ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೊಡ್ಡದಗರೆ

ವಿಕಿಸೋರ್ಸ್ದಿಂದ

ದೊಡ್ಡದಗರೆ - ಲೆಗ್ಯೂಮಿನೋಸೀ ಕುಟುಂಬದ ಸೀಸಾಲ್‍ಪಿನೀ ಉಪಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ. ಇದರ ವೈಜ್ಞಾನಿಕ ಹೆಸರು ಕ್ಯಾಸಿಯ ಗ್ರ್ಯಾಂಡಿಸ್, ಪನಾಮ ಇದರ ತವರು ಎಂದು ಹೇಳಲಾಗಿದೆ. ಅಮೆರಿಕದ ಉಷ್ಣವಲಯ, ಭಾರತಗಳಲ್ಲಿ ಇದು ಹೇರಳವಾಗಿ ಕಾಣದೊರೆಯುತ್ತದೆ. ಇದು 15 - 20 ಎತ್ತರಕ್ಕೆ ಬೆಳೆಯುವ ಮರ. ಎಲೆಗಳು ಏಕಪಿಚ್ಛಕ ಸಂಯುಕ್ತ ಮಾದರಿಯವು; ಒಂದೊಂದರಲ್ಲೂ 10 - 20 ಜೊತೆ ಕಿರು ಎಲೆಗಳುಂಟು. ಎಲೆಗಳ ಜೋಡನೆ ಪರ್ಯಾಯ ರೀತಿಯದು. ಎಳೆಯವಾಗಿರುವಾಗ ಎಲೆಗಳು ತಾಮ್ರ ಬಣ್ಣದವಾಗಿರುವುವು. ದೊಡ್ಡದಗರೆ ವರ್ಷಕ್ಕೆ ಎರಡು ಸಲ (ಫೆಬ್ರುವರಿ - ಮಾರ್ಚ್ ಹಾಗೂ ಜೂನ್ - ಜುಲೈ) ಹೂ ಬಿಡುತ್ತದೆ ; ಹೂಗೊಂಚಲುಗಳು ಎಲೆಗಳ ಕಂಕುಗಳಲ್ಲಿ ಮೂಡುವುವು. ಹೂಗಳ ಬಣ್ಣ ನಸುಗೆಂಪು. ಇದನ್ನು ಬೀಜದಿಂದ ಅಭಿವೃದ್ಧಿಪಡಿಸಲಾಗುತ್ತದೆ. ರಸ್ತೆಯ ಅಂಚಿನಲ್ಲಿ, ಉದ್ಯಾನವನಗಳಲ್ಲಿ, ಅಲಂಕಾರಕ್ಕಾಗಿ ದೊಡ್ಡದಗರೆಯನ್ನು ಬೆಳೆಸುವುದಲ್ಲದೆ ಇದರ ತಿರುಳನ್ನು ರೇಚಕವಸ್ತುವಾಗಿ ಉಪಯೋಗಿಸುವುದು ಉಂಟು. ಇದರ ಚೌಬೀನೆ ಉಪಕರಣಗಳ ತಯಾರಿಕೆಗೆ ಉತ್ತಮವಾಗಿಲ್ಲ. ಆದರೆ ಉರುವಲಾಗಿ ಬಳಸಬಹುದು. (ಎಸ್.ಐ.ಎಚ್.)