ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಾರಕ
ಗೋಚರ
ದಾರಕ ಸ್ಕಾಂದ ಮಹಾಪುರಾಣದಲ್ಲಿ ಉಲ್ಲೇಖವಾಗಿರುವಂತೆ, ಈತ ಮಹಾಬಲಸಂಪನ್ನನಾದ ಒಬ್ಬ ರಾಕ್ಷಸ. ದೇವದಾನವರಿಂದ ಅಜೇಯನೂ ಕ್ರೂರ ದೈತ್ಯನೂ ಅರ್ಧನಾರೀಶ್ವರನನ್ನುಳಿದು ಬೇರಾರಿಂದಲೂ ಜಯಿಸಲು ಸಾಧ್ಯವಿರದವನೂ ಆದ ಈತನಿಂದ ಸ್ಥಾನಭ್ರಷ್ಟರಾದ ದೇವತೆಗಳು ಶಿವನಲ್ಲಿ ಮೊರೆಯಿಡುತ್ತಾರೆ. ಆಗ ಪಾರ್ವತಿ ಶಿವನ ಕಂಠದಲ್ಲಿರುವ ವಿಷವನ್ನು ತೆಗೆದುಕೊಂಡು ಮಹಾಭಯಂಕರ ರೂಪಳಾದ ಒಬ್ಬ ಸ್ತ್ರೀಯನ್ನು ನಿರ್ಮಿಸಿ, ತನ್ನ ಶಕ್ತಿಯನ್ನು ಅವಳಲ್ಲಿ ಅವಾಹಿಸಿ ದಾರಕನನ್ನು ಸಂಹರಿಸಲು ಕಳುಹಿಸುತ್ತಾಳೆ. ಸಿಂಹನಾದ ಮಾಡುತ್ತ ಬಂದ ಅವಳ ಧ್ವನಿಯನ್ನು ಕೇಳಿಯೇ ರಾಕ್ಷಸ ಎದೆಯೊಡೆದು ಸಾಯುತ್ತಾನೆ. (ಎಸ್.ಆರ್.ವಿ.ಐ.)