ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಂಡಿ

ವಿಕಿಸೋರ್ಸ್ದಿಂದ

ದಂಡಿ ಕ್ರಿ. ಶ. ಸು. 7ನೆಯ ಶತಮಾನ. ಸಂಸ್ಕøತ ಸಾಹಿತ್ಯದಲ್ಲಿ ಪ್ರಸಿದ್ಧನಾದ ಕವಿ, ಲಾಕ್ಷಣಿಕ. ಮೂರು ಪ್ರಸಿದ್ಧ ಪ್ರಬಂಧಗಳ ಕವಿ ಎಂದು ಯಶಸ್ಸು ಗಳಿಸಿದ್ದಾನೆ. ಈತನ ಕಾವ್ಯಾದರ್ಶ ಅಲಂಕಾರ ಗ್ರಂಥ ; ದಶಕುಮಾರಚರಿತ ಗದ್ಯಕಾವ್ಯ. ಆವಂತಿಸುಂದರೀ ಕಥಾ ಮತ್ತು ದ್ವಿಸಂಧಾನ ಮಹಾಕಾವ್ಯಗಳು ಈತನದೇ ಎಂದು ಪ್ರತೀತಿ. ಈತನ ವಿಷಯ ನಮಗೆ ಹೆಚ್ಚು ತಿಳಿದಿಲ್ಲ. ಇವನ ಗ್ರಂಥದಲ್ಲಿ ಬರುವ ಉದಾಹರಣೆಗಳಲ್ಲಿ ಮಲಯಾನಿಲ, ಕಾವೇರಿನದಿ. ಕಾಂಚೀ ಪಟ್ಟಣ, ಚೋಲ - ಈ ಮಾತುಗಳು ಕಂಡುಬಂದಿರುವುದರಿಂದ ಈತ ದಕ್ಷಿಣ ಭಾರತದವನೂ ಕನ್ನಡಿಗನೂ ಆಗಿದ್ದಿರಬಹುದೆಂದು ವಿದ್ವಾಂಸರು ಊಹಿಸುತ್ತಾರೆ. ಈತನ ಕಾವ್ಯಾದರ್ಶದಲ್ಲಿ ಭಾಮಹನ ಮತ ಖಂಡಿಸಲ್ಪಟ್ಟಂತೆ ತೋರುವುದರಿಂದ ಭಾಮಹನಿಗಿಂತ ಈತ ಆರ್ವಾಚೀನನೆಂದು ಹಲವರ ಮತ. ಕಾವ್ಯಾದರ್ಶದಲ್ಲೂ ಭಾಮಹನ ಕಾವ್ಯಾಲಂಕಾರದಲ್ಲೂ ಕೆಲವು ವಾಕ್ಯಗಳು ಚಾಚೂ ತಪ್ಪದೇ ಬರುತ್ತವಾಗಿ ಇವರಿಬ್ಬರ ಪೌರ್ವಾಪುರ್ಯದ ವಿಷಯದಲ್ಲಿ ದೊಡ್ಡ ಚರ್ಚೆಯೇ ನಡೆದಿದೆ. ಎರಡು ಕಡೆಗೂ ಪ್ರಬಲರಾದ ವಿದ್ವಾಂಸರೇ ವಾಲಿದ್ದಾರಾಗಿ ಈ ವರೆಗೂ ಅದು ಚರ್ಚೆಯಲ್ಲೇ ನಿಂತಿದೆ.

ದಂಡಿಯ ಕಾಲ ಕ್ರಿ. ಶ. ಆರನೆಯ ಶತಮಾನವೆಂದು ಮಾಕ್ಸ್ ಮುಲರ್, ನೀಬರ್, ಮೆಕ್‍ಡಾನಲ್ ಮೊದಲಾದ ಪ್ರಾಶ್ಚಾತ್ಯ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಈಗಿನ ಕೆಲವು ಪಂಡಿತರು ಕ್ರಿ. ಶ. 660 -680 ಎಂದು ಊಹಿಸಿದ್ದಾರೆ. ಕ್ರಿ. ಶ. 660 ರ ಸುಮಾರಿಲ್ಲಿ ಜೀವಿಸಿದ್ದ ವಿಜ್ಜಿಕೆಯೆಂಬ ಕವಯಿತ್ರಿ ದಂಡಿಯ ಸರ್ವಶುಕ್ಲಾ ಸರಸ್ವತೀ ಎಂಬ ಪ್ರಸಿದ್ಧವಾದ ಮಾತನ್ನು ವಿಮರ್ಶಿಸಿದ್ದಾಳೆ. ಬಹುಶಃ ಕ್ರಿ. ಶ. ಏಳನೆಯ ಶತಮಾನದಲ್ಲೇ ಭಾಮಹ, ದಂಡಿ ಇಬ್ಬರೂ ಹೆಚ್ಚು ಕಾಲದ ಅಂತರವಿಲ್ಲದೇ ಜೀವಿಸಿದ್ದಿರಬಹುದು.

ಕಾವ್ಯಾದರ್ಶ : ಇದರಲ್ಲಿ ಮೂರು ಪರಿಚ್ಛೇದಗಳೂ ಒಟ್ಟು 660 ಶ್ಲೋಕಗಳೂ ಇವೆ. ಕೆಲವು ಪಂಡಿತರು ನಾಲ್ಕು ಪರಿಚ್ಛೇದಗಳಿವೆಯೆಂದೂ 663 ಒಟ್ಟು ಶ್ಲೋಕಗಳಿವೆಯೆಂದೂ ಹೇಳುತ್ತಾರೆ.

ಮೊದಲ ಪರಿಚ್ಛೇದದಲ್ಲಿ ಕಾವ್ಯಲಕ್ಷಣ ಕಾವ್ಯವಿಭಾಗಗಳು ಮತ್ತು ಅವುಗಳ ವರ್ಣನೆಗಳೂ ಸಾಹಿತ್ಯದ ವಿವಿಧ ಪ್ರಕಾರಗಳೂ ವೈದರ್ಭ ಗೌಡ ರೀತಿಗಳೂ ಹತ್ತು ಗುಣಗಳೂ ಅನುಪ್ರಾಸದ ಲಕ್ಷಣೋದಹರಣೆಗಳೂ ಉಕ್ತವಾಗಿವೆ. ಕಾವ್ಯ ನಿರ್ಮಾಣಕ್ಕೆ ಪ್ರತಿಭೆ ಶ್ರುತಿ ಮತ್ತು ಅಭಿಯೋಗ ಅವಶ್ಯಕವೆಂದೂ ಈತನ ಹೇಳಿಕೆ.

ಎರಡನೆಯ ಪರಿಚ್ಚೇದದಲ್ಲಿ ಅಲಂಕಾರ ಪಡೆದ ಲಕ್ಷಣವೂ 35 ಅರ್ಥಾಲಂಕಾರಗಳೂ ಅವುಗಳ ಲಕ್ಷಣ ಮತ್ತು ಉದಾಹರಣೆಗಳೂ ಇವೆ.

ಮೂರನೆಯ ಪರಿಚ್ಚೇದದಲ್ಲಿ ಶಬ್ದಾಲಂಕಾರಕ್ಕೆ ಸಂಬಂಧಿಸಿದ ಯಮಕಪ್ರಪಂಚದ ಸವಿಸ್ತಾರಕಥನ ಗೋಮೂತ್ರಿಕವೇ ಮೊದಲಾದ ಚಿತ್ರಬಂಧಗಳ ಲಕ್ಷಣ ಮತ್ತು ಉದಾಹರಣೆಗಳೂ ಹದಿನಾರು ರೀತಿಯ ಪ್ರಹೇಳಿಕೆಗಳೂ ಹತ್ತು ವಿಧದ ದೋಷಗಳ ಸೋದಾಹರಣವಿನ್ಯಾಸವೂ ಕಂಡುಬರುತ್ತದೆ.

ಒಟ್ಟು ಗ್ರಂಥದಲ್ಲಿ ರೀತಿ ಮತ್ತು ಅಲಂಕಾರ ಪ್ರಸ್ಥಾನಗಳು ಮಿಳಿತಗೊಂಡು ಇವೆ. ಗುಣಗಳ ಮತ್ತು ಅಲಂಕಾರಗಳ ಪರಿಪೂರ್ಣ ವಿವೇಚನೆ ಇದೆ. ಕಾವ್ಯಾದರ್ಶದ ಶೈಲಿ ಸುಲಲಿತವೂ ಮನೋಜ್ಷವೂ ಆಗಿ ಭಾಮಹನ ಶೈಲಿಗಿಂತ ಒಂದು ಕೈ ಮೇಲಾಗಿಯೇ ಇದೆ. ಕವಿತಾ ಸಾಮಥ್ರ್ಯದಲ್ಲಿ ದಂಡಿ ಅಸಾಮಾನ್ಯ. ಲಕ್ಷ್ಯ ಶ್ಲೋಕಗಳಲ್ಲಿ ಕೆಲವನ್ನು ಬಿಟ್ಟರೆ ಎಲ್ಲವೂ ಅವನಿಂದಲೇ ರಚಿತವಾದುವು. ಕೆಲವು ಶ್ಲೋಕಗಳಂತೂ ಅತಿ ರಮಣೀಯವಾಗಿವೆ ಮತ್ತು ತುಂಬ ಔಚಿತ್ಯದಿಂದ ಕೂಡಿವೆ. ಕಾವ್ಯಾದರ್ಶದಲ್ಲಿ ಪೂರ್ವಾಚಾರ್ಯರ ಮತ್ತು ಪೂರ್ವ ಸೂರಿಗಳಾ ಸ್ಮರಣೆಯಿದೆ. ಛಂದೋವಿಚಿತಿ, ಬೃಹತ್ಕಥೆ, ಸೇತುಬಂಧ ಮೊದಲಾದ ಗ್ರಂಥಗಳ ಉಲ್ಲೇಖವೂ ಇದೆ. ದಂಡಿಯ ಇತರಗ್ರಂಥಗಳ ವಿಷಯದಲ್ಲಿ ವಿದ್ವಾಂಸರಲ್ಲಿ ಒಮ್ಮತವಿಲ್ಲ.

ಕಾವ್ಯಾದರ್ಶಕ್ಕೆ ಹಲವು ಸಂಸ್ಕøತ ವ್ಯಾಖ್ಯಾನಗಳಿವೆ. ಆಂಗ್ಲ ಭಾಷಾಂತರವೂ ಜರ್ಮನ್ ಭಾಷಾಂತರವೂ ಇದೆ.ಸಂಸ್ಕøತ ವ್ಯಾಖ್ಯಾನಗಳಲ್ಲಿ ಮುಖ್ಯವಾದುವು ಇವು : 1. ಕರಣವಾಚಸ್ಪತಿಯ ವ್ಯಾಖ್ಯಾನ, 2. ಹೃದಯಂಗಮಾ ಎಂಬ ಅಜ್ಞಾತಕರ್ತೃವಿನ ಟೀಕೆ, 3. ಸಿಂಹಳದ ರತ್ನಶ್ರೀಜಾನನ ರತ್ನಶ್ರೀ ವ್ಯಾಖ್ಯಾನ, 4. ಮಾರ್ಜನ ಎಂಬ ಟೀಕೆ, 5. ಯಾಮನರ ವ್ಯಾಖ್ಯಾನ, 6. ಕೃಷ್ಣಕಿಂಕರ ತರ್ಕವಾಗೀಣನ ಕಾವ್ಯತತ್ತ್ವ ವಿವೇಚನ ಕೌಮುದೀ, 7. ಮಲ್ಲಿನಾಥನ ವೈಮಲ್ಯ ವಿಧಾಯಿನೀ, 8. ವಾದಿಘಂಘಾಲನ ಶ್ರುತಾನುಪಾಲಿನೀ.

ಕಾವ್ಯ ಕಲಾಯುಗದಲ್ಲಿ ಭಾಮಹ ಅಲಂಕಾರ ಪಂಥ ಪ್ರವರ್ತಕನೆಂದೂ ದಂಡಿ ಗುಣಪಂಥವರ್ತಕನೆಂದೂ ಪ್ರತೀತಿ ಇದೆ. ದಂಡಿನಃ ಪದಲಾಲಿತ್ಯಂ ಎಂಬ ಮಾತು ಅವನ ಶೈಲಿಯನ್ನು ಕುರಿತುದಾಗಿದೆ.

ಕನ್ನಡ ಕವಿರಾಜಮಾರ್ಗಕಾರನ ಮೇಲೆ ದಂಡಿಯ ಕಾವ್ಯಾದರ್ಶದ ಪ್ರಭಾವ ಸಾಕಷ್ಟು ಆಗಿದೆ. (ಜಿ.ಎಸ್.)