ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೋಸ್ತ್‌ ಮುಹಮ್ಮದ್ ಖಾನ್

ವಿಕಿಸೋರ್ಸ್ದಿಂದ

ದೋಸ್ತ್ ಮುಹಮ್ಮದ್ ಖಾನ್ - ಆಫ್ಘಾನಿಸ್ತಾನದ ಅಮೀರನಾಗಿದ್ದವ. ಹತ್ತೊಂಬತ್ತನೆಯ ಶತಮಾನದ ಪ್ರಾರಂಭದಲ್ಲಿ ಅಲ್ಲಿ ಉದ್ಭವಿಸಿದ್ಧ ಅರಾಜಕತೆಯ ಲಾಭ ಪಡೆದುಕೊಂಡು, ಸಿಂಹಾಸನಕ್ಕೆ ಹಕ್ಕುದಾರರಾಗಲು ಯತ್ನಿಸುತ್ತಿದ್ದ ಶಾಷೂಜ ಮತ್ತು ಇತರರನ್ನು ಸೋಲಿಸಿ 1826ರಲ್ಲಿ ಅಧಿಕಾರಕ್ಕೆ ಬಂದ. ಈತ ಬರಕ್ಸಾಯಿ ಗುಂಪಿನ ಮುಖಂಡ. 1833ರಲ್ಲಿ ಶಾಷೂಜ ಕಾಬೂಲಿನ ಸಿಂಹಾಸನವನ್ನು ಮರಳಿ ಪಡೆಯಲು ನಡೆಸಿದ ಪ್ರಯತ್ನವನ್ನು ನಿರರ್ಥಕಗೊಳಿಸಿದ. ಈತ ಪರಾಕ್ರಮಿ, ದೂರದರ್ಶಿ; ಆದರೆ ಸಿಕ್ಖರ ಪ್ರಾಬಲ್ಯ, ಸಹೋದರನ ವಿರೋಧ, ಬಾಲ್ಕ್ ಜನರ ದಂಗೆ, ಪರ್ಷಿಯವೂ ರಷ್ಯವೂ ಬ್ರಿಟಿಷರೂ ಆಫ್ಘಾನಿಸ್ತಾನದ ರಾಜಕಾರಣದಲ್ಲಿ ಹೊಂದಿದ್ದ ಆಸ್ಥೆ-ಇವುಗಳಿಂದ ದೋಸ್ತ್ ಮುಹಮ್ಮದ್ ಸದಾ ಕಷ್ಟ ಎದುರಿಸಬೇಕಾಗಿತ್ತು. ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅವನು ಬ್ರಿಟಿಷರ ಸ್ನೇಹವನ್ನು ಅಪೇಕ್ಷಿಸಿದ. 1836ರಲ್ಲಿ ಗವರ್ನರ್-ಜನರಲ್ಲಾಗಿ ಭಾರತಕ್ಕೆ ಬಂದ ಲಾರ್ಡ್ ಆಕ್ಲೆಂಡನಿಗೆ ದೋಸ್ತ್ ಮುಹಮ್ಮದ್ ಅಭಿನಂದನ ಪತ್ರವನ್ನು ಕಳುಹಿಸಿ, ಸಿಕ್ಖರ ಮತ್ತು ಪರ್ಷಿಯದ ವಿರುದ್ಧ ರಕ್ಷಣೆಯ ಭರವಸೆ ನೀಡಬೇಕೆಂದು ಆಶಿಸಿದ. ಆದರೆ ಆಕ್ಲೆಂಡ್ ಈ ಬಗ್ಗೆ ಆಸಕ್ತಿ ವಹಿಸಲಿಲ್ಲ. ಪರ್ಷಿಯ ಮತ್ತು ರಷ್ಯಗಳ ಮಧ್ಯೆ ನಿಕಟ ಬಾಂಧವ್ಯ ಬೆಳೆದು, ಪರ್ಷಿಯದ ಮುಹಮ್ಮದ್ ಮಿರ್ಜ ಆಕ್ರಮಣ ನಡೆಸಿದ. ಆದರೆ ಆಫ್ಘನ್ನರು ಪರಾಕ್ರಮದಿಂದ ಹೋರಾಡಿ ಪರ್ಷಿಯದ ಯತ್ನವನ್ನು ವಿಫಲಗೊಳಿಸಿದರು. ಭಾರತದ ಗಡಿಪ್ರದೇಶದಲ್ಲಿ ರಷ್ಯದ ಪ್ರಭಾವ ವಿಸ್ತಿರಿಸದಂತೆ ತಡೆಯಲು ಬ್ರಿಟನ್ನಿನಿಂದ ಲಾರ್ಟ್ ಆಕ್ಲೆಂಡನಿಗೆ ಆದೇಶ ಬಂತು. ಆದ್ದರಿಂದ ಅವನು ಅಲೆಗ್ಸಾಂಡರ್ ಬನ್ರ್ಸ್ ಎಂಬವನನ್ನು ಆಫ್ಘಾನಿಸ್ತಾನದ ಸ್ಥಿತಿಯನ್ನು ಅರಿಯಲು, ವ್ಯಾಪಾರ ವಾಣಿಜ್ಯ ಸಂಪರ್ಕವನ್ನು ಕುದುರಿಸುವ ನೆಪದಲ್ಲಿ, 1836ರಲ್ಲಿ ಕಾಬೂಲಿಗೆ ಕಳುಹಿಸಿದ. ದೋಸ್ತ್ ಮುಹಮ್ಮದ್ ಬ್ರಿಟಿಷ್ ಅಧಿಕಾರಿಯನ್ನು ಗೌರವದಿಂದ ಬರಮಾಡಿಕೊಂಡು ಬ್ರಿಟಿಷರ ಸ್ನೇಹವನ್ನು ಬಯಸಿದ; ಪೆಷಾವರನ್ನು ಸಿಕ್ಖರ ಆಕ್ರಮಣದಿಂದ ತೆರವು ಮಾಡಿಸಿಕೊಡಬೇಕೆಂದು ಕೇಳಿಕೊಂಡ. ಅಲೆಗ್ಸಾಂಡರ್ ಬನ್ರ್ಸ್ ಲಾರ್ಡ್ ಆಕ್ಲೆಂಡನಿಗೆ ದೋಸ್ತ್ ಮುಹಮ್ಮದನ ಬಯಕೆಯನ್ನು ವಿವರಿಸಿದ. ಆದರೆ ಲಾರ್ಡ್ ಆಕ್ಲೆಂಡ್ ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸಲಿಲ್ಲ. ಈ ಕಾರಣದಿಂದ ದೋಸ್ತ್ ಮುಹಮ್ಮದ್ ಪರ್ಷಿಯ ಮತ್ತು ರಷ್ಯಗಳನ್ನು ಒಲಿಸಿಕೊಳ್ಳಲು ಯತ್ನಿಸಿದ. ಆಫ್ಘನಿಸ್ತಾನದಲ್ಲಿ ರಷ್ಯದ ರಾಜಕೀಯ ಚಟುವಟಿಕೆಗಳು ಪ್ರಾರಂಭವಾದುವು. ಒಂದನೆಯ ಇಂಗ್ಲಿಷ್ ಯುದ್ಧ ಪ್ರಾರಂಭವಾಯಿತು.

ದೋಸ್ತ್ ಮುಹಮ್ಮದನ ಆಳ್ವಿಕೆಯನ್ನು ಕೊನೆಗೊಳಿಸಿ ತಮಗೆ ಅನುಕೂಲವಾಗಿ ವರ್ತಿಸುತ್ತಿದ್ದ ಶಾಷೂಜನನ್ನು ಕಾಬೂಲಿನ ಸಿಂಹಾಸನಕ್ಕೆ ಪುನಃ ತರಲು ಇಂಗ್ಲಿಷರೂ ರಣಜಿತ್ ಸಿಂಗನೂ ಶಾಷೂಜನೊಂದಿಗೆ 1838ರಲ್ಲಿ ಒಪ್ಪಂದ ಮಾಡಿಕೊಂಡರು. ಬ್ರಿಟಿಷ್ ಮತ್ತು ಸಿಖ್ ಸೈನ್ಯಗಳು ಶಾಷೂಜನೊಂದಿಗೆ ಆಫ್ಘಾನಿಸ್ತಾನವನ್ನು ಪ್ರವೇಶಿಸಿ 1839ರಲ್ಲಿ ಕಾಬೂಲನ್ನು ಹಿಡಿದವು. 1840ರ ಪ್ರಾರಂಭದಲ್ಲಿ ಪರಾಜಿತನಾದ ದೋಸ್ತ್ ಮುಹಮ್ಮದ್ ಬ್ರಿಟಿಷರಿಗೆ ಶರಣಾಗತನಾದ. ಅವನನ್ನು ಬಂಧಿಸಿ ಕಲ್ಕತ್ತದಲ್ಲಿ ಸೆರೆಯಲ್ಲಿಡಲಾಯಿತು. ಶಾಷೂಜನನ್ನು ಆಫ್ಘಾನಿಸ್ತಾನದ ಅಮೀರನೆಂದು ಘೋಷಿಸಲಾಯಿತು. ಆದರೆ ಅವನನ್ನು ಆಫ್ಘ್‍ನರು ತಮ್ಮ ಮುಖಂಡನೆಂದು ಒಪ್ಪಿಕೊಳ್ಳಲಿಲ್ಲ. 1841ರಲ್ಲಿ ಅಲ್ಲಿ ದಂಗೆ ಉಂಟಾಯಿತು. ದೋಸ್ತ್ ಮುಹಮ್ಮದನ ಮಗನಾದ ಅಕ್ಬರ್‍ಖಾನನ ನಾಯಕತ್ವದಲ್ಲಿ ಆಫ್ಘನರು ಬ್ರಿಟಿಷ್ ಸೈನ್ಯಾಧಿಕಾರಿಗಳನ್ನೂ ಅನೇಕ ಮಂದಿ ಸೈನಿಕರನ್ನೂ ಕೊಂದರು. ಬ್ರಿಟಿಷರ ಸೈನ್ಯ ಹೀನಾಯಕರವಾದ ಒಪ್ಪಂದ ಮಾಡಿಕೊಂಡು ಹಿಂದಿರುಗಿತು. ಆಕ್ಲೆಂಡನ ಅಧಿಕಾರ ಕೊನೆಗೊಂಡು ಲಾರ್ಡ್ ಎಲೆನ್‍ಬರೋ ಗವರ್ನರ್-ಜನರಲ್ ಆಗಿ 1842ರಲ್ಲಿ ಅಧಿಕಾರ ವಹಿಸಿಕೊಂಡ. ಲಾರ್ಡ್ ಎಲೆನ್‍ಬರೋ ಯುದ್ಧವನ್ನು ಮುಂದುವರೆಸಿದ. ಆ ವೇಳೆಗೆ ಶಾಷೂಜ ಆಫ್ಘನರಿಂದ ಕೊಲೆಯಾದ. ದೋಸ್ತ್ ಮುಹಮ್ಮದನನ್ನು ಬ್ರಿಟಿಷರು ಹೆಚ್ಚು ಕಾಲ ಸೆರೆಯಲ್ಲಿಡಲಾಗಲಿಲ್ಲ. ಕೊನೆಗೆ ಅವನನ್ನು ಬಿಡುಗಡೆ ಮಾಡಿ ಆಫ್ಘಾನಿಸ್ತಾನದ ಅಮೀರನೆಂದು ಷರತ್ತಿಲ್ಲದೆ ಒಪ್ಪಿಕೊಳ್ಳಬೇಕಾಯಿತು. ದೋಸ್ತ್ ಮುಹಮ್ಮದ್ ಬ್ರಿಟಿಷರ ಮಿತ್ರನಾಗಿ ಆಳ್ವಿಕೆ ಮುಂದುವರಿಸಿದ.

1855ರಲ್ಲಿ ಪರ್ಷಿಯ ಹೆರಾತ್ ಮತ್ತು ಕಾಂದಾಹಾರವನ್ನು ಆಕ್ರಮಿಸಿತು. ಇದರಿಂದ ದೋಸ್ತ್ ಮುಹಮ್ಮದ್ ಮತ್ತು ಬ್ರಿಟಿಷರ ಮೈತ್ರಿ ಇನ್ನೂ ಹೆಚ್ಚಲು ಸಹಕಾರಿಯಾಯಿತು. ಬ್ರಿಟಿಷ್ ಸೈನ್ಯ ಹಾಗೂ ಇತರ ಬಗೆಯ ಸಹಕಾರದಿಂದ ದೋಸ್ತ್ ಮುಹಮ್ಮದ್ ಖಾನ್ ಪರ್ಷಿಯದ ಸೈನ್ಯವನ್ನು ಸೋಲಿಸಿ 1856ರಲ್ಲಿ ಹೆರಾತ್ ಪ್ರದೇಶವನ್ನು ವಶಪಡಿಸಿಕೊಂಡ. 1857ರ ಬಂಡಾಯದ ಸಮಯದಲ್ಲೂ ದೋಸ್ತ್ ಮುಹಮ್ಮದ್ ಬ್ರಿಟಿಷರಿಗೆ ಬೆಂಬಲವಾಗಿ ನಿಂತ. ಪ್ರಾರಂಭದಲ್ಲಿ ಅನೇಕ ಎಡರುತೊಡರುಗಳನ್ನನುಭವಿಸಿ, ಬ್ರಿಟಿಷರ ವಿರುದ್ಧ ಹೋರಾಡಿ ಪರಾಜಿತನಾದರೂ ಜನಾನುರಾಗ ಹಾಗೂ ದಕ್ಷತೆಯಿಂದ ಸಿಂಹಾಸನವನ್ನು ಮರಳಿ ಪಡೆದು ದೀರ್ಘಕಾಲ ಆಳ್ವಿಕೆ ನಡೆಸಿ ದೋಸ್ತ್ ಮುಹಮ್ಮದ್ ತನ್ನ 40ನೆಯ ವಯಸ್ಸಿನಲ್ಲಿ 1863ರಲ್ಲಿ ಮರಣ ಹೊಂದಿದ.

(ಜಿ.ಆರ್.ಆರ್.)