ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದುಶ್ಯಾಸನ

ವಿಕಿಸೋರ್ಸ್ದಿಂದ

ದುಶ್ಯಾಸನ

	ಮಹಾಭಾರತದ ದುಷ್ಟ ಚತುಷ್ಟಯರಲ್ಲಿ ಒಬ್ಬ. ಧೃತರಾಷ್ಟ್ರ ಗಾಂಧಾರಿಯರ ಎರಡನೆಯ ಮಗ. ದುರ್ಯೋಧನನಂತೆ ಶೂರ ಹಾಗೂ ಪರಾಕ್ರಮಿ. ಅಣ್ಣನಿಗೆ ಎಲ್ಲ ಸಂದರ್ಭಗಳಲ್ಲಿಯೂ ಸಲಹೆಗಾರನಾಗಿದ್ದವ.

ಪಾಂಡವರು ಕಪಟದ್ಯೂತದಲ್ಲಿ ಸೋತಾಗ, ಅಣ್ಣನ ಅಪ್ಪಣೆಯ ಪ್ರಕಾರ ದುಶ್ಯಾಸನ ದ್ರೌಪದಿಯನ್ನು ಒತ್ತಾಯದಿಂದ ಸಭೆಗೆಳೆತಂದು, ವಸ್ತ್ರಾಪಹರಣದ ಪ್ರಯತ್ನ ನಡೆಸಿದ. ಆಗ, ಭೀಮಸೇನ ಈತನ ರಕ್ತ ಹೀರುವೆನೆಂದು ಪ್ರತಿಜ್ಞೆ ಮಾಡಿದ. ಯುಧಿಷ್ಠಿರನ ರಾಜಸೂಯಯಾಗದ ಸಮಯದಲ್ಲಿ ಈತ ಆಹಾರ ವಿತರಣೆಯ ಕಾರ್ಯ ವಹಿಸಿದ್ದ. ವಿರಾಟನ ಗೋವುಗಳನ್ನು ಕದಿಯಲು ಹೊರಟ ದುರ್ಯೋಧನನ ಸೈನ್ಯವನ್ನು ಈತನೇ ಸಜ್ಜುಗೊಳಿಸಿದ. ಗೋಗ್ರಹಣ ಸಂದರ್ಭದಲ್ಲಿ ಅರ್ಜುನನೊಂದಿಗೆ ಹೋರಾಡಿ ಸೋತ. ಕುರುಕ್ಷೇತ್ರದ ಹತ್ತನೆಯ ದಿವಸದ ಯುದ್ಧದಲ್ಲಿ ಅರ್ಜುನನೊಂದಿಗೆ ಯುದ್ಧ ಮಾಡಿ ಸೋತ. ಹದಿಮೂರನೆಯ ದಿನದ ಯುದ್ಧದಲ್ಲಿ ಅಭಿಮುನ್ಯುವಿನೊಂದಿಗೆ ಹೋರಾಡಿ ಪಾಡುಪಟ್ಟ. ಹದಿನಾಲ್ಕನೆಯ ದಿನದಲ್ಲಿ ಸಾತ್ಯಕಿಯ ಮೇಲೆ ದಾಳಿ ಮಾಡಿ ಸೋತ. ಸಾತ್ಯಕಿಯನ್ನು ಕಂಡು ಹೆದರಿ ಓಡುತ್ತಿದ್ದ ಈತನನ್ನು ದ್ರೋಣ ಹೀಯಾಳಿಸಿದ. ಅನಂತರ ಭೀಮಸೇನನ ಮೇಲೆ ದಾಳಿ ಮಾಡಿದ. ಪ್ರತಿವಿಂದ್ಯನೊಂದಿಗೆ ಹೋರಾಡಿದ. ಸಹದೇವ, ದೃಷ್ಟದ್ಯುಮ್ನರಿಂದಲೂ ಸೋತ. ಈತನ ಮಗ ಅಭಿಮನ್ಯುವನ್ನು ಕೊಂದ. ದ್ರೌಪದಿಯ ಮಗ ಈತನ ಮಗನನ್ನು ಕೊಂದ. ಭೀಮ ಈತನನ್ನು ನೆಲಕ್ಕೆ ಕೆಡಹಿ, ಎದೆಯನ್ನು ಸೀಳಿ, ರಕ್ತಪಾನ ಮಾಡಿದ.

                              							(ಎಸ್.ಎಂ.ಎ.ಎಲ್.)