ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತ್ರೋಬಾಲ್
ತ್ರೋಬಾಲ್ - ಮಹಿಳೆಯರಿಗಾಗಿಯೇ ಮೀಸಲಾಗಿರುವ ಎಸೆಚೆಂಡಾಟ ಹಿಂದೆ ಆಡುತ್ತಿದ್ದರೆನ್ನಲಾದ ನ್ಯೂಕೂಂಬ್ ಎಂಬ ಆಟ ಹೆಚ್ಚು ಕಡಿಮೆ ಇದೇ ಮಾದರಿಯದು. 5' x 30' ವಿಸ್ತೀರ್ಣದ ಒಂದು ಅಂಗಣದಲ್ಲಿ, ನಡುವೆ ಕಟ್ಟಿರುವ ಬಲೆಯ ಮೇಲ್ಭಾಗದಿಂದ ಹಾದು ಹೋಗುವಂತೆ ಚೆಂಡನ್ನು ಎಸೆಯುವುದು ಮತ್ತು ಹಿಡಿಯುವುದು ಈ ಆಟದಲ್ಲಿ ಮುಖ್ಯ. ಈ ಆಟ ವಾಲಿಬಾಲನ್ನು ಬಲುಮಟ್ಟಿಗೆ ಹೋಲುತ್ತದಾದರೂ ಮಹಿಳೆಯರ ದೃಷ್ಟಿಯಿಂದ ಅದು ಬಹಳ ಶ್ರಮಸಾಧ್ಯವಾದ್ದು. ಆದ್ದರಿಂದ ನ್ಯೂಕೂಂಬ್ ಆಟವನ್ನು ಸೂಕ್ತ ರೀತಿಯಲ್ಲಿ ಬದಲಾಯಿಸಿ (1934) ಅದಕ್ಕೆ ತ್ರೋಬಾಲ್ ಎಂದು ಹೆಸರಿತ್ತವಳೆಂದರೆ ಮದ್ರಾಸಿನ ವೈ.ಎಂ.ಸಿ.ಎ. ಯ ಎಸ್. ಸಿ. ಬಕ್. ಹೆಚ್ಚು ಮಂದಿ ಆಟಗಾರರಿಗೆ ಅವಕಾಶವನ್ನು ಬದಲಾಗಿಸುವ ದೃಷ್ಟಿಯಿಂದ ಪ್ರತಿಯೊಂದು ಕಡೆಯಲ್ಲೂ 12 ಮಂದಿ, ಒಟ್ಟು 24 ಮಂದಿ ಆಟಗಾರರು 50'x 30' ವಿಸ್ತೀರ್ಣದಂಥ ಚಿಕ್ಕ ಅಂಗಣದಲ್ಲಿ ಓಡಾಡುತ್ತ ಆಡುವುದೆಂದರೆ ಬಲು ಕಷ್ಟವೇ ಆಗಿತ್ತು. ಹೀಗಾಗಿ 1952ರಲ್ಲಿ ವೈ. ಎಂ. ಸಿ. ಎ. ದೈಹಿಕ ಶಿಕ್ಷಣ ಕಾಲೇಜಿನ ಸಿಬ್ಬಂದಿಯವರು ಆಟದ ನಿಯಮಗಳನ್ನು ಪರಿಷ್ಕರಿಸಿ ಪ್ರತಿಯೊಂದು ಕಡೆಯಲ್ಲೂ 12 ಮಂದಿಗೆ ಬದಲಾಗಿ 9 ಮಂದಿ ಆಟಗಾರರು ಇರುವಂತೆ ಮಾಡಿದರು. ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗಾಗಿ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗಾಗಿ ಇರುವಂಥ ಕ್ರೀಡಾಂಗಣದ ಅಳತೆಯಲ್ಲಿ ಇಂದಿಗೂ ಅಲ್ಪಸ್ವಲ್ಪ ವ್ಯತ್ಯಾಸಗಳಿವೆ: ಪ್ರೌಢಶಾಲೆಯವರಿಗೆ 50'x 30' ಯ ಅಂಗಳ ಕಾಲೇಜಿನವರಿಗೆ 60' x 40' ಯ ಅಂಗಳ ಹೀಗೆ.
ಆಟದ ಕ್ರಮ ಹೀಗಿದೆ: ಅಂಗಣದ ಮಧ್ಯಭಾಗಕ್ಕೆ, ಅಂದರೆ ಅದರ ಅಗಲಕ್ಕೆ ಸಮಾಂತರವಾಗಿ ಒಂದು ಬಲೆಯನ್ನು (ನೆಟ್) ಕಟ್ಟಿರುತ್ತಾರೆ. ಬಲೆಗೆ ಎರಡೂ ಬದಿಗಳಲ್ಲಿ 3' ಅಂತರಕ್ಕೆ ಒಂದೊಂದು ಗೆರೆ ಎಳೆದಿರುತ್ತಾರೆ. ಹೀಗಾಗಿ ಒಟ್ಟು 6' ಅಗಲದ ವಲಯ ಏರ್ಪಡುತ್ತದೆ. ಈ ವಲಯವನ್ನು ತಟಸ್ಥ ವಲಯ (ನ್ಯೂಟ್ರಲ್ ಜೋನ್) ಎಂದು ಕರೆಯುವುದಿದೆ. ಈ ವಲಯದಲ್ಲಿ ಚೆಂಡು ಬಿದ್ದರೆ ಔಟ್ ಆದಂತೆಯೇ. ಅಂಗಣದ ನಡುವಿನಲ್ಲಿ ಕಟ್ಟಿರುವ ಬಲೆಯ ಎತ್ತರ ನಡುವೆ 7' ಇರಬೇಕೆಂಬ ನಿಯಮ ಉಂಟು. ಬಲೆಯ ಅಕ್ಕಪಕ್ಕಗಳಲ್ಲಿ ಅಂದರೆ ಅಂಗಳದ ಪಾಶ್ರ್ವ ಗೆರೆಯ ಹೊರಗಡೆ 1' ಆಚೆಗೆ ಎರಡು ಕಂಬಗಳಿದ್ದು ಅವಕ್ಕೆ ಬಲೆ ಕಟ್ಟಿರುತ್ತಾರೆ. ಚೆಂಡು 5ನೆಯ ನಂಬರಿನ ಅಸೋಸಿಯೇಷನ್ ಪುಟ್‍ಬಾಲ್ ಆಗಿರಬೇಕು. ಅವಕ್ಕೆ ವಾಯುವನ್ನು ತುಂಬಿದಾಗ ಅದರ ಸುತ್ತಳತೆ 27' ದಿಂದ 29' ವ್ಯಾಪ್ತಿಯಲ್ಲೇ ಇರಬೇಕು.
ಒಂದು ಸಾಲಿಗೆ ಮೂರು ಜನರಂತೆ 3 ಸಾಲುಗಳಲ್ಲಿ ಆಟಗಾರರು ನಿಲ್ಲುತ್ತಾರೆ. ಆಟ ಮುಗಿಯುವ ವರೆಗೂ ಅವರು ತಮ್ಮ ಸ್ಥಳಗಳನ್ನು ಬದಲಾಯಿಸುವಂತಿಲ್ಲ. ಸರ್ವ್ ಮಾಡಬೇಕಾದರೆ ತುದಿಗೆರೆಗಿಂತ (ಅಂಗಣದಿಂದ) ಹಿಂದೆ ಸರಿದು, ದೇಹದ ಯಾವುದೇ ಭಾಗವೂ ಗೆರೆಯನ್ನು ಮುಟ್ಟದಂತೆ ಚೆಂಡು ಬಲೆಯನ್ನು ಹಾಯುವಂತೆ ಎಸೆಯಬೇಕು. ಒಂದು ವೇಳೆ ಕಾಲೇನಾದರೂ ಗೆರೆಗೆ ತಗುಲಿದರೆ ಅದನ್ನು ಫುಟ್ ಫಾಲ್ಟ್ ಎಂದು ಪರಿಗಣಿಸಲಾಗುತ್ತದೆ. ಆಟವನ್ನು ಮೊದಲು ಪ್ರಾರಂಭಿಸುವವಳು 9ನೆಯ ಆಟಗಾರ್ತಿ. ಚೆಂಡನ್ನು ಬಲ ಅಂಗೈ ಮೇಲೆ ಹಿಡಿದುಕೊಂಡು ವಿರುದ್ಧ ಅಂಗಣದ ಯಾವುದೇ ಭಾಗಕ್ಕೆ ಬೇಕಾದರೂ ಎಸೆಯಬಹುದು. ಆ ಅಂಗಣದಲ್ಲಿ ಯಾರೇ ಆದರೂ ಅದನ್ನು ಹಿಡಿದು ಮತ್ತೆ ಎದುರು ಅಂಗಣಕ್ಕೆ ಎಸೆಯುತ್ತಾರೆ. ಚೆಂಡನ್ನು ಹಿಂತಿರುಗಿಸಿಲಾಗದೆ ಇರುವ ವರೆಗೂ ಈ ಆಟ ಸಾಗುತ್ತಲೇ ಇರುತ್ತದೆ. ಎದುರು ತಂಡದವರು ಚೆಂಡನ್ನು ಹಿಂತಿರುಗಿಸಲಾಗದಿದ್ದರೆ ಆಗ ಸರ್ವ್ ಮಾಡಿದ ತಂಡವೇ ಒಂದು ಗೆಲ್ಲಂಕವನ್ನು (ಸ್ಕೋರ್) ಗಳಿಸುತ್ತದೆ. ಸರ್ವ್ ಮಾಡುವ ತಂಡದವರು ಚೆಂಡನ್ನು ಹಿಂತಿರುಗಿಸಲಾಗದಿದ್ದರೆ ಗೆಲ್ಲಂಕ ದೊರೆಯುವುದಿಲ್ಲ. ಹೀಗಾದಾಗ ಸರ್ವ್ ಮಾಡುವ ಸರದಿ ಎದುರು ತಂಡಕ್ಕೆ ಹೋಗುತ್ತದೆ. ಇದಾದ ಅನಂತರ ಸರ್ವ್ ಮಾಡಿದ ತಂಡದವರು ಸ್ಥಳ ಬದಲಾಯಿಸಿ ಕೊಳ್ಳುತ್ತಾರೆ. ಒಂಬತ್ತನೆಯ ಆಟಗಾರ್ತಿ ಒಂದನೆಯ ಸ್ಥಾನಕ್ಕೆ ಹೋಗುತ್ತಾಳೆ. 8ನೆಯ ಆಟಗಾರ್ತಿ ಸರ್ವ್ ಮಾಡುವ ಸ್ಥಾನಕ್ಕೆ ಬರುತ್ತಾಳೆ. ಹೀಗೆ ಪ್ರತಿಯೊಬ್ಬ ಆಟಗಾರ್ತಿಯೂ ಬಲಗಡೆಯ ಒಂದು ಪಕ್ಕದ ಸ್ಥಾನಕ್ಕೆ ಹೋಗುವಳು. ಬಲಗಡೆಯ ಅತ್ಯಂತ ಕಡೆಯಲ್ಲಿರುವ ಆಟಗಾರ್ತಿ ತನ್ನ ಮುಂದಿನ ಸಾಲಿನ ಅತ್ಯಂತ ಎಡಭಾಗದ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಾಳೆ. ಸರ್ವ್ ಮಾಡುವ ಮೊದಲು ಗೆಲ್ಲಂಕವನ್ನು ಘೋಷಿಸಿ, ಆಡುತ್ತೇವೆ ಎಂದು ಹೇಳಿದ ಅನಂತರವೇ ಸರ್ವ್ ಮಾಡಬೇಕಾಗುತ್ತದೆ. ಹೀಗಾಗದಿದ್ದಲ್ಲಿ ಫಾಲ್ಟ್ ಆಗುತ್ತದೆ. ತಂಡ ಸರ್ವಿಸನ್ನು ಕಳೆದುಕೊಂಡ ಪ್ರತಿಸಲವೂ ಆ ತಂಡದ ಆಟಗಾರರು ತಮ್ಮ ಜಾಗಗಳನ್ನು ಅನುಕ್ರಮವಾಗಿ ಬದಲಾಯಿಸಿಕೊಳ್ಳಬೇಕು.
ಆಟದಲ್ಲಿ ಪಾಲ್ಟ್ ಆಗಲು ಇನ್ನೂ ಅನೇಕ ಅವಕಾಶಗಳಿರುತ್ತವೆ. ಚೆಂಡು ಎಸೆಯುವಾಗ ಒಬ್ಬಳು ಹಾರಿ ಕಾಲು ನೆಲಕ್ಕೆ ತಗಲುವ ಮುಂಚೆಯೇ ಚೆಂಡನ್ನು ಎಸೆದಿರಬೇಕು. ಇಲ್ಲದಿದ್ದರೆ ಫಾಲ್ಟ್ ಆಗುತ್ತದೆ. ಸರ್ವ್ ಮಾಡಿದ ಬಳಿಕ ಇಲ್ಲವೆ ಹಿಂತಿರುಗಿ ಬಂದ ಚೆಂಡನ್ನು ಹಿಡಿದು, ಅದನ್ನು ಬೇರೊಬ್ಬ ಆಟಗಾರ್ತಿ ಮತ್ತೆ ಎಸೆಯುಬಹುದು. ಆದರೆ ಚೆಂಡು ಮಾತ್ರ ನೆಲಕ್ಕೆ ಬಿದ್ದಿರಬಾರದು ಚೆಂಡನ್ನು ಒಮ್ಮೆಲೇ ಎರಡು ಅಥವಾ ಮೂರು ಆಟಗಾರ್ತಿಯರು ಮುಟ್ಟಬಹುದು. ಆದರೆ ಒಬ್ಬಳೇ ಎರಡು ಸಲ ಮುಟ್ಟಬಾರದು. ಚೆಂಡು ಬಲೆಯಿಂದ ಆಚೆಗೆ ಹೋಗಲು ಬೇರೊಬ್ಬ ಆಟಗಾರ್ತಿ ಸಹಾಯ ಮಾಡಬಾರದು. ಹಾಗೆ ಮಾಡಿದರೆ ಫಾಲ್ಟ್ ಆಗುತ್ತದೆ. ಬಲೆಗೆ ಚೆಂಡು ತಗುಲಿದರೆ, ಆಗ ಅದು ನೆಟ್‍ಬಾಲ್ ಫಾಲ್ಟ್ ಆಗುತ್ತದೆ. ಬಲೆಗೆ ಚೆಂಡು ತಗುಲಿದರೆ, ಆಗ ಅದು ನೆಟ್‍ಬಾಲ್ ಫಾಲ್ಟ್ ಆಗುತ್ತದೆ. ಹಿಂತಿರುಗುವಾಗ ಬಲೆಗೆ ತಗುಲಿದರೆ ನೆಟ್‍ಬಾಲ್ ಫಾಲ್ಟ್ ಅಲ್ಲ. ಬಲೆಯ ಆಚೀಚೆ ಇರುವ ಗೆರೆಗಳ ಮೇಲೆ ಬಿದ್ದರೆ ಫಾಲ್ಟ್ ಆಗುವುದಿಲ್ಲ. ಫಾಲ್ಟ್ ಆದಾಗ ಚೆಂಡು ಎದುರು ತಂಡಕ್ಕೆ ಸೇರಬೇಕು. ಎದುರು ತಂಡವರು ಪಾಲ್ಟ್ ಮಾಡಿದರೆ ಆಗ ಸರ್ವ್ ಮಾಡಿದ ತಂಡಕ್ಕೆ ಒಂದು ಗೆಲ್ಲಂಕ ಲಭಿಸುವುದು. ಆಟಗಾರ್ತಿಗೆ ಚೆಂಡು ತಗುಲಿದರೋ ಇಲ್ಲವೇ ಆಕೆಯೇ ಅದನ್ನು ಮುಟ್ಟಿದರೂ ಫಾಲ್ಟ್ ಆಗುವುದಿಲ್ಲ. ಎರಡು ತಂಡದವರೂ 14 ಗೆಲ್ಲಂಕಗಳನ್ನು ಗಳಿಸಿದರೆ ಆಟ ಸಮವಾದಂತೆ. ಆಗ ಸರ್ವ್ ಮಾಡುವವರು ಸಮ ಆಡುತ್ತೇವೆ ಎಂದು ಕೂಗು ಹಾಕಬೇಕು; ಒಂದಾದ ಮೇಲೊಂದರಂತೆ 2 ಗೆಲ್ಲಂಕಗಳನ್ನು ಪಡೆಯಬೇಕು. ಆಟ ಕಳೆದುಕೊಂಡರೆ ಸರ್ವ್ ಮಾಡುವ ಅವಕಾಶ ಎದುರು ತಂಡಕ್ಕೆ. ಅವರೂ ಇದೇ ರೀತಿ ಕೂಗಿ 2 ಗೆಲ್ಲಂಕಗಳನ್ನು ಪಡೆಯಬೇಕು. ಹೀಗೆ ಯಾವುದಾದರೊಂದು ತಂಡ 2 ಗೆಲ್ಲಂಕಗಳನ್ನು ಪಡೆಯವ ವರೆಗೂ ಆಟ ಮುಂದುವರಿಯುತ್ತದೆ. ಒಂದು ಆಟಕ್ಕೆ 15 ಗೆಲ್ಲಂಕಗಳಿರುತ್ತವೆ. ಆಟ ನಡೆಸಲು ಒಬ್ಬ ಅಂಪೈರು ಮತ್ತು ಇಬ್ಬರು ಲೈನ್‍ಮೆನ್‍ಗಳಿರುತ್ತಾರೆ. ತ್ರೋಬಾಲ್ ಟೂರ್ನಮೆಂಟುಗಳಲ್ಲಿ ಸಾಮಾನ್ಯವಾಗಿ ಮೂರು ಆಟಗಳನ್ನಾಡಿಸಿ ಎರಡರಲ್ಲಿ ಗೆದ್ದವರನ್ನು ವಿಜಯಿಗಳೆಂದು ಘೋಷಿಸುತ್ತಾರೆ.
ಭಾರತದ ತಮಿಳುನಾಡಿನಲ್ಲಿ ಈ ಆಟ ಕಳೆದ ಐವತ್ತು ವರ್ಷಗಳಿಂದಲೂ ನಡೆದು ಬರುತ್ತದೆ. ಸಂಪೂರ್ಣವಾಗಿ ಸ್ವದೇಶಿಯದೇ ಆಗಿರುವ ಈ ಆಟವನ್ನು ಸಾಮಾನ್ಯವಾಗಿ ಶಾಲಾಕಾಲೇಜುಗಳಲ್ಲೂ ಹವ್ಯಾಸಿ ಆಟಪಾಟಗಳ ಸಂಘದ ಆಶ್ರಯದಲ್ಲೂ ಆಡಿಸುವುದುಂಟು. ವಿಶ್ವವಿದ್ಯಾಲಯಗಳ ಕಾಲೇಜು ಬಾಲಕಿಯರಿಗಾಗಿ ಅಂತರ ಕಾಲೇಜು ಚಾಂಪಿಯನ್ ಷಿಪ್ ಸ್ಮರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಮದ್ರಾಸಿನ ವೈ. ಎಂ. ಸಿ. ಎ. ಪ್ರಕಟಿಸಿರುವ ಬುಕ್ ಆಫ್ ರೂಲ್ಸ್ ಆಫ್ ಗೇಮ್ಸ್ ಎಂಬ ಪುಸ್ತಕದಲ್ಲಿ ಈ ಆಟಕ್ಕೆ ಸಂಬಂಧಿಸಿದ ನಿಯಮಗಳು ಸಿಕ್ಕುತ್ತವೆ. (ಎಂ.ಎ.ಎಸ್.ಎಚ್.)