ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ರವತ್ವ

ವಿಕಿಸೋರ್ಸ್ದಿಂದ

ದ್ರವತ್ವ - ಒಬ್ಬ ವ್ಯಕ್ತಿ, ಒಂದು ಗುಂಪು, ಒಂದು ವ್ಯವಹಾರ ಅಥವಾ ಒಂದು ಸಂಘಟನೆ ತನ್ನ ಹಣಕಾಸಿನ ಹೊಣೆಗಳನ್ನು (ಲೈಯಬಿಲಿಟೀಸ್) ಪೂರೈಸಲು ಹೊಂದಿರುವ ಸಾಮಥ್ರ್ಯ (ಲಿಕ್ವಿಡಿಟಿ). ಒಂದು ಆಸ್ತಿಯನ್ನು ನಗದಿಗೆ ಪರಿವರ್ತಿಸುವುದು ಸುಲಭಸಾಧ್ಯವಾಗಿದ್ದರೆ. ನಷ್ಟವಿಲ್ಲದೆ ಹಾಗೆ ಮಾಡುವುದು ಸಾಧ್ಯವಿದ್ದರೆ, ಅಂಥ ಪರಿವರ್ತನ ಗುಣವನ್ನೂ ದ್ರವತ್ವವೆಂದು ಕರೆಯುತ್ತಾರೆ. ಈ ದೃಷ್ಟಿಯಿಂದ ನೂರಕ್ಕೆ ನೂರಷ್ಟು ದ್ರವತ್ವ ಗುಣವುಳ್ಳ ಆಸ್ತಿಯೆಂದರೆ ನಗದು.

ಒಂದು ಸಂಸ್ಥೆಯ ದ್ರವತ್ವವನ್ನು ಅದರ ಸ್ಥಿತಿವಿವರಣ ಪಟ್ಟಿಯಲ್ಲಿ (ಬ್ಯಾಲೆನ್ಸ್ ಷೀಟ್) ನಮೂದಿಸಿರುವ ಕೆಲವು ಇಲ್ಲವೇ ಎಲ್ಲ ಪ್ರಚಲಿತ ಆಸ್ತಿಗಳನ್ನು ಅದರ ಕೆಲವು ಇಲ್ಲವೇ ಎಲ್ಲ ಪ್ರಚಲಿತ ಹೊಣೆಗಳೊಂದಿಗೆ ಸಾಪೇಕ್ಷವಾಗಿ ಪರೀಕ್ಷಿಸುವುದರ ಮೂಲಕ ಸಾಮಾನ್ಯವಾಗಿ ಅಳೆಯುತ್ತಾರೆ. ಪ್ರಚಲಿತ ಹೊಣೆಗಳ ಮೊತ್ತಕ್ಕಿಂತ ಪ್ರಚಲಿತ ಆಸ್ತಿಗಳ ಮೊತ್ತ ಅಧಿಕವಾಗಿದ್ದರೆ ಅಥವಾ ಅವೆರಡೂ ಸಮನಾಗಿದ್ದರೆ ಆ ಸಂಸ್ಥೆಯ ದ್ರವತ್ವ ಸಮರ್ಪಕ. ಪ್ರಚಲಿತ ಹೊಣೆಗಳಿಗೆ ಪ್ರಚಲಿತ ಆಸ್ತಿಗಳು ಹೊಂದಿರುವ ನಿಷ್ಪತ್ತಿಯಿಂದ (ರೇಷಿಯೊ)-ಪ್ರಚಲಿತ ನಿಷ್ಪತ್ತಿಯಿಂದ-ಒಂದು ಉದ್ಯಮ ಸಂಸ್ಥೆಯ ದ್ರವತ್ವವನ್ನು ಅಳೆಯುತ್ತಾರೆ.

ಒಂದು ವಾಣಿಜ್ಯ ಬ್ಯಾಂಕು ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಬೇಕಾದರೆ ಅದು ದ್ರವತ್ವ ನಿಷ್ಪತ್ತಿಯನ್ನು ಕಾಯ್ದುಕೊಳ್ಳೂವುದು ಅಗತ್ಯವೆಂದು ಪರಿಗಣಿಸಲಾಗಿದೆ. ಬ್ಯಾಂಕು ತನ್ನಲ್ಲಿರುವ ಠೇವಣಿಯ ಹಣವನ್ನು ಅದರ ಗ್ರಾಹಕರು ಕೇಳಿದಾಗ ಪಾವತಿ ಮಾಡಲು ಬದ್ಧವಾಗಿರುತ್ತದೆ. ಇದಕ್ಕಾಗಿ ಅದು ಸಾಮಾನ್ಯವಾಗಿ ತನ್ನ ಒಟ್ಟು ಠೇವಣಿಗಳ ಮೊಬಲಗಿನ ಒಂದು ನಿಗದಿಯಾದ ಅನುಪಾತವನ್ನು (ಪ್ರಪೋರ್ಷನ್) ನಗದಾಗಿ ಇಟ್ಟಿರುತ್ತದೆ. ಠೇವಣಿದಾರರಿಂದ ಬರುವ ದಿನವಹಿ ಬೇಡಕಿಗಳನ್ನು ಪೂರೈಸಲು ಸಾಮಾನ್ಯವಾಗಿ ಇಷ್ಟು ನಗದು ಹಣ ಸಾಕು. ಆದರೆ ಇದು ಸಾಲದೆ ಬಂದಾಗ ಹೆಚ್ಚು ನಗದು ಕೈಗೆ ಒದಗಿಬರುವಂತೆ ವಿವಿಧ ಬಗೆಯ ಆಸ್ತಿಗಳಲ್ಲಿ ಹಣವನ್ನು ವಿನಿಯೋಗಿಸುವುದುಂಟು (ಇನ್ವೆಸ್ಟ್). ಒಂದು ಬ್ಯಾಂಕಿನ ವಿನಿಯೋಜನಗಳಲ್ಲಿ ಮುಖ್ಯವಾಗಿ ಪರಿಗಣಿಬೇಕಾದ ಅಂಶಗಳೆಂದರೆ ದ್ರವತ್ವ ಹಾಗೂ ಲಾಭಪ್ರದತ್ವ. ಇವೆರಡರ ನಡುವಣ ಸಾಮರಸ್ಯವನ್ನು ಬ್ಯಾಂಕು ಎಷ್ಟರ ಮಟ್ಟಿಗೆ ಕಾಪಾಡುತ್ತದೋ, ಅಷ್ಟರಮಟ್ಟಿಗೆ ಅದರ ವ್ಯವಹಾರ ಯಶಸ್ವಿಯೆನಿಸುತ್ತದೆ. ಇದೇ ವಾಣಿಜ್ಯ ಬ್ಯಾಂಕಿಂಗಿನ ಜೀವಾಳ ಕಲೆ. ಇವೆರಡರ ಜೊತೆಗೆ ಸುರಕ್ಷತೆಯೂ ಇರಬೇಕಾದ್ದು ಅವಶ್ಯ. ತನ್ನ ಮೇಲೆ ನಗದಿಗಾಗಿ ಬರುವ ಒತ್ತಡಗಳನ್ನು ಪರಿಹರಿಸಿಕೊಳ್ಳಲು ಅನುವಾಗುವಂತೆ ಅದು ನಾನಾ ಆಸ್ತಿಗಳನ್ನು ಹೊಂದಿರುತ್ತದೆ. ಕೈಯಲ್ಲಿರುವ ನಗದು ಹಣ ಅದರ ಮೊದಲ ರಕ್ಷಣಾಕೋಟೆ. ಇತರ ಬ್ಯಾಂಕುಗಳಲ್ಲಿರುವ ಹಣವೂ ನಗದಿನಂತೆಯೇ ಒದಗಿಬರುತ್ತದೆ. ಕರೆ ನೀಡಿದಾಗ ಬರುವಂಥ, ಅಥವಾ ಅಲ್ಪಕಾಲಿಕ ತಿಳಿವಳಿಕೆ ನೀಡಿ ವಸೂಲುಮಾಡಬಹುದಾದ ಸಾಲಗಳದು ರಕ್ಷಣಾವ್ಯೂಹದ ಎರಡನೆಯ ಸಾಲು. ಸರ್ಕಾರಿ ಸಾಲಪ್ರತಗಳೇ ಮುಂತಾದ ಭದ್ರ ಪ್ರತಿಭೂಗತಿಗಳನ್ನೂ (ಸೆಕ್ಯೂರಿಟಿಸ್) ಅವುಗಳ ವಿಕ್ರಯದಿಂದ ನಗದಾಗಿ ಪರಿವರ್ತಿಸಿಕೊಳ್ಳಬಹುದು. ಬ್ಯಾಂಕು ತನ್ನ ಗ್ರಾಹಕರ ಹುಂಡಿಗಳನ್ನು (ಬಿಲ್) ವಟಾಯಿಸಿ (ಡಿಸ್ಕೌಂಟ್) ನೀಡಿರುವ ಹಣವನ್ನೂ ಇತರ ಬಗೆಯ ಆಧಾರಗಳ ಮೇಲೆ ನೀಡಿರುವ ಸಾಲಗಳನ್ನೂ ಅನತಿಕಾಲದಲ್ಲಿ ನಗದಾಗಿ ಪರಿವರ್ತಿಸಿಕೊಳ್ಳಬಹುದು. ಬ್ಯಾಂಕು ನೀಡಿರುವ ಸಾಲಗಳು ಅದರ ಆಸ್ತಿಗಳ ಪೈಕಿ ಕನಿಷ್ಠ ದ್ರವತ್ವದ ಆಸ್ತಿಗಳು. ಪೀಠೋಪಕರಣವೇ ಮುಂತಾದ ಅಣಿಕಟ್ಟುಗಳು ಕಟ್ಟಡವೇ ಮುಂತಾದ ಸ್ವತ್ತುಗಳು - ಇವು ಸ್ಥಿರ ಆಸ್ತಿಗಳು. ವಾಣಿಜ್ಯ ಬ್ಯಾಂಕುಗಳು ಸಾಮಾನ್ಯವಾಗಿ ಇಂಥ ಆಸ್ತಿಗಳಲ್ಲಿ ತಮ್ಮ ಒಟ್ಟು ಬಂಡವಾಳದ ಬಲು ಕಡಿಮೆ ಪ್ರಮಾಣವನ್ನು ವಿನಿಯೊಗಿಸುತ್ತವೆ. ಒಂದು ಬ್ಯಾಂಕಿನ ಸ್ಥಿತಿವಿವರಣ ಪಟ್ಟಿಯ ಆಸ್ತಿ ಬದಿಯಲ್ಲಿ ಅದರ ನಗದು ಹಣವನ್ನು ಮೊದಲು ನಮೂದಿಸಲಾಗುತ್ತದೆ. ಅದರ ಇತರ ಆಸ್ತಿಗಳನ್ನು ಅವು ನಗದಾಗಿ ಪರಿವರ್ತಿತವಾಗುವ ಸುಲಭತೆ ಹಾಗೂ ಶೀಘ್ರತೆಯ ಕ್ರಮದಲ್ಲಿ ಎಂದರೆ ಅವುಗಳ ದ್ರವತ್ವದ ಕ್ರಮದಲ್ಲಿ ತೋರಿಸಲಾಗುತ್ತದೆ. ಇವನ್ನು ದ್ರವತ್ವದ ಅವರೋಹಿ ಕ್ರಮದಲ್ಲಿ ಹಾಗೂ ಲಾಭ ಪ್ರದತ್ವದ ಆರೋಹಿಕ್ರಮದಲ್ಲಿ ತೋರಿಸಲಾಗುತ್ತದೆ.

ಒಟ್ಟಿನಲ್ಲಿ ದ್ರವತ್ವ ಒಂದು ಸ್ಪಷ್ಟ ಪರಿಕಲ್ಪನೆ. ಒಂದು ಉದ್ಯಮ ಸಂಸ್ಥೆಯ ದ್ರವತ್ವವನ್ನು ಅದರ ಸ್ಥಿತಿ ವಿವರಣ ಪಟ್ಟಿಯಿಂದಲೇ ಅರಿಯಲಾಗುವುದಿಲ್ಲ. ಅದಕ್ಕಿಂತ ಮುಖ್ಯವಾಗಿ ಆ ಸಂಸ್ಥೆ ಯಶಸ್ವಿಯಾಗಿ ವ್ಯವಹಾರ ನಿರ್ವಹಿಸುತ್ತಿದೆಯೇ, ಲಾಭ ಗಳಿಸುತ್ತಿದೆಯೇ ಎಂಬುದನ್ನು ಅವಲಂಬಿಸಿರುತ್ತದೆ. ಒಂದು ಉದ್ಯಮ ಸಂಸ್ಥೆಯ ಪ್ರಚಲಿತ ಆಸ್ತಿ - ಹೊಣೆ ನಿಷ್ಪತ್ತಿ ಅಧಿಕಾರವಾಗಿರಬಹುದು. ಆದರೂ ಆ ಸಂಸ್ಥೆ ನಷ್ಟ ಅನುಭವಿಸುತ್ತಿದ್ದರೆ ಅದು ದ್ರವತ್ವದ ಸಮಸ್ಯೆಯನ್ನು ಕೂಡಲೇ ಎದುರಿಸಬೇಕಾಗುವುದಿಲ್ಲ. ಅಷ್ಟೇ ನಷ್ಟವನ್ನು ತಪ್ಪಿಸದಿದ್ದರೆ ಅಂತಿಮವಾಗಿ ಅದೂ ಕಷ್ಟಕ್ಕೆ ಈಡಾಗಿಯೇ ತೀರುತ್ತದೆ. ದ್ರವತ್ವ ಒಂದು ಸಾಪೇಕ್ಷ ಪರಿಕಲ್ಪನೆ. ಒಂದು ಸಂಸ್ಥೆಗೆ ಎಲ್ಲಿಯವರೆಗೆ ದ್ರವತ್ವ ಇರುತ್ತದೆ, ಯಾವಾಗ ಅದು ದ್ರವತ್ವದ ಮಟ್ಟದಿಂದ ಕೆಳಗೆ ಇಳಿಯುತ್ತದೆ. ಎಂಬದನ್ನು ಹೇಳಲಾಗುವುದಿಲ್ಲ. ಕನಿಷ್ಠ ದ್ರವತ್ವ ನಿಷ್ಪತ್ತಿ ಮಟ್ಟ ಯಾವುದೆಂಬದನ್ನು ಹೇಳಲು ಸಾಧ್ಯವಾಗದು. ಒಂದು ಬ್ಯಾಂಕಿನ ಸಾಲ ಹಾಗೂ ಠೇವಣಿಗಳ ನಡುವಣ ನಿರಪಾಯಕ ನಿಷ್ಪತ್ತಿ ಮಟ್ಟ ಯಾವುದು, ಎಂಬುದರ ಪರಿಕಲ್ಪನೆ ಕಾಲದಿಂದ ಕಾಲಕ್ಕೆ, ದೇಶದಿಂದ ದೇಶಕ್ಕೆ, ವ್ಯತ್ಯಾಸವಾಗುತ್ತದೆ. ಇದು ಬ್ಯಾಂಕು ವ್ಯವಸ್ಥಾಪಕರ ಹಾಗೂ ಹಣ, ಪ್ರಾಧಿಕಾರಗಳ ದೃಷ್ಟಿಕೋನವನ್ನವಲಂಬಿಸಿರುತ್ತದೆ.

ದ್ರವತ್ವ ಅಧಿಮಾನ್ಯತೆ: ಪ್ರತಿಫಲ ನೀಡುವಂಥ ಹಾಗೂ ನಗದಾಗಿ ಪರಿವರ್ತಿಸುವುದು ಹೆಚ್ಚು ಸುಲಭವಲ್ಲದ ಷೇರು. ಡಿಬೆಂಚರು ಮುಂತಾದ ಆಸ್ತಿಗಳಿಗಿಂತ ನಗದು ಅಥವಾ ಚಾಲ್ತಿ ಠೇವಣಿಯನ್ನು ಹೊಂದಿರಬೇಕೆಂಬ ಇಚ್ಛೆಯೇ ದ್ರವತ್ವ ಅಧಿಮಾನ್ಯತೆ (ಲಿಕ್ವಿಡಿಟಿ ಪ್ರಿಫರೆನ್ಸ್). ದ್ರವತ್ವ ಅಧಿಮಾನ್ಯತೆ ಎಂಬ ಪರಿಕಲ್ಪನೆಯನ್ನು ಕುರಿತು ಮೊಟ್ಟಮೊದಲ ವಿವೇಚನೆ ನಡೆಸಿದವರು ಜಾನ್ ಮೇನಾರ್ಡ್ ಕೇನ್ಸ್. ಬೇಡಲಾದ (ಡಿಮ್ಯಾಂಡೆಡ್) ಹಣದ ಪರಿಮಾಣಕ್ಕೂ ಅದನ್ನು ನಿರ್ಣಯಿಸುವ ಚರಗಳಿಗೂ (ವೇರಿಯಬಲ್ಸ್) ನಡುವಣ ಕ್ರಿಯಾತ್ಮಕ ಸಂಬಂಧವನ್ನು (ಫಂಕ್ಷನಲ್ ರಿಲೇಷನ್) ಸೂಚಿಸಲು ಅವರು ಇದನ್ನು ರೂಪಿಸಿದರು. ದ್ರವತ್ವ ಅಧಿಮಾನ್ಯತೆಗೆ ನಗದಿನ ಒಲವಿಗೆ, ಮೂರು ಬಗೆÉಯ ಪ್ರೇರಣೆಗಳಿರುವುವೆಂಬುದಾಗಿ ಕೇನ್ಸ್ ಹೇಳಿದ್ದಾರೆ: ಮೊದಲನೆಯದು ನಹಿವಾಟುಗಳ ಪ್ರೇರಣೆ (ಟ್ರಾನ್ಸ್ಯಾಕ್ಷನ್ಸ್ ಮೋಟಿವ್). ಪ್ರತಿಯೊಬ್ಬನೂ ತನ್ನ ದಿನದಿನದ ಅವಶ್ಯಕತೆಗಳ ಪೂರೈಕೆಗಾಗಿ ಸ್ವಲ್ಪ ನಗದನ್ನು ಇಟ್ಟುಕೊಂಡಿರಲು ಇಚ್ಛಿಸುತ್ತಾನೆ. ಹಠಾತ್ತನೆ ಮಾಡಬೇಕಾಗಿ ಬರುವ ಖರ್ಚುಗಳಿಗಾಗಿ ಸ್ವಲ್ಪ ನಗದು ಇಟ್ಟುಕೊಳ್ಳಬೇಕೆಂಬುದು ಇನ್ನೊಂದು ಪ್ರೇರಣೆ. ಇದು ಮುನ್ನೆಚ್ಚರಿಕೆಯ ಪ್ರೇರಣೆ (ಪ್ರಿಕಾಷನರಿ). ಮೂರನೆಯದು ಸಟ್ಟಾತ್ಮಕ (ಸೆಕ್ಯುಲೇಟಿವ್) ಪ್ರೇರಣೆ. ಬಡ್ಡಿ ದರಗಳಲ್ಲಿ ಏರಿಕೆಯಾಗಬಹುದೆಂಬ, ಗಳಿಸುವ (ಅರ್ನಿಂಗ್) ಆಸ್ತಿಗಳ ಮೌಲ್ಯದಲ್ಲಿ ಅದರ ಪರಿಣಾಮವಾಗಿ ಇಳಿತಾಯವಾಗುವುದೆಂಬ ನಂಬಿಕೆ ಇದಕ್ಕೆ ಕಾರಣವಾಗುತ್ತದೆ. ಬಡ್ಡಿಯ ದರ ಅಧಿಕವಾದಷ್ಟೂ ಒಂದು ಆರ್ಥಿಕತೆಯ ಬೇಡಿಕೆಯ ಹಣದ ಸ್ಥೂಲ ಪರಿಮಾಣ -ಇತರ ಅಂಶಗಳಲ್ಲಿ ವ್ಯತ್ಯಾಸವಾಗದಿದ್ದಲ್ಲಿ - ಕಡಿಮೆಯಾಗುತ್ತದೆ ಎಂದು ಕೇನ್ಸ್ ಹೇಳಿದ್ದಾರೆ. ದ್ರವತ್ವ ಅಧಿಮಾನ್ಯತೆಯಲ್ಲಿ ತೀವ್ರ ವ್ಯತ್ಯಾಸಗಳಾಗುವುದು ಸಟ್ಟಾತ್ಮಕ ಪ್ರೇರಣೆಯಿಂದಲೇ. ಸರ್ಕಾರ ಸೂಕ್ತ ನೀತಿಯಿಂದ ಈ ಪ್ರೇರಣೆಯ ಮೇಲೆ ಪ್ರಭಾವ ಬೀರಿ ತನ್ಮೂಲಕ ದ್ರವತ್ವ ಅಧಿಮಾನ್ಯತೆಯ ಮೇಲೆ ಪರಿಣಾಮ ಉಂಟುಮಾಡಬಹುದು. ಆರ್ಥಿಕ ಹಿಂಜರಿತದ (ರೆಸೆಷನ್) ಕಾಲದಲ್ಲಿ ದ್ರವತ್ವ ಅಧಿಮಾನ್ಯತೆಯನ್ನು ಅಥವಾ ಹಣದ ಒಲವನ್ನು ತಗ್ಗಿಸುವ ದೃಷ್ಟಿಯಿಂದ ಹಣಪ್ರಾಧಿಕಾರಿಗಳು ಬಡ್ಡಿ ದರಗಳನ್ನು ಏರಿಸುವುದು ನಿಷ್ಫಲದಾಯಕ ಕ್ರಮವಾಗುತ್ತದೆ. ಹೆಚ್ಚು ಬಡ್ಡಿ ದರದಿಂದ ಬಂಡವಾಳ ಪೇಟೆ ಹೆಚ್ಚು ಹಣವನ್ನು ಆಕರ್ಷಿಸುವ ಬದಲು - ಎಂದರೆ ಷೇರು ಡಿಬೆಂಚರುಗಳೇ ಮೊದಲಾದವಲ್ಲಿ ಜನರು ಹೆಚ್ಚು ಹಣವನ್ನು ವಿನಿಯೋಜಿಸುವ (ಇನ್ವೆಸ್ಟ್) ಬದಲು - ಅವರು ಹೆಚ್ಚುಹೆಚ್ಚು ನಗದನ್ನು ಹೊಂದಿರಲು ಇಚ್ಛಿಸುತ್ತಾರೆ. ಏಕೆಂದರೆ ಬಡ್ಡಿದರ ಹೆಚ್ಚಿದಷ್ಟೂ ಬಂಡವಾಳ ಪತ್ರಗಳ ಹುಟ್ಟುವಳಿಯ (ಈಲ್ಡ್) ದರ ಸಾಪೇಕ್ಷವಾಗಿ ಕಡಿಮೆಯಾಗುತ್ತದೆ. ಆದ್ದರಿಂದ ಆರ್ಥಿಕ ಹಿಂಜರಿತದ ಕಾಲದಲ್ಲಿ ಕಡಿಮೆ ಬಡ್ಡಿದರಗಳ ನೀತಿಯನ್ನು ಅನುಸರಿಸಬೇಕೆಂಬುದು ಕೇನ್ಸರ ಸಲಹೆ. ಇದು ಜನರ ನಗದಿನ ಒಲವನ್ನು ತಗ್ಗಿಸಿ, ಅವರು ತಮ್ಮ ಹಣವನ್ನು ಬಂಡವಾಳವಾಗಿ ವಿನಿಯೋಜಿಸಲು ಉತ್ತೇಜನ ನಿಡುವುದೆಂದೂ ಇದರಿಂದ ವ್ಯವಹಾರ ಕುದುರಿ, ಸರಕಿನ ಉತ್ಪಾದನೆ ಹಾಗೂ ಬೇಡಿಕೆಗಳ ಮಟ್ಟ ಏರಲು ಸಹಾಯವಾಗುವುದೆಂದೂ ಬೆಲೆಗಳ ಇಳಿತದ ಅಪಾಯ ಕಡಿಮೆಯಾಗಿ ಸಟ್ಟಾತ್ಮಕ ಪ್ರೇರಣೆಗೆ ತಡೆಯಾಗುವುದೆಂದೂ ಕೇನ್ಸ್ ವಾದಿಸಿದ್ದಾರೆ. ವಿನಿಯೋಜನೆ (ಇನ್ವೆಸ್ಟ್‍ಮೆಂಟ್) ಹೂಡುವ ಬದಲು ಆಸ್ತಿಗಳನ್ನು ದ್ರವರೂಪದಲ್ಲಿ ಹೊಂದಿರುವುದೇ ಲೇಸೆಂದು ಜನರು ತೀರ್ಮಾನಿಸಿರುವ ಕಾಲದಲ್ಲಿ ಈ ಕ್ರಮವನ್ನು ಅನುಸರಿಸಬಹುದೆಂಬುದು ಕೇನ್ಸರ ಸಲಹೆ.

ದ್ರವತ್ವ ವರ್ತುಲ: ಕಡಿಮೆ ಬಡ್ಡಿ ದರದ ಸೀಮೆಯಲ್ಲಿ ಹಣದ ಸಟ್ಟಾತ್ಮಕ ಬೇಡೆಕೆಗೆ ಅನಂತ ಪುಟಿತತೆಯ ಗುಣ ಇರುತ್ತದೆ. ಬಡ್ಡಿಯ ದರ ತುಂಬ ಕೆಳಕ್ಕೆ - ಉದಾಹರಣೆಗೆ ಸೇ. 2 ಕ್ಕೆ - ಇಳಿದಾಗ, ಬಂಡವಾಳ ಪತ್ರಗಳಿಗಿಂತ ನಗದಿನ ಪತ್ರಗಳ ಮೇಲಾಗಲಿ ನಗದಿಗಿಂತ ಬಂಡವಾಳ ಪತ್ರಗಳ ಜನರು ಹೆಚ್ಚಿನ ಒಲವು ತೋರದೆ ಈ ಬಗ್ಗೆ ಔದಾಸೀನ್ಯ ತೋರಬಹುದು. ಇದು ಸೀಮಾಂತ ಸ್ಥಿತಿ. ಈ ಘಟ್ಟ ತಲುಪಿದಾಗ ಬಡ್ಡಿದರಗಳು ಇನ್ನೂ ಕೆಳಕ್ಕೆ ಇಳಿಯದೆ ಇದ್ದಲ್ಲೇ ಇರಬಹುದು.

ಚಿತ್ರ-1

ಬಡ್ಡಿದರವನ್ನು ಇಳಿಸಿದ್ದರಿಂದ ಬಂಡವಾಳ ಪತ್ರಗಳ ಬೆಲೆಗಳು ಏರಬೇಕೆಂದು ಉದ್ದೇಶಿಸಲಾಗಿದ್ದರೂ ಆ ಸೂಚ್ಯ ಹೆಚ್ಚಿನ ಬೆಲೆಗಳಲ್ಲಿ ಯಾರೂ ಬಂಡವಾಳ ಪತ್ರಗಳನ್ನು ಕೊಳ್ಳಬಯಸುವುದಿಲ್ಲ. ಇದು ದ್ರವತ್ವವರ್ತುಲ (ಲಿಕ್ವಿಡಿಟಿ ಟ್ರ್ಯಾಪ್). ಆರ್ಥಿಕತೆ ಈ ವರ್ತುಲದಲ್ಲಿ - ಸುಳಿಯಲ್ಲಿ - ಸಿಲುಕಿಕೊಳ್ಳುತ್ತದೆ. ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ಹಣ ಪ್ರಾಧಿಕಾರಿಗಳು ಹಣದ ಸರಬರಾಜನ್ನು ವಿಸ್ತರಿಸುವುದರಿಂದ ಬಡ್ಡಿ ದರಗಳ ಇಳಿತದ ಪ್ರವೃತ್ತಿ ಉಂಟಾಗುವುದಾದರೂ, ದ್ರವತ್ವದ ಸುಳಿಯ ಮಟ್ಟವನ್ನು ತಲುಪುವ ಮಟ್ಟಿಗೆ ಬಡ್ಡಿಯ ದರಗಳನ್ನು ಇಳಿಸಿದಾಗ ಈ ಪ್ರವೃತ್ತಿಗೆ ತಡೆ ಬೀಳುತ್ತದೆ. ಹಣದ ಸರಬರಾಜನ್ನು ಮತ್ತೆ ಹೆಚ್ಚಿಸಿದಾಗ ಬಡ್ಡಿಯ ದರಗಳು ಇನ್ನು ಕೆಳಕ್ಕೆ ಇಳಿಯುವುದಿಲ್ಲ. ಹಣದ ಸರಬರಾಜು ಜಡವಾದ ಬ್ಯಾಂಕುಶಿಲ್ಕುಗಳಾಗಿ ರಾಶಿಬೀಳುತ್ತದೆ. (ನಕ್ಷೆ 1)

ಅಂತರರಾಷ್ಟ್ರೀಯ ದ್ರವತ್ವ: ಪ್ರಪಂಚದ ಆರ್ಥಿಕ ಪ್ರಗತಿ ಸಾಧ್ಯವಾಗಬೇಕಾದರೆ ವಿಶ್ವದ ರಾಷ್ಟ್ರಗಳ ನಡುವೆ ಆರ್ಥಿಕ ವ್ಯವಹಾರಗಳು, ಮುಖ್ಯವಾಗಿ ಅಂತರರಾಷ್ಟ್ರೀಯವ್ಯಾಪಾರ, ನಿರಾತಂಕವಾಗಿ ನಡೆಯಬೇಕು. ಇದಕ್ಕೆ ವಿವಿಧ ರಾಷ್ಟ್ರಗಳ ನಾಣ್ಯಗಳು ಪರಸ್ಪರವಾಗಿ ಅಥವಾ ಬಹುಪಕ್ಷೀಯವಾಗಿ ಪರಿವತ್ರ್ಯವಾಗಿರಬೇಕು. ಅಥವಾ ಚಿನ್ನದಂಥ ಸರ್ವಸ್ವೀಕಾರ ಯೋಗ್ಯ ವಸ್ತುವಿಗೆ ಒಂದು ನಿರ್ದಿಷ್ಟ ದರದಲ್ಲಿ ಅವು ಪರಿವತ್ರ್ಯವಾಗಿರಬೇಕು. ಪ್ರಪಂಚದ ಎಲ್ಲ ರಾಷ್ಟ್ರಗಳಿಗೂ ಅಂತರರಾಷ್ಟ್ರೀಯ ಆರ್ಥಿಕ ಸಂಸ್ಥೆಗಳೂ ಒಪ್ಪಿಗೆಯಾದ ಹಾಗೂ ಎಲ್ಲ ರಾಷ್ಟ್ರಗಳ ನಾಣ್ಯಗಳನ್ನು ಯಾವ ನಷ್ಟವೂ ಇಲ್ಲದಂತೆ ಕೊಳ್ಳುವ ಶಕ್ತಿಯುಳ್ಳ ಹಣ ವಸ್ತುಗಳು ಸುಲಭವಾಗಿ ಸರಬರಾಜಾಗುವ ಸ್ಥಿತಿಯೇ ಅಂತರರಾಷ್ಟ್ರೀಯ ದ್ರವತ್ವ.

ಅಂತರರಾಷ್ಟ್ರೀಯ ದ್ರವತ್ವ ಪರಿರಕ್ಷಿಸಿ ವಿಶ್ವದ ಆರ್ಥಿಕ ಪ್ರಗತಿ ಸಾಧಿಸುವ ಉದ್ದೇಶದಿಂದ 1944 ರಲ್ಲಿ ಅಂತರರಾಷ್ಟ್ರೀಯ ಹಣ ನಿಧಿ ಸ್ಥಾಪಿತವಾಯಿತು. ಹಿಂದೆ ಸ್ವರ್ಣ ಪ್ರಮಿತಿ ಜಾರಿಯಲ್ಲಿದ್ದಾಗ ಚಿನ್ನವೇ ಅಂತರರಾಷ್ಟ್ರೀಯ ದ್ರವತ್ವವನ್ನು ಪಡೆದ ಏಕೈಕ ವಸ್ತುವಾಗಿತ್ತು. ಆದರೆ ಕ್ರಮೇಣ ಸ್ವರ್ಣವಿನಿಮಯ ಪದ್ಧತಿ ಜಾರಿಗೆ ಬಂದಾಗ ಚಿನ್ನ ಮತ್ತು ಚಿನ್ನಕ್ಕೆ ಪರಿವತ್ರ್ಯವಾದ ನಾಣ್ಯಗಳ ನಿಧಿಗೆ ದ್ರವತ್ವಗುಣ ಪ್ರಾಪ್ತವಾಯಿತು. ಅಂತರರಾಷ್ಟ್ರೀಯ ಹಣ ನಿಧಿ ಎಲ್ಲ ರಾಷ್ಟ್ರಗಳ ಕರೆನ್ಸಿಗಳನ್ನೊಳಗೊಂಡ ಹಾಗೂ ಚಿನ್ನವೂ ಸೇರಿದ ಒಂದುಮೀಸಲು ನಿಧಿಯನ್ನು ಸ್ಥಾಪಿಸಿ ಅದರ ಮೂಲಕ ಅಂತರರಾಷ್ಟ್ರೀಯ ದ್ರವತ್ವವನ್ನು ಕಾಪಾಡಲು ತೊಡಗಿತು. ಯಾವುದಾದರೂ ಸದಸ್ಯ ರಾಷ್ಟ್ರದ ಪಾವತಿ ಶಿಲ್ಕು ಪ್ರತಿಕೂಲವಾದಾಗ, ಆ ಕೊರತೆಯನ್ನು ತುಂಬಲು ಆ ರಾಷ್ಟ್ರಕ್ಕೆ ತನಗೆ ಬೇಕಾದ ರಾಷ್ಟ್ರದ ಕರೆನ್ಸಿಯನ್ನು ಒಂದು ನಿರ್ದಿಷ್ಟ ಮಿತಿಯಲ್ಲಿ ಕೊಳ್ಳಲು ಅವಕಾಶ ಕೊಟ್ಟು ಅಂತರರಾಷ್ಟ್ರೀಯ ವ್ಯಾಪಾರ ಸುಸೂತ್ರವಾಗಿ ನಡೆಯುವಂತೆ ಮಾಡಲು ಅಂತರರಾಷ್ಟ್ರೀಯ ಹಣ ನಿಧಿ ಪ್ರಮುಖ ಪಾತ್ರ ವಹಿಸುತ್ತಿದೆ.

ಈಚೆಗೆ ಅಂತರರಾಷ್ಟ್ರೀಯ ದ್ರವತ್ವದಲ್ಲಿ ಮಹತ್ತದ ಬದಲಾವಣೆಗಳಾದವು. ಅನೇಕ ದೇಶಗಳ ವಿದೇಶೀ ಪಾವತಿಗಳಲ್ಲಿ ಏರುಪೇರುಗಳುಂಟಾಗಿ, ಅಧಿಕೃತ ವಿನಿಮಯ ದರಗಳು ಸ್ಥಿರವಾಗಿ ಮುಂದುವರಿಯುವುದು ಕಷ್ಟವಾಯಿತು. ದ್ರವತ್ವದ ದೃಷ್ಟಿಯಿಂದ ಅವಶ್ಯವಾದ ಚಿನ್ನದ ಅಧಿಕೃತ ಸಂಗ್ರಹಣೆಯ ವ್ಯವಸ್ಥೆಯೂ ಮುರಿದುಬಿತ್ತು. ಅಂತರರಾಷ್ಟೀಯ ಪಾವತಿಗಳು ನಿರಾತಂಕವಾಗಿ ಸಾಧ್ಯವಾಗಲು ಮತ್ತು ಅಂತರರಾಷ್ಟ್ರೀಯ ದ್ರವತ್ವವನ್ನು ಸುಧಾರಿಸಲು 1968 ರಲ್ಲಿ ವಿಶೇಷ ನಿಕಾಲೆ ಹಕ್ಕುಗಳನ್ನು (ಸ್ಪೆಷಲ್ ಡ್ರಾಯಿಂಗ್ ರೈಟ್ಸ್) ವಿಧಾನ ಜಾರಿಗೆ ಬಂದಿವೆ. ಅಂತರರಾಷ್ಟ್ರೀಯ ಹಣ ನಿಧಿಯ ಸದಸ್ಯ ರಾಷ್ಟ್ರಗಳು ಹೊಂದಿರುವ ಚಿನ್ನ ಹಾಗೂ ಕರೆನ್ಸಿ ನಿಧಿಯ ಜೊತೆಗೆ ಅಂತರರಾಷ್ಟ್ರೀಯ ಹಣ ನಿಧಿಯ ಮೇಲೆ ಚೆಕ್ಕುಗಳಂತೆ ವಿಶೇಷ ನಿಕಾಲೆ ಹಕ್ಕುಗಳನ್ನು ಪಾವತಿಗೆ ಬಳಸಿಕೊಳ್ಳಬಹುದಾಗಿದೆ. (ಎಸ್.ಎನ್.ಎ)