ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತೊಗಟೆ

ವಿಕಿಸೋರ್ಸ್ದಿಂದ

ತೊಗಟೆ - ಗಿಡಮರಗಳ ಕಾಂಡದ ಹೊರಭಾಗದ ಪದರ (ಬಾರ್ಕ್) ನೀಲಗಿರಿ ಮರ, ಸೀಬೆಮರ, ನೇರಳೆಮರ, ಮುಂತಾದವುಗಳ ತೊಗಟೆ ಸುಲಿದುಕೊಂಡಿರುವುದನ್ನು ಕಾಣಬಹುದು. ಕ್ವರ್ಯಸ್ ಎಂಬ (ಕಾರ್ಕ್ ಮರ) ಮರದಲ್ಲಿ ತೊಗಟೆ ಅತಿಮಂದವಾಗಿರುತ್ತದೆ. ಇದರಿಂದ ಬಿರಡೆಗಳನ್ನು ಮಾಡುತ್ತಾರೆ.

ಗಿಡಗಳಲ್ಲಿ ದ್ವಿತೀಯಕ ಬೆಳವಣಿಗೆ (ಸೆಕೆಂಡರಿ ಗ್ರೋತ್) ಎಂಬ ಕ್ರಿಯೆ ಜರುಗುತ್ತದೆ. ಇದರಿಂದ ಗಿಡಗಳ ಸುತ್ತಳತೆ ಹೆಚ್ಚುವುದು. ಸುತ್ತಳತೆ ಹೆಚ್ಚಿದಾಗ ಗಿಡಗಳ ಕಾರ್ಟೆಕ್ಸ್ ಭಾಗದ ಮೇಲೆ ಹೆಚ್ಚು ಒತ್ತಡ ಬಿದ್ದು ಅದು ಬೊರಿಯುವಂತಾಗುತ್ತದೆ. ಕಾರ್ಟೆಕ್ಸಿನಲ್ಲಿ ಕಾರ್ಕ್ ಕೇಂಬಿಯಮ್ ಎಂಬ ಪರಿವರ್ಧನ ಅಂಗಾಂಶ (ಮೆರಿಸ್ಟೆಮ್) ಉತ್ಪತ್ತಿಯಾಗಿ ಅದರಿಂದ ಹೊರಭಾಗದಲ್ಲಿ ಬಿರಡೆ ರೂಪಗೊಳ್ಳುವುದು. ದ್ವಿತೀಯಕ ಬೆಳವಣಿಗೆ ಹೆಚ್ಚಾಗಿರುವ ಮರಗಳಲ್ಲಿ ಕಾರ್ಕ್ ಕೇಂಬಿಯಮ್ ಕಾರ್ಟೆಕ್ಸಿನ ಆಳವಾದ ಭಾಗದಲ್ಲಿ ಉತ್ಪತ್ತಿಯಾಗುತ್ತದೆ. ಇದರಿಂದ ಹೊರಭಾಗದ ಕೋಶಗಳು ಸತ್ತು ಕಾರ್ಕಿನೊಡನೆ ಮಿಶ್ರಗೊಂಡು ತೊಗಟೆಯಾಗಿ ಮಾರ್ಪಡುವುವು. (ಎಂ.ಸಿ.ಆರ್.)