ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಿಗಂಬರ ಪಂಥ

ವಿಕಿಸೋರ್ಸ್ ಇಂದ
Jump to navigation Jump to search

ದಿಗಂಬರ ಪಂಥ ಜೈನಧರ್ಮದಲ್ಲಿ ಸಂನ್ಯಾಸ ಆಚರಣೆಯ ಪರಮಾವಧಿಯನ್ನು ಹೊಂದಿದ ಮುನಿಗಳಿಗೆ ದಿಗಂಬರರೆಂದೂ ನಿಗ್ರ್ರಂಥರೆಂದೂ ಹೆಸರು. ಗೃಹಸ್ಥಧರ್ಮದ ಹನ್ನೊಂದು ನೆಲೆಗಳನ್ನು ಯಶಸ್ವಿಯಾಗಿ ನಡೆಸಿದ ಅನಂತರ ವ್ರತಿಕ ಗುರುಸನ್ನಿಧಿಯಲ್ಲಿ ಮುನಿದೀಕ್ಷೆಯನ್ನು ಸವೀಕರಿಸುತ್ತಾನೆ. ಪ್ರಾರಂಭದಲ್ಲಿ ಒಂದು ಕೌಪೀನ, ಸೊಂಟಕ್ಕೆ ಒಂದು ತುಂಡು ಬಟ್ಟೆ, ಮೈ ಮೇಲೆ ಒಂದು ತುಂಡು ಬಟ್ಟೆ ಇಷ್ಟು ಮಾತ್ರವನ್ನು ಧರಿಸುತ್ತಾನೆ. ಈತನಿಗೆ ಕ್ಷುಲ್ಲಕನೆಂದು ಹೆಸರು. ಆಮೇಲೆ ಆತ್ಮಶಕ್ತಿಯನ್ನು ಹೆಚ್ಚಿಸಿಕೊಂಡು ಮನೋನಿಗ್ರಹಮಾಡಿ ಕೌಪೀನವೊಂದನ್ನು ಮಾತ್ರ ಧರಿಸುತ್ತಾನೆ. ವ್ರತಗಳೂ ತಪಸ್ಸೂ ಮುಂದುವರಿದು ಶರೀರದ ಮೇಲಿನ ಮೋಹ ಪೂರ್ತಿಯಾಗಿ ಹೋದ ಮೇಲೆ ಗುರುಗಳ ಅಪ್ಪಣೆ ಪಡೆದು ದಿಗಂಬರ ದೀಕ್ಷೆಯನ್ನು ಸ್ವೀಕರಿಸುತ್ತಾನೆ. ದಿಗಂಬರ ಎಂದರೆ ದಿಕ್ಕು ಅಥವಾ ಆಕಾಶವನ್ನೇ ಬಟ್ಟೆಯಾಗುಳ್ಳವ ಎಂದರ್ಥ. ಈತನ ಹಸಿವು, ಬಾಯಾರಿಕೆ, ನಿದ್ದೆ, ರಾಗ, ದ್ವೇಷ, ಚಿಂತೆ ಮೊದಲಾದ ಪರೀಷಹಗಳನ್ನು ಗೆದ್ದು ಯಾವಾಗಲೂ ಧ್ಯಾನಾಧ್ಯಯನಗಳಲ್ಲಿ ನಿರತನಾಗಿರುತ್ತಾನೆ. ಈತನ ಹತ್ತಿರ ಸ್ಥಳ ಶುದ್ಧಿಗೋಸ್ಕರ ನವಿಲುಗರಿಯ ಒಂದು ಪಿಂಛ ಹಾಗೂ ಶರೀರಶುದ್ಧಿಗಾಗಿ ಬಿಸಿ ನೀರುಳ್ಳ ಒಂದು ಮರದ ಕಮಂಡಲ- ಇವಲ್ಲದೆ ಮತ್ತಾವ ಪರಿಗ್ರಹಗಳೂ ಇರುವುದಿಲ್ಲ. ನಾಲ್ಕುತಿಂಗಳಿಗೊಮ್ಮೆ ಈತ ತನ್ನ ಕೈಯಿಂದಲೇ ತಲೆಯ ಹಾಗೂ ಗಡ್ಡದ ಕೂದಲನ್ನು ಕಿತ್ತುಕೊಳ್ಳುತ್ತಾನೆ. ಎರಡು ಕೈಗಳನ್ನು ಜೋಡಿಸಿ ಬೊಗಸೆ ಮಾಡಿ ಅದರಲ್ಲಿ ಆಹಾರ ಸ್ವೀಕರಿಸುತ್ತಾನೆ. ಉಪ್ಪು ಖಾರ ಹುಳಿ - ಇವಾವುದೂ ಈತನ ಆಹಾರದಲ್ಲಿ ಸೇರಿರುವುದಿಲ್ಲ. ದಿನಕ್ಕೆ ಒಪ್ಪೊತ್ತು ಮಾತ್ರ ಆಹಾರವನ್ನು ಸ್ವೀಕರಿಸುತ್ತಾನೆ. ನೆಲವನ್ನು ಪಿಂಛದಿಂದ ಶುದ್ಧಿಮಾಡಿ ಮಲಗುತ್ತಾನೆ. ಮಲಗಿದಾಗ ಏನನ್ನೂ ಹೊದೆವುದಿಲ್ಲ. ಊರಿಂದ ಊರಿಗೆ ಕಾಲುನಡಿಗೆಯಲ್ಲಿಯೇ ಸಂಚರಿಸುತ್ತಾನೆ. ಯಾವ ವಾಹನವನ್ನೂ ಯಾವ ಪಾದರಕ್ಷೆಯನ್ನೂ ಉಪಯೋಗಿಸುವುದಿಲ್ಲ. ಎಷ್ಟು ಮಂದಿ ಸ್ತ್ರೀಯರ ಗುಂಪಿನಲ್ಲಿದ್ದರೂ ಈತನಿಗೆ ಯಾವ ವಿಕಾರವೂ ಆಗುವುದಿಲ್ಲ. ದಿಗಂಬರ ಮುನಿಗಳನ್ನು ಜಾತರೂಪರು ಎಂದು ಕರೆಯುವುದುಂಟು. ಈಚೆಗೆ ಶ್ವೇತಾಂಬರ ಪಂಥವೊಂದು ಹುಟ್ಟಿತು. ದಿಗಂಬರ ಪಂಥದ ತಪಸ್ಸಿನ ಕಾಠಿಣ್ಯವನ್ನು ಸುಧಾರಿಸಿ ಬಿಳಿಯ ಬಟ್ಟೆಯನ್ನು ಧರಿಸಿದರೂ ತಪಸ್ಸುಮಾಡಿ ಮೋಕ್ಷಕ್ಕೆ ಹೋಗಬಹುದೆಂದೂ ಸ್ತ್ರೀಯರೂ ತಪಸ್ಸು ಮಾಡಿ ತದ್ಭವದಲ್ಲಿಯೇ ಮೋಕ್ಷಕ್ಕೆ ಹೋಗಬಹುದೆಂದೂ ಶ್ವೇತಾಂಬರರು ಹೇಳುತ್ತಾರೆ. ಜೈನರ ಹದಿನೆಂಟನೆಯ ತೀರ್ಥಂಕರನಾದ ಮಲ್ಲಿನಾಥ ಸ್ತ್ರೀಯೆಂದು ಶ್ವೇತಾಂಬರರ ವಾದ. ಇದನ್ನು ಪ್ರಾಚೀನವಾದ ದಿಗಂಬರ ಪಂಥ ಒಪ್ಪುವುದಿಲ್ಲ. ಸ್ತ್ರೀಯರು ದಿಗಂಬರ ದೀಕ್ಷೆಗೆ ಅರ್ಹರಲ್ಲವೆಂದೂ ಅವರು ಅರ್ಜಿಕೆಯರಾಗಿ ತಪಸ್ಸುಮಾಡಿ ಪುರುಷ ಜನ್ಮವನ್ನು ಪಡೆದು ದಿಗಂಬರ ದೀಕ್ಷೆಯಿಂದ ಮೋಕ್ಷಕ್ಕೆ ಹೋಗಬಹುದೆಂದೂ ದಿಗಂಬರ ಪಂಥದ ವಾದ. ಇಷ್ಟನ್ನು ಬಿಟ್ಟು ಮತ್ತಾವ ವ್ಯತ್ಯಾಸವೂ ಈ ಎರಡು ಪಂಥಗಳಿಗೂ ಇಲ್ಲ. (ಕೆ.ಎಸ್.ಡಿ.; ಎಂ.ಎ.)