ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೃಢೀಕರಣ

ವಿಕಿಸೋರ್ಸ್ ಇಂದ
Jump to navigation Jump to search

ದೃಢೀಕರಣ - ಮಡ್ಡಿ, ಚರಟ, ಒಂದುಗೂಡಿದ ಶಿಲೆಗಳು ಮುಂತಾದವು ಭೂಮಿಯಲ್ಲಿ ಒತ್ತಡ, ಶಾಖ, ಬಂಧ ಮುಂತಾದ ವಿವಿಧ ಬಲಗಳಿಗೆ ಈಡಾಗಿ ಗಟ್ಟಿಗೊಳ್ಳುವ ಪ್ರಕ್ರಿಯೆ (ಇಂಡ್ಯುರೇಶನ್). ಶಿಲಾಶಿಥಿಲೀಕರಣ, ಸವೆತ ಮತ್ತು ಸಂಚಯನದಿಂದ ಮಡ್ಡಿ ಅಥವಾ ಚರಟಗಳು ಉತ್ಪತ್ತಿಯಾಗುತ್ತವೆ. ಇವು ಮೊದಲು ಬಿಡಿ ಬಿಡಿ ಮತ್ತು ಮೃದುವಾಗಿ ಇದ್ದು ಕ್ರಮೇಣ ದೃಢೀಕರಿಸಿ ಗಟ್ಟಿಯಾಗುವುವು. ಅಂಥ ಬದಲಾವಣೆ ಎರಡು ವಿಧವಾದ ಕಾರ್ಯಗಳಿಂದಾಗುವುದು. ಮೊದಲನೆಯದಾಗಿ ಕಣಗಳ ಬೆಸುಗೆಯಾಗುವಿಕೆ ಅಥವಾ ಗಡುಸಾಗುವಿಕೆ ಮತ್ತು ಎರಡನೆಯದಾಗಿ ಅವುಗಳ ಬಂಧನ. ಮೇಲಿಂದ ಒದಗಿ ಬರುವ ಒತ್ತಡದಿಂದ ಇಲ್ಲವೇ ಭೂಚಲನೆಯಿಂದ ಈ ಬೆಸುಗೆ ಕ್ರಿಯೆ ತೊಡಗಿ ವಸ್ತುಗಳು ಒಂದುಗೂಡಿ ಗಟ್ಟಿಯಾಗುತ್ತವೆ. ಈ ಪ್ರಕ್ರಿಯೆಯ ವೇಳೆ ಮಡ್ಡಿ ಮತ್ತು ಚರಟಗಳಲ್ಲಿರುವ ಬಹುಪಾಲು ನೀರಿನ ಅಂಶ ಹಿಸುಕಲ್ಪಟ್ಟು ಹೊರದೂಡಲ್ಪಡುತ್ತದೆ. ಉದಾಹರಣೆಗೆ ಮರಳು ಕಲ್ಲಿಗಿಂತ ಸೂಕ್ಷ್ಮಕಣಗಳುಳ್ಳ ಜೇಡಿಮಣ್ಣಿನ ಶಿಲೆಗಳು ಅತಿ ಸುಲಭವಾಗಿ ಈ ಮೇಲಿನ ಕ್ರಿಯೆಗಳಿಗೆ ಒಳಗಾಗುತ್ತವೆ. ಬಂಧನ ಕ್ರಿಯೆಗೆ ಪೂರಕವಾಗಿ ಸಿಮೆಂಟಿನಂಥ ವಸ್ತುವೊಂದಿದೆ. ಇದು ಕಣಗಳನ್ನು ಒಂದುಗೂಡಿಸಿ ಬಿಗಿಯಾಗಿ ಅಂಟಿಕೊಳ್ಳಲು ನೆರವಾಗುತ್ತದೆ. ಈ ವಸ್ತು ಸಿಲಿಕ, ಕ್ಯಾಲ್ಸಿಯಮ್, ಮೆಗ್ನೀಸಿಯಮ್ ಕಾರ್ಬೊನೇಟ್ ಅಥವಾ ಕಬ್ಬಿಣದ ಲವಣ, ಇದು ದ್ರವರೂಪದಲ್ಲಿ ಇರುವುದು. ಕಣಗಳನ್ನು ಇದು ಪರಸ್ಪರ ಬಂಧಿಸುವಾಗ ಕಬ್ಬಿಣದ ಆಮ್ಲ ಮಾತ್ರ ಪ್ರತಿಕಣದ ಸುತ್ತಲೂ ತೆಳುವಾದ ಪೊರೆಯನ್ನು ರಚಿಸುವದರಿಂದ ಅದು ಪರಿಣಾಮಕಾರಿಯಾದ ಬೆಸುಗೆಯಾಗುತ್ತದೆ. ಕೆಲ ವೇಳೆ ಅಂಥ ಬೆಸುಗೆಗೆ ಕಾರಣವಾದ ವಸ್ತು ಜೇಡಿ ಮಣ್ಣಿನಂತಿದ್ದು ಅದು ಶಿಲೆಗಳಲ್ಲಿರುವ ಫೆಲ್ಡ್‍ಸ್ಟಾರ್ ಎಂಬ ಖನಿಜಗಳ ಉತ್ಪತ್ತಿಯಾಗಿರಬಹುದು ಅಥವಾ ಪ್ರಧಾನವಾಗಿರುವ ಮರಳು ಕಣಗಳೊಂದಿಗೆ ವಸ್ತುವಾಗಿ ಸೇರಿರಲೂಬಹುದು. ಮೂಲಭೂತವಾದ ಸಂಚಯನಗಳಲ್ಲಿಯೇ ಇದ್ದ ಅಥವಾ ಅನಂತರ ಸಂಭವಿಸುವ ವಿಭಜನಾ ಕ್ರಿಯೆಗಳಿಂದ ಉತ್ಪತ್ತಿಯಾಗುವ ಅಭ್ರಕದಂಥ ಖನಿಜ ಕಣಗಳು ಸಹ ಸಿಮೆಂಟಿನಂತೆ ವರ್ತಿಸುತ್ತವೆ.

ಸಾಮಾನ್ಯವಾಗಿ ಬೆಸುಗೆ ಮತ್ತು ಬಂಧನಕ್ರಿಯೆಗಳೆರಡೂ ಜೊತೆಯಲ್ಲಿಯೇ ನಡೆದು ಮಡ್ಡಿ, ಚರಟಗಳನ್ನು ಗಡುಸಾಗಿಸಿ ಘನೀಭವಿಸುವಂತೆ ಮಾಡುತ್ತವೆ. ಅದರಂತೆ ದೂಳು, ಮಣ್ಣು ಅಥವಾ ಜೇಡಿಮಣ್ಣುಗಳು ಜೇಡಿಪದರುಗಲ್ಲುಗಳಾಗಿ ಪರಿವರ್ತನೆಹೊಂದುತ್ತವೆ. ಮರಳಿನಿಂದ ಮರಳುಗಲ್ಲುಗಳು, ಉರುಟು ಕಲ್ಲುಗಳು ದುಂಡಾಗಿ ಸವೆದ ಗುಂಡುಗಳು ಮತ್ತು ಕಲ್ಲುಗುಂಡುಗಳು, ಮೊನಚುಕಲ್ಲಿನ ಚೂರುಗಳುಳ್ಳ ಶಿಲೆಗಳು ಮತ್ತು ನೀರಿನ ಹೊಡೆದದಿಂತ ಸವೆದು ದುಂಡಾದ ಕಲ್ಲುಚೂರುಗಳು ಸಮೂಹದ ಶಿಲೆಗಳ ರಚನೆ ಈ ಮೇಲೆ ವಿವರಿಸಿದ ಕ್ರಿಯೆಗಳಿಂದ ಆಗುತ್ತವೆ. ದೃಢೀಕರಣವನ್ನು ಕೆಲವು ರೂಪಾಂತರ ಶಿಲೆಗಳಲ್ಲಿಯೂ ಕಾಣಬಹುದು. ಉದಾಹರಣೆಗೆ ಕಾದ ಶಿಲಾರಸ (ಲಾವಾ) ಮತ್ತು ಒಡ್ಡುಗಳಂತಿರುವ ಅಂತಸ್ಸರಣ ಅಗ್ನಿಶಿಲೆಗಳು ಹಲವಾರು ಸ್ಥಳೀಯ ಶಿಲೆಗಳನ್ನು ಭೇದಿಸಿದಾಗ, ಸ್ಥಳೀಯ ಶಿಲೆಗಳು ಗಡುಸಾಗುವುದೇ ಅಲ್ಲದೆ, ಸುಟ್ಟು ಅರ್ಧ ದ್ರವರೂಪಕ್ಕೆ (ಕಾದ ಅರ್ಧಕರಗಿದ ಗಾಜಿನಂತೆ) ಪರಿವರ್ತನೆ ಹೊಂದಬಹುದು. ಈ ಕಾರ್ಯದಲ್ಲಿ ಶಾಖ ಪ್ರಧಾನವಾಗಿರುತ್ತದೆ. (ಎಮ್.ಎಸ್.ಪಿ.)