ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ರಾಕ್ಷಾರಾಮ

ವಿಕಿಸೋರ್ಸ್ದಿಂದ

ದ್ರಾಕ್ಷಾರಾಮ ಬೌದ್ಧರ ಪಂಚಾರಾಮಗಳಲ್ಲಿ ಒಂದು. ಪೂರ್ವಗೋದಾವರಿ ಜಿಲ್ಲೆಯಲ್ಲಿದೆ. ದಕ್ಷ ಇಲ್ಲಿ ಯಾಗಮಾಡುತ್ತಿದ್ದಾಗ, ಅವನ ಮಗಳು ದಾಕ್ಷಾಯಿಣಿ ಅಪಮಾನ ಹೊಂದಿ ಅಗ್ನಿಕುಂಡದಲ್ಲಿ ಬಿದ್ದು ಪ್ರಾಣ ನೀಗಿದಳಂತೆ. ಆಯೋಗವಿನ್ನೂ ಇಲ್ಲಿ ನಡೆಯುತ್ತಿದೆಯೆಂದೂ ಇಲ್ಲಿಯ ಜನ ಹೇಳುತ್ತಾರೆ. ದಕ್ಷನನ್ನು ಶಿವ ಒದ್ದಾಗ ಅವನ ಕೊರಳಲ್ಲಿದ್ದ ಐದುಲಿಂಗಗಳಲ್ಲಿ ಒಂದು ಇಲ್ಲೇ ಬಿದ್ದು ಇಲ್ಲಿ ಭೀಮೇಶ್ವರ ದೇವಾಲಯ ಏರ್ಪಟ್ಟಿತು. ಉಳಿದವು ಒಂದೊಂದರಂತೆ ಅಮರಾವತಿ ಪಾಲುಕಲ್ಲು, ಕುಮಾರಾರಾಮ, ಭೀಮವಧ _ ಈ ನಾಲ್ಕು ಸ್ಥಳಗಳಲ್ಲಿ ಬಿದ್ದವಂತೆ. ಇವು ಉಳಿದ ಆರಾಮಗಳು. ಇಲ್ಲಿರುವ ಭೀಮೇಶ್ವರ ದೇವಸ್ಥಾನವನ್ನು ಸೂರ್ಯ ಕಟ್ಟಿಸಿದನೆಂದೂ ಕಶ್ಯಪ, ಅತ್ರಿ, ಗೌತಮ, ವಿಶ್ವಾಮಿತ್ರ, ಭಾರದ್ವಾಜ, ಜಮದಗ್ನಿ, ಮತ್ತು ವಸಿಷ್ಠ - ಈ ಸಪ್ತಋಷಿಗಳು ಈ ದೇವರನ್ನು ಪೂಜಿಸಿದರೆಂದೂ ಅಲ್ಲಿನ ಏಳು ಸರೋವರಗಳೂ ಸಪ್ತಗೋದಾವರಿಗಳಾದುವೆಂದೂ ಪುರಾಣ ಕಥೆ. (ಜಿ.ಎಚ್.)