ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ವಿಪ್ರಜೆತನ

ವಿಕಿಸೋರ್ಸ್ದಿಂದ

ದ್ವಿಪ್ರಜೆತನ - ಒಂದು ವ್ಯಕ್ತಿಗೆ ಎರಡು ಅಥವಾ ಹೆಚ್ಚು ರಾಷ್ಟ್ರಗಳಲ್ಲಿ ಇರುವ ಪ್ರಜೆತನ (ಡ್ಯೂಯಲ್ ಸಿಟಿಜûನ್‍ಷಿಪ್). ಒಬ್ಬ ವ್ಯಕ್ತಿಗೆ ಒಂದು ರಾಷ್ಟ್ರದೊಡನೆ ಆ ರಾಷ್ಟ್ರದ ಸಂವಿಧಾನದಿಂದ ನಿರ್ಧಾರಿತವಾದ ನಿಯಮಗಳಿಗನುಸಾರವಾಗಿ ಉಂಟಾಗುವ ಸಂಬಂಧವನ್ನು ಪ್ರಜೆತನವೆಂದು ಕರೆಯುತ್ತೇವೆ. ಈ ಸಂಬಂಧದಿಂದಾಗಿ ವ್ಯಕ್ತಿಗೆ ರಾಷ್ಟ್ರದಲ್ಲಿ ಕೆಲವು ವಿಶಿಷ್ಟ ಹಕ್ಕುಗಳೂ ಸೌಲಭ್ಯಗಳೂ ದೊರಕುವುದಲ್ಲದೆ, ರಾಷ್ಟ್ರಕ್ಕಾಗಿ ಅವನು ಪಾಲಿಸಬೇಕಾಗುವ ಕರ್ತವ್ಯಗಳ ಹೊಣೆಯನ್ನೂ ಅದು ಹೊರಿಸುತ್ತದೆ. ರಕ್ತ ಸಂಬಂಧ, ಜನನ, ದೀರ್ಘಕಾಲದ ವಾಸ, ವಿವಾಹ, ಪ್ರಜೆತನಕ್ಕಾಗಿ ಕೋರಿಕೆ ——— ಇವು ಸಾಮಾನ್ಯವಾದ ನಿಯಮಗಳಾಗಿದ್ದರೂ ಅಂತರರಾಷ್ಟ್ರೀಯ ನ್ಯಾಯಲಯದಲ್ಲಿ ಎಲ್ಲ ರಾಷ್ಟ್ರಗಳಿಗೂ ಅನ್ವಯಿಸುವ ಪ್ರಜೆತನ ನಿಯಮಗಳು ಇಲ್ಲವಾದ್ದರಿಂದ ಈ ವಿಷಯದಲ್ಲಿ ಬೇರೆ ಬೇರೆ ರಾಷ್ಟ್ರಗಳು ಬೇರೆ ಬೇರೆ ನಿಯಮಗಳನ್ನು ಅನುಸರಿಸುತ್ತವೆ. ಪ್ರಜೆತನವನ್ನು ಕುರಿತ ನಿಬಂಧನೆಗಳನ್ನು ಕಾನೂನುಗಳ ಮೂಲಕ ರಚಿಸುವುದಕ್ಕೆ ರಾಷ್ಟ್ರಗಳಿಗೆ ಪೂರ್ಣ ಸ್ವಾತಂತ್ರ್ಯವಿದೆ. ಆದ್ದರಿಂದ ಅನೇಕ ಸಲ ಒಬ್ಬ ವ್ಯಕ್ತಿಗೆ ಏಕಕಾಲದಲ್ಲಿ ಎರಡು ರಾಷ್ಟ್ರಗಳ ಪೌರತ್ವ ಲಭ್ಯವಾಗುವ ಪ್ರಸಂಗವುಂಟಾಗುತ್ತದೆ. ಉದ್ದೇಶಪೂರ್ವಕವಾಗಿಯೋ, ಉದ್ದೇಶವಿಲ್ಲದೆಯೋ ತಿಳಿದೋ, ತಿಳಿಯದೆಯೋ ಒಬ್ಬ ವ್ಯಕ್ತಿ ದ್ವಿಪ್ರಜೆತನ ಹೊಂದಿರಬಹುದು.

ಒಂದು ರಾಷ್ಟ್ರದ ಹದ್ದಿನೊಳಗೆ ಒಬ್ಬ ವ್ಯಕ್ತಿ ಜನ್ಮ ತಾಳುವುದರಿಂದ ಅವನಿಗೆ ಆ ರಾಷ್ಟ್ರದ ಪ್ರಜೆತನ ಲಭಿಸುವುದು ಸಾಧ್ಯ. ಯಾವುದೇ ರಾಷ್ಟ್ರದ ಹದ್ದಿನೊಳಗೆ ಜನಿಸಿದರೂ ಅವನ ಜನನ ಕಾಲದಲ್ಲಿ ಅವನ ತಂದೆ ತಾಯಿಯರು ಯಾವ ರಾಷ್ಟ್ರದ ಪ್ರಜೆತನ ಪಡೆದಿದ್ದರೋ ಆ ರಾಷ್ಟ್ರದ ಪ್ರಜೆತನವೂ ಅವನಿಗೆ ಲಭಿಸುವುದು ಸಾಧ್ಯ. ಈ ಕಾರಣಗಳಿಂದಾಗಿ ಒಬ್ಬ ವ್ಯಕ್ತಿಗೆ ದ್ವಿಪ್ರಜೆತನ ಲಭಿಸಬಹುದು. ಉದಾ : ಫ್ರೆಂಚ್ ತಂದೆತಾಯಿಯರಿಗೆ ಅಮೆರಿಕದ ಸರಹದ್ದಿನೊಳಗೆ ಹುಟ್ಟಿದ ಮಗುವಿಗೆ ಅಮೆರಿಕ ಹಾಗೂ ಫ್ರಾನ್ಸ್ ಇವೆರಡೂ ರಾಷ್ಟ್ರಗಳ ಪ್ರಜೆತನ ಲಭಿಸುವುದು ಸಾಧ್ಯ. ವಿವಾಹ ಸಂಬಂಧದಿಂದಾಗಿ ಹುಟ್ಟಿರದ ಮಕ್ಕಳನ್ನು ಔರಸರೆಂದು ಪರಿಗಣಿಸಿದಾಗಲೂ ಇದೇ ಪರಿಣಾಮ ಉಂಟಾಗಬಹುದು. ಉದಾ ; ಪರಸ್ಪರ ವಿವಾಹವಾಗದ ಜರ್ಮನ್ ತಂದೆ ಮತ್ತು ಇಂಗ್ಲಿಷ್ ತಾಯಿಗೆ ಇಂಗ್ಲೆಂಡಿನಲ್ಲಿ ಹುಟ್ಟಿದ ಮಗುವಿಗೆ ಬ್ರಿಟಿಷ್ ಮತ್ತು ಜರ್ಮನ್ ಕಾನೂನುಗಳನ್ವಯ ಇಂಗ್ಲೆಂಡಿನ ಪ್ರಜೆತನ ಲಭಿಸುವುದು ಸಾಧ್ಯ. ಆ ಮಗುವಿನ ಜನನದ ಅನಂತರ ಅದರ ತಂದೆ ಆಕೆಯನ್ನು ಲಗ್ನವಾಗಿ ಬ್ರಿಟನ್ನಿನಲ್ಲಿ ನೆಲಸಿದರೆ ಆ ಮಗು ಜರ್ಮನ್ ಕಾನೂನಿನ ಪ್ರಕಾರ ಔರಸ ಸಂತಾನವೆನಿಸುತ್ತದೆ. ಬ್ರಿಟಿಷ್ ಪ್ರಜೆತನ ಇರುವಾಗಲೇ ಅದಕ್ಕೆ ಜರ್ಮನ್ ಪ್ರಜೆತನವೂ ಪ್ರಾಪ್ತವಾಗಬಹುದು. ಬೇರೊಂದು ರಾಷ್ಟ್ರದ ಪ್ರಜೆತನವನ್ನು ಕಳೆದುಕೊಳ್ಳದೆಯೇ ಇನ್ನೊಂದು ರಾಷ್ಟ್ರದ ಪ್ರಜೆತನವನ್ನೂ ಪಡೆದುಕೊಳ್ಳಬಹುದು. ಸ್ವರಾಷ್ಟ್ರದಿಂದ ಗಡಿಪಾರಾಗುವುದರಿಂದಲೂ ಇದೇ ಪರಿಣಾಮವುಂಟಾಗಬಹುದು. ಯಾವ ರಾಷ್ಟ್ರದ ಪ್ರಜೆತನವನ್ನು ಪಡೆದಿದ್ದಾನೆಯೋ ಆ ರಾಷ್ಟ್ರದ ಬಗ್ಗೆ ಅವನಿಗೆ ನಿಷ್ಠೆ ಇರಬೇಕಾದ್ದು ಮತ್ತು ಅವನು ಯುದ್ಧಕಾಲದಲ್ಲಿ ಆ ರಾಷ್ಟ್ರಕ್ಕೆ ಸೈನಿಕ ಸೇವೆಯನ್ನು ಸಲ್ಲಿಸಲು ಸಿದ್ಧನಾಗಿರಬೇಕಾದ್ದು———— ಇವುಗಳಿಂದಾಗಿ, ದ್ವಿಪ್ರಜೆತನ ಹೊಂದಿರುವ ವ್ಯಕ್ತಿಗೆ ಅನೇಕ ಸಲ ಇಕ್ಕಟ್ಟಿನ ಪ್ರಸಂಗಗಳು ಬರಬಹುದು. ಎರಡೂ ರಾಷ್ಟ್ರಗಳು ಅವನಿಂದ ಪ್ರಜೆಯ ಕರ್ತವ್ಯಗಳನ್ನು ನಿರೀಕ್ಷಿಸಬಹುದು. ಅವೆರಡೂ ರಾಷ್ಟ್ರಗಳು ವೈರಿರಾಷ್ಟ್ರಗಳಾಗಿ ಯುದ್ಧದಲ್ಲಿ ನಿರತವಾದಾಗ ಅವನು ಸೈನಿಕ ಸೇವೆ ಸಲ್ಲಿಸಬೇಕೆಂದು ಎರಡೂ ರಾಷ್ಟ್ರಗಳು ಒತ್ತಾಯಿಸಬಹುದು. ಅಂಥ ಸಮಯದಲ್ಲಿ ಒಂದು ರಾಷ್ಟ್ರ ಅವನ ನಿಷ್ಠೆಯ ಸಂಬಂಧದಲ್ಲಿ ಸಂಶಯ ತಾಳಬಹುದಲ್ಲದೆ ಅವನ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳುವುದೇ ಮುಂತಾದ ಕ್ರಮ ಕೈಗೊಳ್ಳಬಹುದು. ಶತ್ರುರಾಷ್ಟ್ರದ ಪ್ರಜೆ ಅನುಭವಿಸುವ ಎಲ್ಲ ಅರ್ಹತೆಗಳಿಗೂ ಅವನನ್ನು ಒಳಪಡಿಸಬಹುದು. ಅದೇ ಕಾಲಕ್ಕೆ ಇನ್ನೊಂದು ರಾಜ್ಯವೂ ಅವನ ನಡತೆ ದೇಶದ್ರೋಹದ್ದೆಂದು ಆಪಾದಿಸಬಹುದು. ದ್ವಿಪ್ರಜೆತನ ಪಡೆದಿರುವ ವ್ಯಕ್ತಿ ಒಂದು ರಾಷ್ಟ್ರದಲ್ಲಿ ನೆಲಸಿರುವಾಗ ಆ ಇನ್ನೊಂದು ರಾಷ್ಟ್ರದಿಂದ ರಕ್ಷಣೆ ಪಡೆಯಲಾರ. ಆದರೆ ಅವನು ಮೂರನೆಯ ರಾಷ್ಟ್ರವೊಂದರೊಳಗಿರುವಾಗ ಅವೆರಡೂ ರಾಷ್ಟ್ರಗಳಲ್ಲಿ ಒಂದೊಂದೂ ಅವನು ತನ್ನ ಪ್ರಜೆಯಂತೆ ಅವನನ್ನು ರಕ್ಷಿಸಲು ತನಗಿರುವ ಅಧಿಕಾರ ಚಲಾಯಿಸಬಹುದು. ಅದರಂತೆಯೇ ಮೂರನೆಯ ರಾಷ್ಟ್ರ ಅವನನ್ನು ಆ ಎರಡು ರಾಷ್ಟ್ರಗಳಲ್ಲಿ ಯಾವುದಾದರೂ ಒಂದರ ಪ್ರಜೆಯೆಂದು ಗಣಿಸಿ ಅದರಂತೆ ಅವನನ್ನು ನಡೆಯಿಸಿಕೊಳ್ಳಬಹುದು. ದ್ವಿಪ್ರಜೆತನದಿಂದ ಉಂಟಾಗುವ ಕಷ್ಟಗಳನ್ನು ಪರಿಹರಿಸಲು ಅಂತರರಾಷ್ಟ್ರೀಯಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ.

ಭಾರತದ ಸಂವಿಧಾನ ಜಾರಿಗೆ ಬಂದಾಗ ಭಾರತದಲ್ಲಿ ನೆಲಸಿದ್ದ ಪ್ರತಿಯೊಬ್ಬನೂ ———— ಭಾರತದಲ್ಲಿ ಜನ್ಮತಾಳಿದವನೂ ತನ್ನ ತಂದೆತಾಯಿಯರಲ್ಲಿ ಯಾರಾದರೊಬ್ಬರು ವಿಭಜನೆಯ ಪೂರ್ವದಲ್ಲಿ ಭಾರತದಲ್ಲಿ ಜನ್ಮತಾಳಿದವರಾಗಿದ್ದರೆ ಅಂಥವನೂ ಸಂವಿಧಾನ ಜಾರಿಗೆ ಬರುವುದಕ್ಕೆ ಐದು ವರ್ಷಗಳ ಹಿಂದಿನಿಂದ ಭಾರತದಲ್ಲಿ ನೆಲಸಿದ್ದವನೂ——— ಭಾರತದ ಪ್ರಜೆಯೆಂದು ನೋಂದಣಿ ಮಾಡಿಸಿಕೊಂಡವನೂ ——— ಭಾರತದ ಪ್ರಜೆತನಕ್ಕೆ ಅರ್ಹರು. ಭಾರತದ ಸಂವಿಧಾನ ದ್ವಿಪ್ರಜೆತನದ ಪರಿಕಲ್ಪನೆಯನ್ನು ಒಪ್ಪುವುದಿಲ್ಲ. ಒಬ್ಬ ವ್ಯಕ್ತಿ ಸ್ವಂತ ಇಚ್ಚೆಯಿಂದ ಬೇರೆ ಒಂದು ರಾಷ್ಟ್ರದ ಪ್ರಜೆತನ ಪಡೆದುಕೊಂಡಿದ್ದಲ್ಲಿ ಸಂವಿಧಾನದ 5, 6 ಮತ್ತು 8ನೆಯ ವಿಧಿಗಳ ಪ್ರಕಾರ ಅವನನ್ನು ಭಾರತದ ಪ್ರಜೆಯೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಒಬ್ಬ ತಾನು ಆಫ್ಘಾನಿಸ್ತಾನದ ಪ್ರಜೆಯೆಂದು ಹೇಳಿಕೊಳ್ಳುತ್ತಿದ್ದರೆ ಅವನು ಅದೇ ಉಸಿರನಲ್ಲಿ ತಾನು ಭಾರತದ ಪ್ರಜೆಯೂ ಹೌದು ಎಂದು ಸಂವಿಧಾನ ಅಡಿಯಲ್ಲಿ ಸಾಧಿಸಲಾರ. (ಬಿ.ಕೆ.ಯು.)