ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ವಾಪರ

ವಿಕಿಸೋರ್ಸ್ದಿಂದ

ದ್ವಾಪರ ವೈದಿಕ ವಾಙ್ಮಯದಲ್ಲಿ ಉಕ್ತವಾದ ನಾಲ್ಕು ಯುಗಗಳಲ್ಲಿ ಮೂರನೆಯದು ; ಉಳಿದವು ಕೃತ, ತ್ರೇತ, ಕಲಿ, ಇದರ ಅವಧಿ ದೇವಮಾನದಂತೆ 2400 ವರ್ಷಗಳು. ಮನುಷ್ಯ ಮಾನದಂತೆ 8, 64, 000 ವರ್ಷಗಳು. ದ್ವಾಪರ ಕಲಿಯುಗದ ಸಂಧಿಯಲ್ಲಿ ಭಾರತ ಯುದ್ಧ ನಡೆಯಿತು. ದಮಯಂತೀ ಸ್ವಯಂವರ ಸಮಯದಲ್ಲಿ ದ್ವಾಪರ ಯುಗದ ಅಭಿಮಾನ ದೇವತೆಯೂ ಬಂದಿದ್ದ. ದ್ವಾಪರ ಯುಗದಲ್ಲಿ ಧರ್ಮದ ಎರಡು ಪಾದಗಳು ತಗ್ಗಿದ್ದವಲ್ಲದ ಭಗವಂತನಾದ ವಿಷ್ಣು ಸುವರ್ಣ ವರ್ಣದಿಂದ ಗೋಚರಿಸಿದ; ಒಂದೇ ಆಗಿದ್ದ ವೇದವನ್ನು ಪೂರ್ಣವಾಗಿ ತಿಳಿಯಲು ಜನ ಅಸಮರ್ಥರಾದರಾಗಿ ವೇದಗಳು ಚತುಶಾಖೆಗಳಾಗಿ ವಿಭಾಗ ಹೊಂದಿದುವು. ಇದರಿಂದ ಜನರಲ್ಲಿ ಚತುರ್ವೇದಿಗಳು, ತ್ರಿವೇದಿಗಳು, ದ್ವಿವೇದಿಗಳು ಏಕವೇದಿಗಳು, ವೇದರಹಿತರು ಎಂಬ ಭೇದಗಳೆಷ್ಟೋ ಏರ್ಪಟ್ಟುವು. ಆ ಭೇದಗಳ ಮೇಲೆ ಶಾಸ್ತ್ರಗಳು ಭಿನ್ನವಾದವು. ರಜೋಗುಣ ಹೆಚ್ಚಾಯಿತಾಗಿ ಜನ ಫಲಾಪೇಕ್ಷೆಯಿಂದಲೇ ತಪೋದಾನಾದಿಗಳನ್ನು ನಡೆಸುತ್ತಿದ್ದರು. ಮನುಷ್ಯನ ಬುದ್ಧಿಶಕ್ತಿ ನ್ಯೂನವಾದುದರಿಂದ, ಸತ್ಯದಲ್ಲಿ ನೆಲೆಗೊಂಡವರು ಬಹಳ ವಿರಳರಾದರು. ಸತ್ಯಭ್ರಷ್ಟತನದಿಂದಾಗಿ ಹಲವು ರೀತಿಯ ಉಪದ್ರವಗಳೂ ತಲೆದೋರಿದವು. ಅವುಗಳ ನಿವಾರಣೆಗಾಗಿ ತಪಸ್ಸನ್ನು ನಡೆಸಬೇಕಾಯಿತು. ಅನೇಕರು ಇಹಲೋಕ ಸುಖವನ್ನೂ ಸ್ವರ್ಗ ಸುಖವನ್ನು ಬಯಸಿ ಅದಕ್ಕಾಗಿ ಯಾಗಗಳನ್ನು ಮಾಡಿದರು. (ಟಿ.ಎಸ್.ಆರ್‍ಎ.)