ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೃಷ್ಟಿಸೃಷ್ಟಿವಾದ

ವಿಕಿಸೋರ್ಸ್ ಇಂದ
Jump to navigation Jump to search

ದೃಷ್ಟಿಸೃಷ್ಟಿವಾದ ಉತ್ತರಕಾಲೀನ ಅದ್ವೈತಪ್ರಕ್ರಿಯೆಗಳಲ್ಲಿ ಒಂದಾಗಿದೆ. ಇದು ಸೃಷ್ಟಿ-ದೃಷ್ಟಿವಾದಕ್ಕೆ ವಿರುದ್ಧವಾದ ಪ್ರಕ್ರಿಯೆ. ಶಂಕರಾಚಾರ್ಯರ ಅನಂತರ ಅದ್ವೈತದರ್ಶನದಲ್ಲಿ ಶಾಸ್ತ್ರಕಾರರು ಮುಂದುವರಿಸಿದ ಹಲವು ಚಿಂತನೆಗಳ ಫಲವಾಗಿ ಇಂಥ ಅನೇಕ ಪ್ರಸ್ಥಾನಭೇದಗಳು ತಲೆ ದೋರಿದವು. ಮೂಲ ಅದ್ವೈತ ತತ್ತ್ವವಾದ ಬ್ರಹ್ಮ ಸತ್ಯಂ, ಜಗನ್ಮಿಥ್ಯಾ ಎಂಬುದಕ್ಕೆ ವಿವರಣೆಯನ್ನು ಶಾಸ್ತ್ರೀಯವಾಗಿ ಹೇಳುವಲ್ಲಿ ಒಬ್ಬೊಬ್ಬರು ಒಂದೊಂದು ದಾರಿಯನ್ನು ಹಿಡಿದರು. ಅವನ್ನೆಲ್ಲ ಅಪ್ಪಯ್ಯ ದೀಕ್ಷಿತರ ಸಿದ್ಧಾಂತ ಲೇಶಸಂಗ್ರಹದಲ್ಲಿ ಪ್ರತಿಪಾದಿಸಲಾಗಿದೆ.

ಜಗತ್ತು ಬ್ರಹ್ಮನಂತೆ ಸತ್ಯವಲ್ಲ ಎಂದಾದ ಮೇಲೆ ಅದ್ವೈತಿಗಳು ಹೇಳುವ ಪಾರಮಾರ್ಥಿಕ ಸತ್ತೆ ಜಗತ್ತಿಗಿಲ್ಲವೆಂಬುದು ನಿಸ್ಸಂಶಯ. ಅದು ಎದುರಿಗೆ ಕಾಣುವುದಾದ್ದರಿಂದ ಆ ತೋರಿಕೆಯ ಸತ್ತೆಯನ್ನು ವ್ಯಾವಹಾರಿಕ ಎನ್ನಬೇಕೋ ಇಲ್ಲವೆ ಪ್ರಾತಿಭಾಸಿಕ ಎನ್ನಬೇಕೋ ಎಂಬುದೇ ಸಮಸ್ಯೆ. ಅದಕ್ಕೆ ಉತ್ತರವಾಗಿ (ಕನಸಿನಂತೆ ಜಗತ್ತು) ಪ್ರಾತಿಭಾಸಿಕವೆಂದೇ ಹೇಳಬೇಕೆನ್ನುವ ವಾದವೇ ದೃಷ್ಟಿಸೃಷ್ಟಿವಾದ. ಇದರಲ್ಲಿಯೂ ಎರಡು ಪ್ರಕಾರಗಳಿವೆ. (1) ದೃಷ್ಟಿ ಎಂದರೆ ನಾವು ನೋಡುವ ಕಾಲದ ಸಮಾಕಾಲದಲ್ಲಿಯೇ ದೃಶ್ಯಜಗತ್ತಿನ ಸೃಷ್ಟಿ ಅಥವಾ ಉದಯ ಎನ್ನುವುದು ಒಂದು ಪ್ರಕಾರ. (2) ದೃಷ್ಟಿಯೆಂದರೆ ಸ್ವಪ್ರಕಾಶಜ್ಞಾನ, ತತ್ತ್ವರೂಪವೇ ವಿಶ್ವಸೃಷ್ಟಿಯೆನ್ನುವುದು ಎರಡನೆಯ ಪ್ರಕಾರ. ಇದರಂತೆ ಬ್ರಹ್ಮಜ್ಞಾನಿಗಳಿಗೆ ಜಗತ್ತೂ ಬ್ರಹ್ಮರೂಪವಾಗಿಯೇ ಕಾಣುವುದು. ಇದು ಪ್ರಕಾಶಾನಂದನೆಂಬ ಶಾಸ್ತ್ರಕಾರನ ಸಿದ್ಧಾಂತ. ಇವನ ಗ್ರಂಥದ ಹೆಸರು ಸಿದ್ಧಾಂತ ಮುಕ್ತಾವಲೀ. ಈ ಎರಡನೆಯ ಬಗೆ ಅದ್ವೈತದ ಪರಾಕಾಷ್ಠೆಯೆನ್ನಬಹುದು. ಬ್ರಹ್ಮ ಮತ್ತು ಜಗತ್ತುಗಳಲ್ಲಿ ಯಾವ ಭೇದಕ್ಕೂ ಎಡೆಯೇ ಇಲ್ಲ. ಇದು ಏಕಜೀವವಾದಕ್ಕೆ ಸರಿಸಮವಾಗುತ್ತದೆ.

ಆದರೆ ಮೊದಲನೆಯ ಪ್ರಕಾರದ ದೃಷ್ಟಿಸೃಷ್ಟಿವಾದ ಇಷ್ಟು ನಿಷ್ಠುರವಾಗಿಲ್ಲ. ಚಿತ್ (ನೋಡುವ ಜೀವಾತ್ಮ) ಮತ್ತು ಅಚಿತ್ (ದೃಶ್ಯವಾದ ಜಗತ್ತು) ಇವುಗಳಲ್ಲಿ ಅತ್ಯಂತ ಅಭೇದ ಶಕ್ಯವಿಲ್ಲ ; ಭೇದವೇ ಯೋಗ್ಯವೆಂದು ಅದರ ಸಿದ್ಧಾಂತ. ಆದ್ದರಿಂದ ಸಾಕ್ಷಿರೂಪನಾದ ಜೀವಚೈತನ್ಯಕ್ಕಿಂತ ಜಗತ್ತು ಭಿನ್ನವೇ ಇದ್ದರೂ ದೃಷ್ಟಿಗೆ ಪೂರ್ವದಲ್ಲಿ ಸೃಷ್ಟಿಯಿತ್ತೆನ್ನಲು ಬರುವುದಿಲ್ಲವೆಂಬುದು ಈ ಮತದ ಪ್ರಕ್ರಿಯೆ. ಎಂದರೆ ಕಾಣುವ ಸೃಷ್ಟಿಯೆಲ್ಲ ದೃಷ್ಟಿಯ ಸಮಕಾಲೀನವೇ ಎಂದು ತಾತ್ಪರ್ಯ. ಎಂದರೆ ನಮಗೆ ಕಂಡಾಗ ಮಾತ್ರ ಜಗತ್ತು ಸ್ಪಷ್ಟವಾದಂತಾಗುತ್ತದೆ ಎಂದು ಅಭಿಪ್ರಾಯ. ಈ ಸಿದ್ಧಾಂತ ಬೌದ್ಧರ ವಿಜ್ಞಾನವಾದಕ್ಕೆ ತುಂಬ ಸಮೀಪವರ್ತಿಯೋ ಎನಿಸುತ್ತದೆ. ಇಲ್ಲಿ ಜೀವಸಾಕ್ಷಿ ಅನಾದಿಯಾದ ಅವಿದ್ಯೆಯಿಂದ ಉಪಹಿತನಾಗಿಯೇ ಸೃಷ್ಟಿಯನ್ನು ಸಂದರ್ಶಿಸುವನೆಂದೂ ಪ್ರತಿಕ್ಷಣವೂ ಅವಿದ್ಯೆಯ ಉಪಾಧಿಗಳು ಹೊಸಹೊಸದಾಗಿಯೇ ಇರಬಹುದೆಂದೂ ಆದ್ದರಿಂದ ನಿರ್ಗುಣ ಪರಬ್ರಹ್ಮನ ಸ್ವರೂಪ ಅಬಾಧಿತವೇ ಎಂದೂ ಸಮಾಧಾನ ಹೇಳುತ್ತಾರೆ. ಆದರೆ ದೃಷ್ಟಿಸೃಷ್ಟಿವಾದವೇ ಒಪ್ಪಿಗೆಯಾಗದ ಇತರ ಅದ್ವೈತ ಶಾಸ್ತ್ರಕಾರರು ಜಗತ್ತಿಗೆ ವ್ಯಾವಹಾರಿಕ ಸತ್ತೆಯೇ ಉಂಟೆಂದು ಹೇಳಿ ಅದೇ ಪೂರ್ವ, ಅದರ ದರ್ಶನ ಉತ್ತರಕಾಲೀನ ಎಂಬುದಾಗಿ ಸೃಷ್ಟಿ-ದೃಷ್ಟಿವಾದವನ್ನು ಮುಂದೆ ಮಾಡುತ್ತಾರೆ. (ಕೆ.ಕೆ.)