ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಥನ್ಬುರೀ

ವಿಕಿಸೋರ್ಸ್ದಿಂದ

ಥನ್‍ಬುರೀ ದಕ್ಷಿಣ ಮಧ್ಯ ಥೈಲೆಂಡಿನಲ್ಲಿದ್ದ ಒಂದು ಪ್ರಾಂತ್ಯ. ಇದರ ಒಂದು ನಗರ. ಹಳೆಯ ಪ್ರಾಂತ್ಯದ ವಿಸ್ತೀರ್ಣ 450 ಚ. ಕಿಮೀ. (175 ಚ. ಮೈ.) ಜನಸಂಖ್ಯೆ 9,19,000 (1970). ಥೈಲೆಂಡ್ ಖಾರಿಯ ಮೇಲಣ ಕರಾವಳಿಯನ್ನೊಳಗೊಂಡ ಈ ಪ್ರದೇಶದ ನಡುವೆ ಚಾವ್ ಫ್ರೈಯ ನದಿ ಹರಿಯುತ್ತದೆ. ಈ ಪ್ರದೇಶದಲ್ಲಿ ಹಲವು ನಾಲೆಗಳೂ ಇವೆ. ಇಲ್ಲಿಯ ಪ್ರಮುಖ ಬೆಳೆ ಬತ್ತ, ಹಣ್ಣುಗಳನ್ನೂ ಬೆಳೆಯುತ್ತಾರೆ. ಥನ್ ಬುರೀ, ಟಾಲಿಂಗ್ ಚಾನ್, ಬಾಂಗ್ ಖುನ್ ಥಿಯಾನ್ - ಇವು ಇಲ್ಲಿಯ ಪ್ರಮುಖ ನಗರಗಳು.

ಥನ್ ಬುರೀ ನಗರ ಪ್ರಾಂತೀಯ ಮುಖ್ಯ ಪಟ್ಟಣ. ಜನಸಂಖ್ಯೆ 6,95,253 (1970) ಇದು ಚಾವ್ ಫ್ರೈಯ ನದಿಯ ಬಲದಂಡೆಯ ಮೇಲೆ, ಬ್ಯಾಂಗ್‍ಕಾಕ್‍ಗೆ ಇದಿರಾಗಿದೆ. ಇದು ಈಗ ಬ್ಯಾಂಗ್‍ಕಾಕ್‍ನ ಒಂದು ಉಪನಗರ. ಇದಕ್ಕೂ ಬ್ಯಾಂಗ್‍ಕಾಕಿಗೂ ನಡುವೆ ಮೂರು ಸೇತುವೆಗಳು ಇವೆ. ಬ್ಯಾಂಗ್‍ಕಾಕನ್ನು ಚಾವ್ ಫ್ರೈಯದ ಎಡದಂಡೆಯ ಮೇಲೆ ಸ್ಥಾಪಿಸುವ ಮುನ್ನ ಮತ್ತು ಅಯೂದಿಯಾ ಆಡಳಿತದ ಅವನತಿಯ ಅನಂತರ, 1767 - 1782ರಲ್ಲಿ ಇದು ಥೈಲೆಂಡಿನ ರಾಜಧಾನಿಯಾಗಿತ್ತು. 1972 ರಲ್ಲಿ ಥನ್ ಬುರೀ ಮತ್ತು ಬ್ಯಾಂಗ್‍ಕಾಕ್‍ಗಳನ್ನು ಕೂಡಿಸಿ ಥನ್ ಬುರೀ - ಬ್ಯಾಂಗ್‍ಕಾಕ್ ನಗರಪ್ರಾಂತ್ಯ ರಚಿಸಲಾಯಿತು. ಇದೊಂದು ಪ್ರಮುಖ ಕೈಗಾರಿಕಾ ಕೇಂದ್ರ. ನದಿಯ ದಂಡೆಯ ಉದ್ದಕ್ಕೂ ಅನೇಕ ಮರ ಕೊಯ್ಯುವ ಮತ್ತು ಮರಗೆಲಸದ ಕಾರ್ಖಾನೆಗಳು, ಅಕ್ಕಿ ಗಿರಣಿಗಳು ಮುಂತಾದ ಕೈಗಾರಿಕೆಗಳಿವೆ. ಇಲ್ಲಿ ಯುದ್ಧ ಸಾಮಗ್ರಿಗಳ ಉಗ್ರಾಣವಿದೆ. ಥನ್ ಬುರೀಯ ಹೊರವಲಯಗಳಲ್ಲಿ ಹಣ್ಣಿನ ತೋಟಗಳಿವೆ. ಇದೊಂದು ನೌಕಾಪಡೆಯ ಕೇಂದ್ರ. ಇಲ್ಲಿಂದ ಕಚ್ಚಾಸಾಮಗ್ರಿ, ಮರದ ಸಾಮಾನು, ಅಕ್ಕಿ ಮುಂತಾದ ಧಾನ್ಯಗಳು ರಫ್ತಾಗುತ್ತವೆ.

ಥನ್ ಬುರೀಯಲ್ಲಿ ನದಿಯ ದಂಡೆಯ ಮೇಲೆ ಪ್ರಖ್ಯಾತ ವಾಟ್ ಅರುಣ ದೇವಸ್ಥಾನ ಸಮೂಹವಿದೆ. ಇದು ತುಂಬಾ ಪ್ರಸಿದ್ಧವಾದ್ದು. ಥನ್ ಬುರೀಯಲ್ಲಿ ನೌಕಾ ಶಾಲೆಯೂ ಆಸ್ಪತ್ರೆಗಳೂ ಇವೆ. ಇದು ಮಹೀದಲ್ ವಿಶ್ವವಿದ್ಯಾಲಯ ಕೇಂದ್ರ. ಥನ್ ಬುರೀ ತಾಂತ್ರಿಕ ಸಂಸ್ಥೆ ಇನ್ನೊಂದು ಪ್ರಮುಖ ಶಿಕ್ಷಣ ಸಂಸ್ಥೆ. ಮಲೇಷಿಯದಿಂದ ಇಲ್ಲಿಗೆ ರೈಲುಮಾರ್ಗವಿದೆ. (ಕೆ.ಆರ್.)