ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ರುಪದ

ವಿಕಿಸೋರ್ಸ್ದಿಂದ

ದ್ರುಪದ ಪಾಂಚಾಲ ದೇಶದ ಅರಸು. ದ್ರೌಪದಿಯ ತಂದೆ. ಯಜ್ಞಸೇನನೆಂಬುದು ಈತನ ನಾಮಾಂತರ. ಈತ ಸೋಮಕನ ಮೊಮ್ಮಗ. ಪೃಷದನ ಮಗ. ಮರದ ಗುರುತಿನ ಧ್ವಜವುಳ್ಳವ; ಮಹಾರಥ. ಒಮ್ಮೆ ಪೃಷದ ತಪೋನಿರತನಾಗಿದ್ದಾಗ ಅದನ್ನು ಭಂಗಗೊಳಿಸಲು ಬಂದ ಮೇನಕೆಯನ್ನು ಕಂಡಾಗ ಇಂದ್ರಿಯಸ್ಖಲನವಾಗಿ ಪೃಷದನ ರೇತಸ್ಸು ನೆಲದ ಮೇಲೆ ಬಿತ್ತು. ಆಗ ರಾಜ ಲಜ್ಜೆಯಿಂದ ಆ ವೀರ್ಯವನ್ನು ಅಲ್ಲಿದ್ದ ಒಂದು ಮರದಡಿ ನೂಕಿ ಹೋದ. ಕೂಡಲೇ ಆ ವೀರ್ಯ ಗಂಡು ಶಿಶುವಿನ ರೂಪ ಧರಿಸಿತು. ಭರದ್ವಾಜ ಮುನಿಯ ಸಹೋದರ ಅಗ್ನಿವೇಶ್ಯ ಮಹರ್ಷಿ ಆ ಶಿಶುವನ್ನು ಕಂಡು ಆಶ್ರಮಕ್ಕೆ ಕೊಂಡೊಯ್ದು ದ್ರುಪದ (ಮರದ ಬುಡದಲ್ಲಿ ಹುಟ್ಟಿದವ) ಎಂದು ಹೆಸರಿಟ್ಟು ಕಾಪಾಡಿ ದ್ರೋಣಾಚಾರ್ಯನ ಸಂಗಡ ಈತನಿಗೂ ಧನುರ್ವಿದ್ಯೆ ಕಲಿಸಿದ. ಪೃಷದನ ತರುವಾಯ ದ್ರುಪದ ರಾಜ್ಯಾಭಿಷಿಕ್ತನಾದ. ಮುಂದೆ ತನ್ನ ಸಹಪಾಠಿಯಾಗಿದ್ದ ದ್ರೋಣನನ್ನು ಈತ ತಿರಸ್ಕರಿಸಲಾಗಿ ದ್ರೋಣ ತನ್ನ ಶಿಷ್ಯ ಅರ್ಜುನನಿಂದ ಈತನನ್ನು ಹಿಡಿದು ತರಿಸಿ ಅವಮಾನಿಸಿದ. ಈತ ಸುತ್ರಾಮನ ಮಗಳಾದ ಕೌಸವಿಯನ್ನು ಮದುವೆಯಾಗಿದ್ದ. ಪುತ್ರ ಸಂತಾನಾರ್ಥವಾಗಿ ತಪಸ್ಸು ಮಾಡಿ ಶಿಖಂಡಿಯನ್ನು ಪಡೆದ. ತನಗೆ ಅವಮಾನ ಮಾಡಿದ ದ್ರೋಣನನ್ನು ಕೊಲ್ಲಬಲ್ಲ ಮಗನೊಬ್ಬನನ್ನೂ ಅಪ್ರತಿಮ ವೀರನಾದ ಅರ್ಜುನನನ್ನು ಮದುವೆಯಾಗಬಲ್ಲ ಮಗಳೊಬ್ಬಳನ್ನೂ ಪಡೆವುದಾಗಿ ಸಂಕಲ್ಪಿಸಿ ಯಜ್ಞ ಮಾಡಿ ಅಗ್ನಿಕುಂಡದಿಂದ ಧೃಷ್ಟದ್ಯುಮ್ನನೆಂಬ ಮಗನನ್ನು ಕೃಷ್ಣೆ(ದ್ರೌಪದಿ) ಎಂಬ ಮಗಳನ್ನು ಪಡೆದ. ಕೌಸವಿಯಲ್ಲಿ ಸುಮಿತ್ರ, ಪ್ರಿಯದರ್ಶನ, ವೀರಕೇತು, ಸುರಥ, ಶತ್ರುಂಜಯ, ಧ್ವಜಕೇತು ಎಂಬ ಮಕ್ಕಳು ಜನಿಸಿದರು. ಸುಮಿತ್ರ ಜಯದ್ರಥನಿಂದಲೂ ಪ್ರಿಯದರ್ಶನ ಕರ್ಣನಿಂದಲೂ ವೀರಕೇತು ದ್ರೋಣನಿಂದಲೂ ಸುರಥ ಮತ್ತು ಶತ್ರುಂಜಯರು ಅಶ್ವತ್ಥಾಮನಿಂದಲೂ ಹತರಾದರು. ಭಾರತ ಯುದ್ಧದಲ್ಲಿ ದ್ರುಪದ ಪಾಂಡವರ ಪರವಾಗಿ ಹೋರಾಡಿ ದ್ರೋಣನಿಂದ ಹತನಾದ.