ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದುಃಖತ್ರಯ
ದುಃಖತ್ರಯ - ವೈದಿಕ ಅವೈದಿಕ ಧರ್ಮಗಳೆಲ್ಲ ಭವದ ದುಃಖಗಳ ನಿವಾರಣೆಗಾಗಿಯೇ ಹುಟ್ಟಿದವು. ದುಃಖವೇ ಎಲ್ಲ ಕಷ್ಟಗಳಿಗೂ ಮೂಲವೆನ್ನುವುದು ಬೌದ್ಧಮತದ ಆದ್ಯ ಸತ್ಯಗಳಲ್ಲೊಂದು.
ವೈದಿಕ ಧರ್ಮಗಳಲ್ಲಿ ದುಃಖವೆನ್ನುವುದರ ಪರಿಶೀಲನೆ ಬಹುವಾಗಿ ನಡೆದಿದೆ. ಸಾಂಖ್ಯದರ್ಶನ ದುಃಖ ಪರಿಹಾರಕ್ಕಾಗಿ ಹುಟ್ಟಿಕೊಂಡಿತೆಂದು ಸಾಂಖ್ಯಕಾರಿಕದ ಮೊದಲನೆಯ ಕಾರಿಕೆ ತಿಳಿಸುತ್ತದೆ. ಸಾಂಖ್ಯರ ಪ್ರಕಾರ ದುಃಖಗಳು ಮೂರು ವಿಧ. ಅವು ಆಧ್ಯಾತ್ಮಿಕ, ಆದಿಭೌತಿಕ ಮತ್ತು ಆದಿದೈವಿಕ. ದೇಹ, ಇಂದ್ರಿಯ ಅಂತಃಕರಣ-ಸಂಘಾತ ಪರವಾದ ದುಃಖ ಆಧ್ಯಾತ್ಮಿಕವಾದದ್ದು. ಎಂದರೆ, ವಾತ ಪಿತ್ತ, ಶ್ಲೇಷ್ಮಗಳ ವಿಪರ್ಯಯದಿಂದ ಜನಿಸುವ ಎಲ್ಲ ರೀತಿಯ ಅತಿಸಾರಗಳೂ ದೇಹಕ್ಕೆ ಸಂಬಂಧಿಸಿದವು. ಕಾಮ, ಕ್ರೋಧ, ಲೋಭ, ಮೋಹ, ಭಯ, ಈರ್ಷೆ, ವಿಷಾದ, ಪ್ರಿಯವಿಯೋಗ, ಅಪ್ರಿಯ ಸಂಯೋಗ ಮುಂತಾದುವು ಮನಸ್ಸಿಗೆ ಸಂಬಂಧಿಸಿದವು.
ಆದಿಭೌತಿಕ ದುಃಖವೆನ್ನುವುದು ಜರಾಯುಜ, ಅಂಡಜ, ಸ್ವೇದಜ, ಉದ್ಭಿಜ ಮುಂತಾದವುಗಳಿಂದ ಆಗಬಹುದಾದ್ದು. ಆದಿದೈವಿಕ ದುಃಖ ದೇವತೆಗಳಿಂದ ಯಕ್ಷರಾಕ್ಷಸರಿಂದ ಮತ್ತು ಗ್ರಹಗಳಿಂದ ಆಗುವಂಥದು.
ಸಾಂಖ್ಯಕಾರಿಕೆಯಲ್ಲಿ ಪ್ರಸ್ತಾವನಾರೂಪದಲ್ಲಿಯೇ ತ್ರಿವಿಧ ದುಃಖಗಳನ್ನು ಸೂಚಿಸಿ, ಇವುಗಳಿಂದ ಪಾರಾಗುವ ಉದ್ದೇಶದಿಂದಲೇ ಸಾಂಖ್ಯತತ್ತ್ವ ಹುಟ್ಟಿತೆಂಬಂತೆ ಹೇಳಲಾಗಿದೆ. ಈ ದುಃಖಗಳನ್ನು ತಡೆಯಲು ಆಗುತ್ತದೆಯೇ ಎಂಬುದು ನಮ್ಮ ಮುಂದಿನ ಪ್ರಶ್ನೆ. ಶರೀರಕ್ಕೆ ಸಂಬಂಧಪಟ್ಟ ರೋಗರುಜಿನಗಳನ್ನು ತಡೆಯಬಹುದು. ಆದರೆ ಅವು ಮತ್ತೆ ಉದ್ಭವಿಸಲೂ ಬಹುದು. ಪ್ರಬಲ ಶತ್ರುಗಳನ್ನು ಹೇಗೆ ಸ್ವಲ್ಪಕಾಲ ಮಾತ್ರವೇ ತಡೆಯಬಹುದೋ ಹಾಗೆ ದೈಹಿಕವಾದ ದುಃಖಗಳನ್ನು ತಡೆಯಬಹುದಲ್ಲದೆ ಸಂಪೂರ್ಣ ನಿವಾರಿಸಲಾಗದು. ದೇವತೆ, ಯಕ್ಷ, ರಾಕ್ಷಸ ಇತ್ಯಾದಿ ದುಷ್ಟ ಶಕ್ತಿಗಳ ಹಾವಳಿಯನ್ನು ಯಜ್ಞ, ಹೋಮಾದಿಗಳಿಂದ ತಡೆಗಟ್ಟಬಹುದಾದರೂ ಅವುಗಳಿಂದ ಸಂಪೂರ್ಣ ಮುಕ್ತರಾಗುವ ಭರವಸೆಯಿಲ್ಲ. ಹಾಗೆಯೇ ನಮ್ಮಲ್ಲಿಯೇ ಉದ್ಭವಿಸುವ ಮಾನಸಿಕ ಆಶೆ, ರಾಗಸಂಪರ್ಕಗಳಿಂದುಂಟಾದ ದುಃಖಗಳು ಸದಾಕಾಡಬಹುದು. ಆದ್ದರಿಂದ ದುಃಖನಾಶಕ್ಕೆ ಅಂತಿಮ ಮಾರ್ಗವಾವುದು ಎನ್ನುವ ಪ್ರಶ್ನೆಗೆ ಉತ್ತರವಾಗಿ ಸಾಂಖ್ಯರು ಈ ರೀತಿ ಹೇಳುತ್ತಾರೆ : ತ್ರಿಗುಣ ಸಂಬಂಧದಿಂದ ಪುರುಷನ ಬಿಡುಗಡೆಯಾಗದಿದ್ದರೆ ದುಃಖತ್ರಯಗಳಿಂದ ಬಿಡುಗಡೆಯಿಲ್ಲ. ಎಂದರೆ ಪ್ರಕೃತಿ ಪುರುಷರ ಭೇದe್ಞÁನ ಉದ್ಭವಿಸಬೇಕು. ಅದೇ ಸಾಂಖ್ಯe್ಞÁನ. ಅದೇ ಮುಕ್ತಿಮಾರ್ಗ. (ಕೆ.ಬಿ.ಆರ್.)