ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ರವಚಾಲಿತ ಪ್ರತಿರೂಪಗಳು

ವಿಕಿಸೋರ್ಸ್ದಿಂದ

ದ್ರವಚಾಲಿತ ಪ್ರತಿರೂಪಗಳು - ಚರದ್ರವ ಅಥವಾ ಜಲಭಾರ ವಿe್ಞÁನದಲ್ಲಿ ಎದುರಾಗುವ ಹಲವಾರು ಸಂಕೀರ್ಣ ಸಮಸ್ಯೆಗಳ ಪರಿಹಾರಕ್ಕಾಗಿ ತಯಾರಿಸಿದ ದ್ರವಚಾಲಿತ ಮಾದರಿಗಳು (ಹೈಡ್ರಾಲಿಕ್ ಮೋಡೆಲ್ಸ್). ಇಂಥ ಒಂದು ಪ್ರತಿರೂಪದ ತನಿಖೆ ಎಂಜಿನಿಯರುಗಳಿಗೆ ಸಮಸ್ಯೆಯ ಬಗ್ಗೆ ಹೆಚ್ಚಿನ ತಿಳಿವಳಿಕೆಯನ್ನು ನೀಡುತ್ತದೆ. ಅಲ್ಲದೆ ವಾಸ್ತವ ರಚನೆಯನ್ನು ತದನುಗುಣವಾಗಿ ವಿನ್ಯಾಸಗೊಳಿಸಲು ಸಹಾಯ ಮಾಡುತ್ತದೆ. ಅಂದ ಮಾತ್ರಕ್ಕೆ ಪ್ರತಿರೂಪದ ಅಭ್ಯಾಸ ಸದಾ ಸಕಲ ಪ್ರಶ್ನೆಗಳಿಗೂ ಸಿದ್ಧ ಉತ್ತರಗಳನ್ನು ಒದಗಿಸಿಯೇ ತೀರುವುದೆಂದೇನೂ ಇಲ್ಲ. ಆದರೆ ಇಂಥ ಅಭ್ಯಾಸಗಳಿಂದ ಪಡೆದ ಪರಿಮಾಣಾತ್ಮಕ (ಕ್ವಾಂಟಿಟೇಟಿವ್) ಹಾಗೂ ಗುಣಾತ್ಮಕ (ಕ್ವಾಲಿಟೇಟಿವ್) ತಿಳಿವನ್ನು ಮೂಲರೂಪದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಉಪಯೋಗಿಸಬಹುದು. ಅಲ್ಲದೆ ಅದರ ಕಾರ್ಯರೀತಿಯ ಬಗ್ಗೆ ಮುಂಚಿತವಾಗಿಯೇ ಉಪಯುಕ್ತವಾದ ಪೂರ್ವಕಥನಗಳನ್ನು (ಪ್ರೆಡಿಕ್ಷನ್ಸ್) ಮಾಡಬಹುದು. ಪ್ರತಿರೂಪದ ತನಿಖೆ ಸಾಪೇಕ್ಷವಾಗಿ ಅಲ್ಪ ವೆಚ್ಚದ್ದಾಗಿರುವುದೊಂದು ಹೆಚ್ಚಿನ ಲಾಭ.

ಪ್ರತಿರೂಪದ ವಿವಿಧ ಪ್ರಕಾರಗಳು: ಎಲ್ಲ ದ್ರವಚಾಲಿತ ಪ್ರತಿರೂಪಗಳನ್ನು ಸಾಮಾನ್ಯವಾಗಿ ಎರಡು ಬಗೆಗಳಾಗಿ ವಿಂಗಡಿಸಿದೆ: 1. ಅವಿಕೃತ(ಅನ್‍ಡಿಸ್ಟಾರ್ಟೆಡ್) ಬಗೆಗಳು, 2. ವಿಕೃತ (ಡಿಸ್ಟಾರ್ಟೆಡ್) ಬಗೆಗಳು. ಅವಿಕೃತ ಬಗೆಯದು ಅದರ ಮೂಲರೂಪಕ್ಕೆ ಜ್ಯಾಮಿತೀಯವಾಗಿ ಸಮರೂಪವಾಗಿರುವುದರಿಂದ ಈ ಪ್ರತಿರೂಪದ ಪರೀಕ್ಷಣೆಗಳಿಂದ ಪಡೆದ ಪರಿಣಾಮಗಳನ್ನು ಸುಲಭವಾಗಿ ಮೂಲರೂಪಕ್ಕೆ ಅನ್ವಯಿಸಬಹುದು. ವಿಕೃತ ಬಗೆಯದಲ್ಲಾದರೋ ಒಂದು ಅಥವಾ ಹೆಚ್ಚು ಅಂಶಗಳು ಮೂಲರೂಪದಲ್ಲಿಯ ಸಂವಾದೀ ಅಂಶಗಳೊಂದಿಗೆ ತದ್ವತ್ತಾಗಿರುವುದಿಲ್ಲ. ವಿಕೃತಿಗಳು ಮೂರು ವಿಧವಾಗಿರುತ್ತವೆ: (1) ಜ್ಯಾಮಿತೀಯ, (2) ವಸ್ತು, (3) ಜಲಭಾರ ಪರಿಮಾಣಗಳು. ವಿಕೃತ ಬಗೆಯವು ಈ ಮುಂದಿನ ಸ್ಥಿತಿಗಳಲ್ಲಿ ಅವಶ್ಯಕವಾಗುವುವು: ಊಧ್ರ್ವ ಅಳತೆಗಳಲ್ಲಿ ನಿಷ್ಕøಷ್ಟತೆಯನ್ನು ಸಾಧಿಸಲು ಪ್ರಕ್ಷುಬ್ಧ ಪ್ರವಾಹಗಳನ್ನು ಅನುರಕ್ಷಿಸಲು ಯೋಗ್ಯ ತಳ ವಸ್ತು ಮತ್ತು ಅದರ ಯಥೋಚಿತ ಚಲನೆಯನ್ನು ಪಡೆಯಲು ಉಚಿತವಾದ ರೂಕ್ಷತೆಯನ್ನು (ದೊರಗುತನ) ಪಡೆಯಲು

ಉಪಲಬ್ಧವಿರುವ ಸೌಕರ್ಯಗಳಿಗೆ ಹೊಂದಿಕೊಳ್ಳಲು 

ಪ್ರತಿರೂಪಗಳನ್ನು ಬೇರೆ ಒಂದು ತೆರನಾಗಿ ವಿಂಗಡಿಸುವುದುಂಟು: 1. ರಚನೆಯ ಪ್ರತಿರೂಪಗಳು 2. ನದಿಗಳ ಪ್ರತಿರೂಪಗಳು. ಈ ಬಗೆಗಳಲ್ಲಿ ನೀರಿನ ಮೇಲ್ಮೈಯ ವರ್ತನೆಯಿಂದ ವ್ಯತ್ಯಾಸ ಕಾಣಬಹುದು. ರಚನೆಗಳಲ್ಲಿ ನೀರಿನ ಮೇಲ್ಮೈಯ ಉನ್ನತಿಯ (ಎಲಿವೇಶನ್) ತೀವ್ರ ಬದಲಾವಣೆ ಉಂಟು. ಆದ್ದರಿಂದ ಸಮರೂಪತೆಗಾಗಿ ಫ್ರೂಡ್‍ನ ಸಂಖ್ಯೆಯನ್ನು ಅವಲಂಬಿಸಬೇಕಾಗುವುದು. ನದಿ ಕಾಲುವೆಗಳ ಪ್ರತಿರೂಪದಲ್ಲಿ ನೀರಿನ ಮೇಲ್ಮೈಯ ಉನ್ನತಿಯ ಬದಲಾವಣೆ ಕ್ರಮೇಣವಾಗಿದೆ. ಅದನ್ನು ಘರ್ಷಣೆ ನಿಯಂತ್ರಿಸಬಹುದು. ಈ ಪ್ರತಿರೂಪಗಳಲ್ಲಿ ಸಮರೂಪತೆಯನ್ನು ರಿನೊಲ್ಡ್ಸನ್ ಸಂಖ್ಯೆ (ತರಲಗತಿ ವಿಜ್ಞಾನದಲ್ಲಿ ಕೊಳವೆಯ ಮೂಲಕ ತರಲ ಹರಿಯುವ ಬಗೆಯನ್ನು ನಿರ್ಧರಿಸಲು, ಸಣ್ಣ ಪ್ರಮಾಣದ ನಮೂನೆಗಳಲ್ಲಿ ಯಥಾಪ್ರತಿಗಳನ್ನು ಆಲೇಖಿಸಲು ಬಳಸುವ ಆಯಾಮರಹಿತ ಸಂಖ್ಯೆ) ಅಥವಾ ನದಿ ಕಾಲುವೆಗಳಲ್ಲಿಯ ಘರ್ಷಣೆಯ ನಿಯಮಗಳು ನಿಯಂತ್ರಿಸುವುವು. ನದಿಯ ಪ್ರತಿರೂಪದಲ್ಲಿ ಎರಡು ವಿಧ: ಸ್ಥಿರ ತಳ ಮತ್ತು ಚರ ತಳ. ಹಲವು ಸಲ ಎರಡೂ ವಿಧಗಳೂ ಒಂದೇ ಪ್ರತಿರೂಪದಲ್ಲಿದ್ದದ್ದು ಕಂಡುಬರುತ್ತದೆ. ಉದಾಹರಣೆಗೆ ಸೇತುವೆಯ ಅಥವಾ ಕಾಫರ್ ಅಣೆಕಟ್ಟುಗಳಿಂದ ನದಿಯ ಪ್ರತಿರೂಪದಲ್ಲಿ ಉಂಟಾಗುವ ಹಠಾತ್ತಾದ ಸಂಕೋಚನ. ಇಂಥ ಸನ್ನಿವೇಶದಲ್ಲಿ ಫ್ರೂಡನ ನಿಯಮ ಮತ್ತು ಘರ್ಷಣೆಯ ನಿಯಮ ಇವೆರಡನ್ನೂ ಒಟ್ಟಿಗೆ ಪಾಲಿಸಬೇಕು. ಇದು ಅಸಾಧ್ಯವೆನಿಸಿದರೆ ಯಾವುದಾದರೂ ಒಂದು ವಿಶಿಷ್ಟ ಗೌಣವಾಗುವ ಹಾಗೆ ಪ್ರತಿರೂಪವನ್ನು ಆಲೇಖಿಸಬೇಕು.

ಪ್ರತಿರೂಪಗಳನ್ನು ಉಕ್ಕು, ಕಾಂಕ್ರೀಟ್, ಕಟ್ಟಿಗೆ, ಎರಕ ಪ್ಲಾಸ್ಟರ್. ಪ್ಲಾಸ್ಟಿಕ್, ಗಾಜು ಮತ್ತು ಉಸುಕುಗಳನ್ನು ಉಪಯೋಗಿಸಿ ತಯಾರಿಸುತ್ತಾರೆ. (ಬಿ.ಎ.ಪಿ.) (ಪರಿಷ್ಕರಣೆ: ಹೆಚ್.ಆರ್.ಆರ್.)