ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಿಂಡಿಗಲ್

ವಿಕಿಸೋರ್ಸ್ದಿಂದ

ದಿಂಡಿಗಲ್ ತಮಿಳು ನಾಡು ರಾಜ್ಯದ ಮಧುರೈ ಜಿಲ್ಲೆಯ ಒಂದು ಪಟ್ಟಣ. ಪಳನಿ ಮತ್ತು ಸಿರುಮಲೈ ಬೆಟ್ಟಗಳ ನಡುವೆ ಉ. ಅ. 100 21' ಮತ್ತು ಪೂ. ರೇ. 770 58' ಮೇಲೆ ಇದೆ. ಜಿಲ್ಲೆಯ ಎರಡನೆಯ ದೊಡ್ಡ ಪಟ್ಟಣವಾದ ಇದರ ಜನಸಂಖ್ಯೆ 1,28,429 (1971). ಈ ನಗರದ ಪಶ್ಚಿಮದ ಕೊನೆಯಲ್ಲಿರುವ ತಿಂಡುಕಲ್ (ದಿಂಬುಕಲ್) ಎಂಬ ಬಂಡೆಯಿಂದ ಇದಕ್ಕೆ ದಿಂಡಿಗಲ್ ಎಂಬ ಹೆಸರು ಬಂದಿದೆಯೆಂದು ಹೇಳಲಾಗಿದೆ. ಈ ಬಂಡೆ ದಿಂಬಿನಂತಿದೆಯೆನ್ನಲಾಗಿದೆ. ವಾಸ್ತವವಾಗಿ ಇದು ಮಗ್ಗುಲಾಗಿ ಇರಿಸಿದ ಭಾರಿ ಬೆಣೆಯನ್ನು ಹೋಲುತ್ತದೆ. ಇದರ ಗರಿಷ್ಠ ಎತ್ತರ ಸಮುದ್ರ ಮಟ್ಟದಿಂದ 1,233 ಅಡಿ. ಇದರ ಉದ್ದ 400 ಗಜ, ಅಗಲ 300 ಗಜ. ಇದರ ಮೇಲಣ ಕೋಟೆಯನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾಯಿತು. 17-19ನೆಯ ಶತಮಾನದಲ್ಲಿ ನಡೆದ ಹಲವು ಕದನಗಳಲ್ಲಿ ಇದು ಪಾತ್ರವಹಿಸಿತು. ಕೋಟೆಗೆ ಬಂಡೆಯಲ್ಲೇ ಕೊರೆದ 600 ತಗ್ಗಾದ ಮೆಟ್ಟಲುಗಳಿವೆ. ದುರ್ಗದ ಒಳಗೆ ಕೆಲವೇ ಕೆಲವು ಕಟ್ಟಡಗಳುಂಟು. ಈ ಗುಡ್ಡದ ನೆತ್ತಿಯ ಮೇಲೆ ಅಭಿರಾಮಿಯಮ್ಮನ ದೇವಸ್ಥಾನವಿದೆ. ಮೊದಲು ಈ ಕೋಟೆ ನಾಯಕರ ಅಧೀನದಲ್ಲಿತ್ತು. ಅನಂತರ ಟೀಪುವಿಗೆ ಸೇರಿತ್ತು. 1767ರಲ್ಲಿ ಬ್ರಿಟಿಷರು ಅವನನ್ನು ಸೋಲಿಸಿ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

ದಿಂಡಿಗಲ್ಲಿನಲ್ಲಿ ಪುರಸಭೆಯಿದೆ. ಇದು ತಾಲ್ಲೂಕು ಮುಖ್ಯಸ್ಥಳ. ಇಲ್ಲಿ ಹತ್ತಿ ನೂಲು ಮತ್ತು ನೇಯ್ಗೆ ಗಿರಣಿಗಳಿವೆ. ರೇಷ್ಮೆ ನೇಯ್ಗೆ, ಒಡವೆ, ಅಡಿಕೆ ಪುಡಿ, ಬೀಗ ಮತ್ತು ತಿಜೋರಿ ಕೈಗಾರಿಕೆಗಳೂ ಇವೆ. ಇಲ್ಲಿಯ ಚುಟ್ಟಾಗಳು ತುಂಬ ಪ್ರಸಿದ್ಧ. ಚರ್ಮ ಮತ್ತು ಚಕ್ಕಳ ಇಲ್ಲಿಂದ ಮದ್ರಾಸಿಗೆ ಹೋಗುತ್ತವೆ. ದಿಂಡಿಗಲ್ ಒಂದು ಸಾರಿಗೆ ಕೇಂದ್ರ. ಹಲವು ರಸ್ತೆಗಳು ಇಲ್ಲಿ ಸಂಧಿಸುತ್ತವೆ. ಇದೊಂದು ರೈಲ್ವೆ ಜಂಕ್ಷನ್ ಕೂಡ. ತಿರುಚಿರಾಪ್ಪಳ್ಳಿ-ಮಧುರೈ ಮತ್ತು ದಿಂಡಿಗಲ್-ಪಾಲಕ್ಕಾಡ್ ರೈಲುಮಾರ್ಗಗಳು ಇಲ್ಲಿ ಕೂಡುತ್ತವೆ. ಇಲ್ಲಿ ಮಧುರೈ ವಿಶ್ವವಿದ್ಯಾಲಯಕ್ಕೆ ಸೇರಿದ ಎರಡು ಕಾಲೇಜುಗಳಿವೆ. ಇಲ್ಲಿಂದ 11 ಕಿಮೀ. ದೂರದಲ್ಲಿರುವ ಗಾಂಧೀಗ್ರಾಮ ಒಂದು ಗ್ರಾಮಸೇವಾಶ್ರಮ. (ಎನ್.ಎ.)