪಂಚದಲ್ಲಿ ಸುವಿಖ್ಯಾತವಾಗಿವೆ. ಈಕೆಯ ಪ್ರಸಿದ್ಧ ಕೃತಿ ಲೈಫ್ (ಜೀವನ). ಇದು ಕೇವಲ ಜೀವನ ಚರಿತ್ರೆಯಾಗಿರದೆ ಒಂದು ಮಹಾಚೇತನದ ಅನುಭೂತಿಸಾರವಾಗಿದೆ. ಸಂತ ಅಗಸ್ಟೀನನ `ಕನಫೆಷನ್ಸ್ ಗಳಂತೆ. ಎರಡನೆಯ ಕೃತಿ ದಿ ಬುಕ್ ಆಫ್ ಫೌಂಡೇಷನ್ಸ್ (ಸ್ಥಾಪಿತ ಆಶ್ರಮಗಳ ಗ್ರಂಥ). ಹೆಚ್ಚು ಜನಪ್ರಿಯವಾಗಿರುವ ಈಕೆಯ ಆಧ್ಯಾತ್ಮಿಕ ಕೃತಿಗಳೆಂದರೆ - ದಿ ವೇ ಆಫ್ ಪರ್‍ಫೆಕ್ಷನ್ (ಪರಿಪೂರ್ಣತೆಯ ಮಾರ್ಗ); ಇಂಟರೀಯರ್ ಕ್ಯಾಸಲ್ (ಒಳದುರ್ಗ); ಸ್ಪಿರಿಚ್ಯುಯಲ್ ರಿಲೇಷನ್ಸ್ (ಆಧ್ಯಾತ್ಮಿಕ ಸಂಬಂಧಗಳು); ಎಕ್ಸ್‍ಕ್ಲಮೇಷನ್ ಆಫ್ ದಿ ಸೋಲ್ ಟು ಗಾಡ್ (ದೇವರಿಗೆ ಆತ್ಮನ ಮೊರೆ); ಕನ್ಸೆಪ್ಷನ್ಸ್ ಆಫ್ ದಿ ಲವ್ ಆಫ್ ಗಾಡ್ (ಭಗವತ್ಪ್ರೇಮದ ಕಲ್ಪನೆಗಳು); ಅಲ್ಲದೇ ಈಕೆ ರಚಿಸಿದ 31 ಕವಿತೆಗಳೂ 458 ಪತ್ರಗಳು ಉಪಲಬ್ಧವಿವೆ.

ಈಕೆಯ ಬರೆಹಗಳಲ್ಲಿ ತೀವ್ರ ಸಂವೇದನೆ ಮತ್ತು ಅತಿಶಯತೆಯಿರುವುದರಿಂದ ಅವುಗಳಿಗೆ ಕ್ರೈಸ್ತ ಅನುಭಾವ ಪ್ರಪಂಚದಲ್ಲಿ ಒಂದು ವಿಶಿಷ್ಟ ಸ್ಥಾನವಿದೆ. ಎಳ್ಳಷ್ಟೂ ತನ್ನ ಅನುಭಾವದ ವಿಷಯಗಳಲ್ಲಿ ಗರ್ವವನ್ನು ತಾಳದೆ, ಎಲ್ಲವನ್ನೂ ಭಗವತ್ಕರುಣೆಯ ಪ್ರಸಾದವೆಂದು ಈಕೆ ತಿಳಿಸುತ್ತಾಳೆ. ಪ್ರಾರ್ಥನಾರಹಸ್ಯಗಳನ್ನು ಭೇದಿಸುವ ಸಂಶೋಧಕರಿಗೂ ಆಧ್ಯಾತ್ಮಿಕ ಪ್ರೇರಣೆಯನ್ನರಸುವ ಧಾರ್ಮಿಕ ಜನತೆಗೂ ಈಕೆಯ ಮಾತುಗಳು ಮೆಚ್ಚಿಕೆಯವು.

ತೆರೀಸಳ ಕೃತಿಗಳ ಪ್ರಥಮಾವೃತ್ತಿ ಸಲಮಾಂಕದಲ್ಲಿ 1588 ರಲ್ಲಿ ಪ್ರಕಟವಾಯಿತು. ಅಂದಿನಿಂದ ಇಂದಿನವರೆಗೂ ಜಗತ್ತಿನ ನಾನಾ ಭಾಷೆಗಳಲ್ಲಿ ಅವುಗಳ ನೂರಾರು ಹೊಸ ಹೊಸ ಆವೃತ್ತಿಗಳು ಪ್ರಕಟವಾಗುತ್ತಲೇ ಇವೆ. ಇ. ಆಲಿಸನ್ ಪೀರ್ಸ್ ಎಂಬಾತ ಈಕೆಯ ಎಲ್ಲ ಕೃತಿಗಳನ್ನೂ ಇಂಗ್ಲಿಷಿಗೆ ಅನುವಾದಿಸಿದ್ದಾನೆ. (ಕೆ.ಕೆ.)