ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದರ್ಭೆ

ವಿಕಿಸೋರ್ಸ್ದಿಂದ
Jump to navigation Jump to search

ದರ್ಭೆ - ಪೋಯೇಸೀ (ಗ್ರ್ಯಾಮಿನೀ) ಕುಟುಂಬಕ್ಕೆ ಸೇರಿದ ಒಂದು ಬಗೆಯ ಹುಲ್ಲು. ಕುಶ ಪರ್ಯಾಯ ನಾಮ. ಇದರ ವೈಜ್ಞಾನಿಕ ಹೆಸರು ಡೆಸ್ಮೊಸ್ಟ್ಯಾಕಿಯ ಬೈಪಿನೇಟ. ಉಷ್ಣವಲಯದ ಸಸ್ಯವಾದ ಇದು ಭಾರತಾದ್ಯಂತ ಬಯಲು ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಶುಷ್ಕ ಹವೆಯ ವಲಯಗಳಲ್ಲೂ ಮರುಭೂಮಿಗಳಲ್ಲೂ ಇದರ ಬೆಳೆವಣಿಗೆ ಹುಲುಸು, ತಗ್ಗು ಪ್ರದೇಶಗಳಲ್ಲೂ ಜೌಗಿನಲ್ಲೂ ಕಾಣದೊರೆಯುತ್ತದೆ.

ದರ್ಭೆ ಬಹುವಾರ್ಷಿಕ ಹುಲ್ಲು. 1`-5` ಎತ್ತರಕ್ಕೆ ಬೆಳೆಯುತ್ತದೆ. ಕಾಂಡ ಟೊಳ್ಳು. ಕಾಂಡದ ಪ್ರತಿ ಗೆಣ್ಣಿನಲ್ಲೂ ಬೇರುಗಳು ಹುಟ್ಟುವುವು. ಕಾಂಡದ ಬೆಳೆವಣಿಗೆ ನಿರಂತರಾಗಿರುತ್ತದೆ. ಈ ಸಸ್ಯದ ಸ್ವಭಾವದಲ್ಲಿ, ಎಲೆ, ಕಾಂಡ ಮತ್ತು ಬೇರುಗಳು ರೂಪರಚನೆಗಳಲ್ಲಿ ವೈವಿಧ್ಯವನ್ನು ಕಾಣಬಹುದು. ಭಾರತದ ದರ್ಭೆ ಹುಲ್ಲು ಕುಚ್ಚು ರೀತಿಯದು. ಬರ್ಮದಲ್ಲಿ ನೇರವಾಗಿ ಬೆಳೆಯುವುದು.

ದರ್ಭೆ ಹುಲ್ಲಿಗೆ ರೋಗನಿರೋಧಕ ಶಕ್ತಿ ಮತ್ತು ಶೀತೋಷ್ಣ ಸಹಿಷ್ಣುತೆ ಹೆಚ್ಚು. ದರ್ಭೆಹುಲ್ಲು ಸಾಮಾನ್ಯವಾಗಿ ಜಾನುವಾರುಗಳ ಮೆಚ್ಚಿನ ಆಹಾರವಲ್ಲ. ಆದ್ದರಿಂದ ಮೇವಿನ ಅಭಾವವಿದ್ದಾಗ ಮಾತ್ರ ಇದನ್ನು ಬೂಸಾ ಆಗಿ ಬಳಸುತ್ತಾರೆ. ಹಸಿರು ಹುಲ್ಲು ಗಿನಿ ಮತ್ತು ನೇಪಿಯರ್ ಹುಲ್ಲಿನಂತೆಯೂ ಒಣಗಿಸದ ಹುಲ್ಲು ಬತ್ತ ಮತ್ತು ಗೋದಿಯ ಬೂಸಾದಂತೆಯೂ ಇರುತ್ತದೆ. ಇದನ್ನು ಒಣಗಿಸಿ ಬಳಸಲಾಗುವುದು. ಹುಲ್ಲನ್ನು ರುಬ್ಬಿ ಪಡೆಯಲಾಗುವ ತಿರುಳನ್ನು ಕಾಗದ ತಯಾರಿಕೆಗೆ ಬಳಸಲಾಗಿದೆ. ಇದನ್ನು ಹಲಗೆ ಕೃತಕ ರೇಶ್ಮೆ ತಯಾರಿಕೆಗೆ ಬೇಕಾಗುವ ಪಲ್ಪ್‍ಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ದರ್ಭೆ ಹುಲ್ಲಿನ ಪರಾಗರೇಣುಗಳು ಮನುಷ್ಯರಲ್ಲಿ ಒಗ್ಗದಿರುವಿಕೆಯನ್ನು (ಅಲರ್ಜಿ) ಉಂಟುಮಾಡುತ್ತವೆ. ಗುಡಿಸಲುಗಳಿಗೆ ಹೊಚ್ಚಲು ದರ್ಭೆ ಹುಲ್ಲನ್ನು ಉಪಯೋಗಿಸುತ್ತಾರೆ. ಈ ಹುಲ್ಲಿನಿಂದ ಹಗ್ಗವನ್ನೂ ತಯಾರಿಸುವುದುಂಟು. (ಎಸ್.ಎಸ್.ಬಿ.ಎಚ್.)