ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೃಷ್ಟಿ ತೆಗೆಯುವುದು

ವಿಕಿಸೋರ್ಸ್ದಿಂದ

ದೃಷ್ಟಿ ತೆಗೆಯುವುದು -

	ಜನಪದ ನಂಬಿಕೆಗಳಲ್ಲಿ ಒಂದು. ಜನರ ಕೆಟ್ಟ ಕಣ್ಣಿನಿಂದ ಉಂಟಾಗುವ ಹಾನಿಗಳಿಗೆ ಪರಿಹಾರಗಳನ್ನು ಮಾಡುವುದಕ್ಕೆ ಈ ಹೆಸರಿದೆ. ಕೆಲವು ಜನರಿಗೆ ಹುಟ್ಟಿನಿಂದಲೇ ಕೆಟ್ಟಕಣ್ಣು ಇರುತ್ತದೆ ; ಮತ್ತೆ ಕೆಲವರಿಗೆ ಅತಿಯಾದ ಅಸೂಯೆ ಮತ್ತು ಕೋಪದಿಂದ ಕೆಟ್ಟಕಣ್ಣಿನ ಶಕ್ತಿ ಉಂಟಾಗುತ್ತದೆ : ವಿಕಾರವಾಗಿರುವವರು ಅಂಗಹೀನನರಾಗಿರುವವರು ಮೊದಲಾದ ಜನಗಳಲ್ಲಿ ಕೆಟ್ಟ ಕಣ್ಣಿನ ಶಕ್ತಿ ಉಂಟು. ಅಂಥವರ ನೋಟ ಹಾನಿಕಾರಕವಾದುದು : ಆ ಜನಗಳ ದೃಷ್ಟಿ ಬಿದ್ದರೆ ಊಟ ಮಾಡುತ್ತಿರುವ ವ್ಯಕ್ತಿಗಳಿಗೆ, ಎಳೆಯ ಮಕ್ಕಳಿಗೆ, ಬಸುರಿಯರಿಗೆ, ಬಾಣಂತಿಯರಿಗೆ ವಾಂತಿಯಾಗುತ್ತದೆ. ಊಟ ಸೇರುವುದಿಲ್ಲ, ಹೊಟ್ಟೆನೋವು ಬರುತ್ತದೆ. ಹಾಲು ಕೊಡುತ್ತಿರುವ ಹಸುಗಳ, ಎಮ್ಮೆಗಳ ಕೆಚ್ಚಲಿನ ಮೇಲೆ ದೃಷ್ಟಿ ಬಿದ್ದರೆ ಹಾಲಿನ ಬದಲು ರಕ್ತವನ್ನು ಕರೆಯ ಬೇಕಾದ ಪರಿಸ್ಥಿತಿ ಬರುತ್ತದೆ ; ಹಾಲು ಕಾಸಿದರೆ ದುರ್ವಾಸನೆ ಉಂಟಾಗುತ್ತದೆ. ಕೆಟ್ಟ ಕಣ್ಣಿನ ಪ್ರಭಾವ ಜೀವಂತ ವಸ್ತುಗಳ ಮೇಲೆ ಮಾತ್ರವಲ್ಲದೆ ನಿರ್ಜೀವವಾದ ವಸ್ತುಗಳ ಮೇಲೆಯೂ ಉಂಟಾಗುತ್ತದೆ. ಮನುಷ್ಯರಲ್ಲಿ ಮಾತ್ರವಲ್ಲದೆ ಕೆಲವು ಪ್ರಾಣಿಗಳಲ್ಲಿಯೂ ಕೆಟ್ಟಕಣ್ಣಿನ ಪ್ರಭಾವ ಇರುತ್ತದೆ ಎಂಬ ನಂಬಿಕೆಯೂ ಇದೆ. ಈ ರೀತಿಯ ಅನೇಕ ನಂಬಿಕೆಗಳಿಂದ ಕೆಟ್ಟ ಕಣ್ಣಿನಿಂದ ಉಂಟಾಗುವ ದೃಷ್ಟಿದೋಷಕ್ಕೆ ಜನ ವಿಶೇಷವಾಗಿ ಹೆದರುತ್ತಾರೆ. 

ದೃಷ್ಟಿದೋಷವಾದಾಗ ಉರಿಯುತ್ತಿರುವ ಹಂಚಿಕಡ್ಡಿಗಳನ್ನು ನಿವಾಳಿಸಿ ಅದರ ಕಪ್ಪನ್ನು ಹಣೆಗೆ ಇಡುವುದು; ಕೆಟ್ಟಕಣ್ಣು ಹಾಕಿದವರು ಹಾಳಾಗಲಿ ಎಂದು ಲಟಿಗೆ ಮುರಿಯುವುದು : ಉಪ್ಪು ಮೆಣಸಿನಕಾಯಿ ಎರಡನ್ನೂ ನಿವಾಳಿಸಿ ಒಲೆಗೆ ಹಾಕುವುದು : ಸಕ್ಕರೆಯನ್ನು ಮಂತ್ರಿಸಿ ತಿನ್ನಲು ಕೊಡುವುದು ; ಕೆಟ್ಟ ಕಣ್ಣುಳ್ಳವರು ಹೋದ ಜಾಗದಲ್ಲಿ ಮೂರು ಸಲ ಉಗುಳುವುದು ; ಕಾಲುರಂಜುಹಾಕುವುದು ; ಕೆಂಡದ ರಂಜು ಹಾಕುವುದು-ಈ ರೀತಿಯ ಪರಿಹಾರಗಳು ಬಳಕೆಯಲ್ಲಿವೆ. ಹಂಚಿಕಡ್ಡಿಗಳನ್ನು ಉರಿಸುವಾಗ ಅವು ಹೆಚ್ಚು ಚಟಚಟ ಎಂದು ಸದ್ದುಮಾಡುವುದು ; ಉಪ್ಪು ಮೆಣಸಿನ ಕಾಯನ್ನು ಒಲೆಗೆ ಹಾಕಿದಾಗ ಮೆಣಸಿನ ಕಾಯಿಯ ಘಾಟು ಕಾಣದೆ ಇರುವುದು ; ಕಾಲುರಂಜು, ಕೆಂಡದ ರಂಜು ಅತಿ ಕೆಂಪಾಗಿ ಕಾಣುವುದು-ಇವೆಲ್ಲ ದೃಷ್ಟಿದೋಷ ಆಗಿದೆ ಎಂಬುವುದಕ್ಕೆ ರುಜುವಾತು ಎಂದು ಭಾವಿಸುತ್ತಾರೆ. ಮನೆಗಳಿಗೆ ಬೆಳೆಗಳಿಗೆ ದೃಷ್ಟಿದೋಷ ತಾಗದಿರಲೆಂಬ ಉದ್ದೇಶದಿಂದ ತೆಂಗಿನಕಾಯಿ ಕಟ್ಟುವುದು, ಕುಂಬಳಕಾಯಿ ಕಟ್ಟುವುದು, ಬೆಚ್ಚು ಕಟ್ಟುವುದು-ಅಂದರೆ ಒಂದು ಕೋಲಿಗೆ ಮನುಷ್ಯನ ಬಟ್ಟೆಗಳನ್ನು ತಗುಲು ಹಾಕಿ ಮೇಲ್ಭಾಗದಲ್ಲಿ ಸುಣ್ಣ ಬಳಿದ ಮಡಕೆಯನ್ನು ನೇತುಹಾಕಿ ಅದನ್ನು ಮನೆಯ ಮೇಲುಭಾಗಕ್ಕೆ ಕಟ್ಟುವುದು-ಮೊದಲಾದ ಕ್ರಮಗಳೂ ಉಂಟು.

ದೃಷ್ಟಿದೋಷಕ್ಕೆ ಸಂಬಂಧಿಸಿದ ಈ ರೀತಿಯ ನಂಬಿಕೆಗಳು ಮತ್ತು ದೃಷ್ಟಿ ತೆಗೆಯುವ ಪರಿಹಾರಗಳು ಕರ್ನಾಟಕ ಹಾಗೂ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಎಲ್ಲ ದೇಶಗಳಲ್ಲಿಯೂ ಬಹಳ ಹಿಂದಿನಿಂದಲೂ ಬಳಕೆಯಲ್ಲಿವೆ. ಪ್ರದೇಶದಿಂದ ಪ್ತದೇಶಕ್ಕೆ ಇವುಗಳಲ್ಲಿ ಪ್ರಾದೇಶಿಕ ವೈಶಿಷ್ಟ್ಯಗಳನ್ನು ಕಾಣಬಹುದೇ ಹೊರತು ಮೂಲತಃ ಕೆಟ್ಟ ಕಣ್ಣಿನಿಂದ ದೃಷ್ಟಿದೋಷ ಉಂಟಾಗುತ್ತದೆಂಬ ನಂಬಿಕೆ ಮಾತ್ರ ಸಾರ್ವತ್ರಿಕ.

ಮನುಷ್ಯನ ಮನಸ್ಸು ಇಂದ್ರಿಯಗಳ ಸಹಾಯವಿಲ್ಲದೆ ವಸ್ತುಗಳ ಮೇಲೆ ತನ್ನ ಪ್ರಭಾವ ಬೀರುತ್ತದೆ ಎಂಬ ಅಂಶವೇ ದೃಷ್ಟಿದೋಷಕ್ಕೆ ಆಧಾರವಾಗಿರುವ ನಂಬಿಕೆ. ಇದನ್ನು ವಿಜ್ಞಾನಿಗಳು ಈ ವರೆಗೆ ಒಪ್ಪುತ್ತಿರಲಿಲ್ಲ. ಆದರೆ ಇತ್ತೀಚೆಗೆ ಪರಾಮನೋವಿಜ್ಞಾನದ ಪ್ರಕಾರ ಮಾನವನಲ್ಲಿ ಅತೀಂದ್ರಿಯ ದರ್ಶನ ಶಕ್ತಿ ಮತ್ತು ಮನಃಚಲನಶಕ್ತಿ ಎಂಬ ಶಕ್ತಿಗಳಿವೆಯೆಂದು ತಿಳಿದುಬಂದಿದೆ. ಕೆಟ್ಟ ಕಣ್ಣಿನ ಪ್ರಭಾವ ಮನಃಚಲನಶಕ್ತಿ ಒಂದು ಬಗೆ ; ಆದ್ದರಿಂದ ದೃಷ್ಟಿದೋಷ ಸಂಪೂರ್ಣವಾಗಿ ಮೂಢನಂಬಿಕೆ ಅಲ್ಲ ಎನಿಸುತ್ತದೆ.

ದೃಷ್ಟಿದೋಷಕ್ಕೆ ಸಂಬಂಧಿಸಿದ ಪರಿಹಾರಗಳಿಂದ ಮಾನಸಿಕವಾಗಿ ಒಂದು ಬಗೆಯ ಸಮಾಧಾನ ದೊರೆತು ಆ ಮೂಲಕ ಸ್ವಲ್ಪಮಟ್ಟಿಗೆ ಕೆಟ್ಟ ಕಣ್ಣಿನ ಪ್ರಭಾವ ಕಡಿಮೆಯಾಗಬಹುದು. ಈ ದೃಷ್ಟಿಯಿಂದ ಮಾಟ ಮಂತ್ರಗಳಿಸಿರುವ ಪ್ರಾಮುಖ್ಯ ಇದಕ್ಕೂ ಇದೆ. (ಟಿ.ಎನ್.ಎಸ್.ಎನ್.)