ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಿಙ್ನಾಗ

ವಿಕಿಸೋರ್ಸ್ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ದಿಙ್ನಾಗ

ಕಾಲ ಕ್ರಿ. ಶ. 5ನೆಯ ಶತಮಾನ. ಬೌದ್ಧರ ತರ್ಕಶಾಸ್ತ್ರ ಮತ್ತು ಪ್ರಮಾಣಶಾಸ್ತ್ರಗಳ ಜನಕನೆಂದು ಪ್ರಖ್ಯಾತನಾದವ. ಭಾರತೀಯ ತತ್ತ್ವಶಾಸ್ತ್ರದ ನಭೋಮಂಡಲದಲ್ಲಿ ದೇದೀಪ್ಯಮಾನ ನಕ್ಷತ್ರವೆಂದು ವರ್ಣಿಸಲ್ಪಟ್ಟಿದ್ದಾನೆ. ಟೆಬೆಟಿಯನ್ನರು ಈತನನ್ನು ಜಂಬೂದ್ವೀಪದ ರತ್ನಾಭರಣವೆಂದೂ ಮಹಾ ಆಚಾರ್ಯಪುರುಷನೆಂದೂ ಬಣ್ಣಿಸಿದ್ದಾರೆ.

ಈತ ಹುಟ್ಟಿದ್ದು ದಕ್ಷಿಣಬಾರತದ ಕಾಂಚೀಪುರದಲ್ಲಿ. ಇಲ್ಲಿಯೇ ಹೀನಯಾದ ತ್ರಿಪಿಟಕಗಳ ಅಧ್ಯಯನ ಮಾಡಿ ಅನಂತರ ಉತ್ತರ ಭಾರತಕ್ಕೆ ಹೋಗಿ ಆಚಾರ್ಯ ವಸುಬಂಧುವಿನ ಶಿಷ್ಯನಾಗಿ ಮಹಾಯಾನ ತ್ರಿಪಿಟಕಗಳನ್ನೂ ಅಧ್ಯಯನ ಮಾಡಿದ. ಈತನಿಗೆ ಮಂಜುಶ್ರೀ ದೇವಿಯ ಸಾಕ್ಷಾತ್ಕಾರವಾಗಿ ಧರ್ಮದರ್ಶನವಾಯಿತೆಂದು ಮುಂದೆ ನಾಲಂದಾ ವಿಶ್ವವಿದ್ಯಾಲಯಕ್ಕೆ ಹೋಗಿ ವಾದಪಟು ವೆನಿಸಿ ಅನೇಕ ವಿಧಮ್ರ್ಭಿಯರನ್ನು ಗೆದ್ದು ಅವರೆಲ್ಲ ಬೌದ್ಧಮತ ಸೇರುವಂತೆ ಮಾಡಿದನೆಂದೂ ತರ್ಕ-ಪುಂಗವನೆಂಬ ಬಿರುದನ್ನು ಗಳಿಸಿ ಅನಂತರ ಭಾರತದಲ್ಲೆಲ್ಲ ಸುತ್ತಿ ವಾದಮಾಡುತ್ತ ತನ್ನ ವಿಜಯಯಾತ್ರೆಯನ್ನು ಮೆರೆದನೆಂದೂ ಹೇಳಲಾಗಿದೆ. ಮಹಾರಾಷ್ಟ್ರದಲ್ಲಿ ಈತ ಕೆಲವು ಕಾಲ ಇದ್ದುದನ್ನು ಹ್ಯು-ಎನ್-ತ್ಸಾಂಗ್ ತನ್ನ ಬರೆಹದಲ್ಲಿ ಪ್ರಸ್ತಾವಿಸಿದ್ದಾನೆ. ಓರಿಸ್ಸದಲ್ಲಿ ಈತ ಭದ್ರಪಾಲಿತನೆಂಬ ಭಂಡಾರಿಯನ್ನು ಗೆದ್ದೆನೆಂದೂ ತನ್ನ ಕೊನೆಯ ದಿನಗಳನ್ನು ಅಲ್ಲೇ ಕಳೆದನೆಂದೂ ಹೇಳಲಾಗಿದೆ.

ಈತನ ಇಡೀ ಜೀವನವೇ ವಾದ-ಪ್ರತಿವಾದಗಳಲ್ಲಿ ಮುಳುಗಿ ಹೋಗಿತ್ತು. ಕಾಳಿದಾಸ ಕೂಡ ಈತನ ಸ್ಥೂಲ-ಹಸ್ತಾವಲೇಪಗಳನ್ನು ತಪ್ಪಿಸಿಕೊಳ್ಳುವಂತೆ ತನ್ನ ಮೇಘಕ್ಕೆ ವಿನಂತಿಸಿಕೊಂಡಿದ್ದಾನೆ. ಈತನನ್ನು ಖಂಡಿಸ ಹೊರಟ ನೈಯಾಯಿಕಾ ಗ್ರಣಿಗಳಲ್ಲಿ ಉದ್ಯೋತಕರ ಮತ್ತು ವಾಚಸ್ಪತಿಮಿಶ್ರರೂ, ಮೀಮಾಂಸಕರಲ್ಲಿ ಕುಮಾರಿಲಭಟ್ಟರು ಮತ್ತು ಪಾರ್ಥಸಾರಥಿ ಮಿಶ್ರರೂ ಪ್ರಭಾಚಂದ್ರ, ವಿದ್ಯಾನಂದ ಮುಂತಾದ ಜೈನರೂ ಶಂಕರಾಚಾರ್ಯರೇ ಮುಂತಾದ ವೇದಾಂತಿಗಳೂ ಬರುತ್ತಾರೆ. ಹೀಗೆ ಭಾರತೀಯ ತತ್ತ್ವಶಾಸ್ತ್ರದ ಪ್ರಮಾಣ ವಿಚಾರದಲ್ಲಿ ಈತನ ಸ್ಥಾನ ಅದ್ವಿತೀಯವಾದುದು. ಹಲವು ವಿಷಯಗಳಲ್ಲಿ ಈತನ ಅನಂತರ ಬಂದ ಧರ್ಮಕೀರ್ತಿಗೂ ಈತನಿಗೂ ಮತಭೇದಗಳಿವೆ.

ಆಶ್ಚರ್ಯದ ಮಾತೆಂದರೆ ಪ್ರಕಾಂಡ ಪಂಡಿತನೂ ಮಹಾವಾದಿಯೂ ಆದ ಈತನ ಗ್ರಂಥಗಳು ಕಳೆದ ಶತಮಾನದ ವರೆಗೆ ಒಂದೂ ಪ್ರಕಟವಾಗಿರಲಿಲ್ಲ. ಭಾರತದಲ್ಲಿ ಈತನ ಗ್ರಂಥಗಳು ಹೆಚ್ಚಾಗಿ ಲುಪ್ತಪ್ರಾಯವೇ ಆಗಿದ್ದವು. ಆದರೆ ಟಿಬೇಟನ್ ಮತ್ತು ಚೀನೀ ಭಾಷೆಗಳ ಅನುವಾದಗಳು ದೊರೆಯುತ್ತಿದವು. ಇವನ್ನು ಮತ್ತೆ ಸಂಸ್ಕøತಕ್ಕೆ ರೂಪಾಂತರಿಸಿ ವಿದ್ವಾಂಸರು ಶ್ರಮಪಟ್ಟು ಪ್ರಕಟಿಸಿದ್ದಾರೆ. ಈಗ ಪ್ರಕಟಿತವಾಗಿರುವ ಗ್ರಂಥಗಳಲ್ಲಿ 1. ಪ್ರಮಾಣ-ಸಮುಚ್ಚಯ 2. ನ್ಯಾಯ-ಪ್ರವೇಶ, 3. ಹೇತು-ಚಕ್ರ-ಡಮರು 4. ಪ್ರಮಾಣ-ಸಮುಚ್ಚಯ ವೃತ್ತಿ, 5. ಪ್ರಮಾಣ-ಶಾಸ್ತ್ರ-ನ್ಯಾಯ-ಪ್ರವೇಶ, 6. ಆಲಂಬನ ಪರೀಕ್ಷಾ, 7. ಆಲಂಬನ-ಪರೀಕ್ಷಾ-ವೃತ್ತಿ, 8. ತ್ರಿಕಾಲ-ಪರೀಕ್ಷಾ ಮುಖ್ಯವಾದವು.

ಬೌದ್ಧರು ಒಪ್ಪುವ ಪ್ರಮಾಣಗಳು ಎರಡು 1. ಪ್ರತ್ಯಕ್ಷ ಮತ್ತು 2. ಅನುಮಾನ. ಇವುಗಳ ಕೂಲಂಕುಷ ಹಾಗೂ ತಲಸ್ಪರ್ಶಿ ಲಕ್ಷಣಗಳನ್ನು ವೈಶಿಷ್ಟ್ಯಪೂರ್ಣವಾಗಿ ನಿರೂಪಿಸಿದ ಕೀರ್ತಿ ಈತನದು. ಪ್ರತ್ಯಕ್ಷಂ ಕಲ್ಪನಾ ಪೋಢಂ ನಾಮಜಾತ್ಯಾದ್ಯಸಂಯತಮ್ ಎಂಬ ಈತನ ಪ್ರತ್ಯಕ್ಷ ಲಕ್ಷಣ ಭಾರತೀಯ ದರ್ಶನಗಳಲ್ಲೆಲ್ಲ ಕೋಲಾಹಲವನ್ನೆಬ್ಬಿಸಿದೆ. ಈತನ ಮತದಂತೆ ಪ್ರತ್ಯಕ್ಷವೂ ಸಕಲ ಭ್ರಾಂತಿಗಳಿಂದಲೂ ಸದಾ ದೂರವೇ ಆಗಿರುತ್ತದೆ; ಏಕೆಂದರೆ ನಾಮ, ರೂಪ, ಜಾತಿ ಇತ್ಯಾದಿ ಕಲ್ಪನೆ ಅಥವಾ ವಿಕಲ್ಪಗಳೊಂದೂ ಅದಕ್ಕೆ ಅಂಟಿಕೊಳ್ಳುವುದೇ ಇಲ್ಲ. ಹೆಸರು ಗೊತ್ತಿಲ್ಲದ ವಸ್ತುವನ್ನೂ ನಾವು ಪ್ರತ್ಯಕ್ಷೀಕರಿಸಬಹುದಾದ್ದರಿಂದ ಪ್ರತ್ಯಕ್ಷಕ್ಕೆ ನಾಮದ ಸೋಂಕಿಲ್ಲ. ನಾವು ವಿಶಿಷ್ಟ ವ್ಯಕ್ತಿಯನ್ನೇ ಪ್ರತ್ಯಕ್ಷೀಕರಿಸುವುದರಿಂದ ಅದಕ್ಕೆ ಜಾತಿಯ ಸಂಸರ್ಗವೂ ಇಲ್ಲ. ಆದ್ದರಿಂದ ನಾಮಜಾತ್ಯಾದಿ ಕಲ್ಪನಾವಿರಹಿತವಾದ ಸಾಕ್ಷಾತ್ ಸಂವೇದನೆಯೇ ಪ್ರತ್ಯಕ್ಷ ಲಕ್ಷಣ. ಅದು ಎಂದೂ ಅಭ್ರಾಂತ. ಆದರೆ ಅನುಮಾನ ಪ್ರಮಾಣದ ವಿಷಯ ಹಾಗಲ್ಲ. ಅಲ್ಲಿ ಬರುವ e್ಞÁನ ವಿಶಿಷ್ಟ ವ್ಯಕ್ತಿಯಲ್ಲ; ಸಾಮಾನ್ಯವಾದುದು; ಆದ್ದರಿಂದ ನಾಮಜಾತ್ಯಾದಿಗಳಿಗೆ ಅಳವಡುವಂಥದು.

ಈತ ಪ್ರತ್ಯಕ್ಷ ಲಕ್ಷಣವನ್ನು ಸುಮ್ಮನೆ ಹೇಳಿ ಅಷ್ಟಕ್ಕೇ ಕೈಬಿಡುವುದಿಲ್ಲ. ಕಾಪಿಲ ಸಾಂಖ್ಯರ, ಗೌತಮರ ನೈಯಾಯಿಕರ ಮತ್ತು ವೈಶೇಷಿಕರ ಪ್ರತ್ಯಕ್ಷ ಲಕ್ಷಣಗಳನ್ನೆಲ್ಲ ಉದ್ದರಿಸಿ ಅವೆಲ್ಲವೂ ನಿಸ್ಸಾರವೆಂದು ತುಂಡು ತುಂಡಾಗುವಂತೆ ಖಂಡಿಸುತ್ತಾನೆ. - ತನ್ನ ಪ್ರಮಾಣಸಮುಚ್ಚಯವೆಂಬ ಗ್ರಂಥದಲ್ಲಿ.

ಹಾಗೆಯೇ ಅನುಮಾನ ಪ್ರಕ್ರಿಯೆಯಲ್ಲಿ ಕೂಡ ಈತ ತನ್ನ ವೈಶಿಷ್ಟ್ಯವನು ಮರೆದಿದ್ದಾನೆ. ಸ್ವಾರ್ಥಾನುಮಾನದಲ್ಲಿ ಹೇತು ನಿರ್ದುಷ್ಟವಾಗಲು ಕಾರ್ಯ, ಸ್ವಭಾವ ಅಥವಾ ಅನುಪಲಬ್ದಿಗಳ ಅಗತ್ಯವನ್ನು ಬಿಡಿಸಿ ತೋರಿಸಿದ್ದಾನೆ. ಹೇತು ಸಾಧ್ಯಗಳ ನಡುವಣ ಸಂಬಂಧವನ್ನು ಕುರಿತು ಇತರರು ಹೇಳಿದ್ದನ್ನು ಅನೇಕ ಯುಕ್ತಿಗಳಿಂದ ಖಂಡಿಸುತ್ತಾನೆ.

ಪರಾರ್ಥಾನುಮಾನದಲ್ಲಿ ಸಪಕ್ಷ. ವಿಪಕ್ಷಗಳಲ್ಲಿ ಸತ್ತ್ವಾಸತ್ತ್ವಗಳ ಮೇಲಿಂದ ಎಲ್ಲೆಲ್ಲಿ ಹೇತು ನಿರ್ದುಷ್ಟ ಎಲ್ಲೆಲ್ಲಿ ದುಷ್ಟ ಎಂಬುದನ್ನು ವಿವರವಾಗಿ ತೋರಿಸಲು ಒಂಭತ್ತು ಶ್ರೇಣಿಗಳನ್ನು ಈತ ಕಲ್ಪಿಸಿದ್ದಾನೆ.

ಎಲ್ಲಕ್ಕಿಂತ ಹೆಚ್ಚಾಗಿ ಹೇತ್ವಾಭಾಸಗಳಲ್ಲಿ ಅಥವಾ ಹೇತುದೋಷಗಳಲ್ಲಿ ಹದಿನಾಲ್ಕು ಬಗೆಗಳನ್ನು ಈತನಂತೆ ವಿವರವಾಗಿ ತೋರಿಸಿರುವವರು ಮತ್ತಾರೂ ಇಲ್ಲ. ಮುಂದೆ ಭಾರತೀಯ ತರ್ಕಶಾಸ್ತ್ರ ಬೆಳೆಯಲು ಈತನ ಮೂಲ ಚಿಂತನೆಯೇ ಕಾರಣೀಭೂತವಾಯಿತೆಂಬುದನ್ನು ಮರೆಯುವಂತಿಲ್ಲ. ಧರ್ಮ ಕೀರ್ತಿಯ ವಿಚಾರಧಾರೆಗೆ ಪ್ರೇರಕನಾದವನೂ ಈತನೇ. ಈತನ ಮತಗಳ ಖಂಡನೆಯೇ ಮುಂದಿನ ಆಸ್ತಿಕ ದಾರ್ಶನಿಕರೆಲ್ಲರಿಗೂ ಪ್ರಥಮ ಕರ್ತವ್ಯವಾಗುತ್ತದೆ. ಆದ್ದರಿಂದ ನ್ಯಾಯವೇದಾಂತಾದಿ ದರ್ಶನಗಳ ಪೂರ್ವಪಕ್ಷವನ್ನು ಸರಿಯಾಗಿ ಮನಗಾಣಲು ಈತನ ಪ್ರಮಾಣಶಾಸ್ತ್ರ ಚಿಂತನೆಯ ಪರಿಚಯ ಅಗತ್ಯವೂ ಅನಿವಾರ್ಯವೂ ಆಗುತ್ತದೆ. (ಕೆ.ಕೆ)