ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ರವ್ಯ 1

ವಿಕಿಸೋರ್ಸ್ದಿಂದ

ದ್ರವ್ಯ 1 -

ದರ್ಶನಶಾಸ್ತ್ರದ ಇತಿಹಾಸದಲ್ಲಿ ವಿಶೇಷವಾದ ಸ್ಥಾನವನ್ನು ಗಳಿಸಿದ ಈ ಪದಕ್ಕೆ ಮೂಲವಸ್ತು ಎಂದು ಸ್ಥೂಲವಾಗಿ ಅರ್ಥ ಹೇಳಬಹುದು.

ದ್ರವ್ಯಕ್ಕೆ ಬೇರೆ ಬೇರೆ, ಆದರೆ ಪರಸ್ಪರ ಸಂಬಂಧವನ್ನು ಹೊಂದಿರುವ ವಿಶ್ಲೇಷಣೆ ನಡೆದಿದೆ.

1. ಅನೇಕವಾದ ಗುಣಗಳಿಗೆ ಏಕಮಾತ್ರ ಆಧಾರವಾದ ಗುಣಕ್ಕೆ ದ್ರವ್ಯವೆನ್ನುತ್ತಾರೆ. ಹೂ ಮತ್ತು ಅದರ ಗುಣಗಳು.

2. ಪ್ರತಿಯೊಂದು ವಸ್ತುವೂ ಬೇರೆ ಬೇರೆ ಅವಸ್ಥೆಗಳನ್ನು ಹೊಂದಬಹುದು. ಉದಾಹರಣೆಗೆ - ಸುವರ್ಣಲೋಹ ಕಟಕ, ಕುಂಡಲ ಇತ್ಯಾದಿ ರೂಪವನ್ನು ಹೊಂದಬಹುದು. ಹೀಗೆ ಬಂದು ಹೋಗುವ ರೂಪಾಂತರಗಳನ್ನು ಧರಿಸುವ ಸ್ಥಿರವಾದ ವಸ್ತುವಿಗೆ ದ್ರವ್ಯವೆಂದು ಹೇಳುವುದಿದೆ.

3. ಗುಣ, ಅವಸ್ಥೆ ಇವು ಸ್ವತಃ ಇರಲಾರವು. ಇವನ್ನು ಹೊಂದಿರುವ ಪದಾರ್ಥಗಳು ಸ್ವತಃ, ಅಂದರೆ ಇಂಥ ಪಾರತಂತ್ರ್ಯವಿಲ್ಲದೆ ಇರಬಲ್ಲುವು. ಅವೇ ದ್ರವ್ಯ.

4. ಕ್ರಿಯೆಗಳೆಲ್ಲ ಒಂದು ಕರ್ತೃಭೂತ ವಸ್ತುಗಳಿಂದ ಹೊರಹೊಮ್ಮುತ್ತವೆ. ಆ ಮೂಲಕ್ಕೆ ದ್ರವ್ಯವೆಂದು ಹೇಳುತ್ತಾರೆ. ಹೀಗೆ ದ್ರವ್ಯಕ್ಕೆ ಏಕತ್ವ, ಸ್ಥಿರತ್ವ, ಸ್ವಾತಂತ್ರ್ಯ ಮತ್ತು ಕ್ರಿಯಾಮೂಲತ್ವ ಇವು ಸಾಧಾರಣ ಲಕ್ಷಣಗಳು. ಇವಕ್ಕೆ ಪ್ರತಿಕಕ್ಷಿಯಾಗಿ ದ್ರವ್ಯವಲ್ಲದ್ದಕ್ಕೆ ಗುಣ, ಅವಸ್ಥಾ, ಪಾರಂತತ್ರ್ಯ, ಮತ್ತು ಕ್ರಿಯೆ ಇವು ಲಕ್ಷಣಗಳು ಎಂದು ಹೇಳಲಾಗಿದೆ.

ಅನುಭವವೇದ್ಯವಾದ ಜಗತ್ತಿನ ಈ ರೀತಿಯ ವರ್ಗೀಕರಣ ಸ್ವಾಭಾವಿಕವಾಗಿ ಬರುತ್ತದೆ. ನಮ್ಮ ಬಳಕೆಯ ಶಬ್ಧಗಳಲ್ಲೂ ನಾಮವಾಚಕ ಪದಗಳು, ಕ್ರಿಯಾ, ಗುಣ , ಸ್ಥಿತಿವಾಚಕ ಪದಗಳು ಇವೆ. ನಾವು e್ಞÁನಕ್ರಿಯೆಯಲ್ಲೂ ಇದಂ (ಇದು) ಇತ್ಥಂ (ಹೀಗಿದೆ) ಎಂದು ತಿಳಿಯುತ್ತೇವೆ. ಧರ್ಮ -ಧರ್ಮಿ ಕಲ್ಪನೆ ಬುದ್ಧಿಗೆ ಸಹಜವಾಗಿ ಬರುತ್ತದೆ. ಹಾಗೆಯೇ ವಿಶೇಷ ವಿಶ್ಲೇಷಣಗಳ ವ್ಯವಹಾರವೂ ಬರುತ್ತದೆ.

ಈ ಬೌದ್ಧಿಕ ವಿವೇಚನೆಯನ್ನು ಎರಡು ರೀತಿಯ ವಾದದಿಂದ ನಿರಾಕರಿಸಬಹುದು. ಸ್ಥಿರವೂ ಏಕವೂ ಸ್ವತಂತ್ರವೂ ಕ್ರಿಯಾಕಾರವೂ ಆದದ್ದು ಯಾವುದೂ ಇಲ್ಲ. ತತ್ತ್ವವೆಲ್ಲ ಕೇವಲ ಅನೇಕ ಅಸ್ವತಂತ್ರ ಕ್ರಿಯೆ ಮಾತ್ರ ಎಂದು ಪ್ರಾಚೀನ ಬೌದ್ಧರಂತೆ ಆಧುನಿಕವಾದ ಡೇವಿಡ್ ಹ್ಯೂಮ್‍ನಂತೆ ವಾದಿಸಿದರೆ ದ್ರವ್ಯ ಕಲ್ಪನೆ ತಪ್ಪಾಗಿ ಕಾಣುತ್ತದೆ. ಹಾಗೆಯೇ, ಇರುವ ಪರಮಾರ್ಥ ವಸ್ತು ಕೇವಲ ನಿತ್ಯ, ಏಕ, ಸ್ವತಂತ್ರ, ಮತ್ತು ಕ್ರಿಯಾಶೂನ್ಯ, ಸ್ವಸಮಾಪ್ತ ಎಂದು ಅದ್ವೈತ ವೇದಾಂತದಲ್ಲಿನಂತೆ ವಾದಿಸಿದರೆ, ಗುಣಗಳಿಗೆ, ಅದ್ರವ್ಯ ವಸ್ತುವಿಗೆ ಅವಕಾಶವಿರುವುದಿಲ್ಲ.

ಬಹುಮತವಾಗಿರುವ ಮಧ್ಯಸ್ಥ ವಾದಗಳಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ದ್ರವ್ಯಾದ್ರವ್ಯಕಲ್ಪನೆ ಬಂದೇ ಬರುತ್ತದೆ. ಕೆಲವು ಐತಿಹಾಸಿಕ ಉದಾಹರಣೆಗಳನ್ನು ಕೊಡಬಹುದು. ಜೈನ ದರ್ಶನದಲ್ಲಿ ದ್ರವ್ಯನಿರೂಪಣೆ ವಿಶೇಷವಾಗಿ ನಡೆದಿದೆ. ಇಲ್ಲಿ ಜೀವ ಮತ್ತು ಅಜೀವ ದ್ರವ್ಯಗಳನ್ನು ತೆಗೆದುಕೊಂಡು, ಅಜೀವಗಳಲ್ಲಿ ಪುದ್ಗಲ, ಕಾಲ, ಆಕಾಶ, ಧರ್ಮ, ಅಧರ್ಮ, ಇವನ್ನು ಗುರುತಿಸಲಾಗಿದೆ. ನ್ಯಾಯ ವೈಶೇಷಕ ದರ್ಶನದಲ್ಲಿ ದ್ರವ್ಯ ಪ್ರಥಮ ಪದಾರ್ಥ. ಇದನ್ನು ಆಶ್ರಯಿಸಿಕೊಂಡು ಗುಣ, ಕರ್ಮ, ಸಾಮಾನ್ಯ, ವಿಶೇಷ, ಸಮವಾಯ ಅಭಾವ - ಇವು ಇವೆ ಎಂದು ಹೇಳಲಾಗಿದೆ. ಇಲ್ಲಿ ಪೃಥೀವೀ ಅಪ್ಪು ತೇಜಸ್ಸು ವಾಯು ಆಕಾಶ ಕಾಲ ದಿಕ್ಕು ಆತ್ಮ ಮನಸ್ಸು ಸ್ವಲ್ಪ ಪರಿಷ್ಕಾರಗೊಳಿಸುತ್ತದೆ. ಸಾಂಖ್ಯಯೋಗದಲ್ಲಿ ಪ್ರಕೃತಿ ಪುರುಷರನ್ನು ಮೂಲತತ್ತ್ವವನ್ನಾಗಿ ನಿರೂಪಿಸಿ, ಪ್ರಕೃತಿಯ ಅನೇಕ ರೂಪಾಂತರಗಳನ್ನು ನಿರ್ದೇಶಿಸಿ ಒಟ್ಟು ಇಪ್ಪತ್ತೈದು ತತ್ತ್ವಗಳನ್ನು ಹೇಳಿದೆ. ದ್ರವ್ಯಗುಣ, ಭಾಷೆ ವಿಶೇಷವಾಗಿ ಈ ದರ್ಶನದಲ್ಲಿ ಉಪಯೋಗಿಸಲ್ಪಡದಿದ್ದರೂ, ಸತ್ತ್ವ, ರಜಸ್ಸು, ತಮಸ್ಸು ಇವುಗಳ ಕಲ್ಪನೆಯೂ ಪ್ರಕೃತಿಯಲ್ಲಿ ಅವಸ್ಥಾ ವಿಶೇಷಗಳನ್ನು ಒಪ್ಪಿಕೊಳ್ಳುವುದರಿಂದಲೂ ಇದರಲ್ಲಿ ದ್ರವ್ಯ ಭಾವನೆ ಇದೆ. ವಿಶಿಷ್ಟಾದ್ವೈತ ಮತ್ತು ದ್ವೈತಗಳಲ್ಲಿ ದ್ರವ್ಯ ಅದ್ರವ್ಯ ಭಾವ ವಿಶೇಷವಾಗಿ ಉಪಯುಕ್ತವಾಗಿದೆ. ವಿಶಿಷ್ಟಾದ್ವೈತದಲ್ಲಿ ವಸ್ತುತಃ ಪ್ರಧಾನ ದ್ರವ್ಯ ಈಶ್ವರ ತತ್ತ್ವ. ಮಿಕ್ಕೆಲ್ಲ ವಸ್ತುಗಳೂ ಸತ್ಯವಾಗಿದ್ದರೂ ಇದರ ವಿಶೇಷಣ ಅಥವಾ ಪ್ರಕಾರಸ್ಥಾನದಲ್ಲಿದೆ. ದ್ವೈತದಲ್ಲಿ ದ್ರವ್ಯಕ್ಕೂ ಅದರ ನೈಜಗುಣಗಳಿಗೂ ಅಭೇದವನ್ನು ಹೇಳಲಾಗಿದೆ. ಹೀಗೆ ಭಾರತೀಯ ದರ್ಶನಗಳಲ್ಲಿ ದ್ರವ್ಯ ಪದಾರ್ಥ ವ್ಯಾಪಕ ಪ್ರಮೇಯವಾಗಿದೆ.

ಪಾಶ್ಚಾತ್ಯ ದರ್ಶನಗಳಲ್ಲೂ ದ್ರವ್ಯದ ಕಲ್ಪನೆ ಇಷ್ಟೇ ವ್ಯಾಪ್ತವಾಗಿದೆ. ಅರಿಸ್ಟಾಟಲ್ ದ್ರವ್ಯವನ್ನು ಮೂಲಭೂತವಾದ ತತ್ತ್ವವೆಂದು ಎಣಿಸಿ, ಅದರಲ್ಲಿ ವಸ್ತು ಮತ್ತು ಆಕಾರ ಇವು ಸಂಗಮ ಹೊಂದಿದೆ ಎಂದು ವಾದಿಸಿದ. ಆಧುನಿಕ ದರ್ಶನ ಪ್ರವರ್ತಕರಾದ ಡೇಕಾರ್ಟ್ ಆತ್ಮ ಮತ್ತು ಅನಾತ್ಮಗಳೆಂದು ದ್ರವ್ಯಗಳನ್ನು ಪ್ರಾರಂಭದಲ್ಲಿ ಸಾಧಿಸಿ ಇವೆರಡರ ಪರಸ್ಪರ ಸಂಬಂಧ ಕಲ್ಪನೆಯನ್ನು ಈಶ್ವರನೆಂಬ ಮೂರನೆಯ ದ್ರವ್ಯದಿಂದ ನಿರ್ವಾಹ ಮಾಡಲು ಯತ್ನಿಸಿದ. ಸ್ಪಿನೋಜû ತತ್ತ್ವವೊಂದೇ ದ್ರವ್ಯ, ಮಿಕ್ಕೆಲ್ಲವೂ ಅದರ ಧರ್ಮ ಅಥವಾ ಪ್ರಕಾರದಲ್ಲಿ ಪರ್ಯವಸಾನ ಹೊಂದುತ್ತವೆಂದು ಏಕತತ್ತ್ವ ವಾದವನ್ನು ಎತ್ತಿ ಹಿಡಿದ. ಲೈಬ್‍ನಿಟ್ಸ್ ಅನೇಕ ತತ್ತ್ವವಾದಿ. ಈ ತತ್ವಗಳು ಚೇತನಾತ್ಮಕವಾದವು; ಸರ್ವಥಾ ಅಚೇತನವಾದ ವಸ್ತುವೇ ಅಲ್ಲ. ದ್ರವ್ಯವೆಂದರೆ ಈ ಆತ್ಮಾಣುಗಳೇ. ಇವು ಸ್ವತಂತ್ರ, ಸ್ಥಿರ, ಕ್ರಿಯಾಮಯ, ಅವಿಭಾಜ್ಯ. ಇವುಗಳ ಪರಸ್ಪರ ಸಾಮರಸ್ಯವನ್ನು ಪರಸ್ಪರ ನಿರ್ವಹಿಸುತ್ತಾನೆ ಎಂದು ಸಿದ್ಧಾಂತ ಕಟ್ಟಿದ. ಇದು ದ್ರವ್ಯಪುರಸ್ಕಾರ ಸಂಪ್ರದಾಯವಾದರೆ, ಕೇವಲ ಪ್ರತ್ಯಕ್ಷವಾದಿಗಳಾದ ಲಾಕ್, ಬಾರ್ಕ್ಲೆ, ಹ್ಯೂಮ್ ಇವರು ದ್ರವ್ಯ ತತ್ತ್ವವನ್ನು ನಿರಾಕರಿಸುತ್ತಾರೆ. ಈ ನಿರಾಕರಣೆ ಹ್ಯೂಮನಲ್ಲಿ ಪರಾಕಾಷ್ಠೆಗೇರುತ್ತದೆ.

ತಮ್ಮ ವಿಮರ್ಶಾದೃಷ್ಟಿಯಿಂದ ಐರೋಪ್ಯ ದರ್ಶನದಲ್ಲಿ ಒಂದು ಪ್ರಭಾವಪೂರ್ಣ ಕ್ರಾಂತಿಯನ್ನೇ ಉಂಟು ಮಾಡಿದ ಕಾಂಟ್ ದ್ರವ್ಯ ಕಲ್ಪನೆಯ ಮೌಲ್ಯವನ್ನು ನಿಷ್ಕರ್ಷೆ ಮಾಡುತ್ತಾನೆ. ನಮ್ಮ ಪ್ರತ್ಯಕ್ಷಾನುಭವಗಳು ಸತತವಾಗಿ ಬದಲಾವಣೆ ಹೊಂದುವ ಪ್ರವಾಹ ರೂಪವಾಗಿವೆ. ಈ ವಿಕಾರಿ ಪರಿಸ್ಥಿತಿಯನ್ನು ಗುರುತಿಸಲು ಸ್ಥಿರವಸ್ತುವಿನ ತುಲನಾತ್ಮಕ ಅವಲೋಕನ ಅವಶ್ಯವಾಗಿರುವುದರಿಂದ, ಅನುಭವಗಳ ಸಮೀಕರಣಕ್ಕೆ ಸ್ಥಿರವಾದ ದ್ರವ್ಯದ ದೃಷ್ಟಿ ಅಗತ್ಯವೆಂದು ಆತ ವಾದಿಸಿದ. ಆದರೆ ಇದು ಅನುಭವ ಪ್ರಪಂಚಕ್ಕೆ ಮಾತ್ರ ವ್ಯಾಪ್ತವಾದ ಆವಶ್ಯಕತೆ; ಅನುಭವಾತೀತ ಪರಮಾರ್ಥಕ್ಕೆ ಅನ್ವಯಿಸುವುದಿಲ್ಲ.

ಮುಂದೆ ಬಂದ ಹೇಗಲ್ ಇದನ್ನು ಟೀಕಿಸಿದ್ದಲ್ಲದೆ, ದ್ರವ್ಯ ತತ್ತ್ವವಲ್ಲ, ಅದರ ಸ್ಥಳದಲ್ಲಿ ಆತ್ಮವನ್ನು ಇಟ್ಟರೆ ತತ್ತ್ವದರ್ಶನ ಸರಿಯಾಗುತ್ತದೆಂದು ವಾದಿಸುತ್ತಾರೆ. ಇತ್ತೀಚಿನ ದಾರ್ಶನಿಕರಲ್ಲಿ ರಸೆಲ್ ತಾರ್ಕಿಕ ವಿಶ್ಲೇಷಣೆಯಿಂದ ವಿಶೇಷಣ ವಿಶೇಷ ಕಲ್ಪನೆ e್ಞÁನ ಮೀಮಾಂಸೆಯಲ್ಲಿ ಸರ್ವತೋಮುಖವಾದ ತತ್ತ್ವವಲ್ಲವೆಂದು ಸಾಧಿಸುತ್ತಾರೆ. ಅವನ ವಾದ ಯುಕ್ತವೆಂದೊಪ್ಪಿದರೆ ದ್ರವ್ಯ ಪದಾರ್ಥವನ್ನು ಅದರ ಪ್ರಧಾನ ಸ್ಥಾನದಿಂದ ಕೆಳಗಿಳಿಸಬೇಕಾಗುತ್ತದೆ. ಹಾಗೆಯೇ ಹ್ವೈಟ್‍ಹೆಡ್ ಪ್ರವಾಹಕ್ಕೆ ಹೆಚ್ಚು ಪ್ರಾಧಾನ್ಯ ಕೊಡುವುದರಿಂದ ದ್ರವ್ಯವನ್ನು ಬಿಡುತ್ತಾನೆ. ಆದರೆ ಇದು ಪೂರ್ತಿಯಾದ ತ್ಯಾಗವಲ್ಲ. ನಿತ್ಯವಸ್ತುಗಳನ್ನು ಅವನು ಒಂದು ರೀತಿಯಲ್ಲಿ ಸ್ಥಾಪಿಸುತ್ತಾನೆ. ಸಂದಿಗ್ಧ ಪರಿಸ್ಥಿತಿಯಲ್ಲಿ, ಆಧುನಿಕ ಭೌತಶಾಸ್ತ್ರದ ಸಂಶೋಧನೆಯಲ್ಲಿ ವಸ್ತು ಮತ್ತು ಶಕ್ತಿಗಳನ್ನು ಏಕೀಕರಿಸುವ ನ್ಯಾಯವೂ ಸಂಗತವಾಗಿದೆ. ಮೂರ್‍ಹೆಡ್, ಪಾರ್ಕರ್, ಮೊದಲಾದ ಕೆಲವು ದಾರ್ಶನಿಕರು ದ್ರವ್ಯ ಪಧಾರ್ಥ ಪರಿಷ್ಕøತವಾಗಬೇಕು. ಆಗ ಅದು ಮೂಲಭೂತವಾದ ಸ್ಥಾನಕ್ಕೆ ಪುನಃ ಬರುತ್ತದೆಂದು ಸೂಚಿಸುತ್ತಾರೆ. ದ್ರವ್ಯದ ವಿಷಯದಲ್ಲಿ ಸದ್ಯಕ್ಕೆ ನಾವು ಭಾರತೀಯ ಶಾಕ್ತರ ಶಕ್ತ - ಶಕ್ತಿ ಕಲ್ಪನೆಗೆ ಹತ್ತಿರ ಹತ್ತಿರ ಬರುತ್ತಿರುವಂತೆ ಭಾಸವಾಗುತ್ತಿದೆ. (ಎಸ್.ಎಸ್.ಆರ್.)