ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೀಘನಿಕಾಯ

ವಿಕಿಸೋರ್ಸ್ದಿಂದ

ದೀಘನಿಕಾಯ ಬೌದ್ಧರ ಪ್ರಮಾಣಗ್ರಂಥವಾದ ತ್ರಿಪಿಟಕದ ಒಂದು ಭಾಗವಾದ ಸುತ್ತಪಿಟಕದಲ್ಲಿನ ಐದು ನಿಕಾಯಗಳಲ್ಲಿ ಒಂದು, ಮೊದಲನೆಯದು. ಇದರಲ್ಲಿ ಅತಿ ಉದ್ದವಾದ ಮೂವತ್ತುನಾಲ್ಕು ಸೂತ್ರಗಳಿವೆ ಇವೆಲ್ಲವೂ ಬೌದ್ಧ ಧರ್ಮದ ತತ್ತ್ವಗಳನ್ನು ವಿಶದೀಕರಿಸುವ ಸೂತ್ರಗಳಾಗಿದ್ದು, ಗಾತ್ರದ ದೃಷ್ಟಿಯಿಂದ ಒಂದೊಂದೂ ಸ್ವತಂತ್ರ ಕೃತಿಯಾಗಬಲ್ಲದು. ಇದರಲ್ಲಿ ಒಟ್ಟು ಮೂರು. ದೊಡ್ಡ ಭಾಗಗಳಿವೆ. ವಿಷಯಗಳ ದೃಷ್ಟಿಯಿಂದ ಇವು ಪರಸ್ಪರ ಭಿನ್ನವಾಗಿವೆ. ಆದರೆ ಬೌದ್ಧ ಸಂಪ್ರದಾಯಗಳ ಅಭಿಪ್ರಾಯಗಳನ್ನು ಈ ಎಲ್ಲ ಭಾಗಗಳಲ್ಲೂ ಕಾಣಬಹುದು.

ಮೊದಲನೆಯ ಭಾಗದಲ್ಲಿ ಶೀಲ, ಸಮಾಧಿ, ಪ್ರಜ್ಞೆ, ಮೊದಲಾದ ನೈತಿಕ ಸಂಗತಿಗಳ ವಿವರಣೆಯಿದೆ. ಇಲ್ಲಿ ವಿಶೇಷವಾಗಿ ಬ್ರಾಹ್ಮಣರ ಖಂಡನೆ ಮೇಲಿಂದ ಕಂಡು ಬರುತ್ತದೆ. ಬ್ರಾಹ್ಮಣರ ನೀತಿನಿಯಮಗಳು ಹೇಗೆ ಧರ್ಮಬಾಹ್ಯವಾಗಿದ್ದುವು ಎಂಬುದನ್ನು ಬುದ್ಧ ತನ್ನ ಅನುಯಾಯಿಗಳಿಗೆ ತಿಳಿಸಿ ಹೇಳಲು ಪ್ರಯೋಜಿಸಿದ ಕಥಾನಕಗಳೂ ಇಲ್ಲಿವೆ. ಬ್ರಹ್ಮಜಾಲ ಸುತ್ತದಲ್ಲಿ ಬ್ರಾಹ್ಮಣರ ಧರ್ಮ ಮತ್ತು ಸಮಾಜವನ್ನು ಬುದ್ಧ ಕಟುವಾಗಿ ಟೀಕಿಸಿದ್ದನ್ನು ಕಾಣಬಹುದು. ಬ್ರಾಹ್ಮಣರು ಯಾವ ತರದ ಉದ್ಯೋಗಗಳನ್ನು ಯಾವ ರೀತಿಯಲ್ಲಿ ಮಾಡುತ್ತಾರೆ, ಅವರ ಮಾತಿನ ಸರಣಿ ಎಂಥದು, ಅವರ ಜೀವನದ ಗುರಿ ಏನು, ಅವರ ಆಚಾರ-ವಿಚಾರಗಳು ಯಾವ ಬಗೆಯಾಗಿರುತ್ತವೆ - ಇವೇ ಮೊದಲಾದ ಸಂಗತಿಗಳನ್ನು ಬುದ್ಧ ತನ್ನ ಶಿಷ್ಯರಿಗೆ ತಿಳಿಸಿ ಹೇಳಲು ಇಲ್ಲಿ ಪ್ರಯತ್ನಪಟ್ಟಿದ್ದಾರೆ. ಬ್ರಾಹ್ಮಣರು ದ್ರವ್ಯಸಂಚಯ ಮಾಡುತ್ತಾರೆ; ನೃತ್ಯ, ಸಂಗೀತ, ನಾಟಕ, ವಾದ್ಯ ಮತ್ತು ಎಲ್ಲ ಬಗೆಯ ಆಟಪಾಟಗಳಲ್ಲಿ ಅಭಿರುಚಿಯನ್ನು ತೋರಿಸುತ್ತಾರೆ. ಮಂತ್ರತಂತ್ರ, ಜ್ಯೋತಿಷಶಾಸ್ತ್ರ, ಪೂಜೆ ಪುರಸ್ಕಾರಗಳನ್ನು ಅವಲಂಬಿಸಿ ತಮ್ಮ ಉಪಜೀವನ ಮಾಡುತ್ತಾರೆ. ಇದು ಬುದ್ಧ ಮಾಡಿದ ಉಪದೇಶ. ಇದೇ ಬ್ರಹ್ಮಜಾಲಸುತ್ತದ ತಿರುಳು. ಎರಡನೆಯ ಸೂತ್ರವಾದ ಸಾಮನ್ನ ಫಲಸುತ್ತದಲ್ಲಿ ಮುನಿಜೀವನದ ಫಲವನ್ನು ಕುರಿತ ಪ್ರವಚನಗಳಿವೆ. ಇವು ಪ್ರಾಚೀನ ಭಾರತದ ಜನಜೀವನಕ್ಕೆ ಹಿಡಿದ ಕನ್ನಡಿಯಂತಿವೆ. ಇಲ್ಲಿ ಪ್ರಾಚೀನ ಭಾರತದ ಸಂಸ್ಕøತಿಯ ರೂಪರೇಷೆಗಳನ್ನು ಕಾಣಬಹುದು. ಅಜಾತಶತ್ರು ಎಂಬ ಅರಸ ಬುದ್ಧನ ಸಂದರ್ಶನಕ್ಕೆ ಹೋದ ಸಂಗತಿಯ ವಿಸ್ತøತ ವರ್ಣನೆ ಇಲ್ಲಿದೆ. ಅಲ್ಲದೆ ಬೌದ್ಧೇತರ ಧಾರ್ಮಿಕ ಗುರುಗಳ ಮತ್ತು ಪಂಥಗಳ ಸ್ಥಾಪಕರ ಪರಿಚಯ ಇಲ್ಲಿ ದೊರೆಯುತ್ತದೆ. ಭಾರತೀಯ ಜಾತಿಪದ್ಧತಿ ಮತ್ತು ಅದರ ಬಗ್ಗೆ ಬುದ್ಧ ತಳೆದ ಧೋರಣೆ - ಇವುಗಳ ದೃಷ್ಟಿಯಿಂದ ಅಂಬಟ್ಣಸುತ್ತ ಬಹಳ ಮಹತ್ತ್ವದ್ದಾಗಿದೆ. ಸತ್ಯ ವಂಶದ ಇತಿಹಾಸ ಮತ್ತು ಋಷಿ ಕೃಷ್ಣರ ಬಗೆಗೆ ಇದ್ದ ಉಲ್ಲೇಖಗಳ ಕಾರಣ ಈ ಗ್ರಂಥಕ್ಕೆ ವಿಶೇಷ ಪ್ರಾಧಾನ್ಯ ಕೊಡಲಾಗಿದೆ. ಕೂಟದಂತಸುತ್ತದಲ್ಲಿ ಹರಿತವಾದ ಹಲ್ಲುಗಳನ್ನು ಕುರಿತು ಹೇಳಲಾಗಿದೆ. ತೆಜ್ಜವಿಜ್ಜಸುತ್ತದಲ್ಲಿ ಮೂರು ವೇದಗಳಲ್ಲಿ ಪಾಂಡಿತ್ಯ ಪಡೆದವರನ್ನು ಕುರಿತು ಬುದ್ಧ ಮಾಡಿದ ಉಪದೇಶಗಳ ಸಂಗ್ರಹವಿದೆ. ಬ್ರಾಹ್ಮಣರು ಯಜ್ಞಯಾಗಾದಿ ಕಾಲದಲ್ಲಿ ಮಾಡುತ್ತಿದ್ದ ಪ್ರಾಣಿಹಿಂಸೆಯ ಪ್ರತ್ಯಕ್ಷ ಚಿತ್ರಣವಿದೆ. ಬೌದ್ಧರು ತಮ್ಮ ಧರ್ಮದ ನಿಯಮಗಳಂತೆ ಯಜ್ಞಯಾಗಾದಿಗಳನ್ನು ಮಾಡಬೇಕೆಂದು ಉಪದೇಶ ಮಾಡಿದುದರ ಬಗ್ಗೆ ವಿವರವಾದ ವರ್ಣನೆಯಿದೆ. ಮಹಾನಿದನಸುತ್ತದಲ್ಲಿ ಮನುಷ್ಯ ಮಾಡಿದ ಕರ್ಮಗಳಿಗೆ ಕಾರಣಗಳಾವುವು ಎಂಬುದನ್ನು ಕೂಲಂಕುಷವಾಗಿ ವಿವೇಚಿಸಲಾಗಿದೆ. ಮಹಾಸತಿಪಟ್ಠಾನ ಸುತ್ತ ನಾಲ್ಕು ಆರ್ಯಸತ್ಯಗಳ ವಿವರಣೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಇದರಲ್ಲಿ ಬೌದ್ಧ ಧರ್ಮದ ಮೂಲ ತತ್ತ್ವಗಳ ಬಗ್ಗೆ ಮಾಡಿದ ಚರ್ಚೆಯ ವಿವರವಿದೆ. ನೈತಿಕ ತತ್ತ್ವಗಳನ್ನು ವಿವರವಾಗಿ ಸಿಗಾಲೋವಾದಸುತ್ತ ಹೇಳುತ್ತದಲ್ಲದೆ ಬೌದ್ಧ ಧರ್ಮದ ಅನುಯಾಯಿಗಳು ಹೇಗೆ ಬದುಕಬೇಕೆಂಬುದನ್ನು ತಿಳಿಸುತ್ತದೆ. ಕೌಟುಂಬಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯ ದೃಷ್ಟಿಯಿಂದ ಈ ಗ್ರಂಥ ಬಹಳ ಮಹತ್ತ್ವದ್ದಾಗಿದೆ.

ಹದಿನಾರನೆಯ ಸೂತ್ರವಾದ ಮಹಾಪರಿನಿಬ್ಬಾಣಸುತ್ತ ದೀಘನಿಕಾಯವನ್ನು ಬೌದ್ಧ ಸಾಹಿತ್ಯದಲ್ಲಿಯೇ ಅತಿ ದೊಡ್ಡ ಸ್ಥಾನದಲ್ಲಿದೆ. ಬುದ್ಧ ಪಡೆದ ಮಹಾನಿರ್ವಾಣವನ್ನು ಕುರಿತು ಮಾಡಿದ ಪ್ರವಚನಗಳು ಇಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುತ್ತವೆ. ಇಲ್ಲಿ ಬುದ್ಧನ ಜೀವನದ ಕೊನೆಯ ಭಾಗದಲ್ಲಿನ ಚಟುವಟಿಕೆಗಳ ಹಾಗೂ ಆತನ ಕೊನೆಯ ಭಾಷಣಗಳ ಮತ್ತು ವಚನಗಳ ಸುದೀರ್ಘ ವರ್ಣನೆಯಿದೆ. ಮಹಾ ಅಪದಾನಸುತ್ತದಲ್ಲಿ ಬುದ್ಧನ ಚಮತ್ಕøತಿಗಳನ್ನು ವರ್ಣಿಸಲಾಗಿದೆ. ಬುದ್ಧನಿಗೆ ಪ್ರತಿಸ್ಪರ್ಧಿಗಳಾದ ಆರು ಪ್ರತಿಬುದ್ಧರ ಉಲ್ಲೇಖವೂ ಇಲ್ಲಿ ಬಂದಿದೆ. ಲಕ್ಖಣಸುತ್ತದಲ್ಲಿ ಮಹಾಪುರುಷರ 32 ಲಕ್ಷಣಗಳನ್ನು ವಿವರಿಸಲಾಗಿದೆ. ಪಾಟಿಕಸುತ್ತ ಬುದ್ಧನ ಚಮತ್ಕಾರಿ ಉಪದೇಶಗಳಿಂದ ಕೂಡಿದೆ. ಸಕ್ಕಪಗಹಿಸುತ್ತದಲ್ಲಿ ಇಂದ್ರ ಮತ್ತು ಗೌತಮಬುದ್ಧರ ನಡುವೆ ನಡೆದ ಪ್ರಶ್ನೋತ್ತರಗಳ ಚರ್ಚೆಯಿದೆ. ಚಕ್ಕವತ್ತಿ ಸೀಹನಾದಸುತ್ತ ನೈತಿಕ ವಿಚಾರಗಳ ಉತ್ಪತ್ತಿಯನ್ನು ಕುರಿತು ವಿವೇಚಿಸುತ್ತದೆ. ಪಾಯಾಸಿಸುತ್ತದಲ್ಲಿ ಆತ್ಮದ ಅಸ್ತಿತ್ವದ ಬಗ್ಗೆ ಅರಸನಾದ ಪಏಸಿ (ಪಾಯಾಸಿ) ಮತ್ತು ಕುಮಾರ ಕಸ್ಸಪನೆಂಬ ಸಾಧುವಿನ ನಡುವೆ ನಡೆದ ಗಂಭೀರ ಚರ್ಚೆಯ ವರ್ಣನೆಯಿದೆ. ಆಟಾನಾಟಿಯ ಸುತ್ತದಲ್ಲಿ ಹಾವು, ರಾಕ್ಷಸ ಮೊದಲಾದ ಪ್ರಾಣಿಗಳಿಗೆ ತಡಯನ್ನುಂಟುಮಾಡಲು ಉಪಯುಕ್ತವಾದ ಮಂತ್ರಿಗಳ ವಿವರಣೆ ಇದೆ.

ದೀಘನಿಕಾಯದ ವಿಷಯ ವೈವಿಧ್ಯಪೂರ್ಣವಾಗಿರುವುದರಿಂದ, ಈ ಕೃತಿಯ ಲೇಖಕ ಒಬ್ಬನೇ ಆಗಿರಲಾರನೆಂದು ಅನೇಕ ವಿದ್ವಾಂಸರು ಅಭಿಪ್ರಾಯಪಟ್ಟಿದ್ದುಂಟು. ಆದರೂ ಬುದ್ಧನ ಉಪದೇಶಗಳ ಮೂಲ ಸ್ವರೂಪವನ್ನು ತಿಳಿದುಕೊಳ್ಳುವವರಿಗೆ ಈ ಗ್ರಂಥ ಒಂದು ವರದಾನವೆಂದೇ ಭಾವಿಸಬೇಕು. (ಪಿ.ಬಿ.ಬಿ.)