ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ರವಮಾಪಕ

ವಿಕಿಸೋರ್ಸ್ದಿಂದ

ದ್ರವಮಾಪಕ - ದ್ರವಗಳ ಸಾಂದ್ರತೆ ವಿಶಿಷ್ಟ ಗುರುತ್ವ ಮುಂತಾದವನ್ನು ನಿರ್ಧರಿಸಲು ಬಳಸುವ ಉಪಕರಣ (ಹೈಡ್ರೋಮೀಟರ್). ಇದರ ರಚನೆಯ ಹಿನ್ನೆಲೆಯಲ್ಲಿ ಸುಪ್ರಸಿದ್ಧ ಆರ್ಕಿಮಿಡೀಸನ (ಕ್ರಿ.ಪೂ 287 - 217) ಸೂತ್ರವನ್ನು ಬಳಸಿಕೊಳ್ಳಲಾಗಿದೆ. ಯಾವುದೇ ದ್ರವದಲ್ಲಿ ಪೂರ್ತಿ ಯಾ ಭಾಗಶಃ ಅದ್ದಿದ ವಸ್ತುವಿನ ಮೇಲೆ ಪ್ರಯುಕ್ತವಾಗುವ ಮೇಲ್ಮೊಗ ಪ್ಲವನಬಲ ವಿಸ್ಥಾಪಿತ ದ್ರವತ ತೂಕಕ್ಕೆ ಸಮ. ಸಾಧಾರಣ ಬಗೆಯ ದ್ರವಮಾಪಕವೊಂದನ್ನು ರಾಬರ್ಟ್ ಬಾಯಿಲ್ 1675 ರಲ್ಲಿ ಆಲೇಖಿಸಿದ್ದ. ತಳದಲ್ಲಿ ಉಬ್ಬಿರುವ ಬುರುಡೆ ಸಮೇತವಾದ ಸಂವೃತ ನಳಿಗೆಯಿದು. ಉಪಕರಣವನ್ನು ದ್ರವದೊಳಗೆ ಅದ್ದಿದಾಗ ಅದು ಲಂಬನೇರ ನಿಲ್ಲಲು ಅನುವಾಗುವಂತೆ ಬುರುಡೆಯೊಳಗೆ ಸಾಕಷ್ಟು ಭಾರ ಉಂಟು. ಅದ್ದಿಕೆಯ ಆಳವನ್ನು ಅಳೆಯಬಲ್ಲ ಮಾನಕವನ್ನು ನಳಿಗೆಗೆ ಲಗತ್ತಿಸಿದೆ. ಮುಕ್ತ ಮೈಯಲ್ಲಿನ ತೇಲು ಕೊಯ್ತ ಸ್ಥಿರಾಂಕವಾಗಿರುವಾಗಲೆಲ್ಲ ಈ ಮಾನಕ ಸಾಂದ್ರತೆಯ ವ್ಯುತ್ಕ್ರಮದ (ರೆಸಿಪ್ರೋಕಲ್) ರೇಖೀಯ ಉತ್ಪನ್ನ. ಸಾಧಾರಣವಾಗಿ ದ್ರವದ ಸಾಂದ್ರತೆಯನ್ನು ನೇರ ತಿಳಿಯಲು ಸಾಧ್ಯವಾಗುವ ತೆರೆನಾಗಿ ದ್ರವಮಾಪಕ ಮಾನವನ್ನು ಅಂಶಾಂಕಿಸಿರುತ್ತಾರೆ. ವಿಭಿನ್ನ ಸನ್ನಿವೇಶಗಳಲ್ಲಿ - ಉದಾಹರಣೆಗೆ ಕೈಗಾರಿಕೆಗಳಲ್ಲಿ ಎದುರಾಗುವಂಥ ರಾಸಾಯನಿಕ ದ್ರಾವಣಗಳು, ಪೆಟ್ರೋಲಿಯಮ್ ಉತ್ಪನ್ನಗಳು, ಕಡಲ ನೀರು, ಚರ್ಮ ಹದಗೊಳಿಸಿಕೆಯ ದ್ರವಗಳು ಇತ್ಯಾದಿಗಳ ವಿಶಿಷ್ಟ ಗುರುತ್ವಮಾಪನೆಗಳ ಸಂದರ್ಭಗಳಲ್ಲಿ - ಉಪಯುಕ್ತವಾಗುವಂಥ ವಿಶೇಷ ದ್ರವಮಾಪಕ ಮಾನಗಳನ್ನು ಆಲೇಖಿಸಲಾಗಿದೆ. ಉಷ್ಣತಾದ್ರವಮಾಪಕದ ಕಾಂಡದೊಳಗೆ ಉಷ್ಣತಾಮಾಪಕ ಉಂಟು. ಇದರಿಂದಾಗಿ ಒಂದೇ ಸಲಕ್ಕೆ ದ್ರವದ ಉಷ್ಣತೆಯನ್ನೂ ಸಾಂದ್ರತೆಯನ್ನೂ ಗುರುತಿಸುವುದು ಸಾಧ್ಯ.

ಪ್ರವಹಿಸುತ್ತಿರುವ ದ್ರವಗಳ ಸಾಂದ್ರತೆಗಳನ್ನು ಅಳೆಯಲೋಸ್ಕರ ವಿವಿಧ ಬಗೆಗಳ ದ್ರವಮಾಪಕಗಳನ್ನು ಆಲೇಖಿಸಲಾಗಿದೆ. ದ್ಯುತಿವೈದ್ಯುತ ದ್ರವಮಾಪಕದಲ್ಲಿ ಸಾಂದ್ರತೆಯ ಏರಿಳಿತಗಳನ್ನು ಅಳೆಯಲು ಬೆಳಕಿನ ಆಕರವನ್ನೂ ದ್ಯುತಿ ಕೋಶವನ್ನೂ ಬಳಸಲಾಗುವುದು. ಇದೇ ಉದ್ದೇಶಕ್ಕೆ ಮೀಸಲಾದ ಇತರ ಉಪಕರಣಗಳೆಂದರೆ ಪ್ರೇರಕತ್ವ - ಸೇತುವೆ (ಇಂಡಕ್ಟೆನ್ಸ್ ಬ್ರಿಜ್) ಮತ್ತು ಶೃಂಖಲಾಸಂತುಲಿತ - ತೇಲು (ಚೇನ್ - ಬ್ಯಾಲೆನ್ಸ್ಡ್ _ ಫ್ಲೋಟ್) ಬಗೆಯ ದ್ರವಮಾಪಕಗಳು, ದ್ರವದ ಒಳಗೆ ( - ಕಿರಣಗಳ ಅವಶೋಷಣದಿಂದಲೂ (ಅಬ್‍ಸಾರ್ಪ್‍ಷನ್) ದ್ರವಸಾಂದ್ರತೆಗಳನ್ನು ಅಳೆಯಬಹುದು. ಚಲನೆಯಲ್ಲಿರವ ದ್ರವಗಳ ವಿಶಿಷ್ಟ ಗುರುತ್ವವನ್ನು ಅಳೆಯುವಲ್ಲಿ, ಹಾಗೆಯೇ ತರಲದ ಯಾಂತ್ರಿಕ ಸ್ಥಿತಿಯನ್ನು ಕದಲಿಸಬಾರದ ಸಂದರ್ಭದಲ್ಲಿ, ಈ ವಿಧಾನ ಅನುಕೂಲವಾಗಿದೆ. ಇವೆಲ್ಲ ಉಪಕರಣಗಳಲ್ಲಿಯೂ ಸಾಂದ್ರತೆಯ ನಿಷ್ಕøಷ್ಟ ದಾಖಲೆ ದೊರೆಯಬೇಕಾದರೆ ಅತ್ಯುಚ್ಛ ಸಂವೇದ ಹಾಗೂ ಭದ್ರ ಪ್ರವರ್ಧಕಗಳು ಬೇಕಾಗುತ್ತವೆ. ಪ್ರವಾಹ ಅಳೆಪಿಡಿ (ಕರೆಂಟ್ ಗೇಜ್ 1727 ) ಎಂಬ ಉಪಕರಣವನ್ನು (ಪ್ರವಾಹವೇಗವನ್ನು ಅಳೆಯಲು ಇದನ್ನು ಉಪಯೋಗಿಸುತ್ತಾರೆ) ಸಹ ದ್ರವಮಾಪಕವೆಂದು ಕರೆಯುವುದಿದೆ. (ಎನ್.ಸಿ.ಪಿ.ಆರ್)