ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಿಲೀಪ್ ಕುಮಾರ್
ದಿಲೀಪ್ ಕುಮಾರ್ 1922-.ಹಿಂದಿ ಚಿತ್ರರಂಗದ ಶ್ರೇಷ್ಠ ನಟ ಹುಟ್ಟಿದ್ದು ಪೇಷಾವರ್‍ನಲ್ಲಿ. ಹುಟ್ಟುಹೆಸರು ಮಹಮದ್ ಯೂಸುಫ್ ಸರ್‍ವಾರ್ ಖಾನ್. ತಂದೆ ಹಣ್ಣುಮಾರುವಾತ. ಮುಂಬಯಿಯ ವಿಲ್ಸ್‍ನ್ ಮತ್ತು ಖಾಲ್ಸಾ ಕಾಲೇಜುಗಳಲ್ಲಿ ವ್ಯಾಸಂಗ. ಕಾರಣಾಂತರದಿಂದ ಓದು ಬಿಟ್ಟು ಸೈನಿಕ ಕ್ಯಾಂಟೀನಿನ ಮ್ಯಾನೇಜರ್ ಆಗಿ ಸೇರಿದರು. ತನ್ನ ಸಿನಿಮಾರಂಗ ಪ್ರವೇಶಕ್ಕೆ ಕಾರಣರಾದ ಆಗಿನ ಪ್ರಸಿದ್ಧ ನಟಿ ದೇವಿಕಾರಾಣಿಯ ಮೂಲಕ ನಿರ್ದೇಶಕ ನಿತಿನಬೋಸರ ಪರಿಚಯ. ಮೊದಲ ಚಿತ್ರ ಜ್ವಾರ್‍ಭಾಟ (1943). ಹಾಸ್ಯನಟ ಆಗಾ ನಾಯಕನಾಗಿದ್ದ ಆ ಚಿತ್ರದಲ್ಲಿ ಈತನದು ಎರಡನೆಯ ಸ್ಥಾನ. ಮತ್ತೆ ನಿತಿನ್ ಬೋಸರ ಮಿಲನ್ (1946), ಅನಂತರ ಜುಗ್ನು (1947) ಮತ್ತು ಆರ್ಜೂಗಳಲ್ಲಿನ ತನ್ನ ಅಭಿನಯದಿಂದ ದುರಂತನಾಯಕನಾಗಿ ಭದ್ರವಾಗಿ ನಿಂತ. ತಾರಾಜೀವನದ ಯಶಸ್ವೀ ಪ್ರಥಮ ಮೈಲಿಗಲ್ಲು ಎಂದರೆ, ಭಗತ್‍ಸಿಂಗನ ಜೀವನವನ್ನು ಕುರಿತಾದ 'ಷಹೀದ್ (1948) ಚಿತ್ರ. ಇದರಲ್ಲಿ ಆ ಕಾಲದ ಶ್ರೇಷ್ಠನಟ ಚಂದ್ರಮೋಹನ್ ಜೊತೆ ಈತ ಅಭಿನಯಿಸಿದ್ದರು. 'ಮೇಲಾದಲ್ಲಿ (1948) ಮೊದಲಿಗೆ ಕಾಣಿಸಿಕೊಂಡ ದಿಲೀಪ್-ನರ್ಗೀಸ್ ತಾರಾಜೋಡಿ ಒಟ್ಟು ಏಳು ಚಿತ್ರಗಳಲ್ಲಿ 'ಮೇಲಾ, 'ಅನೋಖ ಪ್ಯಾರ್ (1948), 'ಅಂದಾeóï (1949), 'ಜೋಗನ್ ಬಾಬುಲ್ (1950), 'ದೀದಾರ್ ಹಾಗೂ 'ಹಲ್‍ಚಲ್ (1951) ಚಿತ್ರಗಳಲ್ಲಿನ ಅಭಿನಯ ಭಾರತೀಯ ಚಿತ್ರಾಭಿನಯ ಕಲೆಗೆ ಒಂದು ರೂಪ ಕೊಟ್ಟಿತು. ಬಿಮಲ್ ರಾಯ್ ತಯಾರಿಸಿದ ಭಾರತೀಯ ಚಲನಚಿತ್ರ ಇತಿಹಾಸದಲ್ಲಿನ ಮಹಾನ್ ಪ್ರಣಯದುರಂತ ಚಿತ್ರ ದೇವದಾಸ್‍ನಲ್ಲಿನ (1955) ಹತಾಶ ಹಾಗೂ ವೇದನಾಪೂರ್ಣ ಅಭಿನಯ ಅಸದೃಶ. ಜನ್ಮಾಂತರದ ಪ್ರೇಮಿಯಾಗಿ ಮಧುಮತಿಯಲ್ಲಿ (1956), ದಲಿತರ ನಾಯಕನಾಗಿ ಪೈಗಾಂ (1959)ನಲ್ಲಿ, 'ದಾಗ್, 'ನಯಾದೌರ್, 'ದಿಲ್‍ದಿಯಾ ದರ್ದ್ ಲಿಯಾ ದಂಥ ಚಿತ್ರಗಳೂ ಈತನ ಉತ್ತಮ ನಟನೆಗೆ ಸಾಕ್ಷಿಗಳು. ಈತ ನಟಿಸಿದ ಮೆಹಬೂಬರ್ ಆನ್ ಚಿತ್ರ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸಿದಾಗ (1952) ಲಂಡನ್ನಿನ ಟೈಮ್ಸ್ ಪತ್ರಿಕೆ ಸುಂದರ ದಿಲೀಪನಿಗೆ ಸಾಟಿಯಾದವರು ಹಾಲಿವುಡ್‍ನಲ್ಲಿಯೂ ಇಲ್ಲ ಎಂದು ಬರೆಯಿತು. ಸಾಹಸಪ್ರಧಾನ ನಾಯಕನಾಗಿಯೂ ಆeóÁದ್, ಕೋಹಿನೂರ್, ರಾಮ್ ಔರ್ ಶ್ಯಾಮ್‍ಗಳಲ್ಲಿ ಕಾಣಿಸಿಕೊಂಡು ತನ್ನ ನೈಪುಣ್ಯಕ್ಕೆ ಎಣೆಯಿಲ್ಲವೆಂದು ತೋರಿಸಿದ್ದಾನೆ. ಹಠವಾದಿ ಸಲೀಮ್‍ನಾಗಿ ಈತ ಅಭಿನಯಿಸಿರುವ ಮೊಗಲೆ-ಎ-ಆಜûಂ (1960) ಭಾರೀ ವೆಚ್ಚದಲ್ಲಿ ನಿರ್ಮಿತವಾದ ಐತಿಹಾಸಿಕ ಚಿತ್ರ. ಸ್ವತ: ನಿರ್ಮಿಸಿ ನಟಿಸಿರುವ ಗಂಗಾಜಮುನ (1961) ವರ್ಣಚಿತ್ರದ ಮೂಲಕ ಅನೇಕ ಹೊಸ ಪ್ರವೃತ್ತಿಗಳನ್ನು ಭಾರತೀಯ ಚಿತ್ರರಂಗಕ್ಕೆ ತಂದ ಖ್ಯಾತಿ ಇವರದು. ಈ ಚಿತ್ರಕ್ಕೆ ಈಸ್ಟ್‍ಮನ್ ಬಣ್ಣವನ್ನೇ ಆಯ್ದುಕೊಂಡಿದ್ದರಿಂದ ಆ ಬಣ್ಣವೇ ಪ್ರಚುರವಾಗಲು ಅವಕಾಶವಾಯಿತು. ಅಲ್ಲದೇ 'ಗಂಗಾಜಮುನದ ಅಪಾರ ಯಶಸ್ಸಿನಿಂದ ನಿಜವಾದ ಬಣ್ಣದ ಯುಗ ಭಾರತದಲ್ಲಿ ಆರಂಭವಾಯಿತು. ಸುಂದರ ತಾಣಗಳಲ್ಲಿ ಗಿರಿಧಾಮಗಳಲ್ಲಿ ಹೊರಾಂಗಣ ಚಿತ್ರೀಕರಣ ಮಾಡುವ ಪ್ರವೃತ್ತಿಯೂ ಇದರೊಂದಿಗೇ ಹುಟ್ಟಿತು. ಹೊರ ದೇಶಗಳಲ್ಲಿ ಭಾರತದ ಚಿತ್ರಗಳಿಗೆ ಅಪಾರ ಬೇಡಿಕೆ ಬರಲು ಅಲ್ಲಿ ಈ ಚಿತ್ರದ ಯಶಸ್ಸೂ ಕಾರಣವಾಯಿತು. ಈತನ ಕೊನೆಯ ಮೂರು ಚಿತ್ರಗಳೆಂದರೆ ಸಂಘರ್ಷ, ಗೋಪಿ ಹಾಗೂ ಸಗೀನಾ, ಮಹತೊ. ನೋಡಲು ಅಷ್ಟೇನೂ ಸುಂದರಕಾಯನಲ್ಲದ ಈತನ ತನ್ನ ಅಭಿನಯ ಸಾಮಥ್ರ್ಯದಿಂದಲೇ ನೆಲೆನಿಂತು ಅಭಿನಯಚಕ್ರವರ್ತಿ ಎನಿಸಿಕೊಂಡಿದ್ದಾನೆ. ಮೂರು ತಲೆಮಾರಿನ ಸಿನಿಮಾಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ಈತನನ್ನು ಅಭಿನಯವನ್ನು ಸುಂದರ ಕಲೆಯ ಮಟ್ಟಕ್ಕೆ ಏರಿಸಿದ ಭಾರತದ ಏಕೈಕ ನಟ ಎಂದು ಪರಿಗಣಿಸಲಾಗಿದೆ. ಇವನ ತಲೆಗೂದಲ ಶೈಲಿ, ನಗೆಯ ಬಗೆ, ಹಾಗೂ ಮಾತನಾಡುವ ರೀತಿ ಅನನುಕರಣೀಯವಾಗಿ ಇವನಿಗೇ ವಿಶಿಷ್ಟವಾಗಿದೆ. ಚಿತ್ರಗಳಲ್ಲಿ ಮಾತಿಗೆ ಸಂಪೂರ್ಣವಾಗಿ ಹೊಸ ಆಯಾಮ ಕೊಟ್ಟ ನಟ ಈತ. ವಾಕ್ಚಿತ್ರಗಳು ಆರಂಭವಾಗಿ 14 ವರ್ಷಗಳ ಅನಂತರ ತೆರೆಯ ಮೇಲೆ ಪೂರ್ಣಪ್ರಮಾಣದಲ್ಲಿ ಕಾಣಿಸಿಕೊಂಡ ಈತ ಮೌನಕ್ಕೆ ಇರುವ ಬೆಲೆಯನ್ನು ಗುರುತಿಸಿದ. ಆಡುವ ಮಾತಿನೊಂದಿಗೆ ಅಂತರಂಗಿಕ ಭಾವ ಸ್ಥಿತಿಯನ್ನು ಮುಖಭಾವಗಳ ಮೂಲಕ ಅಭಿವ್ಯಕ್ತಗೊಳಿಸಬಲ್ಲ ಶಕ್ತ ತಂತ್ರ ಇವನದಾಗಿತ್ತು. ಮುಸಾಫಿರ್ (1960) ಚಿತ್ರದಲ್ಲಿ ಸ್ವತಃ ಹಾಡಿದ್ದಾನೆ. ದಾಸ್ತಾನ್ (1932), ಕರ್ಮ (1986), ಸೌದಾಗರ್ (1991), ಕಿಲಾ (1998) ಇವು ಕೆಲವು ದಿಲೀಪರ ಪ್ರಮುಖ ಚಿತ್ರಗಳು.
ತಮಗಿಂತ 22 ವರ್ಷ ಕಿರಿಯಳಾದ. ಹಿಂದಿ ಚಿತ್ರರಂಗದ ರೂಪರಾಣಿಯೆಂದು ಹೆಸರಾಂತ ನಟಿ ಸಾಯಿರಾಬಾನುವನ್ನು ಮದುವೆಯಾಗಿರುವ ದಿಲೀಪ್ ಆಕೆಯೊಂದಿಗೆ ಗೋಪಿ, ಸಗೀನಾ, ಮಹತೋಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಹೆಚ್ಚಾಗಿ ತೆರೆಯ ಮೇಲೆ ಕಾಣಿಸಿಕೊಳ್ಳದಿದ್ದರೂ ತಾರಾಪತ್ನಿ ನಿರ್ಮಿಸುತ್ತಿರುವ ಟಿವಿ ಧಾರಾವಾಹಿ ನಿರ್ಮಾಣದಲ್ಲಿ ಸರ್ಕಾರಿ ಹೊರವಲಯ ಮುದ್ರಣಾಲಯಭಾಗಿಯಾಗಿ ವಿಕಾಸಗೊಳ್ಳುತ್ತಿರುವ ಮನರಂಜನಾ ಉದ್ಯಮದೊಂದಿಗೆ ನಿಕಟ ಸಂಪರ್ಕ ವಿರಿಸಿಕೊಂಡಿದ್ದಾರೆ. (ಎಸ್.ಎಸ್.ಎಂ.ಯು.)
ದಿಲೀಪ್‍ಕುಮಾರರು ಅಭಿನಯಿಸಿದ ಪಾತ್ರಗಳು ಜೀವಂತಿಕೆಯಿಂದ ಕೂಡಿರುತ್ತವೆ. ಶೃಂಗಾರ, ಶೋಕ, ವೀರ, ಧೀರೋತ್ಥಾನ ನಾಯಕ, ಯಾವುದೇ ಆಗಿರಲಿ, ಆ ಪಾತ್ರಗಳ ಬಗೆಗೆ ಶ್ರದ್ಧೆಯಿಂದ ಅಧ್ಯಯನ ಮಾಡುತ್ತಾರೆ. ಅಭಿನಯ ಸಂಭಾಷಣೆಗಳು ಸಹಜವಾಗಿರುವಂತೆ ಪೂರ್ವಸಿದ್ಧತೆ ನಡೆಸುತ್ತಾರೆ. 'ಕೊಹಿನೂರ್ ಚಿತ್ರದಲ್ಲಿ ಸಿತಾರ್ ನುಡಿಸಬೇಕಾದ ಸಂದರ್ಭ. ಅಭಿನಯ ಸಹಜವಾಗಿರಲೆಂದು ಅವರು ಸಿತಾರ್ ನುಡಿಸುವುದನ್ನು ಅಭ್ಯಾಸ ಮಾಡಿದರು. ಠುವರಿ ಹಾಡಿಗೆ ------- ನೀಡಲು ಒಪ್ಪಲಿಲ್ಲ. ಅದಕ್ಕಾಗಿ ಕೆಲವು ದಿನ ರಿಯಾಜ್ ಮಾಡಿದರು. ದಿಲೀಪ ಕುಮಾರರ ಸಹಜಾಭಿನಯದ ಯಶಸ್ಸಿನ ಗುಟ್ಟು ಇದು ಎಂದೇ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (1994) ಅವರನ್ನು ಸಹಜವಾಗಿ ಅರಸಿ ಬಂತು. ಫಿಲಂಫೇರ್ ಪತ್ರಿಕೆಯ ಜೀವಿತಾವಧಿಯ ಸಾಧನೆಗಾಗಿ ಪುರಸ್ಕಾರವೂ ದೊರೆಯಿತು. ಭಾರತ ಸರಕಾರ ಪದ್ಮ ಪ್ರಶಸ್ತಿ ನೀಡಿದೆ. ರಾಜ್ಯ ಸಭೆಯ ಸದಸ್ಯರನ್ನಾಗಿ ನೇಮಕ ಮಾಡಿ ಗೌರವಿಸಿದೆ. ಪರಿಷ್ಕರಣೆ: ಎಂ.ಬಿ.ಸಿಂಗ್