ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೆಲೆದ್ದ, ಗ್ರಾಜಿ಼ಯಾ

ವಿಕಿಸೋರ್ಸ್ದಿಂದ

ದೆಲೆದ್ದ, ಗ್ರಾಜಿóಯಾ 1875-1936. ಇಟಲಿಯ ಪ್ರಸಿದ್ಧ ಕಾದಂಬರಿಗಾರ್ತಿ. ಹಲವಾರು ಕಥೆಗಳನ್ನು ಕಾದಂಬರಿಗಳನ್ನು ರಚಿಸಿದ ಈಕೆಗೆ 1926 ರಲ್ಲಿ ನೊಬೆಲ್ ಪಾರಿತೋಷಕ ಲಭಿಸಿತು. ಈಕೆ ಹುಟ್ಟಿದ್ದು ಸಾರ್ಡಿನೀಯ ದ್ವೀಪದಲ್ಲಿ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ರೋಮಿಗೆ ಹೋಗಿ ನೆಲಸಿದಳು. ಆದರೂ ಆಗಾಗ್ಗೆ ತನ್ನ ತೌರೂರಿಗೆ ಭೇಟಿ ಕೊಡುತ್ತಿದ್ದರ ಪರಿಣಾಮವಾಗಿ ಆ ಜನರ ವಾಸ್ತವಿಕ ಜೀವನವನ್ನು ಮರೆಯದಾದಳು. ಅಲ್ಲಿನ ಸಾಮಾನ್ಯರ ಜೀವನವೇ ಈಕೆಯ ಎಲ್ಲ ಕಾದಂಬರಿಗಳಿಗೂ ವಸ್ತುವಾಯಿತು. ಈಕೆ ತನ್ನ 17ನೆಯ ವಯಸ್ಸಿಗೇ ಕಥೆಗಳನ್ನು ಬರೆಯಲು ಆರಂಭಿಸಿದಳು. ಜನಪದ ಸಾಹಿತ್ಯದಿಂದ ಕೆಲವು ಘಟನಾವಳಿಗಳನ್ನು ಆಯ್ದುಕೊಂಡು ತನ್ನ ಕಥೆಗಳಿಗೆ ವಸ್ತುವಾಗಿ ಮಾಡಿಕೊಂಡಳು. ಕ್ರಮೇಣ ಈಕೆಯ ಚಿಂತನೆ ಪಾತಕ, ಅಂತಃ ಸಾಕ್ಷಿ, ಪಶ್ಚಾತ್ತಾಪ, ಪ್ರಾಯಶ್ಚಿತ್ತ ಮುಂತಾದ ಗಹನವಾದ ವಿಚಾರಗಳ ಕಡೆಗೆ ಹರಿಯಿತು. ಈಕೆಯ ಸಾಹಿತ್ಯದಲ್ಲಿ ಜಿಯೊವನಿ ವೆರ್ಗನ ಛಾಯೆಯನ್ನು ಕಾಣಬಹುದು. ವಾಸ್ತವಿಕತಾ ಪಂಥವಾದ ವೆರಿಸ್ಮೊ ಪಂಥದ ಮುಖ್ಯಸ್ಥ ವೆರ್ಗನಾದರೆ ಈಕೆ ಎರಡನೆಯವಳಾಗಿದ್ದಾಳೆ. (ಎಚ್.ಕೆ.ಆರ್.)

ಈಕೆ ಸುಮಾರು ಐವತ್ತು ಕಾದಂಬರಿಗಳನ್ನು ರಚಿಸಿದ್ದಾಳೆ. ಅವುಗಳಲ್ಲಿ ಈ ಕೆಲವು ಸುಪ್ರಸಿದ್ಧ : ಎಲಿಯಸ್ ಪೋರ್ತೊಲುನಲ್ಲಿ (ತೆರೆದ ಬಾಗಿಲು-1903) ಒಬ್ಬ ಸಾಮಾನ್ಯ ಮನುಷ್ಯ ಕೆಟ್ಟ ಪಿಪಾಸೆಗಳಿಗೆ ಒಳಗಾಗಿ ಚೌರ್ಯ, ವಂಚನೆ, ವ್ಯಭಿಚಾರ, ಕೊಲೆ ಇತ್ಯಾದಿ ಹೇಯಕಾರ್ಯಗಳನ್ನು ಮಾಡಿ ಅನಂತರ ಬುದ್ಧಿ ಬಂದು ತಳಮಳ ಪಡುತ್ತಾನೆ. ತನ್ನ ಸಹೋದರನ ಪತ್ನಿಯ ಮೇಲೆ ಅವನಿಗೆ ಪ್ರೇಮ. ಆದರೆ ಅವಳು ವಿಧವೆಯಾದ ಅನಂತರ ಅವಳನ್ನು ಮದುವೆಯಾಗುವುದಿಲ್ಲ; ಪುರೋಹಿತನಾಗಿ ಚರ್ಚಿನ ಸೇವೆಯಲ್ಲಿ ಜೀವನ ಕಳೆಯಲು ನಿರ್ಧರಿಸುತ್ತಾನೆ. ಸಿನೆರೆದಲ್ಲಿ (ಬೂದಿ-1910) ಒಬ್ಬ ಹೆಂಗಸು ಅಕ್ರಮ ಸಂಗ ಬೆಳೆಸಿ ಮಗನೊಬ್ಬನನ್ನು ಪಡೆಯುತ್ತಾಳೆ; ಅವನ ಮೇಲೆ ಅವಳಿಗೆ ಅತ್ಯಂತ ಪ್ರೇಮ. ಆದರೆ ಅವನಿಂದಲೇ ಅವಳ ಪರಿಸಮಾಪ್ತಿಯಾಗುತ್ತದೆ.

ಲ ಎದೆರೆದಲ್ಲಿ (1908) ತನ್ನ ಸ್ವಾಮಿಯನ್ನು ಧನನಷ್ಟದಿಂದ ತಪ್ಪಿಸಲು ಸೇವಕಿಯೊಬ್ಬಳು ಹತ್ಯವೆಸಗಿ ಪಾತಕಿಯಾಗುತ್ತಾಳೆ : ಕೊನೆಯಲ್ಲಿ ಆತನ ಹೆಂಡತಿಯಾಗಿ ವಿಮೋಚನೆ ಹೊಂದುತ್ತಾಳೆ.

ಲ ಮಾದೃದಲ್ಲಿ (ತಾಯಿ-1920) : ತಾಯಿಯೊಬ್ಬಳು ತನ್ನ ಮಗನನ್ನು ಚರ್ಚಿನ ಪುರೋಹಿತನನ್ನಾಗಿಸಲು ತವಕಪಡುತ್ತಾಳೆ. ಆ ಮಹದಾಶೆ ಹೇಗೊ ಸಫಲಗೊಳ್ಳುತ್ತದೆ. ಆದರೆ ಅವಳು ನಿರೀಕ್ಷಿಸಿದಂತೆ ಆತ ಉತ್ತಮ ಧಾರ್ಮಿಕನಾಗುವ ಬದಲು ಮೋಹ ಮದ ಇತ್ಯಾದಿಗಳ ಹಾವಳಿಗೆ ತುತ್ತಾಗಿಬಿಡುತ್ತಾನೆ. ಆ ಯುವಕನ ದುಃಖದಲ್ಲಿ ಭಾಗಿಯಾಗಿ ದುರುಂತದಲ್ಲಿ ಕೊನೆಯಾಗುವ ಆತನ ತಾಯಿಯೇ ಈ ಕಾದಂಬರಿಯ ಕೇಂದ್ರ ವ್ಯಕ್ತಿ.

ಈ ತೆರೆನ ಸಂಕೀರ್ಣ ಮನೋವಿಶ್ಲೇಷಣೆ ಹಾಗೂ ಭಾವ ಪ್ರಖರತೆಗಳನ್ನು ಈಕೆಯ ಕಾದಂಬರಿಗಳಲ್ಲಿ ಬಹುವಾಗಿ ನೋಡಬಹುದು.

ಈಕೆಯನ್ನು ವಿಮರ್ಶಕರು ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ ತಾಮಸ್ ಹಾರ್ಡಿಗೆ ಹೋಲಿಸಿದ್ದಾರೆ. ಕಾಸಿಮಾ ಎಂಬ ಈಕೆಯ ಆತ್ಮಕಥೆ ಈಕೆ ಸತ್ತ ಮಾರನೆಯ ವರ್ಷ (1937) ಪ್ರಕಟಗೊಂಡಿತು. (ಎಸ್.ವಿ.ಆರ್.)

ಪ್ರಾಥಮಿಕ ಶಾಲೆಯಲ್ಲಿ ಸಹ ಓದನ್ನು ಮುಗಿಸಲು ಗ್ರಾಜಿóಯಾಗೆ ಸಾಧ್ಯವಾಗಲಿಲ್ಲ. ಆದರೂ ಹದಿಮೂರನೆಯ ವಯಸ್ಸಿಗೇ ಮೊದಲನೆಯ ಕಾದಂಬರಿ `ಸಾಂಗೆ ಸಾರ್ದೊ ಬರೆದಳು. ಇಪ್ಪತ್ತನೆಯ ವರ್ಷದಲ್ಲಿ ಬರೆದ `ಸಾರ್ಡಿನಿಯನ್ ಟೇಲ್ಸ್ ಕಥಾ ಸಂಗ್ರಹವು ಇವಳಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಈ ಸಂಗ್ರಹದ ಕಥೆಗಳ ಮತ್ತು `ಎಲಿಯಾಸ್ ಪೋರ್ಪೊಲು ಎನ್ನುವ ಕಾದಂಬರಿಯ ಅನುವಾದಗಳಿಂದ ಇವಳು ಯೂರೋಪಿನಲ್ಲೆಲ್ಲ ಪ್ರಸಿದ್ಧಳಾದಳು. 1900ರಲ್ಲಿ ಮದುವೆಯಾದ ಮೇಲೆ ರೋಮ್ ನಗರದಲ್ಲಿ ನೆಲೆಸಿದಳು.

ರೈತ ಜನಾಂಗದ ಜೀವನವನ್ನು ಚೆನ್ನಾಗಿ ಬಲ್ಲವಳು. ಒಟ್ಟು ಮೂವತ್ತು ಕಾದಂಬರಿಗಳನ್ನು ಬರೆದಿದ್ದಾಳೆ. ಪರಿಷ್ಕರಣೆ ಎಲ್.ಎಸ್.ಶೇಷಗಿರಿರಾವ್