ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೌಲತ್ ರಾವ್ ಸಿಂಧ್ಯ

ವಿಕಿಸೋರ್ಸ್ ಇಂದ
Jump to navigation Jump to search

.ದೌಲತ್ ರಾವ್ ಸಿಂಧ್ಯ - ಗ್ವಾಲಿಯರಿನಿಂದ ಆಳುತ್ತಿದ್ದ ಸಿಂಧ್ಯ ಮನೆತನದ ಒಬ್ಬ ದೊರೆ. ಮಹದಾಜಿ ಸಿಂಧ್ಯನ ಸೋದರನಾದ ತುಕೋಜಿಯ ಮೊಮ್ಮಗ. 1780ರಲ್ಲಿ ಜನಿಸಿದ. ತಂದೆ ಆನಂದರಾವ್, ತಾಯಿ ಮೈನಾಬಾಯಿ, ಮಹದಾಜಿ ಸಿಂಧ್ಯನಿಗೆ ಗಂಡು ಮಕ್ಕಳಿರಲಿಲ್ಲವಾಗಿ ದೌಲತ್‍ರಾಯನನ್ನು ದತ್ತುವಾಗಿ ಸ್ವೀಕರಿಸಿದ್ದ. ಮಹದಾಜಿ ಮರಣ ಹೊಂದಿದಾಗ ಇವನು ಅಧಿಕಾರಕ್ಕೆ ಬಂದ (1794).

ದೌಲತ್ ರಾವ್ ಸಿಂಹಾಸನಕ್ಕೆ ಬಂದ ಮೇಲೆ ಸರ್‍ಜೀರಾವ್ ಗಟ್ಕಿಯ ಮಗಳೊಂದಿಗೆ ಇವನ ಮದುವೆ ಆಯಿತು (1798). ಕುತಂತ್ರಿಯಾದ ಮಾವ ಗಟಿಯನೇ ಇವನ ಮಂತ್ರಿಯಾದ. ದೌಲತ್ ರಾವ್ ಸಿಂಧ್ಯನ ಆಳ್ವಿಕೆಯ ಮೊದಲ ಭಾಗ ಅಸಮರ್ಪಕವಾಗಿತ್ತು. ಪೇಶ್ವೆ 2ನೆಯ ಬಾಜಿರಾಯನ ಮೇಲೆ ಅಧಿಕಾರ ಹೊಂದಬೇಕೆಂಬುದು ದೌಲತ್ ರಾವ್ ಸಿಂಧ್ಯನ ಆಕಾಂಕ್ಷೆಯಾಗಿತ್ತು. ದೌಲತ್ ರಾವ್‍ಗೆ ಪ್ರತಿ ಸ್ಪರ್ಧಿಯಾಗಿದ್ದವನು ಜಸವಂತರಾವ್ ಹೋಳ್ಕರ್. ಪೇಶ್ವೆಯ ಪ್ರಧಾನಮಂತ್ರಿಯಾಗಿದ್ದ ನಾನಾ ಫಡ್ನವೀಸ ಪ್ರಬಲನಾಗಿದ್ದ. ನಾನಾ ಫಡ್ನವೀಸ್ 1800ರಲ್ಲಿ ತೀರಿಕೊಂಡ. ಪುಣೆಯ ಮೇಲೆ ತನ್ನ ಪ್ರಭಾವ ಗಳಿಸಿಕೊಳ್ಳಲು ದೌಲತ್ ರಾವ್ ದಂಡೆತ್ತಿದ. ದೌಲತ್ ರಾವ್ ಮತ್ತು ಜಸವಂತ್ ರಾವ್ ಹೋಳ್ಕರರ ನಡುವೆ ಕದನ ನಡೆಯಿತು(1802). ಪೇಶ್ವೆ ಬಾಜಿರಾವ್ ಇಂಗ್ಲಿಷರ ಮೊರೆಹೊಕ್ಕು ಅವರೊಂದಿಗೆ ಕೌಲು ಮಾಡಿಕೊಂಡ. 1803ರಲ್ಲಿ ಇಂಗ್ಲಿಷರು ಪೇಶ್ವೆಯನ್ನು ಮತ್ತೆ ಅಧಿಕಾರದಲ್ಲಿ ಸ್ಥಾಪಿಸಿದರು. ದೌಲತ್ ರಾವ್ ಸಿಂಧ್ಯ ಈ ಕೌಲನ್ನು ತೀವ್ರವಾಗಿ ವಿರೋಧಿಸಿದ. ಇದರಿಂದ ಮರಾಠರ ಸ್ವಾತಂತ್ರ್ಯಕ್ಕೆ ಧಕ್ಕೆ ಒದಗಿತೆಂಬುದು ಅವನ ಅಭಿಪ್ರಾಯವಾಗಿತ್ತು. ಹೋಳ್ಕರನಿಗೂ ಭೋನ್ಸ್ಲೆಗೂ ಈ ಕೌಲು ಒಪ್ಪಿಗೆಯಾಗಲಿಲ್ಲ. ಇದು ಎರಡನೆಯ ಮರಾಠಾ ಯುದ್ಧಕ್ಕೆ ಕಾರಣವಾಯಿತು (1803). ದೌಲತ್ ರಾವ್ ಸಿಂಧ್ಯನ ಸೈನ್ಯ ಐರೋಪ್ಯರಿಂದ ತರಬೇತು ಪಡೆದು ಶಿಸ್ತಿನಿಂದ ಕೂಡಿದ್ದಾಗ್ಯೂ ಅಸ್ಸಾಯೆ, ಆರ್ಗಾಂವ್, ಲಾಸ್ಸಾರಿಗಳಲ್ಲಿ ಪರಾಭವಗೊಂಡಿತು. ಸಿಂಧ್ಯನ ಸೈನ್ಯದ ನೇತೃತ್ವ ವಹಿಸಿದ್ದ ಫ್ರೆಂಚ್ ಅಧಿಕಾರಿ ಪೆರಾನ್ ತನ್ನ ಕೆಲಸ ತ್ಯಜಿಸಿದ. ದೌಲತ್ ರಾವ್ ಸಿಂಧ್ಯ ಇಂಗ್ಲಿಷರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಈ ಕೌಲಿನ ಪ್ರಕಾರ ಅವನು ಗಂಗಾ-ಯಮುನಾ ನದಿಯ ನಡುವಣ ಪ್ರದೇಶವನ್ನೂ ದೆಹಲಿ ಮತ್ತು ಆಗ್ರ ನಗರಗಳ ಮೇಲಣ ಹಕ್ಕನ್ನೂ ಇತರ ಕೆಲವು ಪ್ರದೇಶಗಳನ್ನೂ ಬಿಟ್ಟುಕೊಡಬೇಕಾಯಿತು. ಇದರಿಂದ ಅವನ ಅಸಮಾಧಾನ ಮುಂದುವರಿಯಿತು. 1805ರಲ್ಲಿ ಅವನು ಮತ್ತೆ ಇಂಗ್ಲಿಷರೊಂದಿಗೆ ಯುದ್ಧ ಮಾಡಿದ. ಇದರಲ್ಲಿ ಅವನಿಗೆ ಜಯ ಲಭಿಸಲಿಲ್ಲವಾದರೂ ಹಿಂದಣ ಕೌಲಿನ ಕೆಲವು ಷರತ್ತುಗಳನ್ನು ಇಂಗ್ಲಿಷರು ಸಡಿಲಿಸಿದರು. ಚಂಬಲ್ ಕಣಿವೆಯನ್ನು ಉತ್ತರ ಭಾರತದಲ್ಲಿದ್ದ ಇಂಗ್ಲಿಷರ ಪ್ರದೇಶಕ್ಕೂ ಸಿಂಧ್ಯನ ರಾಜ್ಯಕ್ಕೂ ಗಡಿಯೆಂದು ಪರಿಗಣಿಸಲಾಯಿತಲ್ಲದೆ ರಜಪೂತರ ವ್ಯವಹಾರಗಳಲ್ಲಿ ಪ್ರವೇಶಿಸಲು ಸಿಂಧ್ಯನಿಗೆ ಅವಕಾಶ ನೀಡಲಾಯಿತು. ದೌಲತ್ ರಾವ್ ಸಿಂಧ್ಯನಿಗೆ ನೆಮ್ಮದಿ ಇರಲಿಲ್ಲ. ಬ್ರಿಟಿಷ್ ಪ್ರದೇಶಗಳಲ್ಲಿ ದರೋಡೆಯಲ್ಲಿ ನಿರತರಾಗಿದ್ದ ಪಿಂಡಾರಿ ಜನರಿಗೆ ಇವನು ನೆರವು ನೀಡುತ್ತಿದ್ದ. ಬ್ರಿಟಿಷ್ ಗವರ್ನರ್-ಜನರಲ್ ಲಾರ್ಡ್ ಹೇಸ್ಟಿಂಗ್ಸ್ ಇವರ ವಿರುದ್ಧ ಕಾರ್ಯಾಚರಣೆ ಕೈಗೊಂಡ. ಇವರಿಗೆ ದೌಲತ್ ರಾವ್ ಸಿಂಧ್ಯ ನೆರವು ನೀಡದಂತೆ ಒತ್ತಾಯ ಪಡಿಸುವ ಕೌಲೊಂದಕ್ಕೆ ಸಿಂಧ್ಯ ಒಡಂಬಡಬೇಕಾಯಿತಲ್ಲದೆ ರಜಪೂತರೊಂದಿಗೆ ಬ್ರಿಟಿಷರು ಕೌಲು ಮಾಡಿಕೊಳ್ಳುವುದಕ್ಕೂ ಅವನು ಸಮ್ಮತಿ ನೀಡಬೇಕಾಯಿತು. ದೌಲತ್ ರಾವ್ ಸಿಂಧ್ಯನ ಪ್ರಭಾವ ಗಮನಾರ್ಹವಾಗಿ ಕಡಿಮೆಯಾಯಿತು. ಬ್ರಿಟಿಷರಿಗೆ ಅವನು ತೊಂದರೆ ಕೊಡುವಂಥ ಸ್ಥಿತಿಯಲ್ಲಿರಲಿಲ್ಲ. ಮೊದಲಿದ್ದಷ್ಟು ಅಲ್ಲದಿದ್ದರೂ ಅವನ ರಾಜ್ಯ ತಕ್ಕಮಟ್ಟಿಗೆ ವಿಸ್ತಾರವಾಗಿಯೇ ಇತ್ತು. ದೌಲತ್ ರಾವ್ ಸಿಂಧ್ಯ 1827ರಲ್ಲಿ ತೀರಿಕೊಂಡ. (ಎಚ್.ಎಂ.ಎನ್.ಎ.)