ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದುರ್ಜಯ ವಂಶ
ದುರ್ಜಯ ವಂಶ - ಈ ವಂಶಕ್ಕೆ ಸೇರಿರುವುದಾಗಿ ಹೇಳಿಕೊಂಡ ಅನೇಕ ರಾಜರು ಚಾಳುಕ್ಯ, ಚೋಳ ಮತ್ತು ಕಾಕತೀಯರ ಸಾಮಂತರಾಗಿದ್ದರು. ಗುಂಟೂರು, ಕೃಷ್ಣಾ ಜಿಲ್ಲೆಗಳ ಬಳಿ ಅಧಿಕಾರದಲ್ಲಿದ್ದ ವೆಲನಾಡು ಚೋಳರೂ ಅವರೊಡನೆ ಸಂಬಂಧ ಮಾಡಿದ ಕೊಂಡಪಡುಮಟಿ (ಕೊಂಡವೀಡು ಬೆಟ್ಟದ ಪಶ್ಚಿಮದ) ಚೋಳವಂಶದ ಬುದ್ಧರಾಜನೂ ಮೊದಲನೆಯ ಕುಲೋತ್ತುಂಗ ಚೋಳ ಮತ್ತು ವಿಕ್ರಮ ಚೋಳರ ಸಾಮಂತನಾದ ಮಹಾಮಂಡಲೇಶ್ವರ ನಂಬಯನೂ ತಾವು ದುರ್ಜಯ ವಂಶಸ್ಥರೆಂದು ಹೇಳಿಕೊಂಡಿದ್ದಾರೆ. ನಟವಾಡಿ ಸೀಮೆ ಹಾಗೂ ವಿಜಯವಾಟಿ ವಿಷಯಗಳಲ್ಲಿ ಪ್ರಬಲರಾಗಿದ್ದ ಚಾಗಿಗಳೂ ವರಂಗಲು ಜಿಲ್ಲೆಯ ಗೂಡೂರಿನಲ್ಲಿ ಅಧಿಕಾರದಲ್ಲಿದ್ದ ವಿರಿಯಾಲ ವಂಶಸ್ಥರೂ ಪರಿಚ್ಛೇದಿಗಳೂ ಈ ವಂಶಸ್ಥರೇ. ದುರ್ಜಯ ಕುಲದವರೆಲ್ಲ ವಿಷ್ಣು ಪಾದೋದ್ಭವರೆಂದೂ ಚತುರ್ಥಾನ್ವಯದವರೆಂದೂ ಅನೇಕ ಶಾಸನಗಳಲ್ಲಿ ಹೇಳಲಾಗಿದೆ. ಅವರು ಸೂರ್ಯವಂಶಜರೆಂದೂ ಅವರಲ್ಲಿ ಮನು, ರಘು ಮುಂತಾದವರು ರಾಜ್ಯಭಾರಮಾಡಿದರೆಂದೂ ಐತಿಹಾಸಿಕವಾಗಿ ದುರ್ಜಯ ಆ ವಂಶದ ಪ್ರಥಮ ರಾಜನೆಂದೂ ಕಾಕತೀಯರ ಶಾಸನಗಳಿಂದ ತಿಳಿಯಲಾಗಿದೆಯಾಗಿ ಕಾಕತೀಯರೂ ದುರ್ಜಯ ವಂಶದವರೇ. ಆದರೆ ಕರಿಕಾಲ ಚೋಳ, ತ್ರಿಲೋಚನ ಪಲ್ಲವ ಮುಂತಾದವರಂತೆ ಈ ದುರ್ಜಯನೂ ಪೌರಾಣಿಕ ಪುರುಷ. 10-11 ನೆಯ ಶತಮಾನಗಳ ಬಳಿಕ ಆಂಧ್ರದಲ್ಲಿ ತಲೆಯೆತ್ತಿದ ಚತುರ್ಥಾನ್ವಯಕ್ಕೆ ಸೇರಿದ ಅನೇಕ ಸಾಮಂತರಾಜರೇ ಮೊದಲಾದವರು ತಾವು ದುರ್ಜಯವಂಶಸ್ಥರೆಂದು ಹೇಳಿಕೊಳ್ಳುವುದರ ಮೂಲಕ ತಾವು ಕ್ಷತ್ರಿಯರೆಂದು ನಿರೂಪಿಸಿಕೊಳ್ಳಲು ಯತ್ನಿಸಿದಂತೆ ತೋರುತ್ತದೆ. (ಜಿ.ಬಿ.ಆರ್.)