ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ವಿಚರಿಗಳು (ಉಭಯವಾಸಿಗಳು)

ವಿಕಿಸೋರ್ಸ್ದಿಂದ

ದ್ವಿಚರಿಗಳು (ಉಭಯವಾಸಿಗಳು) - ಮೀನುಗಳ ಮತ್ತು ಸರೀಸೃಪಗಳ ನಡುವಿನ ಕಶೇರುಕ ಪ್ರಾಣಿಗಳ ಒಂದು ವರ್ಗ(ಆಂಫಿಬಿಯ). ಈ ಪದವನ್ನು ಸರೀಸೃಪಗಳು, ದ್ವಿಚರಿಗಳು ಮತ್ತು ಕೆಲವು ಮೀನುಗಳನ್ನೊಳಗೊಂಡ ಪ್ರಾಣಿಗಳ ಗುಂಪಿನ ಹೆಸರಾಗಿ ಲಿನಿಯಸ್ ಹಾಗೂ ಮೀನುಗಳ ಮತ್ತು ಪಕ್ಷಿಗಳ ನಡುವಿನ ಎಲ್ಲ ಪ್ರಾಣಿಗಳ ಗುಂಪಿನ ಹೆಸರಾಗಿ ಕ್ಯೂವಿಯರ್ ಬಳಸಿದ್ದಾರೆ. ಸರೀಸೃಪ ಮತ್ತು ಈಗಿನ ದ್ವಿಚರಿಗಳು - ಇವೆರಡೂ ಒಂದೇ ಗುಂಪಿನ ಪ್ರಾಣಿಗಳೆಂದು ಪರಿಗಣಿಸಿ ಈ ಹೆಸರನ್ನೇ ಎಷ್ಟೋ ಪ್ರಾಣಿಶಾಸ್ತ್ರಜ್ಞರು ಬಳಸಿದ್ದರು. ಆದರೆ ಈಗ ಸರೀಸೃಪಗಳ ಮತ್ತು ದ್ವಿಚರಿಗಳ ವಿಶಿಷ್ಟ ಗುಣಗಳು ಸ್ಪಷ್ಟವಾಗಿ ಗೊತ್ತಾದ ಮೇಲೆ, ಈ ಎರಡು ಗುಂಪಗಳ ಪ್ರಾಣಿಗಳನ್ನು ಕಶೇರುಕ ಪ್ರಾಣಿಗಳ ಬೇರೇ ಬೇರೆ ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ.

ಪ್ರಥಮ ಭೂಕಶೇರುಕಗಳು: ನೂರಾರು ದಶಲಕ್ಷ ವರ್ಷಗಳ ಹಿಂದೆ ಡಿವೋನಿಯನ್ ಯುಗದಲ್ಲಿ ಹೇರಳವಾಗಿದ್ದ ಪ್ರಾಣಿಗಳೆಂದರೆ ವಿಭಿನ್ನ ರೂಪದ ಮೀನುಗಳು. ಈ ಮೀನುಗಳಲ್ಲಿ ಕೆಲವು ಸಾಕಷ್ಟು ಆಮ್ಲಜನಕವನ್ನು ಪಡೆಯಲು ತಮ್ಮ ಗಾಳಿಚೀಲಗಳನ್ನು ಉಪಯೋಗಿಸುತ್ತಿದ್ದವು. ಭಾರವಾದ ಎಲುಬು, ಈಜು ರೆಕ್ಕೆಗಳುಳ್ಳ ಕೆಲವು ಮೀನುಗಳ ಈಜುರೆಕ್ಕೆಗಳಲ್ಲಿ ಭೂ ಕಶೇರುಕಗಳ ಪಾದಗಳ ಮೂಲ ರಚನೆಯ ಎಲುಬುಗಳು ಇದ್ದವು. ಎಲ್ಲ ಕಶೇರುಕಗಳು ಈವರೆಗೂ ಜಲಚರಿಗಳಾಗಿದ್ದುವಲ್ಲದೆ, ಯಾವ ಕಶೇರುಕವೂ ಭೂಮಿಯ ಮೇಲೆ ಜೀವಿಸಲು ಸಮರ್ಥವಾಗಿರಲಿಲ್ಲ. ಮೀನಿನ ಹೋಲಿಕೆಯುಳ್ಳ ಇಂಥ ಪೂರ್ವಜರಲ್ಲಿ ಭಾರವಾದ ದೇಹವುಳ್ಳ ಕೆಲವು ಪ್ರಾಣಿಗಳು, ಹುಟ್ಟುಗಳಂತೆ ಇರುವ ಪಾದಗಳ ಸಹಾಯದಿಂದ ತಮ್ಮ ದೇಹವನ್ನು ಜೌಗು ಭೂಮಿಯಿಂದ ಎತ್ತರದ ಭೂಭಾಗಗಳಿಗೆ ಎಳೆದುಕೊಂಡು ಹೋಗಿರಲು ಸಾಧ್ಯವಾಗಿದ್ದಿರಬೇಕು. ಆದರೆ ಕ್ಷೀಣ ನಡಿಗೆಯಿಂದಾಗಿ ಮತ್ತು ಮೈ ಭಾಗ ಪೂರ್ತಿ ಒಣಗದ ಹಾಗೆ ಇರುವ ಸಲುವಾಗಿ ಅವು ನೀರಿನ ಬಳಿಯಲ್ಲಿಯೇ ಬಹಳ ಕಾಲವಿದ್ದಿರಬೇಕು. ಇವೇ ಪ್ರಥಮ ದ್ವಿಚರಿಗಳು. ಇಂಥ ಪ್ರಾಣಿಗಳಿಂದಲೇ ಈಗಿನ ದ್ವಿಚರಿ ವರ್ಗದ ಪ್ರಾಣಿಗಳು ಉಗಮಿಸಿರಬೇಕು. ಇವು ಎರಡು ಬಗೆಯ ಜೀವನವನ್ನು ನಡೆಸುತ್ತವೆ. ಅಂದರೆ ಮೊದಲು ತಮ್ಮ ಜೀವನವನ್ನು ಜಲಚರಿಗಳಾಗಿ ಪ್ರಾರಂಭಿಸಿ, ಅನಂತರ ತಮ್ಮ ದೇಹ ಮತ್ತು ರಚನೆಗಳಲ್ಲಿ ರೂಪ ಪರಿವರ್ತನೆಯನ್ನು ತೋರಿ ಭೂಜೀವಿಗಳಾಗಿ ಮಾರ್ಪಡುತ್ತವೆ. ಹೀಗೆ ಹಿಂದಿನ ಪೀಳಿಗೆಗಳಲ್ಲಿ ಆಗಿರಬಹುದಾದಂಥ ಬದಲಾವಣೆಗಳನ್ನು ಇಂದು ಬದುಕಿರುವ ಕೆಲವೇ ಆಧುನಿಕ ಪ್ರಭೇದಗಳ ಜೀವನಚರಿತ್ರೆಯಲ್ಲಿ ಸಂಕ್ಷೇಪವಾಗಿ ಕಾಣಬಹುದು. ಇಂದು ಜೀವಿಸಿರುವ ಮೂರು ಗುಂಪುಗಳ ಪ್ರತಿನಿಧಿಗಳೆಂದರೆ, ಕಪ್ಪೆಗಳು, ನೆಲಗಪ್ಪೆಗಳು, ಸ್ಯಾಲಮ್ಯಾಂಡರ್‍ಗಳು ಮತ್ತು ಇತ್ತಲೆಮಂಡಲಗಳು. ದ್ವಿಚರಿಗಳು ಅಸ್ತಿತ್ವಕ್ಕೆ ಬಂದಾಗ, ಎಲ್ಲ ಕಶೇರುಕಗಳೂ ಜಲಚರಿಗಳಾಗಿದ್ದವು. ಮೊದಲ ಬಾರಿಗೆ ಭೂಮಿಯ ಮೇಲೆ ಸಫಲ ಬಾಳ್ವೆ ನಡೆಸಿದ ಪ್ರಾಣಿಗಳೆಂದರೆ ದ್ವಿಚರಿಗಳು. ಆದರೆ, ಇವು ಜಲಚರ ಜೀವನಕ್ಕೆ ಇನ್ನೂ ಜೋತುಬಿದ್ದಿವೆ ಎಂಬುದನ್ನು ಇವುಗಳ ಸಂತಾನೋತ್ಪತ್ತಿಯ ರೀತಿ ಮತ್ತು ಜೀವನಚಕ್ರದ ಜಲಚರ ಮಜಲುಗಳಿಂದ ತಿಳಿಯಬಹುದು. ದ್ವಿಚರಿಗಳು ಪೂರ್ಣವಾಗಿ ಭೂವಾಸಿಗಳಾದರೂ ಕೆಲವು ಜೌಗು ಪ್ರದೇಶಗಳಲ್ಲಿ ಮಾತ್ರ ಬದುಕಿವೆ. ಬೇರೆ ಪ್ರಾಣಿವರ್ಗಗಳಿಗಿಂತ ವೈಶಿಷ್ಟ್ಯವಾಗುಳ್ಳ ಪಕ್ಷಿಗಳ ರೆಕ್ಕೆಗಳಂತೆ, ಸ್ತನಿಗಳ ಸ್ತನಗಳಂತೆ, ದ್ವಿಚರಿಗಳಲ್ಲಿ ಯಾವ ಅಪೂರ್ವವಾದ ವಿಶಿಷ್ಟ ಗುಣವೂ ಇಲ್ಲ. ಆದರೂ, ದ್ವಿಚರಿಗಳನ್ನು ಮೀನುಗಳಿಂದ ಮತ್ತು ಆಮ್ನಿಯೋಟಗಳಿಂದ ಸುಲಭವಾಗಿ ಗುರುತಿಸಬಹುದು.

ದ್ವಿಚರಿಗಳ ಮುಖ್ಯ ಲಕ್ಷಣಗಳು : 1 ಇವೆಲ್ಲವೂ ತಂಪು ರಕ್ತದ ಕಶೇರುಕಗಳು ; ತೇವಪೂರಿತ ಅಥವಾ ಒಣಚರ್ಮಧಾರಿಗಳು. ಇತ್ತಲೆಮಂಡಲಗಳನ್ನು ಬಿಟ್ಟರೆ ಉಳಿದವುಗಳ ಚರ್ಮದಲ್ಲಿ ಹುರುಪೆಗಳಿಲ್ಲ.

2 ಇತ್ತಲಮಂಡಲಗಳನ್ನು ಬಿಟ್ಟು ಮಿಕ್ಕ ಎಲ್ಲಾ ದ್ವಿಚರಿಗಳು ಭೂಮಿಯ ಮೇಲಿನ ಪ್ರಥಮ ಚತುಷ್ಪಾದಿಗಳು. ಈಜುರೆಕ್ಕೆಗಳಿಗಿಂತ ಬಲವಾದ ಅವಯವಗಳನ್ನು ಪಡೆದಿವೆ.

3 ಇವುಗಳ ಗೊದಮಾವಸ್ಥೆಯಲ್ಲಿ ಕರುಳಿನ ಕಮಾನುಗಳ ಮೇಲೆ ಕಿವಿರುಗಳನ್ನು ಕಾಣಬಹುದು. ಈ ಕಿವಿರುಗಳು ಕೆಲವು ಬಗೆಗಳಲ್ಲಿ ಜೀವನವಿಡೀ ಉಳಿದು ಬಿಡುವುವು. ಪ್ರೌಢಜೀವಿಗಳು ಶ್ವಾಸಕೋಶಗಳ ನೆರವಿನಿಂದ ಉಸಿರಾಡುತ್ತವೆ. ಇವುಗಳ ತೇವಪೂರಿತ ಚರ್ಮ ಅನುಷಂಗಿಕ ಶ್ವಾಸೇಂದ್ರಿಯವಾಗಿ ಸಹಾಯಕ.

4 ಕಾಲುಗಳಿದ್ದರೆ ಅವುಗಳಲ್ಲಿ ವಿಂಗಡಗೊಂಡ ಬೆರಳುಗಳುಂಟು. ಈಜು ರೆಕ್ಕೆಯ ಕಿರಣಗಳಿಲ್ಲದ ಮತ್ತು ಜೊತೆಯಿಲ್ಲದ ಈಜುರೆಕ್ಕೆಗಳು ಗೊದ ಮೊಟ್ಟೆ ಹಾಗೂ ಕೆಲವು ಪ್ರೌಢ ಜೀವಿಗಳಲ್ಲಿ ಸಾಮಾನ್ಯವಾಗಿ ಇರುತ್ತವೆ.

5 ಬದುಕಿರುವ ದ್ವಿಚರಿಗಳಲ್ಲಿ ಎಲ್ಲೋ ಅಪರೂಪಕ್ಕೆ ಹೊರಕಂಕಾಲ ಕಾಣಬರುತ್ತದೆ. ಆದರೆ, ಅಳಿದುಹೋದ ದ್ವಿಚರಿಗಳಲ್ಲಿ ಮೂಳೆಯ ಫಲಕಗಳ ರಕ್ಷಣಾ ಕವಚ ಇತ್ತು. ತಲೆಬುರುಡೆಯಲ್ಲಿ ಎರಡು ಆಕ್ಸಿಪಿಟಲ್ ಕಾಂಡೈಲುಗಳಿವೆ.

6 ಹೃದಯದಲ್ಲಿ ಒಂದು ಹೃತ್ಕುಕ್ಷಿ ಮತ್ತು ಹೃತ್ಕರ್ಣಗಳಿವೆ. ಅಂತೆಯೇ ಒಂದು ಕೋನಸ್ ಆರ್ಟಿರಿಯೋಸಸ್ ಮತ್ತು ಒಂದು ಸೈನಸ್ ವೀನೋಸಸ್ ಉಂಟು.

7 ಜೀರ್ಣಾಂಗ ವ್ಯವಸ್ಥೆ ಕ್ಲೋಯಕದ ಮೂಲಕ ಕೊನೆಗೊಳ್ಳುತ್ತದೆ. ಕ್ಲೋಯಕದ ಒಳಗೆ ಮೂತ್ರನಾಳಗಳು ಮತ್ತು ಜನನೇಂದ್ರಿಯ ನಾಳಗಳು ತೆರೆದಿವೆ. ಮುಂದುವರಿದ ಕಶೇರುಕಗಳ ಭ್ರೂಣದ ಅಲಂಟಾಯಿಸ್‍ಗೆ ಅನುರೂಪವಾದ ಇವುಗಳ ಮೂತ್ರಕೋಶ ಭ್ರೂಣದ ಕರುಳಿನ ಹಿಂಭಾಗದಿಂದ ಬೆಳೆಯುತ್ತದೆ.

8 ಭ್ರೂಣ ಭಂಡಾರ ವರ್ಣಕಗಳನ್ನು ಒಳಗೊಂಡಿದ್ದು ಅಂಡಗಳ ಒಂದು ಧ್ರುವದಲ್ಲಿರುತ್ತವೆ. ದ್ವಿಚರಿಗಳು ತತ್ತಿಗಳನ್ನು ಸಾಮಾನ್ಯವಾಗಿ ನೀರಿನೊಳಗೆ ಇಡುತ್ತವೆ. ಇವುಗಳ ತತ್ತಿಯ ಮೊದಲ ಹಂತದ ಬೆಳವಣಿಗೆಯಲ್ಲಿ ಅಸಮರೂಪಕ ಹಾಲೋಬ್ಲಾಸ್ಟಿಕ್ ವಿಧಾನದ ವಿಭಜನೆ ಕಾಣಬಹುದು. ಇವುಗಳ ಜೀವನ ಚಕ್ರದಲ್ಲಿ ಸಾಮಾನ್ಯವಾಗಿ ರೂಪಪರಿವರ್ತನೆ ಉಂಟು.

9 ಕೆಲವು ಆಧುನಿಕ ದ್ವಿಚರಿಗಳು ತತ್ತಿಗಳನ್ನು ನೀರಿನಲ್ಲಿ ಅಲ್ಲದೆ ಬೇರೆಡೆಗಳಲ್ಲೂ ಇಡುವುದುಂಟು. ಇಂಥವುಗಳಲ್ಲಿ ರೂಪ ಪರಿವರ್ತನೆ ಕಾಣಬರುವುದಿಲ್ಲ.

10 ತತ್ತಿಗಳಿಂದ ಹೊರಬರುವ ಗೊದ ಮೊಟ್ಟೆಗಳು ಜಲಚರಿಗಳಾಗಿದ್ದು, ರೂಪ ಪರಿವರ್ತನೆಗೊಂಡು, ನೆಲವಾಸಿ ಪ್ರೌಢಜೀವಿಗಳಾಗಿ ಬೆಳೆಯುವುವು. ಈ ರೀತಿ ಎರಡು ಬಗೆಯ ಜೀವನ ಚಕ್ರ ದ್ವಿಚರಿಗಳ ವಿಶೇಷ ಗುಣ. ಕೆಲವು ದ್ವಿಚರಿಗಳಲ್ಲಿ ರೂಪಪರಿವರ್ತನೆಯಿಲ್ಲದೇ ಪ್ರೌಢಜೀವಿಗಳನ್ನು ಹೋಲುವ ಸಣ್ಣ ಮರಿಗಳೇ ಜನ್ಮ ತಾಳುವುದುಂಟು.

11 ಚರ್ಮದಲ್ಲಿ ಬಹುಕೋಶ ಗ್ರಂಥಿಗಳು ಇವೆ. ಫುಪ್ಫುಸಗಳು ಸಾಮಾನ್ಯ ರಚನೆಯುಳ್ಳವು. ಹತ್ತು ಜೊತೆ ಕಪಾಲನರಗಳಿವೆ.

ಹೊರಚರ್ಮದ ಹೊರಗಿನ ಪದರ ಕುಗ್ಗಿಹೋಗಿ ಸ್ಟ್ರೇಟಮ್ ಕಾರ್ನಿಯಮ್ ಆಗಿರುವುದು ಮತ್ತು ಮೂಳೆಯ ಕಿವಿರು ಕವಚ ಇಲ್ಲದಿರುವುದು - ಇವೇ ಮೊದಲದ ಲಕ್ಷಣಗಳಿಂದ ದ್ವಿಚರಿಗಳನ್ನು ಮೀನುಗಳಿಂದ ಪ್ರತ್ಯೇಕಿಸಬಹುದು. ಪರಿವರ್ಧನೆಯಲ್ಲಿ ಆಮ್ನಿಯಾನ್ ಇಲ್ಲದಿರುವುದು ಹಾಗೂ ಹುರುಪೆ ಮತ್ತು ನಖಗಳಿಲ್ಲದಿರುವುದು - ಈ ಲಕ್ಷಣಗಳಿಂದ ದ್ವಿಚರಿಗಳನ್ನು ಸರಿಸೃಪಗಳಿಂದ ಬೇರ್ಪಡಿಸಬಹುದು. ಗ್ರೀನ್‍ಲೆಂಡಿನ ಸಿಹಿನೀರಿನ ನದಿಗಳಲ್ಲಿ ಸಿಕ್ಕಿರುವ ಇಕ್ತಿಯೊಸ್ಟೀಗ ಎಂಬುದು ಅತ್ಯಂತ ಪ್ರಾಚೀನ ದ್ವಿಚರಿ.

ಇಂದು ಬದುಕುಳಿದಿರುವ ದ್ವಿಚರಿ ಜಾತಿಗಳು : ಈ ವರ್ಗದಲ್ಲಿ ಹೆಚ್ಚುಕಡಿಮೆ 2000 ಪ್ರಭೇದಗಳಿವೆ. ಜಗತ್ತಿನೆಲ್ಲೆಡೆ ಇವು ಕಾಣಬರುವುವು. 80 ಪ್ರಭೇದಗಳು ಉಷ್ಣವಲಯ ನಿವಾಸಿಗಳು. ಕಪ್ಪೆಗಳ ಪೂರ್ವಜರು ಸುಮಾರು 20 ಕೋಟಿ ವರ್ಷಗಳ ಹಿಂದೆ ಟ್ರಯಾಸಿಕ್ ಕಾಲದಲ್ಲಿ ಕಾಣಿಸಿಕೊಂಡವೆಂದು ಹೇಳಲಾಗಿದೆ. ಈಗಿನ ಕಪ್ಪೆಗಳು ಸುಮಾರು 16 ಕೋಟಿ ವರ್ಷಗಳ ಹಿಂದೆ ಜುರಾಸಿಕ್ ಕಾಲದಲ್ಲಿ ಕಾಣಿಸಿಕೊಂಡವು. ಇಂದು ಬದುಕಿರುವ ದ್ವಿಚರಿಗಳಲ್ಲಿ ಚೆನ್ನಾಗಿ ಪರಿಚಿತವಾಗಿರುವೆಂದರೆ ಕಪ್ಪೆಗಳು. ಸ್ವಲ್ಪಮಟ್ಟಿಗೆ ಪರಿಚಿತವಾಗಿರುವ ಪ್ರಾಣಿಗಳು ಸ್ಯಾಲಮ್ಯಾಂಡರ್‍ಗಳು. ಇವಕ್ಕೆ ನ್ಯೂಟ್‍ಗಳು, ಎಫ್ಟ್‍ಗಳು, ವಸಂತ ಹಲ್ಲಿಗಳು ಮತ್ತು ನೀರು ನಾಯಿಗಳೆಂಬ ಹೆಸರೂ ಉಂಟು. ಇವು ಸುಮಾರು 200 ಪ್ರಭೇದಗಳನ್ನು ಒಳಗೊಂಡಿವೆ. ಯೂರೋಪ್, ಏಷ್ಯ, ಮತ್ತು ಅಮೆರಿಕಗಳಲ್ಲಿ ಕಾಣಬಹುದು. ಸುಮಾರು 14 ಕೋಟಿ ವರ್ಷಗಳ ಹಿಂದೆ ಜುರಾಸಿಕ್ ಕಾಲದ ಉತ್ತರಾರ್ಧದಲ್ಲಿ, ಇವು ಉಗಮಿಸಿದವೆನ್ನಲಾಗಿದೆ.

ದ್ವಿಚರಿಗಳಲ್ಲಿ ಹೆಚ್ಚು ಪರಿಚಿತವಿಲ್ಲದ ಪ್ರಾಣಿಗಳೆಂದರೆ, ಇತ್ತಲೆಮಂಡಲಗಳು. ಅಮೆರಿಕ, ಆಫ್ರಿಕ ಮತ್ತು ಏಷ್ಯ ಖಂಡಗಳಲ್ಲಿ ಸುಮಾರು 75 ಪ್ರಭೇದಗಳನ್ನು ಕಾಣಬಹುದು.

ಇವುಗಳಲ್ಲಿ ದೇಹ ರಚನಾ ಪರಿಮಿತಿ ಇದ್ದರೂ ಪ್ರಪಂಚದ ಎಲ್ಲೆಡೆಗಳಲ್ಲೂ ಇವು ಬದುಕಿರುವುದು ಇವುಗಳ ಗಮನೀಯ ಸಾಧನೆ. ವಿಭಿನ್ನ ವಾಯುಗುಣಕ್ಕೆ ಹೊಂದಿಕೊಳ್ಳಬಲ್ಲ ಕಪ್ಪೆಗಳು ಜೀವಂತ ದ್ವಿಚರಿಗಳಲ್ಲೇ ಹೆಚ್ಚಿನ ಪರಿವರ್ತನಾ ಶೀಲತೆಯುಳ್ಳ ಪ್ರಾಣಿಗಳಾಗಿವೆ.

ಬಂಧನದಲ್ಲಿಟ್ಟ ದ್ವಿಚರಿಗಳ ವೀಕ್ಷಣೆಯ ಆಧಾರದಿಂದ ಇವುಗಳ ಆಯಸ್ಸನ್ನು ತಿಳಿಯಲಾಗಿದೆ. ಉದಾಹರಣೆಗೆ ಯೂರೋಪಿನ ನೆಲಗಪ್ಪೆ (ಬ್ಯೂಫೊ) 36 ವರ್ಷಗಳು ಬಂಧನದಲ್ಲಿ ಬದುಕಿದ್ದ ದಾಖಲೆ ಇದೆ. ಸೂಲಗಿತ್ತಿ ಕಪ್ಪೆಯಾದ ಬಾಂಬಿನ ಎಂಬುದು 29 ವರ್ಷ. ಜಪಾನಿನ ದೈತ್ಯ ಸ್ಯಾಲಮ್ಯಾಂಡರ್ 60 ವರ್ಷ, ಅಮೆರಿಕದ ಚುಕ್ಕೆ ಸ್ಯಾಲಮ್ಯಾಂಡರ್ 28 ವರ್ಷ ಮತ್ತು ಯೂರೋಪಿನ ಸ್ಯಾಲಮ್ಯಾಂಡರ್ 10-30 ವರ್ಷದ ವರೆಗೆ ಬದುಕಿರುವುದನ್ನು ದಾಖಲಿಸಲಾಗಿದೆ.

ದೇಹರಚನೆ : ದ್ವಿಚರಿಗಳು ದ್ವಿಪಾಶ್ರ್ವ ಸಮಾಂಗತೆಯನ್ನು ತೋರುವ ಕಶೇರುಕಗಳು. ಸಾಮಾನ್ಯವಾಗಿ ದೇಹದ ಮುಂದಿನ ಭಾಗ ಮೊನಚಾಗಿದ್ದು, ಹಿಂದಿನ ಭಾಗ ಮೊಂಡು ಅಥವಾ ಬಾಲವುಳ್ಳದ್ದಾಗಿದೆ. ದೇಹದ ಮೇಲ್ಭಾಗ ಸಾಮಾನ್ಯವಾಗಿ ಹಲವಾರು ಬಣ್ಣಗಳಿಂದ ಕೂಡಿದ್ದು ತಳಭಾಗ ಮಾಸಲು ಬಿಳಿ ಬಣ್ಣದ್ದು. ದೇಹದಲ್ಲಿ ರುಂಡಮುಂಡಗಳ ವಿಂಗಡಣೆ ಸ್ಪಷ್ಟವಾಗಿಲ್ಲ. ಕಪ್ಪೆಗಳಲ್ಲಿ ಎರಡು ಕೈಗಳು ಮತ್ತು ಎರಡು ಕಾಲುಗಳುಂಟು. ಕಾಲುಗಳು ಜಾಲಪಾದಿಗಳಾಗಿವೆ. ಸ್ಯಾಲಮ್ಯಾಂಡರುಗಳಲ್ಲಿ ಸಾಮಾನ್ಯವಾಗಿ ನಾಲ್ಕು ಕಾಲುಗಳು ಮತ್ತು ಒಂದು ಬಾಲವುಂಟು. ಆದರೆ ಇತ್ತಲೆಮಂಡಲಗಳಲ್ಲಿ ಕೈಕಾಲುಗಳಿಲ್ಲ. ಮೋಟು ಬಾಲ ಮಾತ್ರ ಉಂಟು. ದ್ವಿಚರಿಗಳು ಪಂಚಾಂಗುಲೀಯಗಳು.

ಬಾಯಲ್ಲಿ ಮೇಲಿನ ಮತ್ತು ಕೆಳದವಡೆಗಳಿವೆ. ಮೇಲ್ದವಡೆಯ ಒಳ ಅಂಚಿನಲ್ಲಿ ಏಕರೂಪದ ಹಲ್ಲುಗಳಿವೆ. ಕೆಲವು ಪ್ರಭೇದಗಳ ಕೆಳದವಡೆಯಲ್ಲೂ ಹಲ್ಲುಗಳಿರುವುದುಂಟು. ಕೆಳದವಡೆಯ ಹಿಂಭಾಗದಲ್ಲಿ ಅಂಟಿನಿಂದ ಆವೃತವಾದ ನಾಲಿಗೆ ಇದೆ. ತಲೆಯ ಮುಂತುದಿಯಲ್ಲಿ ಮೇಲಕ್ಕೆ ತೆರೆದಿರುವಂತೆ ಎರಡು ಹೊರ ನಾಸಿಕರಂಧ್ರಗಳಿವೆ. ತಲೆಯ ಅಕ್ಕಪಕ್ಕದಲ್ಲಿ ಎರಡು ಕಣ್ಣುಗಳು; ಕಣ್ಣುಗಳ ಹಿಂದೆ ಎರಡು ಕಿವಿ ತಮಟೆಗಳು ಉಂಟು. ದೇಹದ ಹಿಂಬದಿಯಲ್ಲಿ ಕ್ಲೋಯಕ ರಂಧ್ರವಿದೆ. ದ್ವಿಚರಿಗಳಲ್ಲಿ ಪ್ರತ್ಯೇಕ ಗುದದ್ವಾರವಿಲ್ಲ. ದ್ವಿಚರಿಗಳ ಉಬ್ಬಿಕೊಂಡತಿರುವ ಕಣ್ಣುಗಳಲ್ಲಿ ಸ್ವಲ್ಪಮಟ್ಟಿಗೆ ಚಲಿಸುವ ಮೇಲಿನ ಕಣ್ಣುರೆಪ್ಪೆ, ಚಲಿಸದ ಕೆಳಗಿನ ಕಣ್ಣುರೆಪ್ಪೆ ಮತ್ತು ಪಾರದರ್ಶಕವಾದ ಮೂರನೆಯ ರೆಪ್ಪೆ ಉಂಟು.

ದ್ವಿಚರಿಗಳ ಧರ್ಮ ದೇಹದ ಸ್ನಾಯುಗಳಿಗೆ ಸಡಿಲವಾಗಿ ಅಂಟಿಕೊಂಡಿದೆ. ಇದು ಸಾಧಾರಣವಾಗಿ ನುಣುಪಾಗಿಯೂ ತೇವಪೂರಿತವಾಗಿಯೂ ಇದೆ. ಭೂವಾಸಿ ದ್ವಿಚರಿಗಳಲ್ಲಿ ಚರ್ಮ ಒರಟಾಗಿ ಒಣಗಿದ್ದು, ಅಲ್ಲಲ್ಲಿ ಗುಬುಟುಗಳಿಂದ ಕೂಡಿದೆ. ಚರ್ಮ ಸದಾ ತೇವಪೂರಿತವಾಗಿರುವುದಕ್ಕೆ ಲೋಳೆ ಗ್ರಂಥಿಗಳು ಸ್ರವಿಸುವ ಲೋಳೆಯೇ ಕಾರಣ. ಇಂಥ ಚರ್ಮಕ್ಕೆ ಗಾಳಿಯಲ್ಲಿರುವ ಆಕ್ಸಿಜನ್ನನ್ನು ಸ್ವಲ್ಪ ಮಟ್ಟಿಗೆ ಹೀರಿಕೊಳ್ಳುವ ಶಕ್ತಿಯಿರುವುದರಿಂದ ಇದು ಆನುಷಂಗಿಕ ಶ್ವಾಸೇಂದ್ರಿಯವೆನಿಸಿದೆ. ಹೊರ ಚರ್ಮದಲ್ಲಿ ವರ್ಣಕಗಳ ಕೋಶಗುಂಪುಗಳುಂಟು. ಈ ಕೋಶಗಳಿಗೆ ಮಿದುಳಿನ ನರಗಳ ನೇರ ಸಂಪರ್ಕವಿರುವುದರಿಂದ ಪರಿಸರಕ್ಕೆ ತಕ್ಕಂತೆ ಚರ್ಮದ ಬಣ್ಣವನ್ನು ಬದಲಾಯಿಸಲು ಅನುವಾಗಿದೆ. ಪರಿಸರದ ಆದ್ರ್ರತೆ, ಬಣ್ಣ ಬದಲಾವಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಚರ್ಮದ ಅನೇಕ ಕಡೆಗಳಲ್ಲಿ ಸೂಕ್ಷ್ಮ ಮಲಿನ ರಕ್ತನಾಳಗಳೂ ಸೂಕ್ಷ್ಮ ನರಗಳೂ ಸ್ಪರ್ಶೇಂದ್ರಿಯ ವಲಯಗಳೂ ಉಂಟು.

ಕಂಕಾಲ: ಇದು ಪ್ರಧಾನವಾಗಿ ಮೂಳೆಯಿಂದ ರಚಿತವಾಗಿದೆ. ಕೆಲವು ಮೃದ್ವಸ್ಥಿಗಳೂ ಉಂಟು. ಕಂಕಾಲದಲ್ಲಿ ಎರಡು ವಿಧ : 1 ತಲೆಬುರುಡೆ ಮತ್ತು ಬೆನ್ನುಹುರಿಗಳನ್ನು ಒಳಗೊಂಡ ಅಕ್ಷ ಕಂಕಾಲ (ಆಕ್ಸಿಯಲ್ ಸ್ಕೆಲಿಟನ್). 2 ಅಂಗಗಳ ಮತ್ತು ಕಟಿಬಂಧಗಳ ಮೂಳೆಯ ರಚನೆಗಳನ್ನು ಒಳಗೊಂಡ ಉಪಾಂಗ ಕಂಕಾಲ (ಅಪೆಂಡಿಕ್ಯುಲಾರ್ ಸ್ಕೆಲಿಟನ್). ದ್ವಿಚರಿಗಳ ದೇಹದಲ್ಲಿ ಭುಜದ ಪಟ್ಟಿ ಮತ್ತು ಸೊಂಟದ ಪಟ್ಟಿ ಎಂಬ ಎರಡು ಕಟಿಬಂಧಗಳಿವೆ. ಅಕ್ಷ ಕಂಕಾಲದ ಬೆನ್ನುಹುರಿಯಲ್ಲಿ 9 ಕಶೇರುಗಳು ಮತ್ತು ಒಂದು ಯೂರೊಸ್ಟೈಲ್ ಇವೆ. ಪ್ರೋಸೀಲಸ್, ಆಂಫಿಸೀಲಸ್ ಮತ್ತು ಒಫಿಸ್ತೋಸೀಲಸ್ ಎಂಬ ಮೂರು ಬಗೆಯ ಕಶೇರುಗಳುಂಟು. ಬೆನ್ನುಹುರಿಯ ಮುಖಾಂತರ ಮಿದುಳು ಬಳ್ಳಿ ಹಾದು ಹೋಗಿದೆ. ಬೆನ್ನುಹುರಿಯ ಮುಂಭಾಗಕ್ಕೆ ತಲೆಬುರುಡೆಯೂ, ಹಿಂಭಾಗಕ್ಕೆ ಸೊಂಟಪಟ್ಟಿಯೂ ಸೇರಿಕೊಂಡಿವೆ. ತಲೆಬುರುಡೆಯಲ್ಲಿ ಮಿದುಳನ್ನು ರಕ್ಷಿಸುವ ಮೂಳೆಯ ಪೆಟ್ಟಿಗೆ (ಕ್ರೇನಿಯಮ್) ಇದೆ. ತಲೆಬುರುಡೆ ಅನೇಕ ಮೂಳೆಗಳು ಮತ್ತು ಮೃದ್ವಸ್ಥಿಗಳಿಂದ ಕೂಡಿದೆ. ಇದರ ಹಿಂಭಾಗದ ಎರಡು ಆಕ್ಸಿಪಿಟಲ್ ಕಾಂಡೈಲುಗಳು ಬೆನ್ನುಹುರಿಯ ಮೊದಲನೆಯ ಕಶೇರುವಾದ ಅಟ್ಲಸಿನೊಂದಿಗೆ ಸೇರಿಕೊಂಡಿವೆ. ತಲೆಬುರುಡೆಯ ಶ್ರವಣಕೋಶದ ಭಾಗ ಮೃದ್ವಸ್ಥಿಯಿಂದ ರಚಿತವಾಗಿದೆ. ತಲೆಬುರುಡೆಯ ಮೇಲ್ಭಾಗ ಮೇಲ್ದವಡೆಯ ಮತ್ತು ತಳಭಾಗ ಕೆಳದವಡೆಯ ಆಧಾರವಾಗಿವೆ. ಉಪಾಂಗಗಳ ಕಂಕಾಲದ ಭಾಗಗಳೆಂದರೆ, ಕಟಿಬಂಧಗಳು ಮತ್ತು ಕೈಕಾಲುಗಳ ಮೂಳೆಗಳು. ದ್ವಿಚರಿಗಳಲ್ಲಿರುವ ಎರಡು ವಿಧ ಕಟಿಬಂಧಗಳಲ್ಲಿ ಭುಜಪಟ್ಟಿ ಎದೆಯ ಭಾಗದಲ್ಲಿದ್ದು ಹೃದಯ ಮತ್ತು ಫುಪ್ಪುಸಗಳನ್ನು ರಕ್ಷಿಸುತ್ತದೆ. ಕೈಗಳ ಅಥವಾ ಮುಂಗಾಲುಗಳ ಮೂಳೆಗಳಿಗೆ ಭುಜದ ಕಟಿಬಂಧ ಆಧಾರವನ್ನು ಒದಗಿಸಿದೆ. ಕಟ್ಯಸ್ಥಿವಲಯ ನಡುವಿನ ಭಾಗದಲ್ಲಿದ್ದು ಬೆನ್ನುಹುರಿಗಳೂ ಕಾಲುಗಳ ಮೂಳೆಗಳಿಗೂ ಆಧಾರವಾಗಿದೆ. ಭುಜಾಸ್ಥಿವಲಯಗಳು ಕಪ್ಪೆ ಮತ್ತು ಸ್ಯಾಲಮ್ಯಾಂಡರುಗಳಲ್ಲಿ ಭಿನ್ನವಾಗಿದ್ದರೂ ಕೂಡ ಒಂದೇ ರೀತಿಯ ಮೂಲ ರಚನೆಯಿಂದ ಉತ್ಪತ್ತಿಯಾಗಿವೆ.

ಸ್ನಾಯು ವ್ಯವಸ್ಥೆ : ಬೇರೆ ಪ್ರಾಣಿಗಳಲ್ಲಿರುವಂತೆಯೆ ದ್ವಿಚರಿಗಳಲ್ಲಿ ಕೂಡ ಎಲ್ಲ ರೀತಿಯ ಚಲನೆಯೂ ದೇಹದ ವಿವಿಧ ಸ್ನಾಯುಗಳಿಂದ ನಡೆಯುತ್ತದೆ. ಸ್ನಾಯುಗಳಲ್ಲಿ ಎರಡು ವಿಧ : 1 ಮಿಸೋಡರ್ಮಿನಿಂದ ರೂಪುಗೊಂಡಿರುವ ಅನೈಚ್ಛಿಕ ಸ್ನಾಯುಗಳು. ಇವನ್ನು ಜೀರ್ಣಾಂಗಗಳು, ಹೊಟ್ಟೆ ಮತ್ತು ರಕ್ತನಾಳಗಳಲ್ಲಿ ಕಾಣಬಹುದು. 2 ಮಯೊಟೋಮುಗಳಿಂದ ರೂಪುಗೊಂಡಿರುವ ಪಟ್ಟಿ ಐಚ್ಛಿಕ ಸ್ನಾಯುಗಳು. ಇವು ದೇಹಭಿತ್ತಿಯ ಮತ್ತು ಅಂಗಾಂಗಳ ಚಲನೆಗೆ ಸಹಕಾರಿಯಾಗಿರುವುದಲ್ಲದೆ ಅನೇಕ ಮೂಳೆಗಳು ಒಂದಕ್ಕೊಂದು ಅಂಟಿಕೊಂಡಿರುವಂತೆ ಮಾಡುತ್ತದೆ. ದ್ವಿಚರಿಗಳ ದೇಹದ ಎಲ್ಲ ಸ್ನಾಯುಗಳು ನರಮಂಡಲದ ಕೇಂದ್ರವಾದ ಮಿದುಳಿನ ಹತೋಟಿಯಲ್ಲಿದ್ದರೂ ಹೊಟ್ಟೆ ಭಾಗದ ಸ್ನಾಯುಗಳು ಸಂಕುಚಿತವಾದಾಗ, ನೇರ ಚಲನೆಯನ್ನು ತೋರಿಸುತ್ತವೆ. ಉದಾಹರಣೆಗೆ ಕಪ್ಪೆಯ ಹೃದಯವನ್ನು ದೇಹದಿಂದ ಬೇರ್ಪಡಿಸಿದಾಗ ಬಹಳ ಹೊತ್ತು ಹೃದಯ ಬಡಿದುಕೊಳ್ಳುವುದು. ದ್ವಿಚರಿಗಳು ತಂಪು ರಕ್ತದ ಪ್ರಾಣಿಗಳಾದ್ದರಿಂದ ಇವುಗಳ ದೇಹದ ಸ್ನಾಯುಗಳು ಕೊಬ್ಬಿ ಬೆಳೆಯುವುದಿಲ್ಲ.

ಜೀರ್ಣಾಂಗ ವ್ಯವಸ್ಥೆ : ತಲೆಯ ತುದಿಯಲ್ಲಿ ಬಾಯಿ ಉಂಟು. ಬಾಯಿ ಮೇಲು ಮತ್ತು ಕೆಳದವಡೆಗಳಿಂದ ಕೂಡಿದೆ. ನಾಲಗೆಗೆ ಚಲನ ಸಾಮಥ್ರ್ಯ ಇದೆಯಾಗಿ ಇದು ಆಹಾರವನ್ನು ಹಿಡಿಯುವ ಮತ್ತು ನುಂಗುವ ಕಾರ್ಯಕ್ಕೆ ಸಹಾಯಕವಾಗಿದೆ. ನಾಲಗೆ ಮತ್ತು ಅಂಗುಳಿನಲ್ಲಿ ರುಚಿ ಕುಡಿಗಳು ಉಂಟು. ಜೀರ್ಣಾಂಗಗಳ ವ್ಯವಸ್ಥೆಯ ಒಳ ಅಂಚಿನಿಂದ ಲೋಳೆ ಸ್ರವಿಸಿ, ಆಹಾರ ಸುಲಭವಾಗಿ ಮುಂದೆ ಚಲಿಸಲು ಅನುಕೂಲವಾಗಿದೆ. ಆಹಾರ ಬಾಯಿಂದ ಗಂಟಲ ಮುಖಾಂತರ ಅನ್ನನಾಳಕ್ಕೆ ಬಂದು ಜಠರವನ್ನು ಸೇರುತ್ತದೆ. ಜಠರ ದೇಹದ ಎಡಭಾಗಕ್ಕಿದ್ದು ಉಬ್ಬಿದ ಕೊಳವೆಯಂತಿದೆ. ಇದರ ಒಳಭಾಗ ಅನೇಕ ಮಡಿಕೆಗಳಿಂದ ಕೂಡಿದ್ದು ಜಠರ ಗ್ರಂಥಿಗಳನ್ನೊಳಗೊಂಡಿದೆ. ಬೇಡದ ಆಹಾರ ಪದಾರ್ಥ ಆಕಸ್ಮಿಕವಾಗಿ ಜಠರವನ್ನು ಸೇರಿದರೆ, ದ್ವಿಚರಿಗಳು ಜಠರವನ್ನು ಬಾಯಿ ತನಕ ಉಬ್ಬಿಸಿ, ಅಂಥ ಆಹಾರವನ್ನು ಹೊರಗೆ ಹಾಕುವ ವಿಚಿತ್ರ ಗುಣವನ್ನು ತೋರುವುವು. ಅನಿಯಮಿತ ಕಾಲಗಳಲ್ಲಿ ಆಹಾರ ಸಿಗುವುದರಿಂದ ದ್ವಿಚರಿಗಳು ಜಠರವನ್ನು ಆಹಾರ ಶೇಖರಣೆಗೂ ಉಪಯೋಗಿಸುವುವು. ಇದರಿಂದಾಗಿ ಜಠರ ತನ್ನ ಶಕ್ತಿಗೂ ಮೀರಿ ಆಹಾರವನ್ನೂ ಇರಿಸಿಕೊಳ್ಳುವುದೂ ಉಂಟು. ಜಠರದಲ್ಲಿ ಅರ್ಧ ಜೀರ್ಣಗೊಂಡ ಆಹಾರ ಕರುಳಿಗೆ ಸಾಗುತ್ತದೆ. ದ್ವಿಚರಿಯ ಕರುಳು ಸುತ್ತುಗಟ್ಟಿದ ಕೊಳವೆಯಂತೆ ಉದ್ದವಾಗಿದೆ. ಕರುಳುಭಿತ್ತಿಯ ಒಳಭಾಗದಲ್ಲಿ ಸೂಕ್ಷ್ಮವಾದ ರಚನೆಗಳುಂಟು. ಆಹಾರ ಜೀರ್ಣಗ್ರಂಥಿಗಳಿಂದ ಮೇದೋಜೀರಕರಸ ಮತ್ತು ಪಿತ್ತರಸ ಕರುಳಿನೊಳಕ್ಕೆ ಸೇರುವುದಲ್ಲದೆ ಇವುಗಳ ಜೊತೆಗೆ ಕರುಳಿನ ರಸವೂ ಸೇರಿ ಆಹಾರವನ್ನು ಪೂರ್ತಿಯಗಿ ಜೀರ್ಣಿಸುತ್ತವೆ. ಜೀರ್ಣವಾದ ಆಹಾರವನ್ನು ಕರುಳಿನ ಲೋಮಗಳು ಹೀರಿಕೊಂಡು ಆಹಾರವನ್ನು ರಕ್ತಗತ ಮಾಡುತ್ತವೆ. ಕರುಳಿನ ಮುಂಭಾಗಕ್ಕೆ ಡಿಯೋಡಿನಮ್ ಮತ್ತು ಹಿಂಭಾಗಕ್ಕೆ ಇಲಿಯಮ್ ಎಂದು ಹೆಸರು. ಜೀರ್ಣವಾಗದ ಆಹಾರ ಇಲಿಯಮಿನಿಂದ ಹೊರಟು ಅದರ ಹಿಂದಿನ ಭಾಗವಾದ ಮಲಾಶಯಕ್ಕೆ ಬಂದು ಅನಂತರ ಜೀರ್ಣಾಂಗ ವ್ಯವಸ್ಥೆಯ ಕೊನೆಯಲ್ಲಿರುವ ಕ್ಲೋಯಕಕ್ಕೆ ಬಂದು ಹೊರ ಬೀಳುತ್ತವೆ. ಇತರ ಪ್ರಾಣಿಗಳಂತೆ ಇವುಗಳಲ್ಲಿಯೂ ಮೇದೊಜೀರಕ ಮತ್ತು ಪಿತ್ತರಸ ಗ್ರಂಥಿಗಳಿವೆ. ಪ್ರೌಢ ದ್ವಿಚರಿಗಳು ಹುಳುಹುಪ್ಪಟೆ ಮತ್ತು ಇತರ ಕಶೇರುಕಗಳನ್ನು ತಿನ್ನುವುವು. ದ್ವಿಚರಿಗಳು ದೀರ್ಘಕಾಲ ಉಪವಾಸವಿರಬಲ್ಲವು. ಪ್ರೋಟಿಯಸ್ ಒಂದು ವರ್ಷ ಮತ್ತು ಆಕ್ಸಲಾಟಲ್ ಎರಡು ವರ್ಷಗಳ ಕಾಲ ಆಹಾರ ಸೇವಿಸದೆ ಬದುಕಿದ್ದ ನಿದರ್ಶನಗಳುಂಟು. ಇದಕ್ಕೆ ಕಾರಣ ಇವುಗಳ ಕ್ಷೀಣಗತಿಯ ಚಯಾಪಚಯ ಕ್ರಿಯೆ. ಹೀಗೆ ಉಪವಾಸವಿರುವ ಕಾಲದಲ್ಲಿ ಇವು ತಮ್ಮ ದೇಹದ ಅಂಗಾಂಶಗಳಲ್ಲಿ ಸಂಗ್ರಹವಾಗಿರುವ ಆಹಾರವನ್ನು ಉಪಯೋಗಿಸುವುವುವೆಂದು ಹೇಳಲಾಗಿದೆ.

ರಕ್ತಪರಿಚಲನಾಕ್ರಮ : ರಕ್ತಪರಿಚಲನಾಕ್ರಮದ ಮುಖ್ಯ ಅಂಗ ಹೃದಯ. ಹೃದಯದಲ್ಲಿ ಮೂರು ಕೋಣೆಗಳಿವೆ. ಎರಡು ಹೃತ್ಕರ್ಣಗಳು ಮತ್ತು ಒಂದು ಹೃತ್ಕುಕ್ಷಿ - ಇವೇ ಈ ಮೂರು ಕೋಣೆಗಳು. ಹೃದಯದ ಸುತ್ತ ಇಪ್ಪದರದ ಪೆರಿಕಾರ್ಡಿಯಮ್ ಉಂಟು. ಬಲಹೃತ್ಕರ್ಣ ದೇಹದ ಮಲಿನ ರಕ್ತವನ್ನು ಪಡೆಯುತ್ತದೆ. ಎಡಹೃತ್ಕರ್ಣ ಫುಪ್ಪುಸಗಳಿಂದ ಶುದ್ಧರಕ್ತವನ್ನು ಪಡೆಯುತ್ತದೆ. ಎರಡೂ ಹೃತ್ಕರ್ಣಗಳಿಂದ ರಕ್ತ ಹೃತ್ಕುಕ್ಷಿಯನ್ನು ಪ್ರವೇಶಿಸುತ್ತದೆ. ದೇಹದ ಮಲಿನ ರಕ್ತ ಮೂರು ಮುಖ್ಯ ಮಲಿನ ರಕ್ತನಾಳಗಳ ಮೂಲಕ ಹೃದಯಕ್ಕೆ ಬಂದು ಸೇರುತ್ತದೆ. ತಲೆ ಮತ್ತು ಮುಂಗಾಲುಗಳ ಭಾಗಗಳಿಂದ ಬರುವ ಎರಡು ಪ್ರೀಕೇವಲ್ ಮಲಿನ ರಕ್ತನಾಳಗಳು ಮತ್ತು ದೇಹದ ಹಿಂಭಾಗದಿಂದ ಬರುವ ಒಂದು ಪೋಸ್ಟ್‍ಕೇವಲ್, ಮಲಿನ ರಕ್ತನಾಳ ಹೃದಯದ ಮೇಲ್ಭಾಗದಲ್ಲಿರುವ ಮಲಿನ ರಕ್ತಕೋಶದ ಸೈನಸ್ ವೀನೋಸಸ್ ಮೂಲಕ ಬಲಹೃತ್ಕರ್ಣವನ್ನು ತಲುಪುತ್ತದೆ. ಹೃದಯ ಮಲಿನ ರಕ್ತವನ್ನು ಫುಪ್ಪುಸಗಳಿಗೆ ಕಳುಹಿಸಿ ಅಲ್ಲಿಂದ ಶುದ್ಧರಕ್ತವನ್ನು ಪಡೆಯುತ್ತದೆ. ಹೃತ್ಕುಕ್ಷಿಯ ಬಲಭಾಗದಲ್ಲಿ ಮಲಿನ ರಕ್ತವೂ ಎಡಭಾಗದಲ್ಲಿ ಶುದ್ಧರಕ್ತವೂ ಇದ್ದು, ಒಂದರೊಡನೊಂದು ಸೇರಿಕೊಳ್ಳದಿರುವುದು ದ್ವಿಚರಿಗಳ ವೈಶಿಷ್ಟ್ಯ. ಹೃದಯ ಸಂಕುಚಿತವಾದಾಗ, ಹೃದಯದ ತಳಭಾಗದಲ್ಲಿರುವ ಕೋನಸ್ ಆರ್ಟೀರಿಯೋಸಸ್ ಮೂಲಕ ರಕ್ತ ದೇಹದ ಎಲ್ಲ ಭಾಗಗಳಿಗೂ ಹರಿಯುತ್ತದೆ. ಕೋನಸ್ ಆರ್ಟೀರಿಯೋಸಸ್ ಹೃದಯದಿಂದ ಹೊರಟು ಎರಡು ಕವಲುಗಳಾಗಿ ಒಡೆಯುತ್ತದೆ. ಒಂದೊಂದು ಕವಲೂ ಮತ್ತೆ ಮೂರು ಕವಲು ರಕ್ತನಾಳಗಳಾಗಿ ವಿಭಾಗವಾಗುತ್ತದೆ. ಮುಂದಿನ ಕೆರೋಟಿಡ್ ಕವಲು ತಲೆಗೂ ಮಧ್ಯದ ಸಿಸ್ಟಮಿಕ್ ಕವಲು ದೇಹದ ಇತರ ಭಾಗಗಳಿಗೂ ಮತ್ತು ಹಿಂದಿನ ಪಲ್ಮೋಕ್ಯುಟೇನಿಯಸ್ ಕವಲು ಫುಪ್ಪುಸಗಳಿಗೂ ರಕ್ತವನ್ನು ಒಯ್ಯುತ್ತದೆ. ಎರಡೂ ಕಡೆಯ ಸಿಸ್ಟಮಿಕ್ ಕವಲುಗಳು ಹೃದಯದ ಹಿಂಭಾಗದ ತಳಭಾಗದಲ್ಲಿ ಸೇರಿಕೊಂಡು, ಮುಖ್ಯ ಶುದ್ಧರಕ್ತನಾಳವಾಗಿ ದೇಹದ ಎಲ್ಲ ಅಂಗಾಂಗಗಳಿಗೂ ರಕ್ತವನ್ನು ಸರಬರಾಜು ಮಾಡುತ್ತವೆ. ಮಲಿನ ರಕ್ತ ಪರಿಚಲನೆಯಲ್ಲಿ ರೀನೋಪೋರ್ಟಲ್ ವ್ಯವಸ್ತೆಯುಂಟು. ಇದರಲ್ಲಿ ಹಿಂದಿನ ಕಾಲುಗಳಿಂದ ಬರುವ ಮಲಿನ ರಕ್ತನಾಳಗಳು ತಮ್ಮ ಹೆಚ್ಚಿನ ರಕ್ತವನ್ನು ಮೂತ್ರಪಿಂಡಗಳಿಗೆ ತಂದು ಸುರಿಯುತ್ತವೆ. ರಕ್ತದಲ್ಲಿ ದ್ರವರೂಪದ ಪ್ಲಾಸ್ಮ ಜೊತೆಗೆ ಬಿಳಿರಕ್ತಕಣಗಳೂ ಕೆಂಪುರಕ್ತಕಣಗಳೂ ಇವೆ. ಕೆಂಪುರಕ್ತಕಣದಲ್ಲಿ ಕಬ್ಬಿಣದ ಸಂಯುಕ್ತವಾದ ಹೀಮೊಗ್ಲೊಬಿನ್ ಇರುವುದರಿಂದ ದ್ವಿಚರಿಗಳ ರಕ್ತ ಕುಡ ಕೆಂಪು ವರ್ಣದ್ದಾಗಿದೆ. ಮಲಿನ ರಕ್ತನಾಳಗಳ ಭಿತ್ತಿ ತೆಳುವಾಗಿದೆ. ಇವುಗಳಲ್ಲಿ ರಕ್ತ ನಿಧಾಶನವಾಗಿ ಚಲಿಸುತ್ತದೆ. ಶುದ್ಧ ರಕ್ತ ನಾಳದ ಭಿತ್ತಿ ಮಂದ. ರಕ್ತ ಇದರಲ್ಲಿ ಬಹಳ ವೇಗವಾಗಿ ಚಲಿಸುತ್ತದೆ. ದ್ವಿಚರಿಗಳ ಶರೀರದಲ್ಲೂ ಬಣ್ಣವಿಲ್ಲದ ಹಾಲ್ರಸ (ಲಿಂಫ್) ಉಂಟು.

ಉಸಿರಾಟ : ದ್ವಿಚರಿಗಳಲ್ಲಿ ವಿವಿಧ ಬಗೆಯ ಉಸಿರಾಟವನ್ನು ಕಾಣಬಹುದು. ಜೀವನ ಚಕ್ರದ ಮೊದಲ ಹಂತವಾದ ಡಿಂಬ ಸ್ಥಿತಿಯಲ್ಲಿ ಕಿವಿರುಗಳು ಮತ್ತು ಚರ್ಮದ ಮುಖಾಂತರವೂ ಉಸಿರಾಟ ನಡೆಯುತ್ತದೆ. ದ್ವಿಚರಿಗಳ ಡಿಂಬವಸ್ಥೆಯಲ್ಲಿ ಮತ್ತು ಪೂರ್ಣ ರೂಪಪರಿವರ್ತನೆ ಹೊಂದದ ಪ್ರೌಢ ಯೂರೊಡಿಲಗಳಲ್ಲಿ ಕಿವಿರುಗಳು ಕಾಣಬರುವುವು. ಇವು ತಲೆಯ ಹಿಂಬದಿಯ ಉಭಯ ಪಾಶ್ರ್ವಗಳ ಗಂಟಲು ಭಾಗದಿಂದ ಹೊರಚಾಚಿಕೊಂಡು ಬೆಳೆಯುತ್ತದೆ. ಡಿಂಬ ಮೊದಲು ಬಾಹ್ಯ ಕಿವಿರುಗಳಿಂದ ಉಸಿರಾಡಿ, ಬೆಳೆವಣಿಗೆ ಮುಂದುವರಿದಂತೆ ಅಂತಃ ಕಿವಿರುಗಳಿಂದ ಉಸಿರಾಡುತ್ತದೆ. ಕೆಲವು ಪ್ರೌಢ ಯೂರೊಡಿಲಗಳಲ್ಲಿ ಬಾಹ್ಯ ಕಿವಿರುಗಳು ಇಡೀ ಜೀವಮಾನದುದ್ದಕ್ಕೂ ಉಳಿದಿರುತ್ತವೆ. ಕಿವಿರುಗಳ ಹೊರಮೈಮೇಲೆ ಸೂಕ್ಷ್ಮಪೊರೆಯೊಂದುಂಟು. ಇದರಿಂದ ನೀರಿನಲ್ಲಿರುವ ಆಮ್ಲಜನಕವನ್ನು ಹೀರಲು, ರಕ್ತದಿಂದ ಕಾರ್ಬನ್ ಡೈ ಆಕ್ಸೈಡನ್ನು ಹೊರಗೆಡವಲು ಅನುಕೂಲವಾಗಿದೆ. ಪ್ರೌಢ ದ್ವಿಚರಿಗಳಲ್ಲಿ ಚರ್ಮದ ಮುಖಾಂತರ ಉಸಿರಾಟ ನಡೆಯುವುದು ಗಮನೀಯವಾದ ಸಂಗತಿ. ಕೆಲವು ಪ್ರಭೇದಗಳ ಚರ್ಮದಲ್ಲಿ ಅನೇಕ ಮಡಿಕೆಗಳು ಇದ್ದು ಉಸಿರಾಟವನ್ನು ಹೆಚ್ಚಿಸಲು ಇವು ಸಹಾಯಕವಾಗಿವೆ. ಚರ್ಮದಲ್ಲಿ ಲೋಳೆವಸ್ತುವನ್ನು ಸ್ರವಿಸುವ ಗ್ರಂಥಿಗಳಿರುವುದರಿಂದ, ಚರ್ಮದ ಮೇಲ್ಭಾಗ ಸದಾ ತೇವದಿಂದಿರುತ್ತದೆ. ಇಂಥ ಚರ್ಮದ ಮೂಲಕ ಸೂಕ್ಷ್ಮ ರಕ್ತನಾಳಗಳು ಗಾಳಿಯಿಂದ ಆಮ್ಲಜನಕವನ್ನು ಹೀರಿಕೊಂಡು ಕಾರ್ಬನ್ ಡೈ ಆಕ್ಸೈಡನ್ನು ಹೊರಬಿಡುತ್ತವೆ. ಆಫ್ರಿಕದ ರೋಮದ ಕಪ್ಪೆಯ (ಹೇರಿ ಫ್ರಾಗ್) ಹೊರ ಚರ್ಮದ ಮೇಲೆ ಬೆಳೆದಿರುವ ಕೂದಲುಗಳು ಬಾಹ್ಯ ಕಿವಿರುಗಳಂತೆ ಉಸಿರಾಟದಲ್ಲಿ ನೆರವಾಗಿವೆ. ಹೆಚ್ಚು ಕಾಲ ಭೂಮಿಯ ಮೇಲೆಯೇ ಬದುಕುವ ಕೆಲವು ದ್ವಿಚರಿಗಳಲ್ಲಿ ಕಿವಿರುಗಳು ಮತ್ತು ಚರ್ಮದಿಂದ ನಡೆಯುವ ಉಸಿರಾಟ ಸಾಧ್ಯವಾಗದೆ, ಇತರ ಕಶೇರುಕಗಳಂತೆ ಇವುಗಳಲ್ಲಿನ ಫುಪ್ಫುಸಗಳು ಉಸಿರಾಟದ ಮುಖ್ಯ ಅಂಗಗಳಾಗಿ ವಿಕಾಸಗೊಂಡಿವೆ. ಉಚ್ಛ್ವಾಸದಲ್ಲಿ ಮೊದಲು ಗಲ್ಲದ ಭಾಗ ಉಬ್ಬಿದಾಗ, ಹೊರಗಿನ ಗಾಳಿ ಹೊರನಾಸಿಕಗಳಿಂದ ಒಳನುಗ್ಗಿ ಗಲ್ಲದ ಭಾಗಕ್ಕೆ ತಲುಪುತ್ತದೆ. ಗಲ್ಲದ ಒಳಭಾಗವನ್ನು ಲೋಳೆಪೊರೆ ಸೂಕ್ಷ್ಮ ರಕ್ತನಾಳಗಳು ಲೋಳೆಪೊರೆಯಲ್ಲಿದ್ದು ಅನಿಲಗಳ ವಿನಿಮಯವನ್ನು ಮಾಡಿಕೊಂಡು ಉಸಿರಾಟಕ್ಕೆ ಸ್ವಲ್ಪಮಟ್ಟಿಗೆ ಸಹಾಯಕವಾಗುತ್ತದೆ. ಇತ್ತಲೆ ಮಂಡಲಗಳಲ್ಲಿ ಎಡಫುಪ್ಪಸ ಅಂಕುರಾಂಗದ ರೀತಿಯಲ್ಲಿ ಇದೆ. ಬಲಫುಪ್ಫಸ ಮಾತ್ರ ಉಸಿರಾಟಕ್ಕೆ ಉಪಯುಕ್ತವಾಗಿದೆ. ಸ್ಯಾಲಮ್ಯಾಂಡರುಗಳಲ್ಲಿ ಫುಪ್ಪುಸಗಳು ಅಂಕುರಾಂಗಗಳಾಗಿವೆ ಅಥವಾ ಸಂಪೂರ್ಣ ಇಲ್ಲವಾಗಿವೆ. ಈ ಪ್ರಾಣಿಗಳು ಚರ್ಮ ಅಥವಾ ಕಿವಿರುಗಳ ಮೂಲಕ ಉಸಿರಾಡುವುವು.

ನರಮಂಡಲ: ಕಪ್ಪೆ ದ್ವಿಚರಿಗಳ ಮಾದರಿ ಪ್ರಾಣಿಯಾಗಿರುವುದರಿಂದ, ಕಪ್ಪೆಯ ನರಮಂಡಲವನ್ನು ಇಲ್ಲಿ ವಿವರಿಸಲಾಗಿದೆ. ನರಮಂಡಲವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. 1 ಕೇಂದ್ರನರಮಂಡಲ - ಮಿದುಳು ಮತ್ತು ಮಿದುಳು ಬಳ್ಳಿ, 2 ಹೊರಮೈ ನರಮಂಡಲ - ಕಪಾಲದ ಮತ್ತು ಮಿದುಳು ಬಳ್ಳಿಯ ನರಗಳು, 3 ಸ್ವಯಮಾಧಿಪತ್ಯದ ನರಮಂಡಲ - ರಕ್ತನಾಳಗಳ ಮತ್ತು ಹೊಟ್ಟೆಯ ಅಂಗಾಂಗಗಳ ನರಗಳು.

ಕೇಂದ್ರನರಮಂಡಲ : ನರಮಂಡಲದ ಮುಖ್ಯಭಾಗ ಮಿದುಳು. ಮಿದುಳಿನಲ್ಲಿ ಮೂರು ಮುಖ್ಯ ಭಾಗಗಳಿವೆ. ಇದರ ಸುತ್ತ ಮೂರು ಪದರದ ಹೊದಿಕೆಯುಂಟು. ಮೊದಲಿನ ಪದರ ಕಪ್ಪುಬಣ್ಣದ ಸೂಕ್ಷ್ಮಪದರ (ಪೈಯಮೇಟರ್). ಎರಡನೆಯದು ರಕ್ತನಾಳಗಳಿಂದ ಕೂಡಿರುವ ಮಧ್ಯಪದರ (ಆರ್ಯಾಕ್ನಾಯಿಡ್ ಮೆಂಬ್ರೇನ್), ಹೊರಗಿನದು ಸ್ವಲ್ಪ ದಪ್ಪಗಿರುವ ಹೊರಪದರ (ಡ್ಯೂರ ಮೇಟರ್). ಮುಂದಿನ ಮಿದುಳಿನಲ್ಲಿ (ಸೆರೆಬ್ರಮ್) ಉದ್ದವಾದ ಮಿದುಳಿನ ಗೋಳಾರ್ಧಗಳು ಮತ್ತು ಅವುಗಳ ಮುಂದೆ ಘ್ರಾಣೇಂದ್ರಿಯದ ಪಾಲಿಗಳಿವೆ (ಆಲ್ಫ್ಯಾಕ್ಟರಿ ಲೋಬ್ಸ್). ಇದರ ಹಿಂಭಾಗದಲ್ಲಿ ಪೈನಿಯಲ್ ಗ್ರಂಥಿ ಇದ್ದು ಕೆಳಗಡೆ ದೃಷ್ಟಿನರಗಳ ಕೈಯಸ್ಮ (ಆಪ್ಟಿಕ್ ಕೈಯಸ್ಮ) ಇದೆ. ಇದರ ಕೆಳಗೆ ಪಿಟ್ಯೂಟರಿ ಗ್ರಂಥಿ ಉಂಟು. ನಡುಮಿದುಳಿನಲ್ಲಿ ಅಂಡಾಕಾರದ ಎರಡು ದೃಷ್ಟಿಪಾಲಿಗಳುಂಟು (ಆಪ್ಟಿಕ್ ಲೋಬ್ಸ್). ಹಿಂದಿನ ಭಾಗದಲ್ಲಿ ಚಿಕ್ಕದಾದ ಅಡ್ಡಪಟ್ಟಿಯಂಥ ಹಿಮ್ಮೆದುಳು ಇದೆ. (ಸೆರೆಬೆಲಮ್) . ಇದಕ್ಕೆ ಅಂಟಿರುವ ಮಿದುಳಿನ ಹಿಂದಿನ ಚಾಚುಭಾಗವಾದ ಮಿಡಲ ಅಬ್ಲಾಂಗೇಟದಿಂದ ಹಿಂದಕ್ಕೆ ಮಿದುಳು ಬಳ್ಳಿ ಬೆಳೆದಿದೆ.

ಮಿದುಳು ಬಳ್ಳಿ ಚಪ್ಪಟೆಯಾಗಿದೆಯಲ್ಲದೆ ದೇಹದ ಹಿಂಭಾಗದವರೆಗೂ ಬೆಳೆದಿದೆ. ಮಿದುಳಿನ ಎಲ್ಲ ಭಾಗಗಳಲ್ಲಿಯೂ ಮಿದುಳು ಕುಳಿಗಳಿವೆ. ಇವು ಒಂದಕ್ಕೊಂದು ತೆರೆದಿದ್ದು ಮಿದುಳು ಬಳ್ಳಿಯ ಕೊಳವೆಯೊಂದಿಗೆ ಸೇರುತ್ತವೆ. ಮಿದುಳು ಬೂದು ಮತ್ತು ಬಿಳಿನರಕೋಶಗಳಿಂದ ಕೂಡಿದೆ.

ಹೊರಮೈ ನರಮಂಡಲ: ಮಿದುಳಿನಿಂದ ಎಡಕ್ಕೂ, ಬಲಕ್ಕೂ ಹೊರಡುವ ಹತ್ತು ಜೊತೆ ಕಪಾಲನರಗಳುಂಟು. ಇವುಗಳ ಹೆಸರು ಮತ್ತು ದೇಹದ ಯಾವ ಭಾಗಕ್ಕೆ ಇವು ಹೋಗಿವೆ ಎಂಬ ವಿವರ ಹೀಗಿದೆ. (i) ಘ್ರಾಣೇಂದ್ರಿಯ ನರಗಳು -ನಾಸಿಕ ಭಾಗಕ್ಕೆ, (ii) ದೃಷ್ಟಿನರಗಳು - ಕಣ್ಣಿಗೆ, (iii) ಆಕ್ಯುಲೊಮೋಟಾರ ನರಗಳು - ಕಣ್ಣಿನ ನಾಲ್ಕು ಸ್ನಾಯುಗಳಿಗೆ, (iv) ಗೆಥೆಟಿಕ್ - ಕಣ್ಣಿನ ಸ್ನಾಯುಗಳಿಗೆ (v)ಟೈಜೆಮಿನಲ್ - ದವಡೆಗಳಿಗೆ, (vi) ಅಬ್ಡೂಸಿನ್ - ಕಣ್ಣಿಗೆ, (vii) ಮುಖದ ನರಗಳು (ಫೇಸಿಯಲ್) - ಬಾಯ ಅಂಗುಳು ಮತ್ತು ಕೆಳದವಡೆಗೆ, (viii) ಶ್ರವಣೇಂದ್ರಿಯ ನರಗಳು - ಕಿವಿಗಳಿಗೆ, (ix) ಗ್ಲಾಸೋಫೆರೆಂಜಿಯಲ್ - ನಾಲಿಗೆಗೆ, (x) ವೇಗಸ್ - ಫುಪ್ಫುಸ, ಹೃದಯ ಮತ್ತು ಜಠರಗಳಿಗೆ. ಮಿದುಳುಬಳ್ಳಿಯ ನರಗಳು ಕೂಡ ಹತ್ತು ಜೊತೆ ಉಂಟು. ಒಂದೊಂದೂ ಎರಡು ಬೇರುಗಳಿಂದ ಕೂಡಿದೆ. ಈ ನರಗಳ ಸಮೂಹದಲ್ಲಿ ಮೂರು ಗುಂಪುಗಳನ್ನು ಗುರುತಿಸಬಹುದು. ಒಂದು ಗುಂಪಿನ ನರಗಳು ಮೇಲ್ಭಾಗದ ಸ್ನಾಯುಗಳಿಗೂ ಚರ್ಮಕ್ಕೂ ಎರಡನೆಯ ಗುಂಪಿನ ನರಗಳು ದೇಹದ ತಳಭಾಗಕ್ಕೂ ಮೂರನೆಯ ಗುಂಪಿನ ನರಗಳು ಸ್ವಯಮಾಧಿಪತ್ಯದ ನರಮಂಡಲಕ್ಕೂ ಹೋಗಿವೆ.

ಸ್ವಯಮಾಧಿಪತ್ಯದ ಮಂಡಲ : ಇದರಲ್ಲಿ ಕೂಡ ಹತ್ತು ಜೊತೆ ನರಗಳು ಮತ್ತು ನರಮುಡಿಗಳುಂಟು. ಈ ನರಗಳು ಮಿದುಳು ಬಳ್ಳಿಯ ನರಗಳ ಕವಲುಗಳೊಂದಿಗೆ ಸೇರಿವೆ. ಮುಂಭಾಗದಲ್ಲಿ ಈ ನರಮಂಡಲ ಕಪಾಲ ನರಗಳ ಗೆಸ್ಸೀರಿಯನ್ ನರಮುಡಿಗಳಿಗೆ ಅಂಟಿಕೊಂಡಿವೆ. ಮುಂಡದ ಒಳಗಿನ ಎಲ್ಲ ಅಂಗಾಂಗಗಳಿಗೂ ಈ ನರಮಂಡಲದ ನರಗಳು ಹೋಗಿವೆ. ದೇಹದ ಅನೈಚ್ಛಿಕ ಅಂಗಾಂಗಗಳಾದ ಹೃದಯ, ಜಠರ, ಫುಪ್ಫುಸಗಳು ಮತ್ತು ಇತರ ಅಂಗಗಳು ಈ ನರಮಂಡಲದ ಹತೋಟಿಯಲ್ಲಿರುತ್ತವೆ.

ಜ್ಞಾನೇಂದ್ರಿಯಗಳು : 1 ಕಣ್ಣು : ಕಣ್ಣುಗಳು ಎರಡಿವೆ. ಸಾಮಾನವಾಗಿ ಎಲ್ಲ ದ್ವಿಚರಿಗಳಲ್ಲೂ ದೃಷ್ಟಿ ಚುರುಕಾಗಿವೆ. 2 ಕಿವಿ : ದ್ವಿಚರಿಗಳಿಗೆ ಹೊರ ಕಿವಿ ಇಲ್ಲ. ಕಿವಿ ತಮಟೆ ಕೊರ ಚರ್ಮಕ್ಕೆ ಹೊಂದಿಕೊಂಡಿದ್ದು ಹೊರಗಡೆ ಕಾಣುತ್ತದೆ. ಇದೇ ಶ್ರವಣೇಂದ್ರಿಯ ಶಬ್ದದ ಅಲೆಗಳು ಕಿವಿತಮಟೆಯ ಮೂಲಕ ಒಳಕಿವಿಯನ್ನು ತಲುಪಿ, ಅಲ್ಲಿನ ಶ್ರವಣೇಂದ್ರಿಯ ನರಗಳ ಮೂಲಕ ಶಬ್ದಜ್ಞಾನವನ್ನು ಮಿದುಳಿಗೆ ಮುಟ್ಟಿಸುವುವು.

3 ನಾಲಿಗೆ : ನಾಲಿಗೆಯ ಮೇಲೆ ರುಚಿಕುಡಿಗಳುಂಟು. ಇವುಗಳ ಸಹಾಯದಿಂದ ದ್ವಿಚರಿ ಆಹಾರದ ರುಚಿಯನ್ನು ಗ್ರಹಿಸುವುದು. ಕೆಲವು ದ್ವಿಚರಿಗಳ ದೇಹದ ಪಕ್ಕಗಳಲ್ಲಿ ಪಾಶ್ರ್ವದ ಜ್ಞಾನೇಂದ್ರಿಯ ಕುಳಿಗಳಿವೆ. ಪರಿಸರದಲ್ಲಿ ಆಗುವ ಭೌತ ಮತ್ತು ರಾಸಾಯನಿಕ ಬದಲಾವಣೆಗಳನ್ನು ಈ ಕುಳಿಗಳ ನೆರವಿನಿಂದ ದ್ವಿಚರಿಗಳು ಗ್ರಹಿಸಬಲ್ಲವು.

ಮೂತ್ರವಿಸರ್ಜನ ಮಂಡಲ: ದೇಹದ ಚಯಾಪಚಯಕ್ರಿಯೆಯಿಂದ ಉತ್ಪತ್ತಿಯಾಗುವ ತ್ಯಾಜ್ಯ ಪದಾರ್ಥಗಳು ದೇಹದಲ್ಲಿ ಸಂಗ್ರಹಗೊಳ್ಳುವುವು. ಇವುಗಳಲ್ಲಿ ಮೂತ್ರ ಮುಖ್ಯವಾದ್ದು. ದ್ವಿಚರಿಗಳಲ್ಲಿ ಎರಡು ಮೂತ್ರ ಪಿಂಡಗಳಿದ್ದು ಇವು ಮೂತ್ರವನ್ನು ದೇಹದಿಂದ ಬೇರ್ಪಡಿಸಿ, ಹೊರಗೆ ಕಳುಹಿಸುತ್ತವೆ. ಮುಂಡದ ಹಿಂಬದಿಯ ಒಳಭಾಗದಲ್ಲಿ ಬೆನ್ನುಹುರಿಯ ಬಳಿ ಮೂತ್ರಪಿಂಡಗಳು ಸ್ಥಿತವಾಗಿವೆ. ಮೂತ್ರಪಿಂಡದಲ್ಲಿ ಅನೇಕ ಸಣ್ಣ ನಳಿಕೆಗಳುಂಟು. ಈ ನಳಿಕೆಗಳು ರಕ್ತದಲ್ಲಿರುವ ಬೇಡವಾದ ಉಪೋತ್ಪನ್ನಗಳನ್ನು ಬೇರ್ಪಡಿಸಿ, ಮೂತ್ರ ಪಿಂಡದ ಹೊರಭಾಗದಿಂದ ಹೊರಡುವ ಮೂತ್ರನಾಳಕ್ಕೆ ಸಾಗಿಸುವುವು. ಎರಡೂ ಮೂತ್ರನಾಳಗಳಿಂದ ಬರುವ ಮೂತ್ರ ಮಲರೂಪಕ್ಕೆ ಸೇರಿ ದೇಹದಿಂದ ಹೊರ ಬೀಳುತ್ತದೆ. ಮೂತ್ರಕೋಶ ಮಲರೂಪದ ಒಂದು ಕಡೆಗೆ ತೆರೆದಿದೆ. ಮೂತ್ರ ಮೂತ್ರಕೋಶದಲ್ಲಿ ಬಂದು ಶೇಖರವಾಗಿ ಅಲ್ಲಿಂದ ಹೊರದೂಡಲ್ಪಡುತ್ತದೆ. ಅಯೋರ್ಟದಿಂದ ಹೊರಡುವ ಶುದ್ಧರಕ್ತನಾಳಗಳು ಮೂತ್ರಪಿಂಡಗಳಿಗೆ ರಕ್ತವನ್ನು ಸರಬರಾಜು ಮಾಡುತ್ತವೆ. ಅಶುದ್ಧ ರಕ್ತನಾಳಗಳು ಮೂತ್ರಪಿಂಡಗಳಿಂದ ರಕ್ತವನ್ನು ಶೇಖರಿಸಿ ಹಿಂದಿನ ಮಲಿನ ರಕ್ತನಾಳಕ್ಕೆ ಸುರಿಯುತ್ತವೆ. ದ್ವಿಚರಿಗಳು ಸಸ್ತನಿಗಳಿಗಿಂತ ಹೆಚ್ಚು ಪಾಲು ಮೂತ್ರವನ್ನು ಹೊರಗೆ ಹಾಕುತ್ತವೆ. ದೇಹದಲ್ಲಿ ನೀರಿನ ಅಭಾವವುಂಟಾದರೆ ಮೂತ್ರದಿಂದ ನೀರಿನ ಭಾಗವನ್ನು ಮೂತ್ರಕೋಶದ ಸುತ್ತಲಿನ ಅಂಗಾಂಶಗಳು ಹೀರಿಕೊಳ್ಳುತ್ತವೆ.

ಪ್ರಜನನ: ದ್ವಿಚರಿಗಳು ಲೈಂಗಿಕ ಪ್ರಜನನವನ್ನು ತೋರುವುವು. ಇವುಗಳಲ್ಲಿ ಗಂಡು, ಹೆಣ್ಣು, ಎಂಬ ಲಿಂಗ ಭೇದವುಂಟು.

ಗಂಡಿನ ಜನನೇಂದ್ರಿಯಗಳು : ಗಂಡಿನಲ್ಲಿ ಮೂತ್ರಪಿಂಡದ ಮುಂಭಾಗದ ಒಳ ಅಂಚಿಗೆ ಅಂಟಿಕೊಂಡಿರುವ ಎರಡು ವೃಷಣಗಳಿವೆ. ಇವುಗಳ ಆಕಾರ ಅಂಡದಂತೆ ; ಬಣ್ಣ ಹಳದಿ. ಒಳಗೆ ರೇತಸ್ಸಿನ ಅನೇಕ ನಳಿಕೆಗಳುಂಟು. ಈ ನಳಿಕೆಗಳಲ್ಲಿ ವೀರ್ಯಾಣುಗಳು ಅಭಿವೃದ್ಧಿಗೊಂಡು, ವೃಷಣದ ನಾಳಗಳ ಮೂಲಕ ಮೂತ್ರಪಿಂಡಗಳ ನಳಿಕೆಗಳಿಗೆ ಬಂದು, ಅಲ್ಲಿಂದ ಮೂತ್ರ ನಾಳದ ಮೂಲಕ ಮಲ ಕೂಪವನ್ನು ತಲುಪಿ ದೇಹದಿಂದ ಹೊರಬರುತ್ತವೆ. ವೃಷಣಗಳಿಗೆ ದೇಹದಲ್ಲಿನ ಮೇದೋಭಾಗಗಳು ಅಂಟಿಕೊಂಡಿವೆ.

ಹೆಣ್ಣಿನ ಜನನೇಂದ್ರಿಯಗಳು : ಹೆಣ್ಣಿನ ಜನನಗ್ರಂಥಿ ಅಂಡಾಶಯ. ಮೂತ್ರಪಿಂಡಗಳ ಕೆಳಭಾಗದಲ್ಲಿ ಎರಡು ಅಂಡಾಶಯಗಳೂ ಮತ್ತು ಎರಡು ಅಂಡಾಶಯ ನಾಳಗಳು ಇವೆ. ಪ್ರತಿ ಅಂಡಾಶಯ ನಾಳವೂ ಸುರುಳಿಸುತ್ತಿದ್ದ ಉದ್ದ ನಾಳವಾಗಿದ್ದು, ಒಂದು ಕಡೆಯಲ್ಲಿ ಅಂಡಾಶಯ ನಾಳದ ಆಲಿಕೆಯಿಂದ ದೇಹದೊಳಕ್ಕೆ ತೆರೆದಿದೆ. ಅಂಡಾಶಯ ನಾಳ ಪ್ರತ್ಯೇಕವಾಗಿದ್ದು, ಮತ್ತೊಂದು ಕಡೆಯಲ್ಲಿ ಮಲಕೂಪದೊಳಕ್ಕೆ ತೆರೆದಿದೆ. ಅಂಡಾಶಯದಲ್ಲಿ ರೂಪುಗೊಳ್ಳುವ ಅಂಡಾಣುಗಳು ದೇಹದೊಳಕ್ಕೆ ಬಂದು ಅಂಡಾಶಯ ನಾಳದ ಆಲಿಕೆಯ ಮೂಲಕ ಅಂಡಾಶಯ ನಾಳದಲ್ಲಿ ಹಾದು, ಕೊನೆಗೆ ಮಲಕೂಪಕ್ಕೆ ಬಂದು, ಅಲ್ಲಿಂದ ಹೊರಬೀಳುತ್ತವೆ. ಅಂಡಾಶಯ ನಾಳದ ಒಳಪೊರೆ ಜೆಲಿ ಪದಾರ್ಥವನ್ನು ಸ್ರವಿಸಿ ನಾಳದ ಮೂಲಕ ಹಾದು ಹೋಗುವ ಅಂಡಾಣುಗಳ ಸುತ್ತ ಜೆಲಿ ಹೊದಿಕೆಯನ್ನು ಒದಗಿಸುತ್ತವೆ. ಅಂಡಾಶಯಗಳಿಗೆ ಅಂಡಿದಂತೆ ಅನೇಕ ಕೊಬ್ಬಿನ ಭಾಗಗಳುಂಟು. ಋತುಗಳಿಗನುಸಾರವಾಗಿ ಕೊಬ್ಬಿನ ಭಾಗಗಳ ಗಾತ್ರದಲ್ಲಿ ಏರಿಳಿತವಾಗುತ್ತದೆ.

ದ್ವಿಚರಿಗಳು ಸಾಮಾನ್ಯವಾಗಿ ಮಳೆಗಾಲದಲ್ಲಿ ಮೊಟ್ಟೆಯಿಡುತ್ತವೆ. ಮೊಟ್ಟೆಯಿಡುವ ಕಾಲದಲ್ಲಿ, ಗಂಡು, ಹೆಣ್ಣಿನೊಡನೆ ಮೈಥುನದಲ್ಲಿ ತೊಡಗುತ್ತದೆ. ಹೆಣ್ಣು ಅಂಡಾಣುವನ್ನು ಹೊರಗಿಡುತ್ತಿರುವಾಗ, ಗಂಡು ವೀರ್ಯಾಣುಗಳನ್ನು ಅಂಡಾಣುಗಳ ಮೇಲೆ ಸುರಿಸುತ್ತದೆ. ನೀರಿನಲ್ಲಿ ಬಿದ್ದ ವೀರ್ಯಾಣುಗಳು ಅಂಡಾಣುಗಳನ್ನು ಸುತ್ತುವರಿಯುವುವು. ಒಂದು ಅಂಡಾಣುವಿನ ಸುತ್ತ ಅನೇಕ ವೀರ್ಯಾಣುಗಳಿದ್ದರೂ ಅವುಗಳಲ್ಲಿ ಒಂದು ಮಾತ್ರ ಅಂಡಾಣುವಿನ ಜೆಲಿ ಹೊದಿಕೆಯನ್ನು ಭೇದಿಸಿ ಅಂಡಾಣುವಿನೊಂದಿಗೆ ಸಂಯೋಗವಾಗುತ್ತದೆ. ಇದರಿಂದಾಗಿ ನಿಷೇಚನೆ ದೇಹದ ಹೊರಗೆ ನಡೆಯುತ್ತದೆ ಎನ್ನಬಹುದು. ನಿಷೇಚಿತ ಮೊಟ್ಟೆ ತನ್ನ ಬೆಳವಣಿಗೆಯನ್ನು ನೀರಿನಲ್ಲಿ ಪ್ರಾರಂಭಿಸುತ್ತದೆ. ದ್ವಿಚರಿಗಳು ಒಮ್ಮೆಗೆ ಸಾವಿರಾರು ಮೊಟ್ಟೆಗಳನ್ನಿಡುತ್ತದೆ. ಕೆಲವು ಜಾತಿಯ ದ್ವಿಚರಿಗಳಲ್ಲಿ ಅಂಡಾಣುಗಳು ಮಲಕೂಪದಲ್ಲೇ ನಿಲ್ಲುವುದರಿಂದ, ಇಂಥವುಗಳಲ್ಲಿ ನಿಷೇಚನೆ ದೇಹದ ಒಳಗೆ ನಡೆಯುತ್ತಿದೆ. ದ್ವಿಚರಿಗಳ ಆನುಷಂಗಿಕ ಲಿಂಗ ಲಕ್ಷಣಗಳು ಹೀಗಿವೆ: ಗಂಡು ಕಪ್ಪೆಯಲ್ಲಿ ಮುಂದಿನ ಕಾಲುಗಳ ಒಳಬೆರಳಿನಲ್ಲಿ ಒಂದು ಮೆತ್ತೆ ಕಾಣಿಸಿಕೊಳ್ಳುತ್ತದೆ. ಆದರೆ, ಹೆಣ್ಣು ಕಪ್ಪೆಯಲ್ಲಿ ಇದು ಇಲ್ಲ. ಗಂಡುಕಪ್ಪೆಯ ಬಾಯಿಯ ತಳಭಾಗದಲ್ಲಿ ಎರಡೂ ಕಡೆ ಒಂದೊಂದು ಧ್ವನಿಚೀಲ ಉಂಟು. ಇವುಗಳ ಸಹಾಯದಿಂದ ಸದ್ದುಗೈದು ಗಂಡು ಕಪ್ಪೆಯು ಹೆಣ್ಣಿನ ಗಮನ ಸೆಳೆಯುತ್ತದೆ. ಗಾತ್ರದಲ್ಲಿ ಹೆಣ್ಣು ಕಪ್ಪೆ ಗಂಡು ಕಪ್ಪೆಗಿಂತ ದೊಡ್ಡದು. ಕೆಲವು ಗಂಡು ನ್ಯೂಟ್‍ಗಳಲ್ಲಿ ದೇಹ ಆಕರ್ಷಕ ಬಣ್ಣಗಳಿಂದ ಕೂಡಿದೆ. ಗಂಡುಕಪ್ಪೆಯ ಕಿವಿತಮಟೆ ಹೆಣ್ಣಿನದಕ್ಕಿಂತ ಅಗಲವಾಗಿದೆ. ಗಂಡು ದ್ವಿಚರಿಗಳು ತಮ್ಮ ವಿವಿಧ ಮೈಬಣ್ಣಗಳಿಂದ ಹೆಣ್ಣುಗಳನ್ನು ಆಕರ್ಷಿಸುವುದೂ ಉಂಟು. ಇಂಥ ಆನುಷಂಗಿಕ ಲಿಂಗ ಲಕ್ಷಣಗಳು ಪ್ರಣಯಾಚರಣೆಗೆ ಸಹಾಯಕವಾಗಿವೆ. ದ್ವಿಚರಿಗಳಲ್ಲಿ ಭ್ರೂಣದ ಬೆಳವಣಿಗೆ: ನಿಷೇಚಿತ ಅಂಡಾಣುವಿಗೆ ಬೆಳವಣಿಗೆಯ ಪ್ರಾರಂಭದಲ್ಲಿ ಯುಗ್ಮಜವೆಂದು ಹೆಸರು. ಬೆಳವಣಿಗೆ ಮುಂದುವರಿದಂತೆ ಇದನ್ನು ಸಾಮಾನ್ಯವಾಗಿ ತತ್ತಿ ಎಂದೂ ನಿರ್ದಿಷ್ಟವಾಗಿ ಭ್ರೂಣವೆಂದೂ ಕರೆಯಲಾಗಿದೆ. ಯುಗ್ಮಜ ತನ್ನ ಬೆಳವಣಿಗೆಗೆ ಬೇಕಾದ ಎಲ್ಲ ಪೋಷಕ ವಸ್ತುಗಳನ್ನೂ ಪಡೆದಿದೆ. ಮೊಟ್ಟೆಯ ಸುತ್ತ ಇರುವ ಜೆಲಿ ಹೊದಿಕೆಗಳು ಪರಿಸರದ ನೀರನ್ನು ಹೀರಿಕೊಂಡು ಊದಿಕೊಳ್ಳುತ್ತವೆ. ಇವು ವೃದ್ಧಿಯಾಗುತ್ತಿರುವ ಭ್ರೂಣವನ್ನು ರಕ್ಷಿಸುವುದಲ್ಲದೆ ಅದಕ್ಕೆ ಬೇಕಾದ ನೀರಿನ ಆವಶ್ಯಕತೆಯನ್ನು ಪೂರೈಸುತ್ತವೆ. ನೀರಿನ ಮೇಲೆ ತೇಲಾಡುತ್ತಿರುವ ಭ್ರೂಣ ಸೂರ್ಯ ಶಾಖದಿಂದ ತನ್ನ ಬೆಳವಣಿಗೆಯನ್ನು ಮುಂದುವರಿಸುತ್ತದೆ. ಭ್ರೂಣ ಬೆಳವಣಿಗೆಯ ಮೊದಲನೆಯ ಹಂತದಲ್ಲಿ ರೇಖಾ ಭಾಗ ವಿಂಗಡಣೆಯ (ಸೆಗ್ಮೆಂಟೇಷನ್) ಮೂಲಕ ಯುಗ್ಮಜ ಹಲವು ಬಾರಿ ವಿಭಾಗಗೊಂಡು ಚಂಡಿನಾಕೃತಿಯ ಬ್ಲಾಸ್ಟುಲ ಎಂಬ ರಚನೆಯಾಗುತ್ತದೆ. ಸಾಮಾನ್ಯವಾಗಿ ಈ ಹಂತದ ರೇಖಾಭಾಗ ವಿಂಗಡಣೆ ಪೂರ್ಣ ಮತ್ತು ಅಸಮ ರೀತಿಯದು. ಬ್ಲಾಸ್ಟುಲ ಹಂತದ ಭ್ರೂಣದಲ್ಲಿ ಸಮಸ್ಥಿತಿ ಮತ್ತು ಅಸಮ ರೀತಿಯದು. ಬ್ಲಾಸ್ಟುಲ ಹಂತದ ಭ್ರೂಣದಲ್ಲಿ ಸಮಸ್ಥಿತಿ ಮತ್ತು ಸಮರಚನೆಯುಳ್ಳ ಅನೇಕ ಜೀವಕೋಶಗಳುಂಟು. ಬೆಳವಣಿಗೆಯ ಗತಿ ಏರಿದಂತೆ ಬ್ಲಾಸ್ಟುಲ ತನ್ನ ರಚನೆಯಲ್ಲಿ ಅನೇಕ ಬದಲಾವಣೆಗಳನ್ನು ಹೊಂದಿ ಗ್ಯಾಸ್ಟ್ರುಲ ಹಂತವನ್ನು ತಲುಪುವುದು. ಭ್ರೂಣದ ಬೆಳವಣಿಗೆಯಲ್ಲಿ ಗ್ಯಾಸ್ಟುಲ ಅತಿ ಮುಖ್ಯ ಘಟ್ಟ. ಏಕೆಂದರೆ, ಭ್ರೂಣದ ರಚನೆಯಲ್ಲಿ ಮೂಲಭೂತವಾದ ಮೂರು ಕೋಶಪದರಗಳು ರೂಪುಗೊಳ್ಳುವುದು ಈ ಹಂತದಲ್ಲೇ. ಎಕ್ಟೊಡರ್ಮ್, ಮೀಸೊಡರ್ಮ್ ಮತ್ತು ಎಂಡೊಡರ್ಮ್ - ಇವೇ ಈ ಮೂರು ಪದರಗಳು.

ಭ್ರೂಣವು ಗ್ಯಾಸ್ಟ್ರುಲ ಸ್ಥಿತಿಯನ್ನು ದಾಟಿ ನ್ಯೂರಾಲ ಹಂತಕ್ಕೆ ಬರುವ ವೇಳೆಗೆ, ಭ್ರೂಣದ ರಚನೆಯಲ್ಲಿ ದೇಹದ ಅಕ್ಷರೇಖೆಯಾದ (ಬಾಡಿ ಎಕ್ಸಿಸ್) ಕಾರ್ಡಾ ಮೀಸೊಡರ್ಮ್ ರೂಪುಗೊಂಡು, ನರಮಂಡಲದ ಅಸ್ತಿಭಾರವನ್ನು ಹಾಕುತ್ತದೆ. ನ್ಯೂರುಲ ಸ್ಥಿತಿಯಲ್ಲಿ ಭ್ರೂಣ ತನ್ನ ಬೆಳವಣಿಗೆಯ ಒಂದು ನಿಶ್ಚಿತ ಘಟ್ಟವನ್ನು ತಲುಪಿ, ಬೆಳವಣಿಗೆ ಮುಂದುವರಿದು, ಡಿಂಬಾವಸ್ಥೆಯನ್ನು ಮುಟ್ಟುತ್ತದೆ. ಈ ಸ್ಥಿತಿಯಲ್ಲಿ ಭ್ರೂಣದ ತಲೆ ಮತ್ತು ದೇಹದ ಅನೇಕ ಭಾಗಗಳು ಸ್ವಲ್ಪಮಟ್ಟಿಗೆ ರೂಪುಗೊಂಡಿರುವುವು. ಆಗ ಡಿಂಬ ತನ್ನನ್ನು ಆವರಿಸಿರುವ ಜೆಲಿ ಹೊದಿಕೆಗಳನ್ನು ಭೇದಿಸಿ ಹೊರಬರುತ್ತವೆ. ಈ ಸ್ಥಿತಿಯಲ್ಲಿ ಭ್ರೂಣಕ್ಕೆ ಗೊದಮೊಟ್ಟೆ (ಟ್ಯಾಡ್‍ಪೋಲ್) ಎಂಬ ಹೆಸರುಂಟು. ಇಲ್ಲಿಗೆ ಭ್ರೂಣ ಬೆಳವಣಿಗೆಯ ಮೊದಲನೆಯ ಹಂತ ಮುಗಿಯುತ್ತದೆ. ಗೊದಮೊಟ್ಟೆಯ ರೂಪಪರಿವರ್ತನೆಗೊಂಡು ಪ್ರೌಢ ಜೀವಿಯಾಗುವ ಕಾಲಾವಧಿಯೇ ಭ್ರೂಣ ಬೆಳವಣಿಗೆಯ ಎರಡನೆಯ ಹಂತ. (ಚಿತ್ರ) ಂ . ನೋಟೊಟ್ರೀಮ್, ಃ . ಎಲೈಟಿಸ್, ಅ. ಹೈಲ

ರೂಪಪರಿವರ್ತನೆ: ಗೊದಮೊಟ್ಟೆ ರೂಪಪರಿವರ್ತನಾ ಕ್ರಿಯೆಯ ಮೂಲಕ ಪ್ರೌಢಜೀವಿಯಾಗುತ್ತದೆ. ತತ್ತಿಯಿಂದ ಒಡೆದು ಹೊರಬಂದ ಗೊದಮೊಟ್ಟೆಗೆ ಗುಂಡು ತಲೆಯೂ ಬಾಲವೂ ಉಂಟು. ತಲೆಯ ತಳಭಾಗದಲ್ಲಿರುವ ಅಂಟು ಬಟ್ಟಲುಗಳಿಂದ, ನೀರಿನಲ್ಲಿರುವ ಸಸ್ಯಗಳಿಗೆ ಇದು ಅಂಟಿಕೊಂಡಿರುತ್ತದೆ. ತಲೆಯ ಮುಂಭಾಗದಲ್ಲಿ ಬಾಯಿ ರೂಪುಗೊಂಡು, ಮರಿ ಹೊರಗಡೆಯಿಂದ ಆಹಾರವನ್ನು ಸೇವಿಸುತ್ತದೆ. ಬಾಲದ ಮೇಲೆ ಮತ್ತು ತಳಭಾಗಗಳಲ್ಲಿ ಈಜು ರೆಕ್ಕೆ ಬೆಳೆದು, ಮರಿ ಈಜಲು ಪ್ರಾರಂಭಿಸುತ್ತದೆ. ಈ ಹೊತ್ತಿಗೆ ತಲೆ ದೊಡ್ಡದಾಗುತ್ತ ಬಂದು ಹೊಟ್ಟೆಯ ಭಾಗ ಬೆಳೆದು ಅದರೊಳಗೆ ಸುರುಳಿಯಂತಿರುವ ಕರುಳು ಕಾಣಿಸಿಕೊಳ್ಳುತ್ತದೆ. ತಲೆಯ ಪಕ್ಕದಲ್ಲಿ ಬಾಹ್ಯ ಕಿವಿರುಗಳು ಬೆಳೆದು, ಅನಂತರ ಅಂತಃಕಿವಿರುಗಳು ವೃದ್ಧಿಗೊಂಡು ಇವುಗಳ ಸಹಾಯದಿಂದ ಉಸಿರಾಟ ನಡೆಯುತ್ತದೆ. ಬೆಳವಣಿಗೆ ಮುಂದುವರಿದಂತೆ ಮರಿಯ ರೂಪದಲ್ಲಿ ತೀಕ್ಷ್ಣವಾದ ಬದಲಾವಣೆಗಳಾಗುತ್ತವೆ. ತಲೆಯಲ್ಲಿ ಬಾಯಿ, ಕಣ್ಣು ಮತ್ತು ಕಿವಿಗಳು ಚೆನ್ನಾಗಿ ರೂಪುಗೊಳ್ಳುತ್ತವೆ. ಸುರುಳಿಯಂತಿರುವ ಕರುಳಿನಿಂದ ಪ್ರೌಢ ಜೀರ್ಣಾಂಗಗಳು ಬೆಳೆಯುತ್ತವೆ. ಈ ಮಧ್ಯ ಗಂಟಲಿನ ಭಾಗದ ಕಿವಿರು ರಂಧ್ರಗಳು ಮುಚ್ಚಿ ಅನ್ನನಾಳದ ಪಕ್ಕಗಳಿಂದ ಪುಪ್ಪುಸಗಳು ಬೆಳೆದು ಶ್ವಾಸೋಚ್ಛ್ವಾಸಗಳನ್ನು ಆರಂಭಿಸುತ್ತವೆ. ಹೃದಯ ಪೂರ್ಣವಾಗಿ ರೂಪುಗೊಂಡು ರಕ್ತಪರಿಚಲನಾಕ್ರಮ ಸುಧಾರಿಸುತ್ತದೆ. ಬಾಲದ ಬುಡದ ಪಕ್ಕಗಳಲ್ಲಿ ಮೊದಲು ಹಿಂದಿನ ಕಾಲುಗಳು ಕಾಣಿಸಿಕೊಳ್ಳುವುದು. ಅಂತೆಯೇ ತಲೆಯ ಹಿಂಭಾಗದಲ್ಲಿ ಮುಂದಿನ ಕಾಲುಗಳು ರೂಪುಗೊಳ್ಳುವುವು. ಅಂತೆಯೇ ತಲೆಯ ಹಿಂಭಾಗದಲ್ಲಿ ಮುಂದಿನ ಕಾಲುಗಳು ರೂಪುಗೊಳ್ಳುವುವು. ಅಂತೆಯೇ ತಲೆಯ ಹಿಂಭಾಗದಲ್ಲಿ ಮುಂದಿನ ಕಾಲುಗಳು ರೂಪುಗೊಳ್ಳುವುವು. ಇದುವರೆಗೆ ಸಸ್ಯಹಾರಿ ಜೀವನ ನಡೆಸುತ್ತಿದ್ದ ಗೊದಮೊಟ್ಟೆ ಚಿಕ್ಕ ಪ್ರಾಣಿಗಳನ್ನು ಹಿಡಿದು ತಿನ್ನುವುದನ್ನು ಪ್ರಾರಂಭಿಸಿ, ಮಾಂಸಾಹಾರಿಯಾಗುತ್ತದೆ. ಕಾಲುಗಳು ಚೆನ್ನಾಗಿ ಬೆಳೆದ ಮೇಲೆ ಮರಿ ಭೂಮಿಯ ಮೇಲೆ ಓಡಾಡತೊಡಗುತ್ತದೆ. ಕಾಲಕ್ರಮೇಣ ಕಪ್ಪೆಗಳಲ್ಲಿ ಬಾಲ ಮೊಟಕಾಗಿ ಮಾಯವಾಗುತ್ತದೆ. ಆದರೆ, ಬೇರೆ ದ್ವಿಚರಿಗಳಾದ ಸ್ಯಾಲಮ್ಯಾಂಡರುಗಳಲ್ಲಿ ಬಾಲ ಪ್ರೌಢ ಜೀವಿಯಲ್ಲೂ ಉಳಿದುಬಿಡುತ್ತದೆ. ಈ ಹೊತ್ತಿಗೆ ಮರಿ ಪ್ರೌಢಜೀವಿಯಾಗಿ ಮಾರ್ಪಟ್ಟಿರುತ್ತದೆ. ದ್ವಿಚರಿಗಳಲ್ಲಿ ಮರಿಗಳ ಪೋಷಣೆ : ಲೆಪ್ಟೊಡ್ಯಾಕ್ಟಿಲ್ ಮತ್ತು ರ್ಯಾಕೊಫೋರಸ್ ಎಂಬ ದ್ವಿಚರಿಗಳು ಗೂಡುಗಳನ್ನು ನಿರ್ಮಿಸಿ ತಮ್ಮ ಮರಿಗಳನ್ನು ರಕ್ಷಿಸುತ್ತವೆ. ಸ್ಯಾಲಮ್ಯಾಂಡ್ರಿಲ ಎಂಬ ದ್ವಿಚರಿ ಜಿಲ್ಯಾಟಿನ್ ಚೀಲವನ್ನು ರಚಿಸಿ ತತ್ತಿಗಳ ರಕ್ಷಣೆ ಮಾಡುತ್ತದೆ. ಡೊಂಡ್ರೋಬೇಟ್ ಎಂಬುದು ತನ್ನ ತತ್ತಿಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವುದರ ಮೂಲಕ ಅವುಗಳ ರಕ್ಷಣೆ ಮಾಡುತ್ತದೆ. ಇಕ್ತಿಯಾಫಿಸ್, ಡೆಸ್ಮೊಗ್ನಾತಸ್ ಮತ್ತು ಸೈಫೋನೋಪ್ಸ್ ಎಂಬ ದ್ವಿಚರಿಗಳು ತತ್ತಿಗಳನ್ನು ಸುತ್ತಿಕೊಂಡೊ ಇಲ್ಲವೆ ತತ್ತಿಗಳ ಮೇಲೆ ಕುಳಿತುಕೊಂಡೊ ಅವು ಹಾಳಾಗದಂತೆ ನೋಡಿಕೊಳ್ಳುವುದು. ಅಲೈಟಿಸ್ ಅಥವಾ ಸೂಲಗಿತ್ತಿ ಕಪ್ಪೆಯಲ್ಲಿ ಗಂಡು ಕಪ್ಪೆ ತತ್ತಿಗಳ ಮಾಲೆಯನ್ನು ತನ್ನ ಹಿಂದಿನ ಕಾಲುಗಳಿಗೆ ಸುತ್ತಿಕೊಂಡು ಕಾಪಾಡುತ್ತದೆ. ಹೈಲ, ಪೈಪ ಮತ್ತು ನೋಟೋಟ್ರೀಮ- ಇವುಗಳಲ್ಲಿ ಹೆಣ್ಣು ತನ್ನ ಬೆನ್ನಮೇಲೆ ತತ್ತಿಗಳನ್ನು ಹೊತ್ತುಕೊಂಡು ಸಾಕುತ್ತದೆ. ರ್ಯಾಕೊಫೋರಸ್ ತನ್ನ ಹೊಟ್ಟೆಯ ಮೇಲೂ ಮತ್ತು ಹೈಲೋಬೇಟಸ್ ತನ್ನ ಬಾಯಿಯಲ್ಲೂ ತತ್ತಿಗಳನ್ನು ಇರಿಸಿಕೊಂಡು ರಕ್ಷಿಸುತ್ತದೆ. ವರ್ತನೆ: ದ್ವಿಚರಿಗಳು ಪರಿಸರಕ್ಕೆ ತೋರುವ ಪ್ರತಿಕ್ರಿಯೆ ಇವುಗಳ e್ಞÁನೇಂದ್ರಿಯಗಳ ಗ್ರಹಣ ಶಕ್ತಿಯನ್ನು ಅವಲಂಬಿಸಿದೆ. ಸ್ಯಾಲಮ್ಯಾಂಡರುಗಳು ಮತ್ತು ಇತ್ತಲೆಮಂಡಲಗಳಿಗಿಂತ ಕಪ್ಪೆ ಹಾಗೂ ನೆಲಗಪ್ಪೆಗಳಲ್ಲಿ ದೃಷ್ಟಿ ಹೆಚ್ಚು ಚುರುಕು. ಕಪ್ಪೆಗಳಿಗೆ ಸ್ಥಳe್ಞÁನವುಂಟು. ಇವು ವಾಸ ಸ್ಥಳಕ್ಕೆ ಹಿಂದಿರುಗುವ ವಿಶೇಷ ಲಕ್ಷಣಗಳನ್ನು ಪ್ರದರ್ಶಿಸುವವು. ಅಂತೆಯೇ ತೊಡಕುಗಳಿಂದ ತಪ್ಪಿಸಿಕೊಳ್ಳುವುದನ್ನು ಕಲಿತು, ಈ e್ಞÁನವನ್ನು ಒಂದು ತಿಂಗಳವರೆಗೆ ಕಪ್ಪೆಗಳು e್ಞÁಪಕದಲ್ಲಿರಿಸಿಕೊಳ್ಳಬಲ್ಲವು ಎಂದು ಹೇಳಲಾಗಿದೆ. ತಮ್ಮ ಇಡೀ ಜೀವಮಾನವನ್ನೆಲ್ಲ ಕೇವಲ ಕೆಲವು ಚದರ ಗಜಗಳಲ್ಲಿ ಕಳೆಯುವ ಸ್ಯಾಲಮ್ಯಾಂಡರುಗಳಿಗಿಂತ ಕಪ್ಪೆಗಳು ವಾಸಿಸುವ ಪ್ರಾಂತ್ಯ ಹೆಚ್ಚು ವಿಶಾಲವಾದ್ದು; ಸ್ಯಾಲಮಾಂಡರುಗಳು ಮತ್ತು ಕಪ್ಪೆಗಳು ತಮ್ಮ ಸಂತಾನ ವೃದ್ಧಿಗಾಗಿ ವಲಸೆ ಹೋಗುವ ಪರಿಪಾಟಿಯನ್ನು ತೋರುವುವು. ಇಂಥ ಶ್ರಾಯಗಳಲ್ಲಿ ಬಹುಮಟ್ಟಿಗೆ ಗಂಡು ಪ್ರಾಣಿಗಳು ಮುಂಚಿತವಾಗಿ ಹೊಳೆ ಝರಿ ಮತ್ತು ಕೊಳಗಳಿಗೆ ವಲಸೆ ಹೋಗುತ್ತವೆ. ಅನೇಕ ಸ್ಯಾಲಮ್ಯಾಂಡರುಗಳು ಪ್ರಣಯಾಚರಣೆಗೆ ಮುಂಚೆ ಅನೇಕ ತೆರನ ಸಂಕೀರ್ಣ ವರ್ತನೆಯನ್ನು ತೋರುತ್ತವೆ. ಒಂದು ಸೆಕೆಂಡಿಗೆ 50 ರಿಂದ 10,000 ಸ್ಪಂದನಗಳ ಧ್ವನಿಗಳನ್ನು ಕಪ್ಪೆಗಳು ಗ್ರಹಿಸಬಲ್ಲವು. ಇವು ಮುಖ್ಯವಾಗಿ ಚರ್ಮದ ಮುಖಾಂತರ ಸ್ಪರ್ಶe್ಞÁನವನ್ನು ಪಡೆಯುತ್ತವೆ. ಇವುಗಳ ಚರ್ಮ ರಾಸಾಯನಿಕಗಳಿಗೆ ಮಾತ್ರವಲ್ಲದೆ ಉಷ್ಣತೆ, ಆದ್ರ್ರತೆಗಳಿಗೆ ಶೀಘ್ರಗ್ರಾಹಿಯಾಗಿದೆ.

ದ್ವಿಚರಿಗಳ ಆರ್ಥಿಕ ಪ್ರಾಮುಖ್ಯ: ಕೀಟಗಳನ್ನು ಭಕ್ಷಿಸುವುದರಿಂದ ನೆಲಗಪ್ಪೆಗಳು ರೈತರಿಗೆ ತುಂಬ ಉಪಯುಕ್ತವಾಗಿವೆ. ಕಪ್ಪೆಗಳನ್ನು ಆಹಾರವನ್ನಾಗಿ ಬಳಸುವುದೂ ಉಂಟು. ಅನೇಕ ದೇಶಗಳಲ್ಲಿ ಒಣಗಿಸಿದ ಸ್ಯಾಲಮಾಂಡರುಗಳನ್ನು ಮತ್ತು ಕಪ್ಪೆಗಳನ್ನು ಔಷಧೀಯ ಉದ್ದೇಶಗಳಿಗೆ ಉಪಯೋಗಿಸುವರು. ಪ್ರೌಢ ಮತ್ತು ಎಳೆಯ ಕಪ್ಪೆ ಹಾಗೂ ಸ್ಯಾಲಮ್ಯಾಂಡರುಗಳನ್ನು ಪ್ರಾಯೋಗಿಕ ಭ್ರೂಣಶಾಸ್ತ್ರ, ಅಂತಃಸ್ರಾವಗ್ರಂಥಿಶಾಸ್ತ್ರ ಮತ್ತು ಸಾಮಾನ್ಯ ದೇಹರಚನಾಶಾಸ್ತ್ರಗಳ ಕೆಲವು ಮೂಲಭೂತ ಸಂಶೋಧನೆಗಳಲ್ಲಿ ಬಳಸಲಾಗಿದೆ. ಕಪ್ಪೆಯ ಚರ್ಮವನ್ನು ಮೋಜಿನ ವಸ್ತುಗಳ ತಯಾರಿಕೆಗೆ ಉಪಯೋಗಿಸುವುದಿದೆ.

ದ್ವಿಚರಿಗಳ ವರ್ಗೀಕರಣ: ದ್ವಿಚರಿಗಳನ್ನು ಸ್ಟೀಗೋಸಿಫಾಲಿಯ ಮತ್ತು ಯೂಆ್ಯಂಫಿಬಿಯ ಎಂಬ ಎರಡು ಪಂಗಡಗಳಾಗಿ ವಿಂಗಡಿಸಲಾಗಿದೆ.

1. ಸ್ಟಿಗೋಸಿಫಾಲಿಯ: ಇವು ಡಿಮೋನಿಯನ್ ಯುಗದಿಂದ ಮೇಲಿನ ಟ್ರಯಾಸಿಕ್ ಯುಗದವರೆಗೂ ದೊರೆತಿರುವ ಗತವಂಶಿ ದ್ವಿಚರಿಗಳು. ಸುಮಾರು 9' ಬೆಳೆಯುತ್ತಿದ್ದ ಈ ವರ್ಗದ ಪ್ರಾಣಿಗಳನ್ನು ಈಗಿನ ಮೊಸಳೆಗಳಿಗೆ ಹೋಲಿಸಬಹುದು. ತಲೆಬುರುಡೆಯ ಮೇಲ್ಛಾವಣಿ ಗಟ್ಟಿಯಾಗಿತ್ತು. ಇವುಗಳ ತಲೆಭಾಗ ಮೂಳೆಯ ತಟ್ಟೆಗಳಿಂದ ಕೂಡಿದ ಚರ್ಮದ ಕವಚದಿಂದ ರಕ್ಷಿತವಾಗಿತ್ತು. ದೇಹದ ಹೊರಭಾಗ ಹುರುಪೆ ಮತ್ತು ತಟ್ಟೆಗಳಿಂದ ಕೂಡಿತ್ತು. ತಲೆಯ ಬುರುಡೆಯಲ್ಲಿ ಪೈನಿಯಲ್ ಇತ್ತು. ಜಡಪ್ರಾಣಿಗಳಾದ್ದರಿಂದ ಅವಯವಗಳು ದುರ್ಬಲವಾಗಿದ್ದವು. ಇವುಗಳ ಅಗಲವಾದ ಬಾಯಿಯಲ್ಲಿ ಹಲ್ಲುಗಳು ಇದ್ದವು. ಉದಾಹರಣೆಗಳು : ಎರಿಯಾಪ್ಸ್, ಆರ್ಕಿಗೋಸಾರಸ್ ಮತ್ತು ಬ್ರ್ಯಾಂಕಿಯೊಸಾರಸ್. (ಚಿತ್ರ)

ಇಕ್ತಿಯಾಫಿಸ್ ಗ್ಲೂಟಿನೋಸಸ್ (ಇತ್ತಲೆ ಮಂಡಲ) ಂ. ಡಿಂಬ, ಃ. ವಯಸ್ಕ (ಮೊಟ್ಟೆಗಳನ್ನು ಸುತ್ತಿಕೊಂಡಿದೆ.) ಏರಿಯಾಪ್ಸ್, ಆಕ್ಸಲಾಟಿಲ್ ಡಿಂಬ (ಮೇಲಿನದು); ಆಂಬ್ಲಿಸ್ಟೋಮ್ ಕ್ಯಾರಲೈನ್ (ವಯಸ್ಕ) ಕೆಳಗಿನದು. 2. ಯೂಆ್ಯಂಫಿಬಿಯ: ಬದುಕಿರುವ ದ್ವಿಚರಿಗಳ ಗುಂಪು. ತಲೆ ಮತ್ತು ದೇಹದಲ್ಲಿ ತಟ್ಟೆ ಅಥವಾ ಹುರುಪೆಗಳಿಲ್ಲ. ತಲೆಬುರುಡೆಯಲ್ಲಿ ಪೈನಿಯಲ್ ಕಂಡಿ ಇಲ್ಲ.

ಉಪವರ್ಗ 1. : ಜಿಮ್ನೋಫಿಯಾನ ಅಥವಾ ಏಪೋಡ : ಕಾಲುಗಳಿಲ್ಲದ ದ್ವಿಚರಿಗಳಿವು. ಮಣ್ಣಿನಡಿಯಲ್ಲಿ, ಪೊಟರೆಗಳಲ್ಲಿ ಜೀವಿಸುತ್ತವೆ. ಇವುಗಳಲ್ಲಿ ಮೊಟಕದ ಬಾಲ, ಚರ್ಮದಲ್ಲಿ ಅಡಗಿರುವ ಸುಣ್ಣದ ರೂಪದ ಹುರುಪೆಗಳಿವೆ. ಆದರೆ ಕಟಿಬಂಧವಿಲ್ಲ. ಕೆಲವು ಜಾತಿಗಳ ಮರಿಗಳಲ್ಲಿ ಬಾಹ್ಯ ಕಿವಿರುಗಳಿವೆ. ಉದಾಹರಣೆಗೆ ಹೈಪೋಜಿಯೋಫಿಸ್. ಜಲವಾಸಿ ಡಿಂಬಾವಸ್ಥೆ ಇವುಗಳಲ್ಲಿ ಇಲ್ಲದೇ ಇರುಬಹದು. ಇವುಗಳ ವಿಚಿತ್ರ ಲಕ್ಷಣಗಳು ಹೀಗಿವೆ. ಹುದುಗಿಕೊಂಡಿರುವ ನಿಷ್ಕ್ರಿಯವಾಗಿರುವ ಸಣ್ಣಕಣ್ಣುಗಳು ಮತ್ತು ನಾಸಿಕದ ಹಿಂದಿನ ಗುಣಿಯಲ್ಲಿರುವ ಕುಡಿಗಳಂಥ ಸ್ಪರ್ಶಾಂಗಗಳು. ಕಿವಿ ತಮಟೆ ಮತ್ತು ನಡುಗಿವಿಯ ಕುಳಿಗಳಿಲ್ಲ. ಎರಡೇ ಜೊತೆ ಅಯೊರ್ಪಿಕ್ ಕಮಾನುಗಳಿವೆ. ನೋಟೊಕಾರ್ಡ್ ಬಹುಮಟ್ಟಿಗೆ ಜೀವನವಿಡೀ ಉಳಿದಿರುವುದು. ಆಂಫೀಸೀಲಸ್ ರೀತಿಯ ಕಶೇರುಗಳಿವೆ. ತತ್ತಿ ದೊಡ್ಡದಾದ ಮೀರೋ ಬ್ಲಾಸ್ಟಿಕ್ ರೀತಿಯದು. ಬಿಲದಲ್ಲಿ ವಾಸಿಸುವ ಪ್ರಾಚೀನವಾದ ವಿಚಿತ್ರ ದ್ವಿಚರಿಗಳಿವು. ಉದಾ: ದಕ್ಷಿಣ ಅಮೆರಿಕದ ಸಿಸಿಲಿಯ, ಭಾರತ, ಶ್ರೀಲಂಕಾ ಮತ್ತು ಮಲಯಗಳಲ್ಲಿ ವಾಸಿಸುವ ಇಕ್ತಿಯಾಫಿಸ್ (ಇತ್ತಲೆ ಮಂಡಲ), ಪೂರ್ವ ಆಫ್ರಿಕಾದಲ್ಲಿರುವ ಹೈಪೋಜಿಯೋಫಿಸ್ ಇತ್ತಲೆಮಂಡಲ ಭೂಮಿಯ ಮೇಲೆ ತತ್ತಿಗಳನ್ನಿಟ್ಟು ಮರಿ ಹೊರಬರುವ ವರೆಗೆ ತತ್ತಿಗಳನ್ನು ಸುತ್ತಿಕೊಂಡಿರುತ್ತದೆ.

ಉಪವರ್ಗ 2.: ಯೂರೋಡಿಲ ಅಥವಾ ಕಾಡೇಟ : ಪ್ರೌಢ ಯೂರೋಡಿಲಗಳಲ್ಲಿ ಬಾಲ ಉಳಿದಿರುತ್ತದೆ. ಕೆಲವು ಬಗೆಗಳಲ್ಲಿ ಮರಿಯ ಕಿವಿರುಗಳು ಮತ್ತು ಕಿವಿರುರಂಧ್ರಗಳು ಕೂಡ ಪ್ರೌಢಾವಸ್ಥೆಯಲ್ಲಿ ಉಳಿದು ಬರಬಹುದು. ಎದೆಯ ಮೂಳೆ ಮತ್ತು ಕಟಿಬಂಧಗಳು ಪ್ರಾಚೀನ ರೀತಿಯವು. ಅವಯವಗಳು ಕ್ಷೀಣವಾಗಿವೆ. ಕೆಲವುಗಳಲ್ಲಿ ಹಿಂದಿನ ಕಾಳುಗಳಿಲ್ಲ. ಆಂಫಿಸೀಲಸ್ ಅಥವಾ ಒಫಿಸ್ತೋಸೀಲಸ್ ರೀತಿಯ ಅನೇಕ ಕಶೇರುಕಗಳುಂಟು. ಈ ಉಪವರ್ಗವನ್ನು ಎಳು ಕುಟುಂಬಗಳಾಗಿ ವಿಂಗಡಿಸಲಾಗಿದೆ. (ಚಿತ್ರ) ಆಂಫಿಯೂಮ, ನೆಕ್ಟೂರಸ್, ಪ್ರೋಟಿಯಸ್ ಮತ್ತು ಸೈರೆನ್

ಕುಟುಂಬ (i) ಕ್ರಿಪ್ಟೋಬ್ರ್ಯಾಂಕಿಡೀ: ಬಹಳ ಹಿಂದುಳಿದ ರೀತಿಯ ಯೂರೊಡಿಲಗಳು. ಪ್ರೌಢ ಜೀವಿಗಳಲ್ಲಿ ಕಿವಿರುಗಳಿಲ್ಲ. ಆದರೆ, ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಕಾಣಸಿಗುವ ಕ್ರಿಪ್ಟೊಬ್ರ್ಯಾಂಕಸ್‍ನಲ್ಲಿ ಒಂದು ಕಿವಿರು ರಂಧ್ರ ಉಳಿದಿದೆ. ಜಪಾನ್ ಮತ್ತು ಟಿಬೆಟ್‍ನಲ್ಲಿ ಸಿಗುವ ಮೆಗಲೊಬಾಟ್ರಾಕಸ್ ಎಂಬುದು 5' ಗಿಂತ ಹೆಚ್ಚು ಉದ್ದವಿದ್ದು ಅತ್ಯಂತ ದೊಡ್ಡ ಗಾತ್ರದ ದ್ವಿಚರಿ ಎನಿಸಿಕೊಂಡಿದೆ.

ಕುಟುಂಬ (ii) ಆಂಫಿಯೂಮಿಡೀ : ಈ ಕುಟುಂಬದ ಪ್ರಾಣಿಗಳಲ್ಲಿ ಅಪೂರ್ಣವಾಗಿ ರೂಪುಗೊಂಡಿರುವ ಎರಡು ಜೊತೆ ಕಾಲುಗಳಿವೆ; ಮತ್ತು ಪ್ರೌಢ ಜೀವನದಲ್ಲೂ ಉಳಿದಿರುವ ಒಂದು ಕಿವಿರು ರಂಧ್ರ ಉಂಟು. ಉದಾ: ಉತ್ತರ ಅಮೆರಿಕದ ಆಂಫಿಯೂಮ.

ಕುಟುಂಬ (iii) ಆಂಬ್ಲಿಸ್ಟೋಮೀಡೀ: ಉದಾ: ಉತ್ತರ ಅಮೆರಿಕದ ಆಂಬ್ಲಿಸ್ಟೋಮ. ಇದು ಡಿಂಬಾವಸ್ಥೆಯಲ್ಲಿಯೇ ಕೆಲವೊಮ್ಮೆ ಬಹಳ ಕಾಲ ಜೀವಿಸುತ್ತದೆ. ಈ ಸ್ಥಿತಿಯಲ್ಲಿ ಇದನ್ನು ಆಕ್ಸಲಾಟಲ್ ಎಂದು ಕರೆಯಲಾಗಿದೆ. ಆಕ್ಸಲಾಟಲಿಗೆ ಪ್ರಜನನ ಶಕ್ತಿಯುಂಟು. ಇದು ಕ್ರಮೇಣ ಪ್ರೌಢಜೀವಿಯಾದ ಆಂಬ್ಲಿಸ್ಟೋಮವಾಗಿ ಮಾರ್ಪಡುತ್ತದೆ. ಆಗ ಆಕ್ಸಲಾಟಲ್‍ನ ಕಿವಿರುಗಳು ಮಾಯವಾಗಿ, ತಲೆಯ ಆಕೃತಿ ಬದಲಾಗುತ್ತದೆ.

ಕುಟುಂಬ (iv) ಸ್ಯಾಲಮ್ಯಾಂಡ್ರಿಡೀ: ತತ್ತಿಯಿಡುವ ಅಥವಾ ಮರಿಹಾಕುವ ದ್ವಿಚರಿಗಳು. ಇವು ಶೀತಪ್ರದೇಶಗಳಲ್ಲಿ ಜೀವಿಸುತ್ತವೆ. ಉದಾ :ಸ್ಯಾಲಮ್ಯಾಂಡರ್ ಮತ್ತು ನ್ಯೂಟ್‍ಗಳು. ಟ್ರೈಟನ್ ಆಲ್ಪೆಸ್ಟ್ರೀಸ್ ಎಂಬ ನ್ಯೂಟ್ ದ್ವಿಚರಿ ಡಿಂಬಾವಸ್ಥೆಯಲ್ಲಿಯೇ ಲೈಂಗಿಕ ಪ್ರಬುದ್ಧತೆಯನ್ನು ತೋರುತ್ತದೆ. ಈ ಗುಣಕ್ಕೆ ಶೈಶವಜನಕಾವಸ್ಥೆ (ಪೀಡೊಜೆನೆಸಿಸ್) ಎಂದು ಹೆಸರು.

ಕುಟುಂಬ (v) ಪ್ಲಿಡೋಡಾಂಟಿಡೀ: ಪುಪ್ಫುಸಗಳಿಲ್ಲದ ಜಲಚರ ಸ್ಯಾಲಮ್ಯಾಂಡರ್ ಈ ಕುಟುಂಬಕ್ಕೆ ಸೇರಿದೆ. ಇದು ತತ್ತಿಗಳನ್ನು ಹಾರದ ರೂಪದಲ್ಲಿಡುತ್ತದೆ. ತತ್ತಿಗಳ ಹಾರವನ್ನು ಹೆಣ್ಣು ತನ್ನ ದೇಹಕ್ಕೆ ಸುತ್ತಿಕೊಂಡು ಕಾಪಾಡುವುದು. ಅಮೆರಿಕದಲ್ಲಿ ಈ ಜಾತಿಯ ದ್ವಿಚರಿಗಳು ಹೇರಳವಾಗಿವೆ. ಉದಾ. ಡೆಸ್ಮೊಗ್ನಾತಸ್.

ಕುಟುಂಬ (vi) ಪ್ರೊಟೈಯಿಡೀ: ಪ್ರೌಢಜೀವಿಗಳಲ್ಲಿ ಕಿವಿರುಗಳುಂಟು. ಈ ಗುಂಪಿನ ಅನೇಕ ಪ್ರಭೇದಗಳು ಗುಹಾವಾಸಿಗಳು. ಇವಕ್ಕೆ ಎರಡು ಜೊತೆ ಕಾಲುಗಳುಂಟು. ಗುಹಾವಾಸಗಳಾಗಿರುವುದರಿಂದ ಇವುಗಳ ಕಣ್ಣುಗಳು ಕ್ಷೀಣವಾಗಿವೆಯಲ್ಲದೆ ಇವುಗಳ ಚರ್ಮ ಬಿಳಿಚಿಕೊಂಡಿದೆ. ನೆಕ್ಟೂರಸ್ ಎಂಬ ಪ್ರಬೇಧ ಅಮೆರಿಕದ ನದಿ ಮತ್ತು ಸರೋವರಗಳಲ್ಲಿ ವಾಸಿಸುತ್ತದೆ. ಬಾಲ ಚಪ್ಪಟೆಯಾಗಿದೆ. ಮುಂಗಾಲುಗಳಲ್ಲಿ 3 ಮತ್ತು ಹಿಂಗಾಲುಗಳಲ್ಲಿ 2 ಬೆರಳುಗಳುಂಟು. ದೇಹದ ಉದ್ದ 8" - 12" ಕಿವಿರುಗಳು 3 ಜೊತೆ.

ಕುಟುಂಬ (vii) ಸೈರಿನಿಡೀ : ಈ ಕುಟುಂಬದ ಪ್ರಾಣಿಗಳಲ್ಲಿ ಪ್ರೌಢಾವಸ್ಥೆಯಲ್ಲೂ ಕಿವಿರುಗಳು ಉಳಿದಿವೆ. ಮುಂದಿನ ಕಾಲುಗಳು ಮಾತ್ರ ಉಂಟು. ಚರ್ಮದ ಎಕ್ಟೊಡರ್ಮ ಮತ್ತು ಎಂಡೊಡರ್ಮ್‍ಗಳಲ್ಲಿ ಪೂರ್ವಜರ ಹುರುಪೆಗಳನ್ನು ಹೋಲುವ ದಂತಿಗಳಿವೆ. ಉದಾ: ಉತ್ತರ ಅಮೆರಿಕದ ಸೈರೆನ್ ಮತ್ತು ಸ್ಯೂಡೊಬ್ಯಾಂಕಸ್.

ಉಪವರ್ಗ 3: ಅನ್ಯೂರ ಅಥವಾ ಸೇಲಿಯಂಶಿಯ : ಪ್ರೌಢಜೀವಿಗಳಲ್ಲಿ ಬಾಲ, ಕಿವಿರುಗಳು ಮತ್ತು ಕಿವಿರು ರಂಧ್ರಗಳು ಇಲ್ಲ. ಕಾಲುಗಳು 4. ಕಶೇರುಗಳ ಸಂಖ್ಯೆ ಕ್ಲುಪ್ತ (5-9) ಪಕ್ಕೆಲುಬುಗಳಿಲ್ಲ. (ಚಿತ್ರ) ಸ್ಯಾಲಮ್ಯಾಂಡ್ರ ಮ್ಯಾಕ್ಯುಲೋಸ, ಬ್ಯೂಫೊ ಮೆಲನೊಸ್ಟಿಕ್ಟಸ್

ಉಪಪಂಗಡ ಎ. ಫೆನೆರೊಗ್ಲಾಸ : ನಾಲಿಗೆ ಉಂಟು. ಯೂಸ್ಟೇಕಿಯನ್ ನಾಳಗಳು ಒಳಗಂಟಲಿನೊಳಕ್ಕೆ ಪ್ರತ್ಯೇಕವಾಗಿ ತೆರೆದಿವೆ.

ಶ್ರೇಣಿ (I) ಆರ್ಸಿಫೆರ : ದೇಹದ ಎರಡೂ ಕಡೆಯ ಬಿಲ್ಲಿನಾಕೃತಿಯ ಎಪಿಕೋರೋಕಾಯಿಡುಗಳು ಒಂದರ ಮೇಲೊಂದು ಚಾಚಿದಂತಿವೆ. ಉದಾ : ಹಲ್ಲಿಲ್ಲದ ನೆಲಕಪ್ಪೆ ಬ್ಯೂಫೊ. ಮರಗಪ್ಪೆ (ಹೈಲ) ಎಂಬುದರಲ್ಲಿ ಬೆರಳುಗಳ ತುದಿಯಲ್ಲಿ ಅಂಟಿನ ಗ್ರಂಥಿಗಳ ಬಿಲ್ಲೆಗಳಿವೆ. ಸೂಲಗಿತ್ತಿಕಪ್ಪೆ (ಬಾಂಬಿನ) ಮತ್ತು ಪೀಲೊಬೇಟಸ್ ಎಂಬ ದ್ವಿಚರಿಗಳು ಈ ಶ್ರೇಣಿಗೆ ಸೇರಿವೆ.

ಶ್ರೇಣಿ (ii) ಫರ್ಮಿಸ್ಟರ್ನಿಯ: ದೇಹದ ಎರಡೂ ಕಡೆಯ ಎಪಿಕೋರೊಕಾಯಿಡುಗಳ ತುದಿಗಳು ಒಂದಕ್ಕೊಂದು ಬಲವಾಗಿ ಕೂಡಿಕೊಂಡಿವೆ. ಉದಾಹರಣೆಗಳು ಹುಲ್ಲುಕಪ್ಪೆ (ರಾನಾ ಟೆಂಪೊರೇರಿಯ), ಆಹಾರಯೋಗ್ಯವಾದ ಕಪ್ಪೆ ರಾನಾ ಎಸ್ಕುಲೆಂಟ, ಉತ್ತರ ಅಮೆರಿಕದ ಗೂಳಿಗಪ್ಪೆ (ರಾನಾ ಕ್ಯಾಂಟಿಸ್ಬಿಯಾನ).

ಉಪಪಂಗಡ ಬಿ. ಏಗ್ಲಾಸ್: ಈ ಉಪಪಂಗಡದ ದ್ವಿಚರಿಗಳಲ್ಲಿ ನಾಲಿಗೆ ಇಲ್ಲ. ಯೂಸ್ಟೇಕಿಯನ್ ನಾಳಗಳು ಒಂದೇ ನಡುಗಂಡಿಯ ಮೂಲಕ ಒಳ ಗಂಟಲಿನೊಳಕ್ಕೆ ತೆರೆದಿವೆ. ಉದಾ: ಸೂರಿನಮ್ ನೆಲಗಪ್ಪೆ (ಪೈಪ್‍ಪೈಪ್) ಸುತ್ತು ಇದರ ಸಂಬಂಧಿ ಆಫ್ರಿಕದ ಜಿûನೋಫಸ್ ಕಪ್ಪೆ.

ದ್ವಿಚರಿಗಳ ಭೌಗೋಳಿಕ ಹಂಚಿಕೆ : ದ್ವಿಚರಿಗಳು ಭೂಮಿಯ ಎಲ್ಲ ಭಾಗಗಳಲ್ಲೂ ಕಾಣದೊರೆಯುವುವು ಎಂದು ಮೊದಲೇ ಹೇಳಿದೆ. ಯೂರೊಡಿಲಗಳು ಉತ್ತರ ಗೋಳಾರ್ಧದಲ್ಲೂ; ಇತ್ತಲೆಮಂಡಲಗಳು ಉಷ್ಣವಲಯದಲ್ಲೂ ಕಪ್ಪೆ ಮತ್ತು ನೆಲಗಪ್ಪೆಗಳು ಅತಿಉಷ್ಣ ಹಾಗೂ ಅತಿಶೀತ ಪ್ರದೇಶಗಳನ್ನು ಬಿಟ್ಟು ಪ್ರಪಂಚದ ಮಿಕ್ಕ ಎಲ್ಲ ಭಾಗಗಳಲ್ಲೂ ವಾಸವಾಗಿವೆ. ಅನೇಕ ಕುಟುಂಬಗಳ ಹಂಚಿಕೆಯಲ್ಲಿ ವಿವಿಧ ಪರಿಮಿತಿಗಳಿವೆ. ಹೀಗಾಗಿ ಕೆಲವು ಹೈನೋಬಿಡ್ ಜಾತಿಯ ಸ್ಯಾಲಮ್ಯಾಂಡರ್‍ಗಳು ಏಷ್ಯ ಮತ್ತು ಸುತ್ತಮುತ್ತಲಿನ ದ್ವೀಪಗಳಲ್ಲಿ ಆಂಬ್ಲಿಸ್ಟೋಮ್, ಆಂಫಿಯೂಮ ಮತ್ತು ಸೈರೆನ್‍ಗಳು ಉತ್ತರ ಅಮೆರಿಕದಲ್ಲಿ ಮಾತ್ರ ಸಿಗುತ್ತವೆ. ಕ್ರಿಪ್ಟೋಬ್ರ್ಯಾಂಕಸ್ ಎಂಬುದು ಜಪಾನ್, ಚೀನ ಮತ್ತು ಉತ್ತರ ಅಮೆರಿಕದ ವಾಯುವ್ಯ ಪ್ರಾಂತ್ಯದಲ್ಲಿ, ಪ್ರೋಟಿಯಸ್ ಎಂಬುದು ಉತ್ತರ ಯೂರೋಪ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಮಾತ್ರ ಸಿಗುತ್ತವೆ. ಪಕ್ಷಿಗಳು ಮತ್ತು ಸಸ್ತನಿಗಳಂತೆ ದ್ವಿಚರಿಗಳು ಬಹಳ ದೂರದ ಪ್ರದೇಶಗಳಿಗೆ ವಲಸೆ ಹೋಗುವುದಿಲ್ಲ. ಆದರೆ ಬಹುಪಾಲು ದ್ವಿಚರಿಗಳಲ್ಲಿ ಜೀವನಚರಿತ್ರೆ ಪೂರ್ಣವಾಗುವುದಕ್ಕೆ ನೀರಿನ ಆವಶ್ಯಕತೆ ಹೆಚ್ಚಾಗಿರುವುದರಿಂದ, ತತ್ತಿಯಿಡುವ ಕಾಲ ಸಮೀಪಿಸಿದಾಗ. ನೀರನ್ನು ಹುಡುಕಿಕೊಂಡು ಈ ಪ್ರಾಣಿಗಳು ವಲಸೆ ಹೋಗುವುದುಂಟು. ಬ್ಯುಫೊ ಜಾತಿಯ ಕಪ್ಪೆಗಳು ಸಾಮಾನ್ಯವಾಗಿ ಎಲ್ಲ ರೀತಿಯ ವಾತಾವರಣಗಳಲ್ಲೂ ಜೀವಿಸುತ್ತವೆ. ಈ ಜಾತಿಯ ನೆಲಗಪ್ಪೆ, ಮರಗಪ್ಪೆ ಮತ್ತು ಮರುಭೂಮಿ ಕಪ್ಪೆಗಳಿವೆ. ಕಪ್ಪೆ ಮತ್ತು ಮರಗಪ್ಪೆಗಳು ಉಷ್ಣವಲಯದಲ್ಲಿ ಹೇರಳವಾಗಿವೆ. ಪರ್ವತಪ್ರದೇಶಗಳಲ್ಲಿ ವಿವಿಧ ರೀತಿಯ ಹವಾಮಾನದ ಪ್ರದೇಶಗಳಿರುವುದರಿಂದ, ಇಂಥ ಸ್ಥಳಗಳಲ್ಲಿ ಅನೇಕ ಜಾತಿ ದ್ವಿಚರಿಗಳನ್ನು ಕಾಣಬಹುದು. ಆದರೆ, ಒಂದೇ ರೀತಿಯ ಹವಾಪರಿಸ್ಥಿತಿಯಿರುವ ಬಯಲು ಪ್ರದೇಶದಲ್ಲಿ ಕಡಿಮೆ ಸಂಖ್ಯೆಯ ಜಾತಿಗಳಿವೆ. ವಿವಿಧ ಜಾತಿಯ ದ್ವಿಚರಿಗಳ ವಿಕಾಸಕ್ಕೆ ವಿಭಿನ್ನ ಹವಾಮಾನಗಳು ಒಂದು ಮುಖ್ಯ ಕಾರಣವಾಗಿರಬಹುದು. (ಎಚ್.ಎಸ್.ಎನ್.)