ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ವಾರವತಿ

ವಿಕಿಸೋರ್ಸ್ದಿಂದ

ದ್ವಾರವತಿ - ಇಂಡೋ - ಚೀನ ಪರ್ಯಾಯದ್ವೀಪದ ಪ್ರಾಚೀನ ರಾಜ್ಯಗಳಲ್ಲಿ ಒಂದು. 6, 7 ನೆಯ ಶತಮಾನಗಳಲ್ಲಿ ಅತ್ಯಂತ ಪ್ರಭಾವಶಾಲಿಯಾದ ರಾಜ್ಯವಾಗಿ ಪ್ರಸಿದ್ಧಿ ಪಡೆದಿತ್ತು. ಹೂಯೆನ್‍ತ್ಸಾಂಗ್, ಇತ್ಸಿಂಗ್ ಮೊದಲಾದ ಚೀನೀ ಯಾತ್ರಿಕರು ಶ್ರೀಕ್ಷೇತ್ರ (ಈಗಿನ ಬರ್ಮ), ಈಶಾನಪುರ (ಈಗಿನ ಕಾಂಬೋಡಿಯ) ಇವುಗಳ ಮಧ್ಯದಲ್ಲಿ ಕೋಲೋಪೋತಿ ಎಂಬ ರಾಜ್ಯ ಇತ್ತೆಂದು ತಮ್ಮ ಬರೆವಣಿಗೆಯಲ್ಲಿ ಹೇಳಿದ್ದಾರೆ. ಕೋಲೋಪೋತಿ ಎಂಬುದರ ಮೂಲನಾಮದ್ವಾರವತಿ ಎಂದು ಫ್ರೆಂಚ್ ವಿದ್ವಾಂಸ ಜಾರ್ಜ್ ಸೀಡಸ್ ಹೇಳಿದ್ದಾನೆ. ಆದ್ದರಿಂದ ದ್ವಾರವತಿ ರಾಜ್ಯ ಮಧ್ಯ ಸೈಯಾಮಿನಿ (ಈಗಿನ ಥೈಲೆಂಡ್) ಮೇನಾಂ ನದಿ ಕಣಿವೆಯನ್ನೊಳಗೊಂಡು ಬರ್ಮ ಮತ್ತು ಕಾಂಬೋಡಿಯ ರಾಜ್ಯಗಳ ಮಧ್ಯದಲ್ಲಿ ಇತ್ತೆಂದು ತಿಳಿಯಲಾಗುತ್ತದೆ. ಲೋಪ್‍ಬುರಿ (ಲಾವಾಪುರಿ) ನಗರ ಈ ದೇಶದ ರಾಜಧಾನಿ. ದ್ವಾರವತಿ 638 ಮತ್ತು 640 ರಲ್ಲಿ ಚೀನ ದೇಶಕ್ಕೆ ತನ್ನ ರಾಯಭಾರಿಗಳನ್ನು ಕಳುಹಿಸಿಕೊಟ್ಟಿತ್ತೆಂದು ತಿಳಿದುಬರುತ್ತದೆ. ಈ ದೇಶ ತನ್ನ ಉಚ್ಛ್ರಾಯ ಕಾಲದಲ್ಲಿ ಕಾಂಬೋಡಿಯದ ಗಡಿಯಿಂದ ಬಂಗಾಳ ಕೊಲ್ಲಿಯವರೆಗೆ ಹಬ್ಬಿತ್ತು. ಇದು ಸುಮರು ಹತ್ತನೆಯ ಶತಮಾನದವರೆಗೆ ಪ್ರಬಲ ರಾಷ್ಟ್ರವಾಗಿತ್ತು. ಈ ದೇಶದ ಜನ ಮೊನ್ ಬುಡಕಟ್ಟಿಗೆ ಸೇರಿದವರಾಗಿದ್ದರು. ಇವರು ಭಾರತೀಯ ಸಂಸ್ಕøತಿ ನಾಗರಿಕತೆಗಳಿಂದ ವಿಶೇಷವಾಗಿ ಪ್ರಭಾವಿತರಾಗಿದ್ದರು. ಖ್ಮೆರ್ ಹಾಗೂ ಸಂಸ್ಕøತ ಭಾಷೆಗಳಲ್ಲಿರುವ. 10 ನೆಯ ಶತಮಾನದ ಕಾಂಬೋಡಿಯ ಶಾಸನವೊಂದರಲ್ಲಿ ದ್ವಾರವತಿ ರಾಜ್ಯದ ಬಗ್ಗೆ ಉಲ್ಲೇಖವಿದೆ. ಕಾಂಬೋಡಿಯದ ದೊರೆ 2 ನೆಯ ಜಯವರ್ಮನ ಕಾಲದಲ್ಲಿ (9ನೆಯ ಶತಮಾನದ ಆದಿಭಾಗ) ವಾಪ್ ಉಪೇಂದ್ರ ಎಂಬವನು ದ್ವಾರವತಿಯನ್ನು ಕೊಡುಗೆಯಾಗಿ ಪಡೆದನೆಂದು ಈ ಶಾಸನ ತಿಳಿಸುತ್ತದೆ. ಈತನ ಸಂತತಿಗೆ ಸೇರಿದ ವಾಪ್ ಪಾನ್ ಎಂಬವನು ದ್ವಾರವತಿಯಲ್ಲಿ ಚಂಪಕೇಶ್ವರ ಮೊದಲಾದ ದೇವರುಗಳನ್ನು ಪ್ರತಿಷ್ಠಿಸಿದನೆಂದೂ ಆ ಶಾಸನದಿಂದ ಗೊತ್ತಾಗುತ್ತದೆ. ಆ ದೇಶದ ಜನ ಹಿಂದೂ ಮತ್ತು ಬೌದ್ಧ ಮತಾವಲಂಬಿಗಳಾಗಿದ್ದರು. ಭಾರತದ ಭಾಷೆ, ಸಾಹಿತ್ಯ ಮತ್ತು ಮತಗ್ರಂಥಗಳು ಆ ದೇಶದ ಮೇಲೆ ಬೀರಿದ ಪ್ರಭಾವವನ್ನು ಇಂದಿಗೂ ಆ ಪ್ರದೇಶದ ಜನರ ಜೀವನದಲ್ಲಿ ಕಾಣಬಹುದು. ದ್ವಾರವತಿಯ ವಾಸ್ತು ಹಾಗೂ ಮೂರ್ತಿ ಶಿಲ್ಪಗಳಲ್ಲಿ ಭಾರತೀಯ ವಾಸ್ತುಶಿಲ್ಪಗಳ ಪ್ರಭಾವವಿದೆ. ಅಲ್ಲಿಯ ಬೌದ್ಧಶಿಲ್ಪಗಳಲ್ಲಿ ವಿಶೇಷವಾಗಿ ಗುಪ್ತರ ಶಿಲ್ಪಶೈಲಿ ಕಾಣಬರುತ್ತದೆಂಬುದು ವಿದ್ವಾಂಸರ ಅಭಿಪ್ರಾಯ. ಮಲಯದ್ವೀಪಗಳೂ ಸೇರಿದಂತೆ ತನ್ನ ನೆರೆಹೊರೆಯ ರಾಷ್ಟ್ರಗಳೊಡನೆ ದ್ವಾರವತಿ ಗಾಢವಾದ ಸಾಂಸ್ಕøತಿಕ ಸಂಬಂಧ ಹೊಂದಿದ್ದು ಅತ್ಯಂತ ಬಲಿಷ್ಠ ಹಾಗೂ ಪ್ರಭಾವಶಾಲಿ ರಾಜ್ಯವಾಗಿತ್ತು. (ಎಸ್.ಪಿ.ಎಸ್.ಬಿ.)