ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಮ
ದಮ ಒಬ್ಬ ರಾಜಪುತ್ರ. ಸೌರವಂಶದ ಮರುತ್ತನ ಮಗ ನರಿಷ್ಯಂತನಿಗೆ ಬಾಭ್ರವ್ಯಪುತ್ರಿ ಇಂದ್ರ ಸೇನೆಯಲ್ಲಿ ಜನಿಸಿದವ. ಒಂಬತ್ತು ವರ್ಷಕಾಲ ತಾಯಿಯ ಗರ್ಭದಲ್ಲಿದ್ದು ಆಕೆಗೆ ದಮನ ಶಕ್ತಿಯನ್ನು ಅಭ್ಯಾಸಮಾಡಿಸಿದುದರಿಂದ ಈತನಿಗೆ ದಮನೆಂದು ಹೆಸರಾಯಿತು. ಅಸುರ ಚಕ್ರವರ್ತಿಯಾದ ವೃಷಪರ್ವನಿಂದ ಧನುರ್ವೇದಸಾರವನ್ನು ವಸಿಷ್ಠಪುತ್ರ ಶಕ್ತಿಮುನಿಯ ಮೂಲಕ ವೇದವೇದಾಂಗಗಳನ್ನು ಗಂಧಮಾದನ ಪರ್ವತದಲ್ಲಿದ್ದ ಅಷ್ರ್ಟಿಷೇಣ ಮುನಿಯ ಮೂಲಕ ಯೋಗ ರಹಸ್ಯಗಳನ್ನು ಅರಿತ ಈತ ಸಕಲ ಗುಣಭೂಷಿತನಾದ. ದಶಾರ್ಣ ದೇಶಾಧಿಪತಿ ಚಾರುವರ್ಮನ ಪುತ್ರಿ ಸಮನೆ ಸ್ವಯಂವರದಲ್ಲಿ ಈತನನ್ನು ಮೆಚ್ಚಿ ವರಿಸಿದಳು. ಸ್ವಯಂವರಕ್ಕೆ ಬಂದಿದ್ದ ಮದ್ರರಾಜಪುತ್ರ ಮಹಾನಂದ ವಿದರ್ಭದೇಶದ ವಪುಷ್ಮಂತ ಮೊದಲಾದ ರಾಜಪುತ್ರರು ಆಕೆಯನ್ನು ಅಪಹರಿಸಿದರು. ಆಗ ದಮ ಇದು ಧರ್ಮವೋ ಅಧರ್ಮವೋ ಸಭೆಯೇ ನಿರ್ಧರಿಸಲಿ ಎಂದು ಪ್ರಶ್ನಿಸಲಾಗಿ ಸಮನೆಯ ತಂದೆ ಚಾರುವರ್ಮ ಕನ್ನೆ ವರಣಮಾಲಿಕೆ ಹಾಕಿದ ಕ್ಷಣದಿಂದ ಆಕೆ ಗೃಹಿಣಿಯಾಗುವಳಾದುದರಿಂದ ಸುಮನೆ ದಮನ ಪತ್ನಿ ಎಂದು ನಿರ್ಣಯ ಕೊಟ್ಟ. ಕೂಡಲೇ ದಮ ರಾಜಪುತ್ರರನ್ನೆಲ್ಲ ಸೋಲಿಸಿ ಸುಮನೆಯನ್ನು ವಿವಾಹ ಮಾಡಿಕೊಂಡು ಊರಿಗೆ ಬಂದ.
ಕೆಲವು ಕಾಲ ಕಳೆದ ಮೇಲೆ ನರಿಷ್ಯಂತ ದಮನಿಗೆ ರಾಜ್ಯ ವಹಿಸಿಕೊಟ್ಟು ತಪಸ್ಸಿಗೆ ತೊಡಗಿದ್ದ ಸಮಯದಲ್ಲಿ ಬೇಟೆಗೆಂದು ಅರಣ್ಯಕ್ಕೆ ಬಂದ ವಪುಷ್ಮಂತ ನರಿಷ್ಯಂತನನ್ನು ನೋಡಿ ಅತ ತನ್ನ ಹಗೆಯ ತಂದೆಯೆಂದು ತಿಳಿದು ಆತನನ್ನು ಕೊಂದ. ಇಂದ್ರಸೇನ ಮಗನಿಗೆ ವಿಷಯ ತಿಳಿಸಿ ಸಹಗಮನ ಮಾಡಿದಳು. ದಮ ದಂಡೆತ್ತಿಹೋಗಿ ವಪುಷ್ಮಂತನನ್ನು ಕೊಂದು ಆತನ ರಕ್ತದಿಂದಲೇ ತಂದೆ ತಾಯಿಗಳಿಗೆ ತರ್ಪಣಕೊಟ್ಟು ಸೇಡು ತೀರಿಸಿಕೊಂಡ. ಹೀಗೆ ಶೂರ, ವಿದ್ಯಾವಂತ ಧರ್ಮಪಕ್ಷಪಾತಿ, ಸೇಡಿಗೆ ಸೇಡು ತೀರಿಸುವ ಪ್ರತೀಕಾರಿಯಾಗಿ ದಮನ ಪಾತ್ರ ಮಾರ್ಕಂಡೇಯಪುರಾಣದಲ್ಲಿ ಮೂಡಿದೆ. (ಆರ್.ಎನ್.ವಿ.)