ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ ಭಾರತದ ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯ ವಾಯವ್ಯ ಭಾಗದಲ್ಲಿರುವ ಒಂದು ತಾಲ್ಲೂಕು: ಆ ತಾಲ್ಲೂಕಿನ ಆಡಳಿತ ಕೇಂದ್ರ. ದೊಡ್ಡಬಳ್ಳಾಪುರ ತಾಲ್ಲೂಕಿನ ಪೂರ್ವದಲ್ಲಿ ದೇವನಹಳ್ಳಿ, ದಕ್ಷಿಣದಲ್ಲಿ ಬೆಂಗಳೂರು ಉತ್ತರ ಮತ್ತು ನೆಲಮಂಗಲ ತಾಲ್ಲೂಕುಗಳು, ಪಶ್ವಿಮದಲ್ಲಿ ನೆಲಮಂಗಲ ತಾಲ್ಲೂಕು ಮತ್ತು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು, ಉತ್ತರದಲ್ಲಿ ಕೋಲಾರ ಜಿಲ್ಲೆಯ ಗೌರಿಬಿದುನೂರು ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕುಗಳು ಇವೆ. ದೊಡ್ಡಬಳ್ಳಾಪುರ, ದೊಡ್ಡ ಬೆಳವಂಗಲ ಮಧುರೆ, ಸಾಸಲು ಮತ್ತು ತೂಬಗೆರೆ ಹೋಬಳಿಗಳಿಂದಲೂ 296 ಗ್ರಾಮಗಳಿಂದಲೂ ಕೂಡಿರುವ ಈ ತಾಲ್ಲೂಕಿನ ವಿಸ್ತೀರ್ಣ 790 ಚ.ಕಿಮೀ. ತಾಲ್ಲೂಕು ಜನಸಂಖ್ಯೆ 2,68,145 (2001).
ತಾಲ್ಲೂಕಿನ ಉತ್ತರ ಹಾಗೂ ವಾಯವ್ಯದ ಬೆಟ್ಟಗಳ ಪ್ರದೇಶವನ್ನು ಬಿಟ್ಟು ಉಳಿದ ಭಾಗ ಅಲೆಯಲೆಯಾದ ಬಯಲು ನೆಲ. ತಾಲ್ಲೂಕಿನ ಈಶಾನ್ಯದಲ್ಲಿ ನಂದಿದುರ್ಗ ಬೆಟ್ಟದಲ್ಲಿ ಅರ್ಕಾವತಿ ನದಿ ಹುಟ್ಟಿ ನೈಋತ್ಯಾಭಿಮುಖವಾಗಿ ಹರಿಯುತ್ತದೆ. ತಾಲ್ಲೂಕಿನ ಅತ್ಯಂತ ಉತ್ತರ ಭಾಗ ಬಿಟ್ಟು ಇಡೀ ತಾಲ್ಲೂಕಿನ ಮಳೆನೀರನ್ನು ಕೂಡಿಸಿಕೊಂಡು ಹರಿಯುವ ಈ ನದಿಯಿಂದ ಅದರ ಪಾತ್ರದ ಉದ್ದಕ್ಕೂ ಹಲವು ಕೆರೆಗಳಿಗೆ ನೀರು ತುಂಬುತ್ತದೆ. ತಾಲ್ಲೂಕಿನ ಉತ್ತರಭಾಗ ಉತ್ತರ ಪೆನ್ನಾರ್ ಮತ್ತು ಅದರ ಉಪನದಿಗಳ ಜಲಾಯನ ಪ್ರದೇಶ.
ತಾಲ್ಲೂಕಿನದು ಹಿತಕರವಾದ ವಾಯುಗುಣ, ಇಲ್ಲಿ ಅಂಥ ಕಾಡುಗಳೇನೂ ಇಲ್ಲ. ವಾಯವ್ಯಭಾಗದಲ್ಲಿ ಕುರುಚಲು ಮರಗಳು ಬೆಳೆದಿವೆ. ಮಾಕಳಿದುರ್ಗದ ಬಳಿ ಅರಣ್ಯ ಬೆಳೆಸಲಾಗಿದೆ. ಹುಲುಕುಂಟೆ ಕೋಲುರುಗಳಲ್ಲಿ ಮರಗಳನ್ನು ನೆಡಲಾಗಿದೆ. ತಾಲ್ಲೂಕು ಸಾಮಾನ್ಯವಾಗಿ ಮರಳು ಮಿಶ್ರಿತ ಕೆಂಪು ಮಣ್ಣಿನಿಂದ ಕೂಡಿದ್ದು. ರಾಗಿ, ಜೋಳ ಮೊದಲಾದ ಖುಷ್ಕಿ ಬೆಳೆಗಳಿಗೆ ಇದು ಉಪಯುಕ್ತ, ತಾಲ್ಲೂಕಿನ ಉತ್ತರ ಹಾಗೂ ವಾಯವ್ಯ ಭಾಗಗಳಲ್ಲಿ ನೆಲ ಅಷ್ಟು ಫಲವತ್ತಾಗಿಲ್ಲ. ತಾಲ್ಲೂಕಿನಲ್ಲಿ ಕಪ್ಪು ಮಣ್ಣು ಬಲು ಅಪರೂಪ. ತಾಲ್ಲೂಕಿನ ಮುಖ್ಯ ಬೆಳೆಗಳು ರಾಗಿ ಮತ್ತು ಜೋಳ, ಹೊಗೆಸೊಪ್ಪು ಆಲೂಗಡ್ಡೆಯೂ ಬೆಳೆಯುತ್ತವೆ. ಬೆಂಗಳೂರು-ಗುಂತಕಲ್ಲು ಮೀಟರ್ ಗೇಜ್ ರೈಲುಮಾರ್ಗ ಈ ತಾಲ್ಲೂಕಿನ ನಡುವಿನಲ್ಲಿ ದೊಡ್ಡಬಳ್ಳಾಪುರದ ಮೂಲಕ ಹಾದು ಹೋಗುತ್ತದೆ. ದೊಡ್ಡ ಬಳ್ಳಾಪುರ ಹಾಗೂ ಮಾಕಳಿದುರ್ಗ ಈ ರೈಲು ಮಾರ್ಗದ ಇನ್ನೆರಡು ನಿಲ್ದಾಣಗಳು. ಬೆಂಗಳೂರು-ದೊಡ್ಡಬಳ್ಳಾಪುರ-ಗೌರಿಬಿದನೂರು ರಾಜ್ಯ ಹೆದ್ದಾರಿ ದಕ್ಷಿಣೋತ್ತರವಾಗಿ ತಾಲ್ಲೂಕಿನ ಮಧ್ಯಭಾಗದಲ್ಲಿ ಹಾದುಹೋಗುತ್ತದೆ. ದೊಡ್ಡಬಳ್ಳಾಪುರದಿಂದ ಕೋಲಾರ, ಗೌರಿಬಿದನೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ ನೆಲಮಂಗಲ, ಮಧುಗಿರಿ ಮುಂತಾದ ಸ್ಥಳಗಳಿಗೆ ರಸ್ತೆಗಳಿವೆ. ಘಾಟಿ ಸುಬ್ರಹ್ಮಣ್ಯ ಈ ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ.
ದೊಡ್ಡ ಬಳ್ಳಾಪುರ ಪಟ್ಟಣ ಈ ತಾಲ್ಲೂಕಿನ ಆಡಳಿತ ಕೇಂದ್ರ. ಇದು ಅರ್ಕಾವತಿ ನದಿಯ ಬಲದಂಡೆಯ ಮೇಲೆ ಬೆಂಗಳೂರಿನಿಂದ ವಾಯುವ್ಯಕ್ಕೆ ಸುಮಾರು 39 ಕಿ.ಮೀ. ದೂರದಲ್ಲಿ ಉ.ಅ. 130 18 ಮತ್ತು ಪೂ.ರೇ, 770 26 ಮೇಲೆ ಇದೆ, ಜನಸಂಖ್ಯೆ 71,509 (2001). ಇದೊಂದು ಪ್ರಮುಖ ನೇಯ್ಗೆ ಕೇಂದ್ರ. ಇಲ್ಲಿ ಸುಮಾರು 8,000 ಮಗ್ಗಗಳಿವೆ. 1932ರಿಂದ ಈಚೆಗೆ ಶಕ್ತಿಚಾಲಿತ ಮಗ್ಗಗಳೂ ಸ್ಥಾಪಿತವಾಗುತ್ತಿವೆ. ಇಲ್ಲಿ ತಯಾರಾಗುವ ಹತ್ತಿ ಮತ್ತು ರೇಷ್ಮೆ ಸೀರೆಗಳು ತುಂಬಾ ಪ್ರಸಿದ್ಧವಾಗಿದೆ. ಚಪ್ಪಡಿಕಲ್ಲುಗಳು ಇಲ್ಲಿಂದ ಇತರ ಕಡೆಗಳಿಗೆ ಸಾಗುತ್ತದೆ. ಅಗರಬತ್ತಿ ಇಲ್ಲಿಯ ಇನ್ನೊಂದು ಉತ್ಪಾದನೆ. ಗುರುವಾರ ಇಲ್ಲಿ ಸಂತೆ ಸೇರುತ್ತದೆ.
ದೊಡ್ಡಬಳ್ಳಾಪುರದಲ್ಲಿ ಒಂದು ಪುರಸಭೆ ಇದೆ. ಲೋಕಸೇವಾನಿರತ ಕೊಂಗಡಿಯಪ್ಪ ವಿದ್ಯಾಸಂಸ್ಥೆ ಇಲ್ಲಿ ಒಂದು ಪ್ರೌಢಶಾಲೆಯನ್ನು ಕಾಲೇಜನ್ನೂ ನಡೆಸುತ್ತಿದೆ. ಇಲ್ಲಿ ಒಂದು ಪುರಸಭಾ ಕಾಲೇಜೂ ಉಂಟು. (ಪಿ.ಬಿ.) ದೊಡ್ಡಬಳ್ಳಾಪುರ 12ನೆಯ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ಒಂದು ಮುಖ್ಯ ವ್ಯಾಪಾರಸ್ಥಳವಾಗಿತ್ತು. ದೇವನಹಳ್ಳಿಯನ್ನು ಸ್ಥಾಪಿಸಿದ ಆವತಿಯ ಮಲ್ಲಬೈರೇಗೌಡನೇ ಇದನ್ನೂ ಸ್ಥಾಪಿಸಿ ಇದರ ಆಡಳಿತವನ್ನು ತನ್ನ ತಮ್ಮನಿಗೆ ವಹಿಸಿಕೊಟ್ಟ. 1637-38 ರ ವೇಳೆಗೆ ಇದು ಬಿಜಾಪುರದ ಸೇನಾನಿ ರಣದುಲ್ಲಾ ಖಾನನ ಆಕ್ರಮಣಕ್ಕೆ ಒಳಗಾಯಿತು. ಸುಮಾರು 40 ವರ್ಷಗಳ ಕಾಲ ಇದು ಬಿಜಾಪುರದ ಸುಲ್ತಾನರ ಅಧೀನದಲ್ಲಿದ್ದು ಅನಂತರ ಮರಾಠರ ಕೈಸೇರಿ 1689 ರಲ್ಲಿ ಮೊಗಲರ ದಾಳಿಗೆ ತುತ್ತಾಯಿತು. ಇದನ್ನು ಒಂದು ದೊಡ್ಡ ಜಾಗೀರಾಗಿ ಮಾಡಿ ಅಲಿ ಖುಲಿ ಖಾನ್ ಎಂಬ ಸರದಾರನಿಗೆ ಕೊಡಲಾಯಿತು. ಅವನು ಸ್ವಲ್ಪ ಕಾಲ ಇದನ್ನು ಅನುಭವಿಸಿ ಮೃತನಾದ ಮೇಲೆ ಇದು ಶಿರಾದ ಸುಬೇದಾರನಾಗಿದ್ದ ಅವನ ಮಗ ದುರ್ಗ ಖುಲಿ ಖಾನನ ವಶಕ್ಕೆ ಬಂತು. ಅನಂತರ ಸುಮಾರು 49 ವರ್ಷಗಳ ಕಾಲ ಇದು ಶಿರಾದ ಆಡಳಿತಕ್ಕೆ ಒಳಪಟ್ಟಿತು. ತರುವಾಯ ಇದು ನಿಜಾಮನ ಕೈಸೇರಿತು. ನಿಜಾಮ ಇದನ್ನು ಅಬ್ಬಾಸ್ ಖುಲಿ ಖಾನನಿಗೆ ಜಹಗೀರಾಗಿ ನೀಡಿದ. ದೊಡ್ಡಬಳ್ಳಾಪುರವನ್ನು 1761 ರಲ್ಲಿ ಹೈದರ್ ಅಲಿ ವಶಪಡಿಸಿಕೊಂಡ. ಇದು ಮೈಸೂರಿನ ಭಾಗವಾಯಿತು. ದೊಡ್ಡಬಳ್ಳಾಪುರದಲ್ಲಿ ಹಿಂದಿದ್ದ ಕೋಟೆ ಈಗ ನಾಮಾವಶೇಷವಾಗಿದೆ. ಈ ಭಾಗದಲ್ಲಿ ಹಲವು ಕಟ್ಟಡಗಳ ಮತ್ತು ಕೆರೆಗಳ ಹಳೆಯುಳಿಕೆಗಳುಂಟು. ಅಬ್ಬಾಸ್ ಖುಲಿ ಖಾನ್ ನಿರ್ಮಿಸಿದ ಅಕುರ್ ಖಾನಾ ಜೀರ್ಣಾವಸ್ಥೆಯಲ್ಲಿದೆ. ಅದರ ಬಳಿಯಲ್ಲಿ ಒಂದು ಬಾವಿಯುಂಟು. ಊರಿನ ಪಶ್ವಿಮದಲ್ಲಿ, 17 ನೆಯ ಶತಮಾನದಲ್ಲಿದ್ದ ಮೊಹಿದ್ದೀನ್ ಚಿಷ್ಟಿ ಎಂಬ ಸಂತನ ದರ್ಗ ಇದೆ. ಹಲವು ಹಳೆಯ ದೇವಾಲಯಗಳ ಕಲ್ಲುಗಳನ್ನು ಉಪಯೋಗಿಸಿ ಇದನ್ನು ಕಟ್ಟಲಾಗಿದೆ. ಈ ಊರಿನ ಸಾಗರ ಕೆರೆಯ ಏರಿಯಲ್ಲೂ ಹಲವು ದೇವಾಲಯಗಳ ಕಲ್ಲುಗಳು ಸೇರಿಹೋಗಿವೆ. ಈಗ ಇಲ್ಲಿರುವ ದೇವಾಲಯಗಳೆಲ್ಲ ಈಚಿನವು. ಪಾಳುಬಿದ್ದಿರುವ ಆದಿ ನಾರಾಯಣ ದೇವಾಲಯ ಹಿಂದೆ ಸುಂದರ ಕಟ್ಟಡವಾಗಿದ್ದಿರಬೇಕು. ಉಳಿದಿರುವ ಭಾಗದ ಕೆಲವು ಕಂಬಗಳು ಮತ್ತು ಗೋಡೆಗಳ ಮೇಲೆ ಗಜೇಂದ್ರಮೋಕ್ಷ, ರಾಮಾಯಣ, ಭಾಗವತ ಮೊದಲಾದ ಹಲವು ಕಥೆಗಳು ಶಿಲ್ಪಿತವಾಗಿವೆ. ಇಲ್ಲಿರುವ ಚಂದ್ರಮೌಳೇಶ್ವರ ದೇವಾಲಯದ ಮುಖಮಂಟಪದ ಕಂಬಗಳ ಮೇಲೆ ಭೈರವ, ವೀರಭದ್ರ, ವ್ಯಾಘ್ರಪಾದ ಕಣ್ಣಪ್ಪ ಮೊದಲಾದ ಶಿಲ್ಪಗಳಿವೆ. ಈ ದೇವಾಲಯದಲ್ಲಿ ಅರುಣಾಚಲಪಂತ ಮತ್ತು ಅವನ ಪತ್ನಿ ಶೇಷಮ್ಮ ಇವರ ಭಕ್ತ ವಿಗ್ರಹಗಳಿವೆ. ಅರುಣಾಚಲಪಂತ 18ನೆಯ ಶತಮಾನದ ಅಂತ್ಯಭಾಗದಲ್ಲಿ ಈ ದೇವಾಲಯವನ್ನೂ ಇಲ್ಲಿಯ ವೆಂಕಟರಮಣಸ್ವಾಮಿ ಗುಡಿಯನ್ನೂ ಕಟ್ಟಿಸಿದನೆಂದು ಪ್ರತೀತಿ. ವೆಂಕಟರಮಣಸ್ವಾಮಿಯದು ದೊಡ್ಡ ಗುಡಿ, ಇದರ ಸುತ್ತ ಪ್ರಾಕಾರ ಇವೆ. ಅದರ ಮೇಲೆ ಹಿಂದೂ-ಇಸ್ಲಾಮೀ ಶೈಲಿಯ ಗಚ್ಚಿನ ಕೈಪಿಡಿಭಾಗ ಇದೆ. ಈ ದೇವಾಲಯದಲ್ಲಿ ಗಣಪತಿ, ದಶಾವತಾರಗಳು ಮೊದಲಾದ ದೇವಶಿಲ್ಪಗಳೂ ಅರುಣಾಚಲಪಂತ ದಂಪತಿಗಳ ಭಕ್ತವಿಗ್ರಹಗಳೂ ಇವೆ. ಇದರ ಪ್ರಾಕಾರದಲ್ಲಿ ಆದಿನಾರಾಯಣ ದೇವಾಲಯದಿಂದ ತಂದ ಮೂಲವಿಗ್ರಹವನ್ನಿಡಲಾಗಿದೆ. ಈ ಊರಿನಲ್ಲಿರುವ ಇನ್ನೆರಡು ದೇವಾಲಯಗಳು ವಿಠಲ ಮತ್ತು ಗೋಪಾಲಕೃಷ್ಣರವು. *