ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೂರಮುದ್ರಕ
ದೂರಮುದ್ರಕ
ದೂರಲೇಖನ ಮಂಡಳದ ಮೂಲಕ ಮಾಹಿತಿಗಳನ್ನು ಪ್ರೇಷಿಸಲು ಹಾಗೂ ಅಭಿಗ್ರಹಿಸಲು ಬಳಸುವ ಸಾಧನ (ಟೆಲಿಪ್ರಿಂಟರ್). ದೂರಮೊಳೆಜೋಡಕ (ಟೆಲಿಟೈಪ್‍ಸೆಟರ್) ಎಂದೂ ಹೆಸರಿದೆ. ದೂರ ಮುದ್ರಕದಲ್ಲಿ ಬೆರಳಚ್ಚು ಯಂತ್ರದಲ್ಲಿರುವಂಥ ಕೀಲಿ ಹಲಗೆ (ಕೀಬೊರ್ಡ್) ಉಂಟು. ಈ ಯಂತ್ರದಲ್ಲಿ ಮುಖ್ಯವಾಗಿ (1) ಪ್ರೇಷಕ ಮತ್ತು (2) ಅಭಿಗ್ರಾಹಕ ಎಂಬ ಎರಡು ಭಾಗಗಳಿವೆ. ಇವೆರಡನ್ನೂ ಒಂದೇ ಪೀಠದ ಮೇಲೆ ಜೋಡಿಸಿದೆ (ಚಿತ್ರ 1). ಪ್ರೇಷಕದಲ್ಲಿ ಕೀಲಿ ಹಲಗೆಯೂ ಪ್ರೇಷಣ ವ್ಯವಸ್ಥೆಯೂ ಇವೆ. ಪ್ರೇಷಣದ ಕಾರ್ಯವನ್ನು ಕೀಲಿಹಲಗೆ ನಿಯಂತ್ರಿಸುತ್ತದೆ. ಕೀಲಿ ಹಲಗೆಯಲ್ಲಿನ ಪ್ರತಿಯೊಂದು ಕೀಲಿಯೂ ಪರಿಕರ್ಮಿ ಅದನ್ನು ಒತ್ತಿದಾಗ, ವಿದ್ಯುತ್ ಸ್ಪಂದಗಳನ್ನು ದೂರಮುದ್ರಣ ಮಾರ್ಗಗಳ ಮೂಲಕ ಅಭಿಗ್ರಾಹಕಕ್ಕೆ ರವಾನಿಸುತ್ತದೆ. ಅದು ವಿದ್ಯುತ್ ಸ್ಪಂದಗಳನ್ನು ಗ್ರಹಿಸಿ ತದನುಗುಣವಾಗಿ ಕೆಲಸಮಾಡುವ ವಿದ್ಯುತ್ಕಾಂತವನ್ನು ಪ್ರವರ್ತಿಸಿ ಸಂಕೇತಗಳಿಗೆ ಸರಿಯಾದ ಅಕ್ಷರಗಳನ್ನು ಕಾಗದದ ಲಾಡಿಯ ಮೇಲಾಗಲಿ ಕಾಗದದ ಹಾಳೆಯ ಮೇಲಾಗಲಿ ಮುದ್ರಿಸಬಲ್ಲುದು. ದೂರಮುದ್ರಕವನ್ನು ಪ್ರೇಷಣಕಾರ್ಯಕ್ಕಾಗಿ ಉಪಯೋಗಿಸುತ್ತಿರುವಾಗ ಅಭಿಗ್ರಾಹಕವಾಗಿ ಕೆಲಸಮಾಡಲಾಗಲಿ ಅಭಿಗ್ರಾಹಕವಾಗಿ ಕೆಲಸ ಮಾಡುತ್ತಿರುವಾಗ ಪ್ರೇಷಕವಾಗಿ ಕೆಲಸಮಾಡಲಾಗಲಿ ಉಪಯೋಗಿಸಲು ಸಾಧ್ಯವಿಲ್ಲ.
ದೂರಮುದ್ರಕದಲ್ಲಿನ ಪ್ರೇಷಕ ಅಭಿಗ್ರಾಹಕ ಮತ್ತು ಮುದ್ರಣ ವ್ಯವಸ್ಥೆಗಳೆಲ್ಲ ಕೆಲಸಮಾಡಲು ಬೇಕಾಗುವ ಶಕ್ತಿಯನ್ನು ವಿದ್ಯುಚ್ಚಾಲಕ ಒದಗಿಸುತ್ತದೆ. ಅದರ ವೇಗ ಹೆಚ್ಚು ಕಡಿಮೆ ಆಗದಂತೆ ಏರ್ಪಡಿಸಲಾಗಿದೆ.
ದೂರಲೇಖನದಲ್ಲಿ (ಟೆಲಿಗ್ರಾಫ್) ಸಂದೇಶಗಳನ್ನು ಕಳುಹಿಸಲು ಸಾಂಕೇತಿಕ ಗುಪ್ತಭಾಷೆ ಉಪಯೋಗದಲ್ಲಿ ಇರುವಂತೆ ದೂರಮುದ್ರಣದಲ್ಲಿಯೂ ಇದೆ. ಇದರಲ್ಲಿ ಬಳಸುವ ಗುಪ್ತಭಾಷೆಗೆ 5-ಏಕಮಾನ ಗುಪ್ತಭಾಷೆ ಎಂದು ಹೆಸರು. ಅಂತಾರಾಷ್ಟ್ರೀಯ ಪದ್ಧತಿಯಾಗಿ ಇದು ಎಲ್ಲ ದೂರಮುದ್ರಣದಲ್ಲಿಯೂ ಉಪಯೋಗದಲ್ಲಿದೆ. 5-ಏಕಮಾನ ಗುಪ್ತಭಾಷೆಯಲ್ಲಿ ಪ್ರತಿಯೊಂದು ಅಕ್ಷರ, ಅಂಕೆ ಮತ್ತು ಚಿಹ್ನೆಯೂ ಐದು ಸಂಕೇತಭಾಗಗಳಿಂದ ಸೂಚಿಸಲ್ಪಡುತ್ತದೆ. ಈ ಮೂಲ ಸಂಕೇತ ಭಾಗಗಳಿಗೆ ಮಾರ್ಕಿಂಗ್ ಮತ್ತು ಸ್ಪೇಸಿಂಗ್ ಎಂದು ಹೆಸರು. ಇವೆರಡು ಮೂಲ ಸಂಕೇತಗಳಿಂದ ಒಂದೊಂದರಲ್ಲೂ 5 ಮೂಲ ಸಂಕೇತಗಳುಳ್ಳ 32 ಸಂಯೋಗಗಳನ್ನು (ಕಾಂಬಿನೇಶನ್) ಪಡೆಯಬಹುದು. ಐದೂ ಸ್ಪೇಸಿಂಗ್ ಮೂಲಸಂಕೇತವಿರುವ ಸಂಯೋಗವನ್ನು ಸಾಧಾರಣವಾಗಿ ಬಳಸುವುದಿಲ್ಲವಾದ್ದರಿಂದ, ಒಟ್ಟು 31 ಸಂಯೋಗಗಳು ಉಪಯೋಗದಲ್ಲಿವೆ. ಈ ಸಂಯೋಗಗಳನ್ನು ಅಕ್ಷರ, ಅಂಕೆ ಮತ್ತು ಚಿಹ್ನೆಗಳಿಗೆ ಉಪಯೋಗಿಸಲು ಸಾಲದು. ಆದ್ದರಿಂದ ದೂರಮುದ್ರಣದಲ್ಲಿಯೂ ಒತ್ತು ಅಕ್ಷರ ಯಂತ್ರದಂತೆಯೇ ಸ್ಥಳಾಂತರಣ (ಶಿಫ್ಟ್) ಸಾಧನವನ್ನು ಉಪಯೋಗಿಸಲಾಗಿದೆ. ಇದರಿಂದ ಒಂದೊಂದು ಸಂಯೋಗವೂ ಒಂದು ಅಕ್ಷರ ಮತ್ತು ಇನ್ನೊಂದು ಅಂಕೆ ಅಥವಾ ಚಿಹ್ನೆಗಾಗಿ ಕಾದಿರಿಸಲ್ಪಡುವುದು. 31 ಸಂಯೋಗಗಳ ಪೈಕಿ ಒಂದನ್ನು ಅಕ್ಷರ ಸ್ಥಳಾಂತರಣ (ಲೆಟರ್ ಶಿಫ್ಟ್) (ಐಖಿಖS) ಸಂಕೇತಕ್ಕೂ ಎರಡನೆಯದನ್ನು ಚಿತ್ರ ಸ್ಥಳಾಂತರಣ ಸಂಕೇತಕ್ಕೂ (ಈIಉ) ಉಪಯೋಗಿಸಲಾಗಿದೆ. ದೂರಮುದ್ರಣದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಕೀಲಿ ಹಲಗೆಯ ಚಿತ್ರವನ್ನು ಚಿತ್ರ (2)ರಲ್ಲಿ ತೋರಿಸಿದೆ. ಕೀಲಿ ಹಲಗೆಯಲ್ಲಿ ಒಂದು ವಿಶೇಷ ಕೀಲಿಯನ್ನು ಅಳವಡಿಸಿದೆ : ಅದರ ಮೇಲೆ ತಿho ಚಿಡಿe ಥಿou ಎಂದು ಬರೆದಿರುವುದನ್ನು ಕಾಣಬಹುದು. ಈ ಕೀಲಿಯನ್ನು ಪರಿಕರ್ಮಿ ಒತ್ತಿದಾಗ ಇನ್ನೊಂದು ತುದಿಯಲ್ಲಿನ ದೂರಮುದ್ರಕ ತನ್ನ ಗುರುತನ್ನು ಸಂಕೇತಗಳ ಮೂಲಕ ತಿಳಿಸುತ್ತದೆ.
ದೂರಮುದ್ರಕನ ಕೀಲಿಹಲಗೆಯಲ್ಲಿನ ಒಂದೊಂದು ಕೀಲಿಯನ್ನು ಪರಿಕರ್ಮಿ ಒತ್ತಿದಾಗಲೂ ಅದಕ್ಕೆ ಸಂಬಂಧಿಸಿದಂತೆ ಇರುವ ಸಂಕೇತ ಸಂಯೋಗಗಳು ವಿದ್ಯುತ್ ಸ್ಪಂದಗಳಾಗಿ ಪ್ರೇಷಿಸಲ್ಪಡುತ್ತವೆ. ಪ್ರತಿಯೊಂದು ಅಕ್ಷರ ಅಂಕೆ ಅಥವಾ ಚಿಹ್ನೆಯ ಸಂಕೇತಗಳನ್ನು ಪ್ರೇಷಿಸುವುದಕ್ಕೆ ಮುಂಚೆ ಪ್ರಾರಂಭಿಕ ಸಂಕೇತವನ್ನೂ ಅಕ್ಷರ ಸಂಕೇತ ಸಂಯೋಗ ಮುಗಿದ ಬಳಿಕ ತಡೆ (ಸ್ಟಾಪ್) ಸಂಕೇತವನ್ನೂ ಕಳುಹಿಸಲಾಗುತ್ತದೆ.
ಪ್ರಾರಂಭ ಸಂಕೇತವನ್ನು ಪ್ರೇಷಿಸಿದ ಕೂಡಲೇ ಅಭಿಗ್ರಾಹಕ ಅಕ್ಷರ ಮತ್ತು ಇತರ ಸಂಕೇತಗಳನ್ನು ಗ್ರಹಿಸಲು ಸಿದ್ಧವಾಗುತ್ತದೆ, ತಡೆಸಂಕೇತ ಬಂದಕೂಡಲೆ ಅಭಿಗ್ರಾಹಕ ಮುಂದಿನ ಅಕ್ಷರ ಸಂಕೇತಬರುವುದಕ್ಕೆ ಮಧ್ಯೆ ಕೆಲಸವನ್ನು ನಿಲ್ಲಿಸುತ್ತದೆ. ಇದೇ ರೀತಿಯಾಗಿ ಅಕ್ಷರ ಐಖಿಖS ಎಂಬ ಕೀಲಿಯನ್ನು ಪರಿಕರ್ಮಿ ಒತ್ತಿದಾಗ ದೂರಮುದ್ರಕದ ಅಭಿಗ್ರಾಹಕ ಸಂಕೇತಕ್ಕೆ ಸರಿಯಾದ ಅಕ್ಷರಗಳನ್ನು ಮಾತ್ರ ಮುದ್ರಿಸುತ್ತದೆ. ಈIಉ ಎಂಬ ಕೀಲಿಯನ್ನು ಒತ್ತಿದಾಗ ಅದನ್ನು ಗ್ರಹಿಸಿ ಮುಂಬರುವ ಸಂಕೇತಗಳೆಲ್ಲವನ್ನೂ ಸಂಕೇತಕ್ಕೆ ಸರಿಯಾದ ಅಂಕೆ ಅಥವಾ ಚಿಹ್ನೆಗಳನ್ನು ಮುದ್ರಿಸುತ್ತದೆ. ದೂರಮುದ್ರಣದಲ್ಲಿ ಪ್ರತಿ ಅಕ್ಷರ, ಅಂಕೆ ಮತ್ತು ಚಿಹ್ನೆಗಳಿಗೆ ಇರುವ ಸಂಕೇತ ಸಂಯೋಗಗಳನ್ನು ಚಿತ್ರ (3)ರಲ್ಲಿ ಕಾಣಬಹುದು.
ದೂರಮುದ್ರಣದಲ್ಲಿ ಅನೇಕ ಮಾದರಿಗಳಿವೆ. ಪ್ರತಿಯೊಂದೂ ಒಂದೊಂದು ನಿಶ್ಚಿತ ಕೆಲಸಕ್ಕಾಗಿ ಉಪಯೋಗವಾಗುತ್ತದೆ.
1 ಸಂದೇಶಗಳನ್ನು ಪ್ರೇಷಿಸಲು, ಅಭಿಗ್ರಹಿಸಲು ಮತ್ತು ಮುದ್ರಿಸಲು ಒಂದೇ ಸಾಧನವಿದೆ. ಅದರಲ್ಲಿ ಎರಡು ವಿಧಗಳುಂಟು. (ಚಿ) ಒಂದನೆಯದರಲ್ಲಿ ಮುದ್ರಣ ಕಾಗದದ ಲಾಡಿಯ ಮೇಲೆ ಆಗುವುದು. ಇದಕ್ಕೆ ಲಾಡಿ ದೂರಮುದ್ರಕ ಎಂದು ಹೆಸರು. (b) ಎರಡನೆಯದರಲ್ಲಿ ಮುದ್ರಣ ಕಾಗದದ ಲಾಡಿಯ ಮೇಲೆ ಆಗದೆ ಕಾಗದದ ಹಾಳೆಯ ಮೇಲೆ ಆಗುವುದು. ಇದಕ್ಕೆ ಹಾಳೆ ದೂರಮುದ್ರಕ ಎಂದು ಹೆಸರು.
ಇದೇ ದೂರಮುದ್ರಕದಲ್ಲಿ ಕೀಲಿಹಲಗೆ ಮತ್ತು ಪ್ರೇಷಣ ವ್ಯವಸ್ಥೆ ಅಲ್ಲದೆ ಬರೀ ಅಭಿಗ್ರಾಹಕ ಮತ್ತು ಮುದ್ರಣ ವ್ಯವಸ್ಥೆ ಇದ್ದು ಸಂದೇಶಗಳನ್ನು ಗ್ರಹಿಸಲು ಮಾತ್ರ ಅನುಕೂಲವಿರುವ ಸಾಧನಗಳೂ ಉಂಟು.
2 ಇನ್ನೊಂದು ಬಗೆಯ ದೂರಮುದ್ರಕ ಸಂದೇಶವನ್ನು ಕಾಗದದ ಲಾಡಿಯ ಮೇಲೆ ಮುದ್ರಿಸುತ್ತದೆ. ಇದರಲ್ಲಿ ಲಾಡಿಯ ಮೇಲೆ ಗುಪ್ತಭಾಷೆಯಲ್ಲಿ ತೂತುಗಳನ್ನು ಮಾಡಲು ವ್ಯವಸ್ಥೆ ಕೂಡ ಇರಬಹುದು. ಇದರಿಂದ ಬಂದ ಲಾಡಿಗಳನ್ನು ಬೇರೆ ಸ್ವಯಂಚಾಲಿತ ಲಾಡಿ ಮುದ್ರಕದ ಮೂಲಕ ಪ್ರೇಷಣ ಮಾಡಬಹುದು. ಈ ವಿಧಾನದಿಂದ ಪ್ರೇಷಣದ ವೇಗವನ್ನು ಹೆಚ್ಚಿಸಿ ದೂರಮುದ್ರಕ ಉಪಕರಣ ಮತ್ತು ಮಾರ್ಗಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಉಪಯೋಗಿಸಲು ಅನುಕೂಲವಾಗುತ್ತದೆ. ಈ ವಿಧದಿಂದ ಕೀಲಿಹಲಗೆಯುಳ್ಳ ದೂರ ಮುದ್ರಕಕ್ಕಿಂತ ವೇಗವಾಗಿ ಸಂದೇಶಗಳನ್ನು ಕಳುಹಿಸಲು ಸಾಧ್ಯ (ಚಿತ್ರ 4).
ಆಧುನಿಕ ಪ್ರಪಂಚದ ಸಂಪರ್ಕಸಾಧನಾವ್ಯವಸ್ಥೆಗಳಲ್ಲಿ ದೂರಮುದ್ರಕ ಪ್ರಮುಖ ಸ್ಥಾನವನ್ನು ಪಡೆದಿದೆ. ಪ್ರಪಂಚದಲ್ಲಿನ ಮುಕ್ಕಾಲುಪಾಲು ದೇಶಗಳಲ್ಲಿ ದೂರಮುದ್ರಣ ವ್ಯವಸ್ಥೆಯ ಬಲೆಗೆಲಸ (ನೆಟ್‍ವರ್ಕ್) ಉಂಟು. ಇದನ್ನು ಟೆಲೆಕ್ಸ್ ಸೌಲಭ್ಯವೆಂದು ಕರೆಯುತ್ತಾರೆ. ಇದರಲ್ಲಿ ಆಯಾ ಪ್ರದೇಶದ ಪ್ರತಿಯೊಂದು ದೂರಮುದ್ರಕಗಳೂ ಒಂದರೊಡನೊಂದು ಸಂಪರ್ಕ ಬೆಳೆಸುವ ಸಾಧ್ಯತೆ ಇದೆ. ಇವು ದೂರವಾಣಿ ವಿನಿಮಯ ಕೇಂದ್ರದ ತೆರದಲ್ಲೇ ಟೆಲೆಕ್ಸ್ ವಿನಿಮಯ ಕೇಂದ್ರದ ಮೂಲಕ ಸಂಪರ್ಕ ಬೆಳೆಸುತ್ತವೆ. ಯಾವ ದೂರಮುದ್ರಕವನ್ನಾದರೂ ಬೇರೊಂದು ದೂರಮುದ್ರಕದಿಂದ, ದೂರವಾಣಿ ರೀತಿಯಲ್ಲಿಯೇ ಫಲಕ ತಿರುಗಿಸಿ ಸಂದೇಶವನ್ನು ಕಳುಹಿಸಬಹುದು. ಚಂದಾದಾರರು ತಮ್ಮ ಕಾರ್ಯಾಗಾರದಲ್ಲಿ ದೂರಮುದ್ರಕವನ್ನು ಹೊಂದಿದ್ದು ಸುಲಭವಾಗಿ ಬೇರೆ ಟೆಲೆಕ್ಸ್ ಚಂದಾದಾರೊಡನೆ ಸಂಪರ್ಕ ಬೆಳೆಸಬಹುದು. ದೇಶದಲ್ಲಿ ಹೆಚ್ಚಿನ ಸರ್ಕಾರಿ, ಪತ್ರಿಕಾ, ಕೈಗಾರಿಕಾ, ವಾಣಿಜ್ಯ ಮತ್ತು ಸಾಮಾಜಿಕ ಸಂಸ್ಥೆಗಳು ಸಹ ಮುದ್ರಣದ ಉಪಯೋಗವನ್ನು ಪಡೆಯುತ್ತಿವೆ. ಕಾರ್ಖಾನೆ, ಕಚೇರಿಗಳು ಮುಚ್ಚಿದ್ದಾಗ್ಯೂ ಅಲ್ಲಿಗೆ ಬರಬೇಕಾದ ಮುಖ್ಯ ಸಂದೇಶಗಳು ಸರಿಯಾದ ವೇಳೆಯಲ್ಲಿ ಬಂದು ಮುದ್ರಣವಾಗಿ ಸಂಬಂಧಪಟ್ಟವರಿಗಾಗಿ ಸಿದ್ಧವಾಗಿರುವುದು ಇದರ ಮುಖ್ಯ ಉಪಯೋಗ.
ಉಪಯೋಗ : ಭಾರತದಲ್ಲಿ ದೂರಮುದ್ರಣ ವ್ಯವಸ್ಥೆ ಮತ್ತು ಟೆಲೆಕ್ಸ್ ಸೌಲಭ್ಯವನ್ನು ಉತ್ತಮಪಡಿಸಲು ಇಲ್ಲಿಯೇ ದೂರಮುದ್ರಕಗಳನ್ನು ತಯಾರಿಸಲು ಸರ್ಕಾರ ಯೋಚಿಸಿ ಅದಕ್ಕಾಗಿ ಒಂದು ಯೋಜನೆಯನ್ನು ಸಿದ್ಧಪಡಿಸಿತು. ಇಲ್ಲಿ ಅದಕ್ಕೆ ಬೇಕಾದ ತಾಂತ್ರಿಕ ಪ್ರಾವೀಣ್ಯ ಇಲ್ಲದ ಪ್ರಯುಕ್ತ ಪಾಶ್ಚಾತ್ಯ ದೇಶಗಳ ಕಂಪನಿಗಳೊಡನೆ ಚರ್ಚಿಸಿ ಇಟಲಿ ದೇಶದ ಆಲಿವೆಟ್ಟಿ ಸಂಸ್ಥೆಯವರ ನೆರವಿನಿಂದ ಮದ್ರಾಸಿನಲ್ಲಿ ಹಿಂದೂಸ್ಥಾನ್ ಟೆಲಿಪ್ರಿಂಟರ್ಸ್ ಎಂಬ ಕಾರ್ಖಾನೆಯನ್ನು ಸ್ಥಾಪಿಸಲಾಯಿತು (1960). ಇದು 1961ರ ಏಪ್ರಿಲಿನಲ್ಲಿ ಕೆಲಸ ಪ್ರಾರಂಭಿಸಿ ಮೊದಲನೆಯ ವರ್ಷದಲ್ಲಿ ಸುಮಾರು 300 ದೂರಮುದ್ರಕಗಳ ಜೋಡಣೆ ಮಾಡಿತು. ಈಗ ಅಲ್ಲಿ 1,500 ಕೆಲಸಗಾರರಿದ್ದು ವರ್ಷಕ್ಕೆ ಸುಮಾರು 6,000 ವಿವಿಧ ಮಾದರಿ ದೂರಮುದ್ರಕಗಳೂ ಅವುಗಳಿಗೆ ಸಂಬಂಧಪಟ್ಟ ಸಾಧನೆಗಳೂ ತಯಾರಾಗುತ್ತಿವೆ (1976). (ಜೆ.ಆರ್.ವಿ.ಆರ್.)