ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತೇಗದ ಮರ

ವಿಕಿಸೋರ್ಸ್ದಿಂದ

ತೇಗದ ಮರ - ವರ್ಬಿನೇಸೀ ಕುಟುಂಬಕ್ಕೆ ಸೇರಿದ ಬಹಳ ಉಪಯುಕ್ತ ಮರ (ಟೀಕ್). ಸಾಗುವಾನಿ ಪರ್ಯಾಯ ನಾಮ. ಟೆಕ್ಟೋನ ಗ್ರ್ಯಾಂಡಿಸ್ ಇದರ ಶಾಸ್ತ್ರಿಯ ಹೆಸರು. ಅಲ್ಲದೆ ಟೆಕ್ಟೋನ ಹ್ಯಾಮಿಲ್ಟೋನಿಯಾನ ಮತ್ತು ಟೆಕ್ಟೋನ ಫಿಲಿಪಿನೆನ್ಸಿಸ್ ಎಂಬುದಕ್ಕೂ ಇದೇ ಹೆಸರು ಅನ್ವಯವಾಗುತ್ತದೆ. ಇವು ದಕ್ಷಿಣ ಮತ್ತು ದಕ್ಷಿಣ ಪೂರ್ವ ಏಷ್ಯದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತವೆ. ಭಾರತದಲ್ಲಿ ಟೆ.ಗ್ರ್ಯಾಂಡಿಸ್ ಮಾತ್ರ ಬೆಳೆಯುತ್ತದೆ. ಇದು ಅತ್ಯುತ್ತಮವಾದ ಬಗೆ ಎಂದು ಹೆಸರಾಗಿದೆ. ತೇಗ ದುಂಡಾದ ಶಿರದ, ಪರ್ಣಪಾತಿ ಮರ. ಇದು ಸ್ಥಳಗುಣಗಳನ್ನು ಅವಲಂಬಿಸಿ 30-40 m ಎತ್ತರಕ್ಕೆ ಬೆಳೆಯುತ್ತದೆ. ಅನುಕೂಲ ಪರಿಸರಗಳಲ್ಲಿ ಮರವು ಎತ್ತರವಾಗಿಯೂ ದಪ್ಪವಾಗಿಯೂ ನೀಳವಾದ ಉರುಳೆಯಾಕಾರದ ಕಾಂಡವುಳ್ಳದ್ದಾಗಿಯೂ ಬೆಳೆಯುತ್ತದೆ. ಮುದಿ ವಯಸ್ಸಿನಲ್ಲಿ ತಡೆಗೋಡೆಗಳಂಥ (ಬಟ್ರೆಸ್) ಚಿಕ್ಕ, ದೊಡ್ಡ ಮಡಿಕೆಗಳು ಕಾಂಡದ ಬುಡದಲ್ಲಿ ಕಾಣಿಸಿಕೊಳ್ಳುತ್ತವೆ. ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಮರದ ಬೆಳವಣಿಗೆ ಕುಂಠಿತವಾಗುವುದೂ ಅಲ್ಲದೆ, ಮುದಿವಯಸ್ಸಿನಲ್ಲಿ ಕೊಂಬೆಗಳು ಮತ್ತು ಬುಡದ ಮಡಿಕೆಗಳ ಹೆಚ್ಚಾಗುವುದು ಕಂಡುಬರುತ್ತದೆ. ಭಾರತದಲ್ಲಿ ಈ ಕೆಳಕಂಡ ಗರಿಷ್ಠ ಎತ್ತರ ಮತ್ತು ಸುತ್ತಳತೆಗಳು ದಾಖಲಾಗಿವೆ. ಸ್ಥಳ

ಸುತ್ತಳತೆ (ಎದೆ ಎತ್ತರದಲ್ಲಿ) ಛಿm. 

ಎತ್ತರ (m.)

ಅಲ್ಲಿಪಲ್ಲಿ, ಮಹಾರಾಷ್ಟ್ರ ಉತ್ತರ ಕನ್ನಡ, ಕರ್ನಾಟಕ ಕೊಯಮತ್ತೂರು, ತಮಿಳುನಾಡು 396 602 592 43 25.9 29.0


ತೊಗಟೆಯ ಬಣ್ಣ ತಿಳಿಕಂದು ಅಥವಾ ಬೂದಿ; ತೊಗಟೆ ನಾರುನಾರಾಗಿರುತ್ತದೆ. ಉದ್ದನೆಯ ತೆಳುಪದರಗಳ ರೂಪದಲ್ಲಿ ಮರದ ಕಾಂಡದಿಂದ ಸುಲಿದು ಬೀಳುತ್ತದೆ. ಅತಿ ಚಿಕ್ಕ ಕೊಂಬೆಗಳು ದುಂಡಗಿರದೆ ನಾಲ್ಕು ಮೂಲೆಗಳುಳ್ಳವಾಗಿರುವುದು ತೇಗದ ಮರದ ವಿಶೇಷ ಲಕ್ಷಣ.

ಎಲೆಗಳು ಸರಳ ರೀತಿಯವು; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವುಗಳ ಆಕಾರ ಅಂಡದಂತೆ; ಉದ್ದ 30-60 ಛಿm; 203-0 ಛಿm. ಸಸಿಗಳಲ್ಲಿ ಮತ್ತು ಕತ್ತರಿಸಿ ಹೊಸದಾಗಿ ಚಿಗುರಿದ ಮರಗಳಲ್ಲಿ ಎಲೆಗಳು ಬಹಳ ದೊಡ್ಡವಾಗಿರುತ್ತದೆ. ಎಲೆಯ ತಳಭಾಗ ತೊಗಲಿನಂತೆ ಒರಟಾಗಿಯೂ ಮೇಲ್ಭಾಗ ನಯವಾಗಿಯೂ ಉಂಟು.

ವಾಯುಗುಣಕ್ಕೆ ಅನುಸಾರವಾಗಿ, ಡಿಸೆಂಬರ್ - ಮಾರ್ಚಿನಿಂದ ಹಿಡಿದು ಏಪ್ರಿಲ್-ಜೂನ್ ವರೆಗೆ ತನ್ನ ಹಳೆ ಎಲೆಗಳನ್ನು ಕಳೆದುಕೊಂಡು ಮರ ಬೋಳಾಗಿ ನಿಂತಿರುತ್ತದೆ. ಮಳೆಗಾಲದಲ್ಲಿ ಹೂಬಿಡಲು ಪ್ರಾರಂಭಿಸುವುದು. ಹೂಗಳು ಬೆಳ್ಳಗೂ ಸಣ್ಣಗೂ ಹೇರಳವಾಗಿಯೂ ಮತ್ತು ಒಂದು ರೀತಿಯ ಸುವಾಸನೆಯುಳ್ಳವಾಗಿಯೂ ಇವೆ. ಕಾಯಿಗಳು ಗುಂಡಗಿವೆ; ಇವುಗಳ ಸುತ್ತ ತೆಳುವಾದ ಪುಷ್ಪಪತ್ರಾವರಣ ಉಂಟು. ಇವು ನವೆಂಬರ್ - ಜನವರಿಯಲ್ಲಿ ಮಾಗಿ ಹಣ್ಣಾಗಿ ಕಾಲಕ್ರಮದಲ್ಲಿ ಉದುರುತ್ತವೆ. ತೇಗದ ಮರವನ್ನು ಬೆಳೆಯುವ ಮುಖ್ಯ ದೇಶಗಳಲ್ಲಿ ಭಾರತವೂ ಒಂದು. ದಕ್ಷಿಣ ಭಾರತ ಇದರ ತೌರು. ದಕ್ಷಿಣದಲ್ಲಿ ಕೇರಳದಿಂದ ಹಿಡಿದು ಉತ್ತರದಲ್ಲಿ ರಾಜಾಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶದ ದಕ್ಷಿಣ ಭಾಗ ಮತ್ತು ಒರಿಸ್ಸದ ದಕ್ಷಿಣದ ಭಾಗಗಳ ವರೆಗೂ ಇದು ಬೆಳೆಯುತ್ತದೆ. ಮಣಿಪುರ-ಬರ್ಮ ಗಡಿಪ್ರದೇಶಗಳಲ್ಲಿಯೂ ತೇಗದ ಮರ ಅಲ್ಪಸ್ವಲ್ಪ ಕಾಣಸಿಗುತ್ತದೆ.

ಮೇಲೆ ಹೇಳಿದಂತೆ ಸ್ವಾಭಾವಿಕವಾಗಿ ಬೆಳೆಯುವ ತೇಗದ ಮರದ ಕಾಡುಗಳಲ್ಲಿದೆ, ಈಗ ಅನೇಕ ವರ್ಷಗಳಿಂದಲೂ ನೆಟ್ಟು ಬೆಳೆಸಿದ ಕಾಡುಗಳ ಅಭಿವೃದ್ಧಿ ಭಾರತದ ಅನೇಕ ಭಾಗಗಳಲ್ಲ ನಡೆಯುತ್ತಿದೆ. ಮುಖ್ಯವಾಗಿ ಅಸ್ಸಾಮ್, ಬಂಗಾಳ, ಬಿಹಾರ , ಉತ್ತರಪ್ರದೇಶ ಮತ್ತು ಅಂಡಮಾನ್-ನಿಕೋಬಾರ್ ದ್ವೀಪ ಇವುಗಳಲ್ಲಿ ಈ ಕಾರ್ಯ ಹೆಚ್ಚಾಗಿ ನಡೆದಿದೆ. 1965ರ ಅಂದಾಜಿನ ಪ್ರಕಾರ ಭಾರತದಲ್ಲಿ ನೆಟ್ಟು ಬೆಳೆಸಿದ ತೇಗದ ಮರದ ಕಾಡುಗಳ ಒಟ್ಟು ವಿಸ್ತೀರ್ಣ 1,91,000 ಹೆಕ್ಟೇರುಗಳು. 1968-69ರ ಅಂದಾಜಿನ ಪ್ರಕಾರ ಭಾರತದಲ್ಲಿ ಒಟ್ಟು ತೇಗದ ಮರದ ಕಾಡಿನ ವಿಸ್ತೀರ್ಣ 80 ರಿಂದ 90 ಲಕ್ಷ ಹೆಕ್ಟೇರುಗಳು. ಈ ವಿಸ್ತೀರ್ಣದ ರಾಜ್ಯವಾರು ವಿಭಜನೆ ಹೀಗಿದೆ: ರಾಜ್ಯ ವಿಸ್ತೀರ್ಣ ಸಾವಿರ ಹೆಕ್ಟೇರುಗಳಲ್ಲಿ 1. ಅಂಡಮಾನ್-ನಿಕೋಬಾರ್ ... 3

 ದ್ವೀಪಸಮುದಾಯ

2. ಆಂಧ್ರಪ್ರದೇಶ ... 1842 3. ಅಸ್ಸಾಮ್ ... 6 4. ಬಿಹಾರ ... 7 5. ಗುಜರಾತ್ ... 1176 6. ಕೇರಳ ... 108 7. ಮಧ್ಯಪ್ರದೇಶ ... 2846 8. ಮಹಾರಾಷ್ಟ್ರ ... 1532 9. ಕರ್ನಾಟಕ ... 1000 10. ಒರಿಸ್ಸ ... 57 11. ರಾಜಾಸ್ಥಾನ್ ... 328 12. ತಮಿಳುನಾಡು ... 46 13. ಉ. ಪ್ರದೇಶ ... 19 14. ಪ. ಬಂಗಾಳ ... 2

ತೇಗದ ಮರದ ತೂಕ : ಬಯಲಿನಲ್ಲಿ ಒಣಗಿಸಿದ ಚೌಬೀನೆಯ ತೂಕ ಒಂದು ಘನ ಸೆಂಟಿ ಮೀಟರಿಗೆ 0.7 ಗ್ರಾಮ್‍ಗಳು. ಹೊರಮರದ ಬಣ್ಣ ಬೂದು ಮಿಶ್ರಿತ ಬಿಳಿ. ಚೇಗುಮರದ ಬಣ್ಣ ಬಿಳಿಕಂದು ಮಿಶ್ರಿತ ಹೊಂಬಣ್ಣ. ದಕ್ಷಿಣ ಭಾರತ ಮತ್ತು ಬರ್ಮದೇಶದಲ್ಲಿ ಬೆಳೆಯುವ ತೇಗದ ಮರ ಸಾಮಾನ್ಯವಾಗಿ ನೀಳವಾದ ಎಲೆಗಳುಳ್ಳದ್ದೂ ತಿಳಿಬಣ್ಣದ್ದಾಗಿಯೂ ಇರುತ್ತದೆ. ಅದರೆ ಮಧ್ಯಪ್ರದೇಶ ಮತ್ತು ಗುಜರಾತಿನಲ್ಲಿ ಬೆಳೆಯುವ ಮರ ಕಡುಗಂದು ಬಣ್ಣದ್ದಾಗಿರುವುದು ಅಲ್ಲದೆ ಕಡುಗಂದು ಅಥವಾ ಕಪ್ಪು ಬಣ್ಣದ ಗೆರೆಗಳನ್ನುಳ್ಳದ್ದಾಗಿರುತ್ತದೆ. ಮರಕ್ಕೆ ತನ್ನದೇ ಆದ ಘಾಟು ಎನ್ನಬಹುದಾದ ವಾಸನೆ ಉಂಟು.

ಹದಮಾಡುವುದು ಅಥವಾ ಒಣಗಿಸುವ್ಯದು : ಬಯಲಿನಲ್ಲಿಯೇ ಚೆನ್ನಾಗಿ ಒಣಗಿಸಿ ಹದವಾದ ಚೌಬೀನೆಯನ್ನು ಪಡೆಯಬಹುದು. ಕೊಯ್ದ ಮರದ ಪಟ್ಟಿ ಅಥವಾ ಹಲಗೆಗಳನ್ನು ನೆರಳಿನಲ್ಲಿ ಗಾಳಿಯಾಡುವಂತೆ ತೆರೆದ ಹೇರುಗಳಲ್ಲಿ ಓರಣವಾಗಿ ಪೇರಿಸಬೇಕು. ಚೌಬೀನೆ ಬಹಳ ಬೇಗ ಚೆನ್ನಾಗಿ ಒಣಗುವುದಲ್ಲದೇ ಗುಣಕ್ಕೇನೂ ಕುಂದು ಉಂಟಾಗುವುದಿಲ್ಲ. ಈ ಮರವನ್ನು ಆವಿಗೆಗಳಲ್ಲಿ ಕೂಡ ಬಹು ಸುಲಭವಾಗಿ ಒಣಗಿಸಬಹುದು. ಆದರೆ ಅದರ ಮೇಲ್ಮೈ ಉತ್ಕರ್ಷಣದಿಂದ ಬಣ್ಣ ಕೆಡದಂತೆ ಎಚ್ಚರ ವಹಿಸಬೇಕು.

ಗುಣ ಮತ್ತು ಬಾಳಿಕೆ : ಸಾಮಾನ್ಯವಾಗಿ ತೇಗದ ಮರವನ್ನು ಮಾದರಿಯಾಗಿ ಇಟ್ಟುಕೊಂಡು ಉಳಿದ ಎಲ್ಲ ಮರಗಳ ಭೌತ ಗುಣಗಳನ್ನು ಹೋಲಿಸುವುದು ವಾಡಿಕೆ. ಬಳಕೆಯಲ್ಲಿರುವ ಇತರ ಗಟ್ಟಿಮರಗಳೊಡನೆ ಹೋಲಿಸಿದರೆ ತೇಗದ ಮರ ಸರಾಸರಿ ಭಾರದ, ಬಲವಾದ, ಸಾಧಾರಣ, ಗಡುಸಿನ ಮರ, ಬಲುಕಾಲ ಅಂಕುಡೊಂಕಾಗದೆ ಉಳಿಯುತ್ತದೆ. ಇದರ ಚೇಗುಮರ ಅತ್ಯಂತ ಬಾಳಿಕೆ ಬರುವಂಥದು. ಈ ಮರಕ್ಕೆ ಬಹು ಕಾಲದ ವರೆಗೆ ಗೆದ್ದಲು ಹಿಡಿಯುವುದಿಲ್ಲವಾದರೂ ಬೂಷ್ಟು ಹಿಡಿಯಬಹುದು. ಆದರೂ ಒಳ್ಳೆಯ ತೇಗದ ಮರ ಬಹಳ ಕಾಲ ಬಾಳಿಕೆ ಬರುತ್ತದೆ. ಆದರೆ, ಹೊರಮರ ಮಾತ್ರ ಈ ಎಲ್ಲ ಗುಣಗಳಲ್ಲೂ ವಿರುದ್ಧ, ಗೆದ್ದಲು, ಬೂಷ್ಟು ಮತ್ತು ಕೊರೆಯುವ ಕೀಟಗಳಿಂದಾಗಿ ಅದು ಬಲುಬೇಗ ನಾಶವಾಗುತ್ತದೆ.

ತೇಗ ಗರಗಸ, ಉಳಿ, ಹತ್ತರಿ ಇವುಗಳ ಅತಿ ಬಾಯಿಗೆ ಚೌಬೀನೆ. ಕತ್ತರಿಸಿದ ಪಾತಳಿಗಳು ಸ್ವಾಭಾವಿಕವಾಗಿ ನುಣುಪಾಗಿರುವುದೂ ಅಲ್ಲದೆ ಇವಕ್ಕೆ ಉಜ್ಜಿ ಚೆನ್ನಾಗಿ ಹೊಳಪು ಕೊಡಬಹುದು. ತಿರುಗುವ ಕಡೆತ ಯಂತ್ರಗಳಲ್ಲಿ ಒಳ್ಳೆಯ ಮರಹಾಳೆಗಳನ್ನು ಸುಲಿದು ಹಾಳೆಮರ (ಫ್ಲೈವುಡ್) ಮಾಡಬಹುದು. ತೇಗದ ಮರದ ಹಾಳೆಗಳನ್ನು ಇತರ ಮರದ ಹಾಳೆಗಳೊಂದಿಗೆ ಜೋಡಿಸಿ ಹೊರಮೈ ತೇಗದಂತೆ ಕಾಣುವ ಹಾಳೆಮರವನ್ನು ತಯಾರಿಸುವುದುಂಟು. ಸುಲಿದ ಹಾಳೆಗಳಲ್ಲದೆ ಕೊಚ್ಚಿದ (ಸ್ಲೈಸ್ಡ್) ಹಾಳೆಗಳು ಉಪಯೋಗದಲ್ಲಿವೆ. ತೇಗದ ಹಾಳೆಗಳ ಕೇಸೀನ್ ಗೋಂದಿನಲ್ಲಿ ಚೆನ್ನಾಗಿ ಅಂಟುವುದಿಲ್ಲ. ತೇಗದ ಮರ ಸರ್ವೋಪಯೋಗಿ. ಮುಖ್ಯವಾಗಿ ರೈಲ್ವೇ ವ್ಯಾಗನ್ನುಗಳು. ಹಡಗು ಮತ್ತು ಮೇಜು ಕುರ್ಚಿ ಇತ್ಯಾದಿಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ. ಬರ್ಮ ಮತ್ತು ದಕ್ಷಿಣ ಭಾರತದ ತೇಗದ ಮರ ಗಟ್ಟಿಯಾಗಿದೆ. ಆದರೆ ಮಧ್ಯಪ್ರದೇಶ, ಗುಜರಾತುಗಳ ಮರ ತನ್ನ ಕಡುಗಂದು ಬಣ್ಣದ ಗೆರೆಗಳಿಂದಾಗಿ ನೋಡಲು ಅಂದವಾಗಿರುತ್ತದೆ. ಬಲವಾದ ಮರಗೆಲಸಗಳಲ್ಲಿ ಬರ್ಮ ಮತ್ತು ದಕ್ಷಿಣ ಭಾರತದ ತೇಗವೂ, ಬಣ್ಣವೇ ಪ್ರಧಾನವಾದ ಸೊಗಸುಗಾರಿಕೆಯ ಮರಗೆಲಸಗಳಲ್ಲಿ ಉತ್ತರ ಭಾರತದ ತೇಗವು ಹೆಸರು ಪಡೆದಿವೆ.

ಪುಷ್ಪಪತ್ರಾವರಣವನ್ನು ತೆಗೆದುಹಾಕಿ 2-3 ವರ್ಷಗಳ ವರೆಗೆ ಕಾಯಿಗಳನ್ನು ದಾಸ್ತಾನು ಮಾಡಬಹುದು. ಬೀಜಗಳು ತುಂಬ ಚಿಕ್ಕವು. ಬೀಜಗಳ ಗಾತ್ರ ಒಂದೇ ಸಮವಿರುವುದಿಲ್ಲ ಒಂದು ಕಿಲೊಗ್ರಾಮ್ ತೂಕದ ಬೀಜಗಳ ಸಂಖ್ಯೆ 1500-3100. ಇವು ಗಟ್ಟಿಯಾದ ಹೊರಚಿಪ್ಪಿನಿಂದ ಆವೃತ್ತವಾಗಿರುವುದರಿಂದ ಬೀಜವು ಮೊಳೆಯುವುದು ನಿಧಾನ. ಸಾಮಾನ್ಯವಾಗಿ, ಬಿತ್ತುವ ಮೊದಲು ಬಿಸಿ ನೀರು ಮತ್ತು ತಣ್ಣೀರುಗಳಲ್ಲಿ ಒಂದಾದಮೇಲೊಂದರಲ್ಲಿ ಅದ್ದಿ ತೆಗೆದು ಹೊರ ಚಿಪ್ಪು ಮೆದುವಾಗುವಂತೆ ಮಾಡಲಾಗುತ್ತದೆ. (ಬಿ.ಕೆ.ಎಸ್.ಅರ್.)