ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ವಾರಕ

ವಿಕಿಸೋರ್ಸ್ದಿಂದ

ದ್ವಾರಕ ಗುಜರಾತ್ ರಾಜ್ಯದಲ್ಲಿರುವ ಒಂದು ಯಾತ್ರಾಸ್ಥಳ. ಶ್ರೀಕೃಷ್ಣ ಭಕ್ತರನ್ನು ಇದು ಇಂದಿಗೂ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. ಯಾದವರೊಂದಿಗೆ ತಾನು ವಾಸವಾಗಿದ್ದ ಮಧುರಾಪುರಿಯನ್ನು ಜರಾಸಂಧ ಹಾಳುಗೆಡಹಿದ ಬಳಿಕ ಶ್ರೀಕೃಷ್ಣ ಸಮುದ್ರ ಮಧ್ಯದಲ್ಲಿ ದೇವಶಿಲ್ಪಯಾದ ವಿಶ್ವಕರ್ಮನಿಂದ ತನಗಾಗಿ ರಚಿಸಿಕೊಂಡ ಊರು. ದ್ವಾರಾವತಿ ಎಂಬುದು ಇದರ ನಾಮಾಂತರ. ಹಿಂದೆ ಇದೇ ಸ್ಥಳದಲ್ಲಿ ಕುಶಸ್ಥಲೀ ಎಂಬ ನಗರವಿತ್ತು. ಅಲ್ಲಿ ಶ್ರೀರಾಮನ ಮಗ ಕುಶನೂ ಅನಂತರ ಶರ್ಯಾತಿ ರಾಜನ ಮುಮ್ಮಗ ರೇವತನೆಂಬುವನೂ ಬಹಳ ಕಾಲ ರಾಜ್ಯಭಾರ ಮಾಡಿದರು. ಈ ಮಹಾನಗರಕ್ಕೆ ಐವತ್ತು ಪ್ರವೇಶ ದ್ವಾರಗಳು, ಎಂಟು ರಾಜಮಾರ್ಗಗಳು ಹದಿನಾರು ಚೌಕಗಳು ಇದ್ದವು. ಮುಖ್ಯ ದ್ವಾರದ ಹೆಸರು ವರ್ಧಮಾನ.

ಇದರ ಉದ್ದ ಹನ್ನೆರಡು ಯೋಜನ, ಅಗಲ ಎಂಟು ಯೋಜನ. ಪರಿಮಾಣದಲ್ಲಿ ಉಪನಿವೇಶ ದ್ವಾರಕೆಯ ಎರಡರಷ್ಟಿತ್ತೆಂದೂ ಇದರ ಭವನಗಳನ್ನು ಸ್ವರ್ಣ ವಜ್ರ ವೈಡೂರ್ಯ ಮುತ್ತು ಪಚ್ಚೆ ರತ್ನ ಹಾಗೂ ಅಮೃತಶಿಲೆಗಳಿಂದ ನಿರ್ಮಿಸಿದ್ದರೆಂದೂ ಶ್ರೀಕೃಷ್ಣನ ಅರಮನೆಯೇ ನಾಲ್ಕು ಯೋಜನ ಉದ್ದ ಮತ್ತು ನಾಲ್ಕು ಯೋಜನ ಅಗಲದ ನಿವೇಶನದಲ್ಲಿ ನಿರ್ಮಿಸಲಾಗಿತ್ತೆಂದೂ ತಿಳಿದುಬರುತ್ತದೆ. ಶ್ರೀಕೃಷ್ಣ ತನ್ನ ಮಡದಿಯರಿಗಾಗಿ ಅಂದರೆ ರುಕ್ಮಿಣಿಗಾಗಿ ಶೀತಮಾನ್, ಸುಕೇಶಿಗಾಗಿ ಮೇರು, ಸುಪ್ರಭೆಯೆಂಬುವಳಿಗಾಗಿ ಪದ್ಮಕುಟ, ಲಕ್ಷಣೆಯೆಂಬುವಳಿಗಾಗಿ ಸೂರ್ಯಪ್ರಭ, ಸುಮಿತ್ರವಿಜಯೆಗಾಗಿ ಹರಿ ಎಂಬ ಪ್ರತ್ಯೇಕ ಅರಮನೆಗಳನ್ನು ಕಟ್ಟಿಸಿದ. ಉಪಸ್ಥಾನ ಗೃಹ ಎಂಬುದು ಅತಿಥಿಗೃಹ. ಸತ್ಯಭಾಮೆ ಮತ್ತು ಜಾಂಬವತಿಯರ ಭವನಗಳು ಈ ಎಲ್ಲ ಕಟ್ಟಡಗಳಿಗಿಂತಲೂ ಹೆಚ್ಚು ಭವ್ಯವಾಗಿದ್ದವು. ದ್ವಾರಕ ನಗರವನ್ನು ಕುಬೇರನ ಅಲಕಾಪುರಿಗೆ ಹೋಲಿಸುತ್ತಾರೆ. ಮಹಾಭಾರತದ ಸಭಾಪರ್ವದಲ್ಲಿಯೂ ಮಾಘನ ಶಿಶುಪಾಲ ವಧೆಯ 3 ನೆಯ ಸರ್ಗದಲ್ಲಿಯೂ ಇದರ ವರ್ಣನೆ ಬರುತ್ತದೆ. ಶ್ರೀಕೃಷ್ಣನ ನಿರ್ಯಾಣಾಂತರ ಅವನ ಅರಮನೆಯೊಂದನ್ನು ಬಿಟ್ಟು ಉಳಿದ ದ್ವಾರಕಾ ನಗರವೆಲ್ಲ ಸಮುದ್ರದಲ್ಲಿ ಮುಳುಗಿ ಹೋಯಿತೆಂದು ಹೇಳಲಾಗಿದೆ. ಅನಂತರ ಶ್ರೀಕೃಷ್ಣನ ಅರಮನೆ ಇದ್ದ ಜಾಗದಲ್ಲಿ ವಜ್ರನಾಭನೆಂಬ ದೊರೆ ರಣಛೋಡಜಿ ಎಂಬ ಶ್ರೀಕೃಷ್ಣನ ಮೂಲ ಮಂದಿರವನ್ನು ನಿರ್ಮಿಸಿದನೆಂದು ಹೇಳುತ್ತಾರೆ. (ಟಿ.ಎಸ್.ಆರ್‍ಎ.)