ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಿತಿ

ವಿಕಿಸೋರ್ಸ್ದಿಂದ

ದಿತಿ - ಕಶ್ಯಪ ಮುನಿಯ ಹದಿಮೂರು ಮಂದಿ ಪತ್ನಿಯರಲ್ಲಿ ಒಬ್ಬಳು. ಈಕೆಯ ವೃತ್ತಾಂತ ಮಹಾಭಾರತ, ಭಾಗವತ, ಹರಿವಂಶಗಳಲ್ಲಿ ಬರುತ್ತದೆ. ಅದಿತಿ ದೇವತೆಗಳ ತಾಯಿಯಾದರೆ ಈಕೆ ರಾಕ್ಷಸರ ತಾಯಿ. ದಕ್ಷಪುತ್ರಿಯಾದ ಈಕೆಗೆ ಪ್ರಿಶ್ಣೀ ಎಂದೂ ಹೆಸರು. ಹಿರಣ್ಯಾಕ್ಷ, ಹಿರಣ್ಯಕಶಿಪು ಮುಂತಾದ ರಾಕ್ಷಸರಲ್ಲದೆ ನಲವತ್ತೊಂಬತ್ತು ಮರುತ್ತುಗಳು ಮತ್ತು ಸಿಂಹಿಕೆ ಎಂಬ ಮಗಳಿಗೆ ಈಕೆ ಜನ್ಮವಿತ್ತವಳು. ಸಮುದ್ರಮಥನ ಕಾಲದಲ್ಲಿ ತನ್ನ ಮಕ್ಕಳಾದ ರಾಕ್ಷಸರೆಲ್ಲ ದೇವತೆಗಳಿಂದ ಸಂಹರಿಸಲ್ಪಟ್ಟಾಗ ಅಜೇಯನೂ ದೀರ್ಘಾಯುವೂ ಇಂದ್ರನನ್ನು ಜಯಿಸುವ ಸಾಮಥ್ರ್ಯವುಳ್ಳವನೂ ಆದ ಮಗನೊಬ್ಬನನ್ನು ಅನುಗ್ರಹಿಸುವಂತೆ ಪತಿ ಕಶ್ಯಪನನ್ನು ಕೇಳಿಕೊಂಡಳು. ಭ್ರೂಣ ಬೆಳೆಯುವ ನೂರು ವರ್ಷಗಳ ಅವಧಿಯಲ್ಲಿ ಪರಿಶುದ್ಧಳಾಗಿದ್ದು ಸಾಂಪ್ರದಾಯಿಕ ಸ್ವಚ್ಚತೆಗಳನ್ನು ಚಾಚೂ ತಪ್ಪದೆ ಪಾಲಿಸಿದರೆ ಅವಳ ಆಸೆ ಈಡೇರುವುದೆಂದು ಕಶ್ಯಪ ವರವನ್ನು ದಯಪಾಲಿಸಿದ. ಈ ಮಾತಿನಂತೆ ದಿತಿ ತೊಂಬತ್ತೊಂಬತ್ತು ವರ್ಷಗಳ ಕಾಲ ನಿಯಮವನ್ನು ಪರಿಪಾಲಿಸಿದಳು. ನೂರನೆಯ ವರ್ಷದ ಒಂದು ದಿನ ಹಗಲು ಹೊತ್ತಿನಲ್ಲಿ ತಲೆದಿಂಬಿನ ಮೇಲೆ ಕಾಲುಚಾಚಿಕೊಂಡು ನಿದ್ರಿಸುತ್ತಿದ್ದಳು. ಈ ಸಮಯವನ್ನು ಎದರು ನೋಡುತ್ತಿದ್ದ ಇಂದ್ರ ಇವಳ ಗರ್ಭವನ್ನು ಹೊಕ್ಕು ವಜ್ರಾಯುಧದಿಂದ ಪಿಂಡವನ್ನು ಏಳು ತುಂಡುಗಳಾಗಿ ಕತ್ತರಿಸಿದ. ದಿತಿ ತನ್ನ ಅಜಾಗರೂಕತೆಗೆ ತಾನೇ ಪಶ್ಚಾತ್ತಾಪಪಟ್ಟು ಪಿಂಡದ ಏಳು ತುಂಡುಗಳಲ್ಲಿ ಒಂದನ್ನು ಬ್ರಹ್ಮ ಲೋಕಕ್ಕೂ ಎರಡನೆಯದನ್ನು ಇಂದ್ರಲೋಕಕ್ಕೂ ಹೋಗಲು ಹೇಳಿ ಮತ್ತೊಂದನ್ನು ದೇವವಾಯು ಎಂದು ಪ್ರಖ್ಯಾತಿ ಪಡೆಯಲಿ ಎಂದೂ ಉಳಿದ ನಾಲ್ಕು ತುಂಡುಗಳು ನಾಲ್ಕು ದಿಕ್ಕುಗಳಲ್ಲಿ ಸಂಚರಿಸಲಿ, ಒಟ್ಟಿನಲ್ಲಿ ಈ ಏಳು ಮಂದಿಯೂ ಮಹಾಬಲ ಸಂಪನ್ನರೆನಿಸಿ ದಿವ್ಯಸ್ವರೂಪವುಳ್ಳವರಾಗಲಿ ಎಂದೂ ಹರಸಿದಳು. ಕತ್ತರಿಸಿದ ಭ್ರೂಣದ ತುಂಡುಗಳ ರೋದನ ಹೆಚ್ಚಾಗಲು ಇಂದ್ರ ಮತ್ತೊಮ್ಮೆ ಪ್ರತಿಯೊಂದನ್ನೂ ಏಳು ಚೂರು ಮಾಡಿ ಮಾ ರೋದೀಃ (ಅಳದಿರು) ಎಂದ. ಮುಂದೆ ಅವೇ ಮಾರುತಗಳಾದವು. ಪ್ರಾಚೀನ ಮಧ್ಯ ಪೂರ್ವ ರಾಷ್ಟ್ರದ ಗ್ರಂಥಗಳಾದ ಕ್ಯಾಪಿಟಸ್ ಮತ್ತು ಮಿಟನಿಗಳಲ್ಲಿ ಈ ಮಾರುತಗಳನ್ನು ಮರುತಷ್ ಎಂದು ಕರೆಯಲಾಗಿದೆ. (ಎಸ್.ಎನ್.ಜಿ.)