ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಮಯಂತಿ
ದಮಯಂತಿ ಮಹಾಭಾರತದ ಅರಣ್ಯಪರ್ವದಲ್ಲಿ ಬರುವ ನಳೋಪಾಖ್ಯಾನದ ನಾಯಕಿ. ವಿದರ್ಭದ ದೊರೆ ಭೀಮರಾಜನ ಮಗಳು. ದಮನೆಂಬ ಮುನಿಯ ವರಪ್ರಸಾದದಿಂದ ಹುಟ್ಟಿದವಳು. ದಮ, ದಮನ ದಾಂತರು ಸೋದರರು. ನಿಷಧ ದೇಶದ ದೊರೆ ನಳ ಮತ್ತು ದಮಯಂತಿಯರು ತಮ್ಮ ಅಪ್ರತಿಮ ಸೌಂದರ್ಯ, ಗುಣಾತಿಶಯಗಳನ್ನು ಪರಸ್ಪರ ಕೇಳಿ ಒಬ್ಬರನ್ನೊಬ್ಬರು ಒಲಿದರು. ಸ್ವಯಂವರದಲ್ಲಿ ದೇವತೆಗಳನ್ನೂ ತಿರಸ್ಕರಿಸಿದ ದಮಯಂತಿ ತಾನು ದೃಢವಾಗಿ ಪ್ರೀತಿಸಿದ ನಳನನ್ನು ವರಿಸಿದಳು. ಮುಂದೆ ಕೆಲವು ವರ್ಷ ಎಣೆಯಿಲ್ಲದ ಸುಖದಿಂದಿದ್ದು ಇಂದ್ರಸೇನ ಮತ್ತು ಇಂದ್ರಸೇನೆ ಎಂಬ ಮಕ್ಕಳನ್ನೂ ಪಡೆದಳು. ಕಲಿಯ ಕ್ರೂರ ದೃಷ್ಟಿಗೆ ಒಳಗಾದ ನಳ ತನ್ನ ಸರ್ವಸ್ವವನ್ನೂ ಜೂಜಿನಲ್ಲಿ ಕಳೆದುಕೊಂಡು ಅರಣ್ಯವನ್ನು ಹೊಕ್ಕಾಗ ತಂದೆಯ ಮನೆಗೆ ಹೋಗಲು ಒಪ್ಪದ ಈಕೆ ಆತನನ್ನು ಹಿಂಬಾಲಿಸಿದಳು. ನಳನಾದರೋ ಮನಸ್ಸಿಲ್ಲದ ಮನಸ್ಸಿನಿಂದ ಈಕೆಯನ್ನು ಕಾಡಿನಲ್ಲಿ ತೊರೆದು ಹೊರಟು ಹೋದ. ಅಗ ಈಕೆ ತಂದೆಯ ಮನೆಯನ್ನು ಸೇರಬೇಕಾಯಿತು. ಕೊನೆಗೊಮ್ಮೆ ಋತುಪರ್ಣನೆಂಬ ದೊರೆಗೆ ಸಾರಥಿಯಾಗಿದ್ದ ಬಾಹುಕನೇ ನಳನೆಂಬ ಅನುಮಾನ ಬರಲಾಗಿ ಈಕೆ ಎರಡನೆಯ ಸ್ವಯಂವರದ ನೆಪದಲ್ಲಿ ಅಲ್ಲಿಗೆ ಕರೆಸಿ ಅವನನ್ನು ಗುರುತಿಸಿ ಅವನೊಡನೆ ಕಳೆದುಕೊಂಡ ಸೌಭಾಗ್ಯಗಳೆಲ್ಲವನ್ನೂ ಮರಳಿ ಪಡೆದಳು.
ಒಂದು ಕಥೆಯ ಪ್ರಕಾರ ದಮಯಂತಿ ಒಬ್ಬ ಬೇಡಿತಿ. ಇವಳ ಪ್ರೇಮವನ್ನು ಒರೆಹಚ್ಚಿ ನೋಡಲು ಪರಮೇಶ್ವರ ಒಮ್ಮೆ ಯತಿವೇಷದಲ್ಲಿ ಬಂದು ಆಶ್ರಯ ಬೇಡಿದ. ಉಚಿತ ಶುಶ್ರೂಷೆ ಮಾಡಿದ ದಮಯಂತಿ ಆ ರಾತ್ರೆ ಯತಿಯನ್ನು ಅಂಗಳದಲ್ಲಿ ಮಲಗಲು ಹೇಳಿದಳು. ಯತಿ ಅದಕ್ಕೆ ಒಪ್ಪಲಿಲ್ಲ. ಆಗ ದಮಯಂತಿ ತಾನು ತನ್ನ ಗಂಡ ಅಂಗಳದಲ್ಲಿ ಮಲಗುವುದಾಗಿಯೂ ಯತಿ ಒಳಗೆ ಮಲಗಬಹುದೆಂದೂ ಸೂಚಿಸಿದಳು. ಯತಿ ಒಬ್ಬನೇ ಒಳಗೆ ಮಲಗಲು ನಿರಾಕರಿಸಿದ. ಈ ಪರಿಸ್ಥಿತಿಯಲ್ಲಿ ಗಂಡನೊಬ್ಬನೆ ಗುಡಿಸಲ ಹೊರ ಅಂಗಳದಲ್ಲಿ ಮಲಗಬೇಕಾಯಿತು. ದುರದೃಷ್ಟದಿಂದ ಅಂದು ರಾತ್ರಿ ಹುಲಿಯೊಂದು ಬಂದು ಗಂಡನನ್ನು ತಿಂದುಹಾಕಿತು. ಮಾರನೆಯ ಬೆಳಗ್ಗೆ ಇದನ್ನು ತಿಳಿದ ಯತಿ ಬಹುವಾಗಿ ದುಃಖಿಸುತ್ತಿರಲು ದಮಯಂತಿ ಅವನನ್ನು ಸಮಾಧಾನ ಪಡಿಸಿ ಪತಿಯೊಡನೆ ಸಹಗಮನಕ್ಕೆ ಸಿದ್ಧಳಾದಳು. ಆಗ ಆ ಸತಿಪತಿಯರ ಪ್ರೇಮಕ್ಕೆ ಮೆಚ್ಚಿದ ಈಶ್ವರ ನಿಜರೂಪವನ್ನು ತೋರಿ ಅವರನ್ನು ಹರಸಿದ.
ದ್ರೌಪದಿ ತನ್ನ ಹಿಂದಿನ ಜನ್ಮದಲ್ಲಿ ನಾಲಾಯಿನಿಯಾಗಿದ್ದಳೆಂಬ ಮಹಾ ಭಾರತದ ಉಲ್ಲೇಖವನ್ನು ಗಮನಿಸಿ ಈ ನಾಲಾಯಿನಿಯೇ ದಮಯಂತಿಯಾಗಿರಬಹುದೆಂಬ ಒಂದು ಊಹೆ ಇದೆ.
ಅಪ್ರತಿಮ ಸುಂದರಿಯೂ ಉನ್ನತಗುಣಗಳ ಗಣಿಯೂ ಆದ ದಮಯಂತಿಯ ಪ್ರೀತಿ ಅಚಲವಾದದ್ದು. ಪ್ರೇಮ, ತ್ಯಾಗ, ಶೀಲ ಈಕೆಯ ಕಥೆಯ ಜೀವಾಳ. (ನೋಡಿ- ನಳ-1) (ಡಿ.ವಿ.)